ತುಂಗಾ ವಿದ್ಯಾವರ್ಧಕ ಸಂಘಕ್ಕೆ ಬೇಕಿದೆ ರಾಜ್ಯಪಾಲರ ಮಧ್ಯಸ್ಥಿಕೆ

ಅಕ್ರಮ ಭೂ ವ್ಯವಹಾರಕ್ಕೆ ಕಡಿವಾಣ...? ವಿದ್ಯಾದಾನಕ್ಕೆ ನೀಡಿದ್ದ 24 ಎಕರೆ ಭೂಮಿ ಸರ್ಕಾರಕ್ಕೆ ವಾಪಾಸ್...!
ಫಲಿಸದ ಕಾಗೋಡು ತಿಮ್ಮಪ್ಪ ಕನಸು ; ಕ್ಯಾಬಿನೆಟ್ ಸಭೆಯ ಆಶಯ ಮಣ್ಣುಪಾಲು
ಭೂಮಿ ಇಲ್ಲದವರಿಗೆ ಕಾಲೇಜು ಜಮೀನು ಹಂಚಿ!

ಹಿರಿಯ ಚೇತನಗಳ ಭವ್ಯವಾದ ದೂರದೃಷ್ಟಿಯಿಂದ 1967 ರಲ್ಲಿ ಆರಂಭವಾದ ತುಂಗಾ ವಿದ್ಯಾವರ್ಧಕ ಸಂಘ ಅನೇಕ ದಾನಿಗಳಿಂದ ಭದ್ರವಾಗಿ ತೀರ್ಥಹಳ್ಳಿಯಂತಹ ಪುಟ್ಟ ಮಲೆನಾಡಿನ ಹಳ್ಳಿಯಲ್ಲಿ ಜ್ಞಾನಾರ್ಜನೆ ಮಾಡಿಕೊಂಡು ಬಂದಿತ್ತು. ನಂತರ ಸರ್ಕಾರದ ಸೌಲಭ್ಯಗಳು ಸೇರಿಕೊಂಡು ಕಾಲೇಜು ಇಡೀ ಜಿಲ್ಲೆಯಲ್ಲಿ ಉತ್ತಮ ವಿದ್ಯಾಮಂದಿರ ಎಂದೇ ಪ್ರಖ್ಯಾತಿ ಪಡೆದಿತ್ತು.


ಆರಂಭಿಕ ದಿನಗಳಲ್ಲಿ ತೀರ್ಥಹಳ್ಳಿ ಪಟ್ಟಣದ ಎಲ್ಲೊಲ್ಲೋ ಸಿಕ್ಕ ಸಿಕ್ಕ ಜಾಗದಲ್ಲಿ ಪಾಠ ಮಾಡಿಕೊಂಡು ಬಂದಿದ್ದ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಅನೇಕ ಮಹನೀಯರ ಕೊಡುಗೆ ಇರುವುದನ್ನು ಎಂದಿಗೂ ಮರೆಯುವಂತಿಲ್ಲ. ಈಗ ಆನಂದಗಿರಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ಕಟ್ಟಡಕ್ಕೆ ಬೆವರು ಸುರಿಸಿದ ಮಹಾನುಭಾವರ ಶ್ರಮದ ಲೆಕ್ಕ ಹಾಕುವುದು ಕೂಡ ಕಷ್ಟದ ಕೆಲಸ.
ಇಂತಹ ಇತಿಹಾಸ ಹೊಂದಿರುವ ಕಾಲೇಜಿಗೆ ಭದ್ರತೆ ಇಲ್ಲ ಎಂಬ ಕಾರಣಕ್ಕೆ 2017ರಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಒತ್ತಾಸೆ ಮೇರೆಗೆ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕಾಲೇಜು ಅಭ್ಯುದಯಕ್ಕಾಗಿ 24 ಎಕರೆ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ. ಅಂದು ದಯಾನೀಯ ಸ್ಥಿತಿಯಲ್ಲಿದ್ದ ಕಾಲೇಜಿನ ಆಡಳಿತ ಮಂಡಳಿ ಸರ್ಕಾರಕ್ಕೆ ಪ್ರಾಸ್ತಾವ‌ನೆ ಸಲ್ಲಿಸುವಾಗ ನಾವು ತೀರ್ಥಹಳ್ಳಿ ಜನತೆಗೆ ವಿದ್ಯಾರ್ಜನೆ ಮಾಡುತ್ತೇವೆ. ಸ್ವಯಂ ಆದಾಯ ಸೃಷ್ಟಿಸಿಕೊಂಡು ಬಡವರು, ದುರ್ಬಲರನ್ನು ಶಿಕ್ಷಿತರನ್ನಾಗಿ ಮಾಡುತ್ತೇವೆ ಎಂದು ಪುಂಖಾನುಪುಂಖವಾಗಿ ಇಲ್ಲ ಸಲ್ಲದ ಭರವಸೆಗಳನ್ನು ತುಂಬಿ ತುಳುಕುತ್ತಿದ್ದ ಅಫಿಡೆವಿಟ್ ಸಲ್ಲಿಸಿದ್ದರು. ಆದರೀಗ ಕೊಟ್ಟ ಭರವಸೆಗಳು ಮಾತ್ರ ಗಾಳಿಗೆ ತೂರಿದಂತಾಗಿದೆ.

