ಎಲ್ಲಾ ಡೀಲ್‌… ಡೀಲ್…‌ ಡೀಲ್…

ತುಂಗಾ ಕಾಲೇಜಿನ ಬೆಲೆಬಾಳುವ ಜಮೀನು ಮೇಲೆ ಉಳ್ಳವರ ಕಣ್ಣು…!
ಗುತ್ತಿಗೆ ಕೊಡಲು ಸಂಚು ; ಪ್ರತಿಷ್ಠಿತ ಸಂಸ್ಥೆಯಲ್ಲಿ ನಡೆಯುತ್ತಿದೆ ಪ್ರತಿಷ್ಠಿತರ ಕಾಳಗ
BILL, BELL ಗೆ ಕಾಯುವ ಉಪನ್ಯಾಸಕರು
ತುಂಗಾ ಕಾಲೇಜು ಪರಭಾರೆಗೆ ಡೀಲ್ ; ಬೆಲೆ ಬಾಳುವ ಜಾಗದ ಮೇಲೆ ಉಳ್ಳವರ ಕಣ್ಣು

ಒಂದು ಕಾಲದಲ್ಲಿ ಮಲೆನಾಡಿನ ಸುತ್ತಮುತ್ತಲಿನ ಸಾವಿರಾರು ಹಳ್ಳಿಗಳಿಗೆ ಸ್ವಪ್ನ ಸುಂದರಿಯಾಗಿ ಕಾಡುತ್ತಿದ್ದ ತೀರ್ಥಹಳ್ಳಿಯ ಗರಿಮೆ ಹೆಚ್ಚಿಸಿದ್ದ ಆನಂದಗಿರಿಯ ದಟ್ಟ ಕಾನನದ ನಡುವೆ ವಿದ್ಯಾರ್ಜನೆ ಮಾಡುತ್ತಿದ್ದ ತುಂಗಾ ಮಹಾವಿದ್ಯಾಲಯ ಈಗೇಕೋ ಮಂಕು ಬಡಿದಂತಹ ಸ್ಥಿತಿಗೆ ತಲುಪಿದೆ. ಕಾಲೇಜಿನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿ ಇದ್ದಂತೆ ಕಂಡರೂ ಕೂಡ ಒಳಗಿನ ಪ್ರತಿಯೊಂದು ವಸ್ತುವು ಆಡುವ ಅಂತಿಮ ಮಾತು ಎಲ್ಲಾ ಡೀಲ್‌… ಡೀಲ್‌… ಡೀಲ್…

1967 ಆರಂಭವಾದ ತುಂಗಾ ವಿದ್ಯಾವರ್ಧಕ ಸಂಘದಲ್ಲಿ 18 ನಿರ್ದೇಶಕರು, 109 ಮಂದಿ ಅಜೀವ ಸದಸ್ಯರು, 11 ಸಂಘ ಸಂಸ್ಥೆಯ ಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಸಲಹಾ ಮಂಡಳಿಯಾಗಿ ಹಳೆಯ ವಿದ್ಯಾರ್ಥಿ ಸಂಘಟನೆಯಲ್ಲಿ ಸದಸ್ಯತ್ವ ಪಡೆದುಕೊಳ್ಳದಿದ್ದರೂ ಸುಮಾರು 5 ಸಾವಿರಕ್ಕೂ ಅಧಿಕ ಸಂಖ್ಯೆಯ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಯ ಜಪದಲ್ಲಿದ್ದಾರೆ. ಹಾಲಿ 2 ಸಾವಿರ ಸದಸ್ಯ ಹಳೆಯ ವಿದ್ಯಾರ್ಥಿಗಳು ಇದ್ದರೂ ಕಾಲೇಜು ಮಾತ್ರ ಅಧಪತನ ಹಂತದಲ್ಲಿದೆ. ಇವತ್ತೋ ನಾಳೆಯೋ ಬಾಗಿಲು ಎಳೆದರೂ ಆಶ್ಚರ್ಯ ಪಡುವ ಸಂಗತಿ ಏನಲ್ಲ?

