ಬಹುಗ್ರಾಮ ಕುಡಿಯುವ ನೀರು ; ಯಾರದ್ದೋ ಪಿತೂರಿಗೆ ವ್ಯವಸ್ಥಿತ ಷಡ್ಯಂತ್ರ

ಇವರೇನು ವಿಜ್ಞಾನಿ, ಇಂಜಿನಿಯರ್‌ಗಳೇ..?
ಮೊದಲು ತುಂಗಾ ನದಿಯಿಂದ ನೀರೆತ್ತಬೇಡಿ ಎಂದರು
ಈಗ ಎಲ್ಲಿಂದಲೂ ನೀರು ಬೇಡ.. ಯೋಜನೆಯನ್ನೇ ರದ್ದು ಮಾಡಿ ಎನ್ನುತ್ತಾರೆ ಇದ್ಯಾವ ನ್ಯಾಯ!
 – ಟಿ.ಜೆ. ಅನಿಲ್‌

ತೀರ್ಥಹಳ್ಳಿಯ ರಂಜದಕಟ್ಟೆ ಸಮೀಪದ ಕೋಡ್ಲು ಗ್ರಾಮದಲ್ಲಿನ ಉದ್ದೇಶಿತ 344 ಕೋಟಿ ಮೊತ್ತದ ಬಹುಗ್ರಾಮ ನೀರು ಯೋಜನೆಯನ್ನು ವ್ಯವಸ್ಥಿತವಾಗಿ ಅಂತ್ಯಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್‌ ಆರೋಪಿಸಿದರು.

ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಯಾರದ್ದೋ ಸ್ವಂತ ಲಾಭಕ್ಕೆ ಮುಗ್ದ ಜನರನ್ನು ಬಲಿಕೊಡುವ ಕುತಂತ್ರ ನಡೆದಿದೆ. ರೈತರ ಹೆಸರಿನಲ್ಲಿ ಯೋಜನೆ ಅಂತ್ಯಗೊಳಿಸಲು ಪ್ರಯತ್ನ ನಡೆಸುತ್ತಿರುವ ಕೆಲವರಿಗೆ ಯಾವ ತಾಂತ್ರಿಕ ಅರ್ಹತೆ ಇದೆ ಎಂದು ಪ್ರಶ್ನಿಸಿದರು.

ಹೋರಾಟಗಾರರ ಬೇಡಿಕೆಯಂತೆ ಭೀಮೇಶ್ವರ ಸಂಗಮದಲ್ಲಿ ಜಾಕ್‌ವೆಲ್‌ ಸ್ಥಾಪಿಸುವ ಯೋಜನೆ ಕೈಬಿಡಲಾಗಿದೆ. ಹೊಸನಗರ ತಾಲ್ಲೂಕಿನ ವರಾಹಿ ಹಿನ್ನೀರು ಪ್ರದೇಶದ ದೊಡ್ಡಿನಮನೆಯಲ್ಲಿ ಸ್ಥಳ ಗುರುತಿಸಿದ್ದು ಯೋಜನೆಗೆ ವೇಗ ದೊರೆತಿದೆ. ಇದೀಗ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ವಿರೋಧ ಸೃಷ್ಟಿಯಾಗಿದೆ. ಇವುಗಳ ಹಿಂದೆ ಯಾರ ಸ್ವಾರ್ಥ ಅಡಗಿದೆ ಎಂದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದ್ದಾರೆ.

ತಾಲ್ಲೂಕಿನ 21 ಗ್ರಾಮ ಪಂಚಾಯತಿಗಳಿಗೆ ನೀರಿನ ಮೂಲ ಇಲ್ಲ. ಪಂಪ್‌ಸೆಟ್‌ ನಿರ್ಮಾಣಕ್ಕೂ ದುಡ್ಡು ಹೊಂದಿಸುವುದು ಕಷ್ಟವಾಗಿದೆ. ಪ್ರತೀ ರಿಪೇರಿಗೆ ₹10,000 ವರೆಗೆ ಖರ್ಚಾಗುತ್ತಿದೆ. ಅಂತರ್ಜಲದ ಪ್ರಮಾಣ ತೀರಾ ಇಳಿಮುಖವಾಗುತ್ತಿದ್ದು ಮಲೆನಾಡಿನಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಒಕ್ಕೂಟದ ವತಿಯಿಂದ ಯೋಜನೆಯ ಪರವಾಗಿ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಸದಸ್ಯರಾದ ಸುಪ್ರೀತಾ, ಜಯಪ್ರಕಾಶ್, ನಾಗರಾಜ್, ಚಂದ್ರಶೇಖರ ಇದ್ದರು.

“ತುಂಗಾ ನದಿಗೆ ಆಣೆಕಟ್ಟು ಕಟ್ಟಿ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದಾಗ ನದಿ ಪಾತ್ರದ ಜನರಲ್ಲಿ ವಿರೋಧ ಇತ್ತು. ವರಾಹಿ ಹಿನ್ನೀರು ಪ್ರದೇಶದಿಂದ ನೀರು ಪೂರೈಕೆಗೆ ನಿರ್ಧರಿಸಲಾಗಿದ್ದು ವಿರೋಧಿಸುವುದು ಸರಿಯಲ್ಲ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು” ಎಂದು ಒಕ್ಕೂಟದ ಉಪಾಧ್ಯಕ್ಷ ಯು.ಡಿ. ವೆಂಕಟೇಶ್‌ ಹೇಳಿದರು.

“ಎಲ್ಲಾ ನಾಗರೀಕರ ಬದುಕು ಮುಖ್ಯ ಎಂಬುದು ಕೆಲ ರೈತರಿಗೆ ಅರ್ಥವಾಗಿಲ್ಲ. ಪ್ಲೋರೈಡ್‌ಯುಕ್ತ ನೀರು ಬಳಕೆಯಾಗುತ್ತಿದ್ದು ಶುದ್ಧ ಕುಡಿಯುವ ನೀರು ಸಾರ್ವಜನಿಕರಿಗೆ ಅಗತ್ಯವಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಒಗ್ಗೂಡಿ ಯೋಜನೆ ಪರವಾಗಿ ಹೋರಾಟ ರೂಪಿಸುತ್ತೇವೆ” ಎಂದು ಪ್ರಧಾನ ಕಾರ್ಯದರ್ಶಿ ನಂಬಳ ಮುರುಳಿ ತಿಳಿಸಿದರು.

“ಯೋಜನೆ ಅನುಷ್ಟಾನಕ್ಕೂ ಮುನ್ನ ಭ್ರಷ್ಟಾಚಾರ ಎಂಬ ಗುಮಾನಿ ಹಬ್ಬಿಸಲಾಗುತ್ತಿದೆ. ಕೇಂದ್ರ, ರಾಜ್ಯ, ಖಾಸಗಿ ಏಜೆನ್ಸಿಗಳು ನೀರಿನ ಪ್ರಮಾಣದ ಕುರಿತು ಸುಧೀರ್ಘ ಸರ್ವೆ ನಡೆಸಿದ್ದಾರೆ. ಅವೈಜ್ಞಾನಿಕ ಎಂದು ಸಾಭೀತುಪಡಿಸುವ ಬದಲು ರೈತರು ಪಾಂಡಿತ್ಯ ಪ್ರದರ್ಶನಕ್ಕೆ ಇಳಿದಿದ್ದಾರೆ” ಎಂದು ಗುಡ್ಡೇಕೊಪ್ಪ ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ಪವಾರ್‌ ದೂರಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post