ಸರ್ಕಾರ ಭೂಮಿ ಹಂಚುವಾಗ ನೀಡಿದ್ದ ವಾಗ್ದಾನ ಮರೆತ ತುಂಗಾ ವಿದ್ಯಾವರ್ಧಕ ಸಂಘಕ್ಕೆ ತಕ್ಕ ಶಾಸ್ತಿ ಮಾಡಬೇಕಿದೆ. ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯದ ಕುಲಪತಿಗಳೂ ಆದಂತಹ ರಾಜ್ಯಪಾಲರು ತುಂಗಾ ವಿದ್ಯಾವರ್ಧಕ ಸಂಘದ ಅಕ್ರಮ ಬೆಳವಣಿಗೆಗೆ ಕಡಿವಾಣ ಹಾಕಬೇಕು. ಮಂಜೂರಾದ 24 ಎಕರೆ ಜಮೀನು ಸರ್ಕಾರಕ್ಕೆ ವಾಪಾಸ್ಸು ಪಡೆದುಕೊಳ್ಳುವ ತುರ್ತು ಕಾರ್ಯಕ್ಕೆ ಇಳಿಯಬೇಕಾದ ಸನ್ನಿವೇಶ ಉದ್ಭವಿಸಿದೆ.

ನಿರಾಶ್ರಿತರಿಗೆ ಭೂಮಿ ಹಂಚಿ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇಂಚು ಜಾಗವೂ ಇಲ್ಲದ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿವೆ. ನಿವೇಶನ ರಹಿತರು, ನಿರಾಶ್ರಿತರಿಗೆ ಭೂಮಿ ದಾನ ನೀಡಬೇಕು. ಮನೆ, ಸೈಟುಗಳಾಗಿ ಭೂ ರಹಿತರಿಗೆ ಹಂಚಬೇಕು. ಖಾಸಗಿ ವ್ಯಕ್ತಿಗಳಿಗೆ ಮಾರಬೇಡಿ ಎಂಬ ಕೂಗು ಹಳೆಯ ವಿದ್ಯಾರ್ಥಿ ಸಂಘಟನೆಯಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ.

ಈ ಹಿಂದೆ ಕಾಲೇಜಿನಲ್ಲಿ ನಡೆದ ಉಪನ್ಯಾಸಕ ಹುದ್ದೆ ಮಾರಾಟ ಮಾಡಿದ ಘಟನೆಗಳ ಹಸಿಬಿಸಿಯಾದ ಕಹಿ ಸತ್ಯ ಮರೆಮಾಸುವ ಮುನ್ನವೇ ಮತ್ತೆ ಎರಡು ಉಪನ್ಯಾಸಕ ನೇಮಕಾತಿಯ ಹುದ್ದೆ ಹರಾಜಿಗೆ ವೇದಿಕೆ ಸಜ್ಜುಗೊಂಡಿದೆ. ಹುದ್ದೆಗೆ ಕೋಟಿ ಕೊಟ್ಟ ಉಪನ್ಯಾಸಕರು ಪಾಠ ಮಾಡಬೇಕಾ ಅಥವಾ ವ್ಯವಹಾರ ನಡೆಸಬೇಕಾ ಎಂಬ ಗೊಂದಲಕ್ಕೆ ಸಿಲುಕಿದಂತಿದೆ. ಇಂತಹ ಉಪನ್ಯಾಸಕ ಹುದ್ದೆ ಹರಾಜು ಪ್ರಕ್ರಿಯೆಗೆ ಉನ್ನತ ಶಿಕ್ಷಣ ಸಚಿವರು ಕಡಿವಾಣ ಹಾಕಬೇಕಿದೆ. ಕುವೆಂಪು ವಿಶ್ವವಿದ್ಯಾಲಯ ಹೆಸರಿನಲ್ಲಿ ಸುಲಿಗೆಗೆ ಇಳಿಯಲಾಗಿದ್ದು ವಿಶ್ವವಿದ್ಯಾಲಯ ಜಾಗ್ರತೆ ವಹಿಸಬೇಕಿದೆ.