ಇಂತಹ ಕ್ಷೀಪ್ರ ಬೆಳವಣಿಗೆಗೆ ಸಾಕ್ಷಿಯಾಗಿರುವ ಕಾಲೇಜಿನಲ್ಲಿ ಈ ಹಿಂದೆ ನಡೆದ ಮತ್ತು ಸದ್ಯ ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ಹತ್ತಾರು ವಿಚಾರಗಳು ಸಮುದ್ರದ ಅಲೆಯಂತೆ ಅಪ್ಪಳಿಸುತ್ತಿದೆ. ಪ್ರತಿಷ್ಠಿತ ಸಂಸ್ಥೆಯಲ್ಲಿ ನಡೆಯುತ್ತಿರುವ ಆಂತರಿಕ ಪ್ರತಿಷ್ಠಿತರ ಕಾಳಗ ತೀರ್ಥಹಳ್ಳಿ ತಾಲ್ಲೂಕು ಅಲ್ಲದೇ ಶಿವಮೊಗ್ಗ ಜಿಲ್ಲೆಯಲ್ಲಿಯೇ ಗಾಸಿಪ್‌ ಆಗಿ ಹಬ್ಬುತ್ತಿದೆ.

ತೀರ್ಥಹಳ್ಳಿಯ ಪ್ರಗತಿಪರರು, ವಿದ್ವಾಂಸರು, ಶೈಕ್ಷಣಿಕ ಜ್ಞಾನಿಗಳು, ಉದ್ಯಮಿಗಳು, ಬಂಡವಾಳಶಾಹಿಗಳ ಬೃಹತ್‌ ಗಾತ್ರದ ತುಂಗಾ ವಿದ್ಯಾವರ್ಧಕ ಸಂಘದಲ್ಲಿ 138 ಮಂದಿ ಮೇದಾವಿಗಳು, ಪ್ರಕಾಂಡ ಪಂಡಿತರು ಇದ್ದರೂ ತಮ್ಮ ಕೈಯಲ್ಲಿ ಏನೇನು ಕಿಸಿಯಲಿಕ್ಕೆ ಆಗುತ್ತಿಲ್ಲ. ನಿರ್ದೇಶಕ ಮಂಡಳಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗೊಣಗಾಟ ಮಾಡುವ ಅನೇಕ ಸದಸ್ಯರು, ಸ್ವತಃ ಕೆಲವು ನಿರ್ದೇಶಕರಿಗೂ ಇಲ್ಲೇನು ನಡೆಯುತ್ತಿದೆ ಎಂಬ ಮಾಹಿತಿ ಇದ್ದಂತಿಲ್ಲ. ಹಾಗಾದ್ರೆ ವಾಸ್ತವವಾಗಿ ಇಲ್ಲೇನು ನಡೆಯುತ್ತಿದೆ. ಲಾಭಿಯ ಹಿಂದಿನ ಕಾಣದ ಕೈಗಳು ಯಾರು ಎಂಬ ಬಗ್ಗೆ ಅನೇಕರಿಗೆ ಪ್ರಶ್ನೆಗಳು ನಿತ್ಯ ಕಾಡುವಂತಾಗಿದೆ.

ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ನಡೆದ ತುಂಗಾ ವಿದ್ಯಾವರ್ದಕ ಸಂಘದ ಸಾಮಾನ್ಯ ಸಭೆಯಲ್ಲಿ 120 ಪ್ರಕಾಂಡ ಪಂಡಿತರ ಪೈಕಿ ಹಾಜರಾದ ಮಹಾಶಯರು ಕೇವಲ 23 ಮಂದಿ ಮಾತ್ರ. ಹಾಗಾದ್ರೆ ಉಳಿದ ಅಜೀವ ಸದಸ್ಯರ ಕರ್ತವ್ಯಗಳೇನು. ಬೇಕಾಬಿಟ್ಟಿ ಸದಸ್ಯತ್ವ ಪಡೆದುಕೊಂಡು ಅಲ್ಪಸ್ಪಲ್ಪ ಹಣಕ್ಕೆ ಗಳಿಸಿಕೊಂಡು ಕುಳಿತರೆ ಸಾಕೆ. ಹೀಗಿರುವಾಗ ಕಾಲೇಜಿನ ಅಭಿವೃದ್ಧಿ ಚಿಂತೆ ಯಾಕೆ ಬೇಕು?

