ಪ್ರಹ್ಲಾದ್ ಜೋಷಿ, ಬಿ.ಎಲ್.‌ ಸಂತೋಷ್‌ ತಂತ್ರಕ್ಕೆ ಪ್ರತಿತಂತ್ರ

ಧಾರವಾಡದಲ್ಲಿ ದಾಳ ಉರುಳಿಸಿದರೇ ಯಡಿಯೂರಪ್ಪ
ಈಶ್ವರಪ್ಪ ಬೆನ್ನ ಹಿಂದೆ ನಿಂತ ಸಂಘಪರಿವಾರಕ್ಕೆ ಬ್ರೇಕ್‌
ಬಿ.ವೈ. ರಾಘವೇಂದ್ರ ಕುರ್ಚಿ ಅಲುಗಾಡಿಸಿದರೆ ಹುಷಾರ್…‌.

ಕೆಲವೇ ದಿನಗಳ ಹಿಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಿ.ವೈ. ರಾಘವೇಂದ್ರ ನಿರಾಯಾಸವಾಗಿ ಗೆಲ್ಲಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಅವರಿಗೆ ಸರಿಸಮಾನವಾದ ಅಭ್ಯರ್ಥಿಯೇ ಅಲ್ಲ. ಬದಲಾಗಿ ಅಕಸ್ಮಾತ್‌ ರಾಜಿಯಾಗಿ ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದರೆ ಕುಮಾರ್‌ ಬಂಗಾರಪ್ಪ ಅವರಲ್ಲದಿದ್ದರೆ ಕಿಮ್ಮನೆ ರತ್ನಾಕರ್‌, ಆರ್‌.ಎಂ. ಮಂಜುನಾಥ ಗೌಡ, ಆಯನೂರು ಮಂಜುನಾಥ್‌ ಹೆಚ್ಚು ಸೂಕ್ತ ಅಭ್ಯರ್ಥಿಗಳಾಗುತ್ತಿದ್ದರು ಎನ್ನುವ ಅಭಿಪ್ರಾಯವೂ ಕೇಳಿ ಬಂದಿತ್ತು.

ಆದರೆ ಯಾವಾಗ ಯಡಿಯೂರಪ್ಪರ ಒಂದು ಕಾಲದ ಜೋಡೆತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.‌ ಈಶ್ವರಪ್ಪ ನನ್ನ ಸ್ಪರ್ಧೆ ಶತಸಿದ್ಧ ಎಂದು ಘೋಷಿಸಿ ಬಂಡಾಯದ ಕಹಳೆ ಊದಿದರೋ ಗೆಲುವಿನ ಸಮೀಕರಣವೇ ಬದಲಾಗ ತೊಡಗಿದೆ. ಮೊದಲು ಈಶ್ವರಪ್ಪರ ಗುಟುರು ಬಿಜೆಪಿಯನ್ನು ಬೆದರಿಸಿ ಆ ಮೂಲಕ ತಮ್ಮ ಮಗ ಕಾಂತೇಶ್‌ಗೆ ಹಾವೇರಿ ಲೋಕಸಭಾ ಟಿಕೆಟ್‌ ಗಿಟ್ಟಿಸಿಕೊಳ್ಳುವ ತಂತ್ರ ಎಂದು ಯಡಿಯೂರಪ್ಪ ಪಾಳಯ ಭಾವಿಸಿತ್ತು. ಆದರೆ ಈಗ ಈಶ್ವರಪ್ಪ ಚುನಾವಣಾ ಪ್ರಚಾರದ ಭಾಗವಾಗಿ ಯಡಿಯೂರಪ್ಪ ಮತ್ತವರ ಪುತ್ರರ ಶಕ್ತಿಕೇಂದ್ರ ಶಿಕಾರಿಪುರದಿಂದಲೇ ಭರ್ಜರಿ ಪ್ರಚಾರ ಆರಂಭಿಸಿರುವುದು ಮತ್ತು ಸ್ವತಃ ಯಡಿಯೂರಪ್ಪ ದಂಗಾಗುವಂತೆ ದೊಡ್ಡ ಜನ ಬೆಂಬಲ ಈಶ್ವರಪ್ಪನವರಿಗೆ ದೊರಕುವ ಮೂಲಕ ಇಲ್ಲಿಯ ತನಕ ಭದ್ರವಾಗಿದ್ದ ಬಿ.ವೈ. ರಾಘವೇಂದ್ರ ಗೆಲುವಿನ ಕುರ್ಚಿ ನಿಧಾನಕ್ಕೆ ಅಲ್ಲಾಡತೊಡಗಿದೆ.