2017 ರಲ್ಲಿ 24 ಎಕರೆ ಜಮೀನು ಮಂಜೂರಿಗೆ ಸರ್ಕಾರದ ಅಂಗೀಕಾರ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ವಿಚಾರ ಮಂಡಿಸಿ ಜಮೀನು ವಾಪಾಸ್ಸು ಪಡೆಯಬೇಕಾದ ತುರ್ತು ಕ್ರಮ ವಹಿಸಬೇಕು. ಹಿಂದಿನ ಕ್ಯಾಬಿನೆಟ್ ಸಭೆಯಲ್ಲಿ ನಡೆದ ಶೈಕ್ಷಣಿಕ, ವಿದ್ಯಾವರ್ಧಕ ಪ್ರಗತಿಯ ವಿಚಾರಗಳು ಇಲ್ಲದ ಹಿನ್ನಲೆಯಲ್ಲಿ ಭೂಮಿ ಮಂಜೂರು ರದ್ದುಗೊಳಿಸಬೇಕು ಎಂದು ಆದೇಶ ಹೊರಡಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ತುಂಗಾ ವಿದ್ಯಾವರ್ಧಕ ಸಂಘದ ಹೆಸರಿನಲ್ಲಿ ಬೇಕಾದಷ್ಟು ಭೂಮಿ ಇದ್ದು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಯಾವುದೋ ಟ್ರಸ್ಟ್ ಹೆಸರಿಗೆ ಮಾರಾಟ ಮಾಡುವ ಅಗತ್ಯ ಇಲ್ಲ. ಸಿಬಿಎಸ್ಸಿ ಇಂಟರ್ ನ್ಯಾಷನಲ್ ಕಾಲೇಜು ತೆರೆಯುವ ಇರಾದೆ ಇದ್ದರೆ ಮಹಾಜ್ಞಾನಿಗಳು, ಪ್ರಗತಿಪರರು, ಚಿಂತಕರು, ಶಿಕ್ಷಣ ತಜ್ಞರು, ಉದ್ಯಮಿಗಳು, ಬಂಡವಾಳಶಾಹಿಗಳಿರುವ ತುಂಗಾ ವಿದ್ಯಾವರ್ಧಕ ಸಂಘದ 138 ಸದಸ್ಯ ಅಗ್ರಗಣ್ಯರು ಪ್ರಯತ್ನಿಸಬಹುದು. ತಮ್ಮ ಮಕ್ಕಳನ್ನೇ ಕಾಲೇಜಿಗೆ ಸೇರಿಸದ ಅಜೀವ ಸದಸ್ಯರ ಸ್ವಸಾಮರ್ಥ್ಯ ಹತ್ತೂರು ಕೊಂಡಾಡುವಂತಿದೆ. ಕಾಲೇಜು ನವೀಕರಿಸುವ ಎಲ್ಲಾ ವೈಯಕ್ತಿಕ ವರ್ಚಸ್ಸು ಹೊಂದಿರುವ ಸದಸ್ಯರು ಮಾತ್ರ ಸಾಮಾನ್ಯ ಸಭೆಗೂ ಆಗಮಿಸದೆ ಮೌನ ವಹಿಸಿದಂತಿದೆ. ಆಡಳಿತ ಮಂಡಳಿಯ ಕೆಲವೇ ಸದಸ್ಯರು ತುಂಗಾ ಹೆಸರಿನ ಟ್ರಸ್ಟ್ ನಿರ್ಮಿಸುವ ನಾಟಕ ಮಾಡುತ್ತಿರುವುದಾದರೂ ಯಾಕೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಿರುವುದು ಉದ್ಯೋಗ ಮತ್ತು ಬೌದ್ಧಿಕ ಸಾಮರ್ಥ್ಯ ಬೆಳವಣಿಗೆ. ಎರಡರಲ್ಲೂ ನಿಷ್ಕ್ರೀಯರಾದರೆ ಕಾಲೇಜು ಮುಚ್ಚುವುದೇ ಒಳಿತೆನ್ನುವ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ‌. ಅವೆಲ್ಲವನ್ನು ಬಿಟ್ಟು ಒಣ ಪ್ರತಿಷ್ಠೆಗೆ ಬಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಟಿತಗೊಳ್ಳಲಿದೆ....

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post