ಕಾಲೇಜು ದೈನಾತಿ ಸ್ಥಿತಿಗೆ ಆರಗ ಜ್ಞಾನೇಂದ್ರ ಕಾರಣ? ಸತ್ಯನಾ!

50 ಲಕ್ಷಕ್ಕೆ ಉಪನ್ಯಾಸಕರ ಹುದ್ದೆ ಮಾರಾಟ ಮಾಡಿದ ಮಹಾಶಯರು ಹೇಳುವ ಕಹಿ ಸತ್ಯ ಒಂದಿದೆ. ಕಾಲೇಜು ಹಾಳಾಗಲು ಶಾಸಕ ಆರಗ ಜ್ಞಾನೇಂದ್ರ ಕಾರಣ ಎಂಬುದು. ವಾಸ್ತವದಲ್ಲಿ ಹೀಗೆ ಇದೆಯೇ? ನಾನು ಬಡ ಮಕ್ಕಳಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂದಿದ್ದೇನೆ ಎಂದು ಹೇಳಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಸರ್ಕಾರಿ ಕಾಲೇಜು ತಂದಿದ್ದರೂ ಕೂಡ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವ ಕಾಲೇಜು ಯಾಕೆ ಹಿಂಗಾಗಿದೆ. ಆಡಳಿತ ಮಂಡಳಿ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಅಗತ್ಯ ಹೆಚ್ಚಿದೆ ಎಂದು ಅನೇಕರಿಂದ ಆರೋಪ ಕೇಳಿ ಬಂದಿದೆ.

ಇದಕ್ಕಿಂತಲೂ ಆಶ್ಚರ್ಯಕರ ಸಂಗತಿಗಳಿವೆ. ಕಾಲೇಜಿನ ದೀರ್ಘಕಾಲದ ಬೆಳವಣಿಗೆ, ವಿದ್ಯಾರ್ಜನೆಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಅನೇಕ ಹಿರಿಯರು ಸಂಸ್ಥೆಗೆ ರಕ್ತ ಸುರಿಸಿದ್ದಾರೆ. ಅವರ ಬೆವರಿನ ಹನಿಯ ಪ್ರಯೋಜನ ಮಾತ್ರ ಶಿಕ್ಷಣದ ಬದಲಿಗೆ ಡೀಲ್‌ ಮಾಡುವವರ ಕೈಗೆ ಲಭಿಸಿದೆ ಎಂದರೆ ತಪ್ಪಾಗಲಾರದು. ಮೀಟಿಂಗ್‌ನಲ್ಲಿ ಗೈರಾದ ಅನೇಕರು ಸಭೆಯ ವಿಚಾರ ತಿಳಿದ ಮೇಲೆ ಕಂಗಾಲಾಗುವಂತಾಗಿದೆ.