ಹೌದು ಈಶ್ವರಪ್ಪ ಬಿಜೆಪಿ ಹೈಕಮಾಂಡ್‌ ನೀಡಿರುವ ರಾಜ್ಯಪಾಲ ಮತ್ತು ಮಗನಿಗೆ ಎಂಎಲ್‌ಸಿ ಉಡುಗೊರೆಯನ್ನು ಮೂಸಿಯೂ ನೋಡದೆ ತಮ್ಮದೇನಿದ್ದರೂ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ. ಪಕ್ಷದ ವಿರುದ್ಧ ಅಲ್ಲ ಎಂದು ಗುಟುರು ಹಾಡತೊಡಗಿದರೆ ಸಂಘ ಪರಿವಾರದ ಅಚ್ಚು ಮೆಚ್ಚಿನ ಈ ಹಿರಿಯ ನಾಯಕನ ಭರಾಟೆಗೆ ಇಷ್ಟರಲ್ಲಾಗಲೇ ಕಡಿವಾಣ ಹಾಕಬೇಕಾಗಿದ್ದ ತೆರೆಮರೆಯ ಸಂಘ ಪರಿವಾರದ ಶಕ್ತಿಗಳು ಗುಟ್ಟಾಗಿ ಈಶ್ವರಪ್ಪರಿಗೆ ಶಕ್ತಿ ತುಂಬುತ್ತಿರುವ ಅನುಮಾನಗಳು ಬಲವಾಗತೊಡಗಿದೆ.

ಇದೆಲ್ಲಾ ಮೂರುಹೊತ್ತು ರಾಜಕೀಯವನ್ನೇ ಉಸಿರಾಡುವ ಹಿರಿಯ ರಾಜಕಾರಣಿ ಯಡಿಯೂರಪ್ಪರಿಗೆ ಅರ್ಥವಾಗದ ತಂತ್ರಗಳೇನಲ್ಲ ಹಾಗಾಗಿ ಅವರ ಒಂದು ರಾಜಕೀಯ ದಾಳ ದೂರದ ಧಾರವಾಡದಲ್ಲಿ ಭಾರಿ ಸದ್ದು ಮಾಡಿದೆ. ಪರಿಣಾಮ ಧಾರವಾಡ ಕೇಂದ್ರದಲ್ಲಿ ಬ್ರಾಹ್ಮಣ ಸಮುದಾಯ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿಗೆ ಟಿಕೆಟ್‌ ಕೂಡದು ಈ ವ್ಯಕ್ತಿ ಪದೇ ಪದೇ ವೀರಶೈವ ಲಿಂಗಾಯತರು, ದಲಿತರು, ಕುರುಬರು ಸೇರಿದಂತೆ ಇತರೆ ಸಮುದಾಯಗಳ ಭಾವನೆಗಳಿಗೆ ದಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರಾಜಸತ್ತೆಯನ್ನು ತರಲು ಹೊರಟಿದ್ದಾರೆ. ಅಲ್ಲದೇ ಜೋಷಿಯವರ ನಾಲ್ಕುಬಾರಿಯ ಗೆಲುವಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದು ಲಿಂಗಾಯತ ಸಮುದಾಯ. ಲಿಂಗಾಯತ ಪ್ರಾಬಲ್ಯದ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವಾದರೆ ಬ್ರಾಹ್ಮಣರು ಪ್ರಬಲವಾಗಿರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ಕೂಡ ನಿಲ್ಲಿಸಿ ಗೆಲ್ಲಿಸಬೇಕು. ಹಿಂದೆ ಯಡಿಯೂರಪ್ಪ ಅವನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದವರು ಯಾರು ಎಂದು ಎಲ್ಲರಿಗೂ ತಿಳಿದಿದೆ ಎಂದು ಹೋರಾಟದ ನಾಯಕತ್ವ ವಹಿಸಿಕೊಂಡಿರುವ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪ್ರಮುಖ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಬಂಡಾಯವೆದ್ದು