ಛಲಗಾರಕ್ಕೆ 50ರ ಸಂಭ್ರಮ - ಸಂಪಾದಕ ನಿಶಾಂತ್ ಜಿ. ಗೆ ಅಭಿನಂದನೆ

"ನನ್ನ ಬದುಕು ಮತ್ತು ಛಲಗಾರ ಪತ್ರಿಕೆ ಬೇರೆಯಾಗಿ ಉಳಿದಿಲ್ಲ" - ಆರಗ ಜ್ಞಾನೇಂದ್ರ
ಛಲಗಾರ ಗಣಪತಿ ಅವರು ಅತ್ಯಂತ ಸಣ್ಣ ಹೋರಾಟವನ್ನು ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದರು. ನನ್ನ ಏಳಿಗೆಯಲ್ಲಿ ಛಲಗಾರ ಪತ್ರಿಕೆ ಬಹಳ ಮುಖ್ಯ ಕಾರಣವಾಗಿದೆ. ನನ್ನ ಬಗ್ಗೆ ಬರೆಯುತ್ತಿದ್ದ ಚಿಕ್ಕ ವರದಿಗಳು ಸಮಾಜ ನನ್ನ ಬೆನ್ನು ತಟ್ಟುತ್ತಿದೆ ಎಂಬ ಭಾವನೆ ಹೆಚ್ಚಿನ ಕೆಲಸಕ್ಕೆ ಸ್ಪೂರ್ತಿ ನೀಡುತ್ತಿತ್ತು. ಚುನಾವಣೆಯಲ್ಲಿ ಸೋತರು, ಗೆದ್ದರು ಗಣಪತಿ ಬೆನ್ನಿಗೆ ನಿಲ್ಲುತ್ತಿದ್ದರು. ಆಲೋಚನೆ ಹಚ್ಚುವ ಲೇಖನ ಬರೆಯುತ್ತಿದ್ದರು. ಪೇ ದೇವಣ್ಣ ರಾಯರು ಬೃಹಸ್ಪತಿ ವಾಣಿ ಬರುತ್ತಿದ್ದ ಕಾಲದಲ್ಲೂ ಛಲಗಾರವಾಗಿಯೇ ಉಳಿದಿತ್ತು. ಬರವಣಿಗೆಯ ಶೈಲಿ, ಪ್ರಕಟಿಸುವ ಸುದ್ದಿ ಜನರನ್ನು ಸೆಳೆಯುತ್ತಿತ್ತು. ಆಗ ಜನರು ಛಲಗಾರಕ್ಕೆ ಹೇಳಿ ಬರೆಸುತ್ತೇನೆ ಎಂದು ಅನೇಕರಿಗೆ ಹೆದರಿಸುತ್ತಿದ್ದರು. ಜನರ ನಂಬಿಕೆ ಛಲಗಾರದ ಮೇಲಿತ್ತು. ನನ್ನ ಬದುಕು ಮತ್ತು ಛಲಗಾರ ಪತ್ರಿಕೆ ಬೇರೆಯಾಗಿ ಉಳಿದಿಲ್ಲ. ಅತ್ಯಂತ ನಿಕಟವಾದ ಸ್ನೇಹ ಇತ್ತು. ಬರೆದ ವರದಿಗಳ ಬಗ್ಗೆ ಟೀಕೆ ಮಾಡಿ ಅವರೊಂದಿಗೆ ಜಗಳವಾಡುತ್ತಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ನೆನಪುಸಿಕೊಂಡರು.

ಮಲ್ನಾಡ್ ಕ್ಲಬ್ ಸಭಾಂಗಣದಲ್ಲಿ 50 ಸಂವಸ್ಸರಗಳನ್ನು ಪೂರೈಸಿರುವ ಬೆಳಗಿನ ಛಲಗಾರ ದಿನಪತ್ರಿಕೆ ಸುವರ್ಣ ಸಂಭ್ರಮ ಸಂಭ್ರದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಜನರ ಪ್ರೀತಿ ಗಳಿಸಿ ಪತ್ರಿಕೆ ನಡೆಸುವುದು ಕಷ್ಟ. ಛಲಗಾರ ಪತ್ರಿಕೆ ಅರ್ಧ ಶತಮಾನ ಕಳೆದಿದೆ ಎಂದರೆ ಅದೊಂದು ಸಾಧನೆ. ರಾಜ್ಯದಲ್ಲಿಯೇ ಇದೊಂದು ಅಪರೂಪ ಕ್ಷಣ. ಮೊಳೆ ಜೋಡಣೆಯಿಂದ ಆರಂಭಗೊಂಡ ಪತ್ರಿಕೆ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಜಿ.ನಿಶಾಂತ್ ಸಂಕೋಚ ಮನೋಭಾವ ಪತ್ರಿಕೆ ಮುನ್ನಡೆಯಲು ಸಾಕಾರವಾಗಿದೆ. ಪತ್ರಿಕೋದ್ಯಮ ಅಷ್ಟೊಂದು ಸುಲಭವಾಗಿಲ್ಲ. ಸರ್ಕಾರ, ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು.  ಮುದ್ರಣ ಮಾದ್ಯಮ ಉಳಿಯುತ್ತಾ ಎಂಬ ಪ್ರಶ್ನೆಯ ನಡುವೆ ಪತ್ರಿಕೆ ಓದು ಜನರ ವಿಶ್ವಾಸ ಪಡೆದಿದೆ ಎಂದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಆರ್. ಮದನ್ ಮಾತನಾಡಿ, ತಂತ್ರಜ್ಞಾನ ಹೆಚ್ಚಿದಂತೆ ಲೈಸೆನ್ಸ್ ಇಲ್ಲದಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಬಿತ್ತರವಾಗುತ್ತಿದೆ. ಅಂತಹದರ ನಡುವೆ ಪತ್ರಿಕೆಯ ಮೂಲಕ ಸತ್ಯ ನೀಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜನರಿಗೆ ಅವಶ್ಯವಾದ ನಿಷ್ಪಕ್ಷಪಾತ ಲೇಖನಗಳನ್ನು ನೀಡಿದ್ದಾರೆ. ಪತ್ರಿಕೆ ನೂರು ವರ್ಷಗಳ ಸಂಭ್ರಮ ಆಚರಿಸುವಂತಾಗಲಿ ಎಂದರು.

ಕಡಿದಾಳು ದಯಾನಂದ, ಬಾಳೇಬೈಲು ರಾಘವೇಂದ್ರ, ಟಿ.ಕೆ. ರಮೇಶ್ ಶೆಟ್ಟಿ, ಸಂದೇಶ್ ಜವಳಿ, ಸಿರಿಬೈಲು ಧರ್ಮೇಶ್, ಹೊದಲ ಬಸವರಾಜ್ ಮಾತನಾಡಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ್, ಮಲ್ನಾಡ್ ಕ್ಲಬ್ ಅಧ್ಯಕ್ಷ ಜೆ.ಟಿ. ಸುಂದರೇಶ್, ವರ್ತಕರ ಸಂಘದ ಅಧ್ಯಕ್ಷ ಡಾನ್ ರಾಮಣ್ಣ ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post