ಅದೇನೆಂದರೆ ಹಾಲಿ ಸಂಸ್ಥೆಯ ಹೆಸರಿನಲ್ಲಿ ಸುಮಾರು 25 ಎಕರೆಗಿಂತ ಹೆಚ್ಚಿನ ಜಮೀನು ಇದೆ. ಪೂರ್ಣ ಪ್ರಮಾಣದಲ್ಲಿ ಸಂಸ್ಥೆಗೆ ಜಮೀನು ಹಸ್ತಾಂತರ ಆಗಿಲ್ಲ ಎಂಬ ಗೊಂದಲಗಳು ಇರುವಾಗ ಸಂಸ್ಥೆಯಿಂದ ಹೇಗೆ ಲಾಭ ಪಡೆಯೋಣ ಎಂಬ ಚಿಂತೆಗಳಿಗೇನು ಕಡಿಮೆಯಾಗಿಲ್ಲ. ದುಬಾರಿ ಬೆಲೆ ಬಾಳುವ ಜಮೀನು ಪಟ್ಟಣದ ಸಮೀಪವೇ ಪುಕ್ಕಟ್ಟೆ ಸಿಗುವಂತಾದರೆ ಲಾಭಿಕೋರರು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ. ಹೀಗಾಗಿ ಮೊನ್ನೆ ನಡೆದ ಸಭೆಯಲ್ಲಿ ವಿದ್ಯಾವರ್ಧಕ ಸಂಘದೊಳಗಿನ ಕೆಲವು ಉದ್ಯಮಿಗಳು, ಜನಪ್ರತಿನಿಧಿಗಳು, ಜನಪ್ರತಿನಿಧಿಗಳೂ ಆದಂತವರು, ಸಮಾಜ ಸುಧಾರಕರು, ದೇವರ ಭಕ್ತರು, ಕ್ಷೇತ್ರದ ದೇವಸ್ಥಾನದ ಕಾರ್ಯಕ್ರಮದಲ್ಲಿ ಮುಂಚೂಣಿ ಮುಖಂಡರು ಎಂದು ಪೋಸುಕೊಡುವವರು ಹೊರಗೆ ಬಂದು ಹೊಸದಾಗಿ ಸಂಸ್ಥೆಯೊಂದನ್ನು ಕಟ್ಟುವ ಇರಾದೆ ಹೊಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈಗ ಸಾಮಾನ್ಯವಾಗಿ ಟ್ರಸ್ಟ್‌ ಮಾಡಿಕೊಂಡು ಅದರೊಳಗೆ ಶಿವಮೊಗ್ಗದಲ್ಲಿರುವ ಸಿಬಿಎಸ್‌ಸಿ ಮಾದರಿಯ ವಿದ್ಯಾ ಸಂಸ್ಥೆಯೊಂದಿಗೆ ಕೈಜೋಡಿಸಿ ಹೊಸದಾಗಿ ಕಾಲೇಜು ತೆರೆಯುವ ಇಂಗೀತ ವ್ಯಕ್ತಪಡಿಸಿದ್ದಾರಂತೆ. ಇದಕ್ಕೆ ಬಹುತೇಕ ಹಾಜರಿದ್ದ ಎಲ್ಲರೂ ಭಿನ್ನಾಭಿಪ್ರಾಯದ ನಡುವೆಯೂ ಹೂಂಕರಿಸಿದ್ದಾರೆ.

ವಿಚಾರ ಹೊರಗೆ ಬರುತ್ತಿದ್ದಂತೆ ತೀರ್ಥಹಳ್ಳಿಯ ಖಾಸಗಿ ವಿದ್ಯಾ ಸಂಸ್ಥೆಗಳು ನಾವು ಒಂದು ಕೈ ನೋಡುತ್ತೇವೆ. ಅವರೇನು ಮಾಡುವುದು ನಾವು ಎಲ್‌ಕೆಜಿಯಿಂದಲೇ ಶಾಲೆ ಕಟ್ಟುತ್ತೇವೆ ನಮಗೂ ಅವಕಾಶ ಕೊಡಿ ಎಂದು ತಟ್ಟೆ ಹಿಡಿದ್ದಾರೆ. ಪ್ರತಿಫಲದ ಡೀಲ್‌ಗೆ ಕಾಯುತ್ತಿದ್ದರು ಮಹಾನುಭಾವರು ಯಾವ ಕಡೆಗೆ ವಾಲುವುದು! ಲಾಭ ಎಲ್ಲಿ ಜಾಸ್ತಿ ಎಂಬ ಬಗ್ಗೆಯೂ ಚಿಂತೆಗೆ ಬಿದ್ದಿದ್ದಾರೆ. ಈಗಾಗಲೇ ಶಿಕ್ಷಕರ ನೇಮಕಾತಿಯಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಹಣ ನುಂಗಿ ನೀರು ಕುಡಿದವರು ಈಗೆಷ್ಟು ಬುಟ್ಟಿಗೆ ಬೀಳಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಟ್ರಸ್ಟ್‌ಗೆ 5 ರಿಂದ 7 ಎಕರೆ ಸದ್ಯ ಲೀಸ್‌ ಕೊಟ್ಟರೆ ಸಾಕು. ಆಮೇಲೆ ನಿಧಾನಕ್ಕೆ ಸಂಸ್ಥೆಯ ಆಸ್ತಿ ಹಸ್ತಾಂತರಿಸಿದರೆ ಯಾವ ಹಂಗೂ ಇಲ್ಲದೇ ಕೆಲವೇ ವ್ಯಕ್ತಿಗಳ ಸ್ವತ್ತಾಗಿ ಮಾಡಿಕೊಳ್ಳಬಹುದು. ಇದೇ ಲೆಕ್ಕಾಚಾರ ಕೇಳಿದವರಿಗೂ ತಲೆ ಗಿರಗಿಟ್ಲೆ ಸುತ್ತುವಂಗಾಗಿದೆ.