ಬಹಿರಂಗ ಹೇಳಿಕೆ ನೀಡುತ್ತಿರುವುದರ ಹಿಂದೆ ಯಡಿಯೂರಪ್ಪರ ಚಿತಾವಣೆ ಇರುವುದು ಸ್ಪಷ್ಟವಾಗ ತೊಡಗಿದೆ. ಅದಕ್ಕೆ ಕಾರಣ ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧೆಗೆ ಕುಮ್ಮಕ್ಕು ನೀಡುತ್ತಿರುವುದೇ ಸಂಘ ಪರಿವಾರದ ನಿಷ್ಟರು. ಕಾಕತಾಳಿಯವೆಂದರೆ ಅವರಲ್ಲಿ ಬಹುತೇಕರು ಬ್ರಾಹ್ಮಣ ಸಮುದಾಯ ಎಂಬುದು ಯಡಿಯೂರಪ್ಪ ಅವರ ಗುಮಾನಿ. ಶಿವಮೊಗ್ಗದಲ್ಲಿ ಹೆಣೆದಿರುವ ಸಂಘಪರಿವಾರದ ಕಗ್ಗಂಟು ಬಿಡಿಸುವ ತಂತ್ರಗಾರಿಕೆಯ ಭಾಗವಾಗಿ ಧಾರವಾಡದಲ್ಲಿ ಲಿಂಗಾಯತ ಮಠಗಳ ಮೂಲಕ ರಾಜಕೀಯ ದಾಳ ಉರುಳಿಸಿರುವ ಯಡಿಯೂರಪ್ಪ ಇಲ್ಲಿ ತಮಗೆ ತೊಂದರೆ ನೀಡಿದರೆ ಅವರ ಸಮುದಾಯ ಪ್ರಹ್ಲಾದ ಜೋಷಿಗೆ ಧಾರವಾಡದಿಂದ ಒಂದೋ ಸೋಲಿಸುವುದು ಇಲ್ಲವೆ ಅಂತಿಮವಾಗಿ ಎತ್ತಂಗಡಿ ಮಾಡುವುದು ಖಚಿತ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಎಂಬುದು ಈಗ ತೀವ್ರವಾಗಿ ಬಿಜೆಪಿ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ನಿಸ್ಸಂಶಯವಾಗಿ ಕರ್ನಾಟಕ ಮಟ್ಟಿಗೆ ಯಡಿಯೂರಪ್ಪ ಬಿಜೆಪಿ ಪಾಲಿನ ಗೆಲುವು ಮತ್ತು ಸೋಲು. ಯಾವಾಗ ಯಡಿಯೂರಪ್ಪರನ್ನು ಬಿಜೆಪಿ ಉಪೇಕ್ಷೆ ಮಾಡಿದೆಯೋ ಆಗೆಲ್ಲ ಸಿಡಿದ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ. ಒಮ್ಮೆ ಕೆಜೆಪಿ ಕಟ್ಟಿ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂತಹ ಹೊಡೆತ ಕೊಟ್ಟರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕಡು ವೈರಿ ಬಿ.ಎಲ್.‌ ಸಂತೋಷ್‌ ರಾಜರಾಜಕಾರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಮೂಗು ತೂರಿಸಿದ್ದಲ್ಲದೇ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವುದರಿಂದ ಹಿಡಿದು ಮುಂದೆ ಟಿಕೆಟ್‌ ಹಂಚಿಕೆಯಾಗುವ ವರೆಗೆ ತಮ್ಮನ್ನು ನಿರ್ಲಕ್ಷಿಸಿದರು ಎಂಬ ಸಿಟ್ಟು ಫಲಿತಾಂಶ ಬಂದಾಗ ಬಿಜೆಪಿಯನ್ನು 66 ಸೀಟುಗಳ ಮಟ್ಟಕ್ಕೆ ಕುಗ್ಗಿಸುವಲ್ಲಿ ಯಡಿಯೂರಪ್ಪರ ಚುನಾವಣಾ ಪ್ರಚಾರದ ನಿರಾಸಕ್ತಿ ಕೆಲಸ ಮಾಡಿತ್ತು.