ಬಿಲ್‌, ಬೆಲ್ಲಿಗೆ ಕಾಯುವ ಉಪನ್ಯಾಸಕರು  
ಸ್ಥಳೀಯರಿಂದ ದೂರವಾಗಿರಬೇಕು ಎಂಬ ಉದ್ದೇಶದಿಂದಲೇ ಸ್ಥಳೀಯ ಉಪನ್ಯಾಸಕರು ಅರ್ಹತೆ, ಆರ್ಥಿಕ ಚೈತನ್ಯ ಇರುವಾಗಲೂ ದೂರದ ಬಂಡವಾಳ ಬಿಸಾಕುವ ಉಪನ್ಯಾಸಕರು ಹುದ್ದೆ ಮಾರಿಕೊಳ್ಳಲಾಗಿತ್ತು. ಇದೀಗ ಶಿವಮೊಗ್ಗದಲ್ಲಿ ನೆಲೆಸಿರುವ ಅನೇಕ ಉಪನ್ಯಾಸಕರು ಬೆಳಿಗ್ಗೆ ಕಾಲೇಜು ಆರಂಭವಾದರೂ ಸ್ಥಳಕ್ಕೆ ಆಗಮಿಸುವುದಿಲ್ಲ. ಸಂಜೆ ಬೆಲ್‌ ಹೊಡೆಯುವ ಮೊದಲೇ ಮನೆಗೆ ಹಿಂದಿರುಗಿರುತ್ತಾರೆ. ಇಂತಹ ಟಿಪ್‌ ಟಾಪ್‌ ಗುರುವರೇಣ್ಯರು ಮಕ್ಕಳಿಗೆ ಯಾವ ರೀತಿಯಲ್ಲಿ ಪಾಠ ಮಾಡಲು ಸಾಧ್ಯ. ಅರ್ಧಗಂಟೆ ಪಾಠ ಮಾಡುವ ಉಪನ್ಯಾಸಕರು 20 ಅಂಕದ ಪ್ರಶ್ನೆ ಪತ್ರಿಕೆ ತೆಗೆಯಲು ಆಗದ ಸ್ಥಿತಿ ಇದೆ. ಪ್ರಶ್ನೆ ಪತ್ರಿಕೆಗೆ ಬೇರೆ ಕಾಲೇಜಿನಲ್ಲಿ ಪಾಠ ಮಾಡುವವರಿಗೆ ಫೋನ್‌ ಹಾಯಿಸುವ ದೈನಾತಿ ಸ್ಥಿತಿ ಉಪನ್ಯಾಸಕರದ್ದು

ಕಾಲೇಜಿನ ಇಂತಹ ಸ್ಥಿತಿಗೆ ಕಾರಣರಾದವರು ಯಾರು. ತೀರ್ಥಹಳ್ಳಿ ಜನತೆ ಪ್ರಶ್ನಿಸುವ ಅಗತ್ಯ ಇದೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸದಿದ್ದರೆ ಕಣ್ಣೆದುರು ನೋಡಿದಂತಹ ವಿದ್ಯಾಸಂಸ್ಥೆ ಖಾಸಗಿ ವ್ಯಕ್ತಿಗಳ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ!

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post