ಈಗ ಮತ್ತೆ ಯಡಿಯೂರಪ್ಪ ವಿರೋಧಿ ಪಡೆ ಒಂದಾಗಿ ಈಶ್ವರಪ್ಪರನ್ನು ಬೆಂಬಲಿಸತೊಡಗಿದೆ. ಇದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ. ಅಧಿಕಾರ ಇಲ್ಲದಿದ್ದರೂ ಈ ಬಾರಿ ಲೋಕಸಭಾ ಟಿಕೆಟ್‌ ಹಂಚಿಕೆಯಲ್ಲೂ ಕೂಡ ಯಡಿಯೂರಪ್ಪ ಕೈ ಮೇಲಾಗಿದೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ನಳೀನ್‌ ಕುಮಾರ್‌ ಕಟೀಲ್‌, ಸಿ.ಟಿ. ರವಿ, ಸದಾನಂದ ಗೌಡ, ಈಶ್ವರಪ್ಪ ಎಲ್ಲರೂ ಕೂಡ ಟಿಕೆಟ್‌ ವಂಚಿತರಾಗಲು ಯಡಿಯೂರಪ್ಪ ಪ್ರಭಾವವೇ ಕಾರಣ ಎಂದು ಈ ಎಲ್ಲರಿಗೂ ಅನಿಸಿದೆ.

ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿಂದಿನಷ್ಟು ಸೀಟುಗಳು ಬಾರದಿದ್ದರೂ ಸರಿ ಶಿವಮೊಗ್ಗದಲ್ಲಿಯೇ ಅವರಿಗೆ ಹಿನ್ನಡೆಯಾಗಬೇಕು. ಅದಕ್ಕಾಗಿ ಈಶ್ವರಪ್ಪ ಸ್ಪರ್ಧಿಸಲೇಬೇಕು. ಈಶ್ವರಪ್ಪ ಮತಗಳಿಕೆ ಹೆಚ್ಚಾದಷ್ಟು ತಾಪತ್ರಾಯವಾಗುವುದು ರಾಘವೇಂದ್ರರಿಗೆ. ಒಂದು ವೇಳೆ ಸೋತರೆ ರಾಘವೇಂದ್ರ ಮನೆ ಸೇರುತ್ತಾರೆ. ಇನ್ನೊಬ್ಬ ಪುತ್ರ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿತ ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಯಾವ ಬೆಲೆ ತೆತ್ತಾದರೂ ಸರಿಯೇ ಯಡಿಯೂರಪ್ಪ ಹಿಡಿತದಿಂದ ಬಿಜೆಪಿಯನ್ನು ಮುಕ್ತಗೊಳಿಸುವ ತಂತ್ರದ ಭಾಗವೇ ಈಶ್ವರಪ್ಪ ಸ್ಪರ್ಧೆಎಂಬ ಅಭಿಪ್ರಾಯ ದಟ್ಟವಾಗಿದೆ. ಅದಕ್ಕೆ ಸರಿಯಾಗಿ ಇಲ್ಲಿಯವರೆಗೆ ಬಿಜೆಪಿಯ ಕಟ್ಟಾ ಕಾಲಾಳುಗಳು ಮತ್ತು ಮುಖ್ಯವಾಗಿ ಸಂಘ ಪರಿವಾರದ ಯಾವ ಮುಖಂಡರೂ ಕೂಡ ಈಶ್ವರಪ್ಪರ ಸ್ಪರ್ಧೆಯನ್ನು ವಿರೋಧಿಸಿಲ್ಲ ಎಂಬುದು ಗಮನಾರ್ಹ. ಜೊತೆಗೆ ಗೋಬ್ಯಾಕ್‌ ಅಭಿಯಾನದ ಬಳಿಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಲ್ಕಿತ್ತ ಶೋಭಾ ಕರಂದ್ಲಾಜೆಗೆ ಸದಾನಂದ ಗೌಡರನ್ನು ಮನೆಗೆ ಕಳುಹಿಸಿ ಟಿಕೆಟ್‌ ಕೊಟ್ಟಿರುವುದು ಮತ್ತು ನಿರಂತರ ಎರಡು ವರ್ಷಗಳು ಅಕ್ಷರಶಃ ಹಾವೇರಿಯಲ್ಲಿ ಠಿಕಾಣಿ ಹೂಡಿ ಅಲ್ಲಿನ ಸಮಸ್ತ ಕಾರ್ಯಕ್ರಮಗಳಿಗೆ ತನುಮನ ಧನ ನೆರವು ನೀಡಿ ಚುನಾವಣಾ ಕಣವನ್ನು ಹದ ಮಾಡಿದ ಬಳಿಕ ಅಲ್ಲಿ ತಮ್ಮ ಪುತ್ರ ಕಾಂತೇಶರಿಗೆ ಏಕಾಏಕಿ ಟಿಕೆಟ್‌ ತಪ್ಪಿಸಿ ತಮ್ಮ ಪರಮ ನಿಷ್ಟ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್‌ ದಕ್ಕುವಂತೆ ಮಾಡಿರುವುದು ಈಶ್ವರಪ್ಪರ ಸಿಟ್ಟು, ಹತಾಶೆ ಮುಗಿಲು ಮುಟ್ಟುವಂತೆ ಮಾಡಿದೆ.

ಹಾಗಾಗಿ ಅವರೇ ಹೇಳಿದಂತೆ ಹರಿಬ್ರಹ್ಮ ಬಂದು ಹೇಳಿದರೂ ಸ್ಪರ್ಧೆ ನಿಶ್ಚಿತ. ಇನ್ನೂ ರಂಗಕ್ಕೆ ಇಡಿ ಮತ್ತು ಐಟಿಗಳ ಪ್ರವೇಶದ ಮುನ್ಸೂಚನೆ ಸಿಕ್ಕಿಲ್ಲವಾದ್ದರಿಂದ ಈಶ್ವರಪ್ಪ ತಮ್ಮ ಹೇಳಿಕೆಗೆ ಬದ್ಧರಾಗಿ ಸ್ಪರ್ಧೆ ಮಾಡಿದ್ದಲ್ಲಿ ಯಡಿಯೂರಪ್ಪ ಮತ್ತವರ ಪುತ್ರರ ನಿದ್ದೆ ಹಾರಿ ಹೋಗುವುದು ಖಚಿತ. ಮತ್ತು ತಮಗೊಂದು ಅವಕಾಶ ನೀಡಿ ಎನ್ನುವುದನ್ನು ಬಿಟ್ಟರೆ ಮತ್ತೆ ಹೆಚ್ಚೇನು ಮಾತನಾಡಲೂ ಬಾರದ ಗೀತಾ ಶಿವರಾಜಕುಮಾರ್‌ ಅವರ ಅದೃಷ್ಟ ಖುಲಾಯಿಸುವುದು ನಿಶ್ಚಿತ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post