ರಾಜಕೀಯದ ನಡುವೆ ವೈಭವಕ್ಕೆ ಫುಲ್ ಪ್ಲಾನ್
ಸವಾಲಾಗಿ ಸ್ವೀಕರಿಸುವರೇ ಜವಳಿ-ಆರಗ ಜೋಡಿ
ತೀರ್ಥಹಳ್ಳಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮುಜರಾಯಿ ಇಲಾಖೆ, ಸಹಭಾಗಿತ್ವದಲ್ಲಿ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಭಕ್ತವೃಂದ, ದಾನಿಗಳ ಸಹಕಾರದಲ್ಲಿ ನಡೆಯುವ ದಸರಾ ಉತ್ಸವ ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ. ಅಂದಾಜು 12 ವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಉತ್ಸವದ ಅಯವ್ಯಯ ಸಿದ್ಧಪಡಿಸಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್, ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಮೇಲಾಟಗಳ ನಡುವೆ ವೈಭವದ ದಸರಾ ಆಚರಣೆಗೆ ಪ್ಲಾನ್ ಮಾಡಲಾಗಿದೆ. ಸಭೆಯ ಸರ್ವಾನುಮತದೊಂದಿಗೆ ಸಂಚಾಲಕರಾಗಿ ಶಿವಮೊಗ್ಗ ರಂಗಾಯಣ ಮಾಜಿ ನಿರ್ದೇಶಕ ಸಂದೇಶ ಜವಳಿ ಮರು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ತಾಲ್ಲೂಕು ದಂಡಾಧಿಕಾರಿ ಲಿಂಗರಾಜು, ಗೌರವಾಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಇರಲಿದ್ದಾರೆ.ಉಪಾಧ್ಯಕ್ಷರಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ 2022ರ ದಸರಾ ಸಮಿತಿ ಬಹುತೇಕ ಯಥಾವತ್ ಮುಂದುವರೆಯಲಿ ಎಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿತು.
ಕಳೆದ ಬಾರಿ ಗೃಹಸಚಿವರಾಗಿದ್ದ ಆರಗ ಜ್ಞಾನೇಂದ್ರ ಸಾಕಷ್ಟು ಅದ್ದೂರಿ ದಸರಾ ಆಚರಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ರಾಜಕೀಯ ಬದಲಾವಣೆ ಶಾಸಕರ ಹುಮ್ಮಸ್ಸು ಮತ್ತು ಸವಾಲು ಹೆಚ್ಚಿಸಿದೆ. ಸಂದೇಶ್ ಜವಳಿಯಂತಹ ಅನುಭವಿ ಸಾಂಸ್ಕೃತಿಕ ರಾಯಬಾರಿ ದಸರಾ ಉತ್ಸವಕ್ಕೆ ಸಂಚಾಲಕರಾಗಿ ಪುನಃ ಆಯ್ಕೆಯಾಗಿರುವುದು ಆರಗ ಜ್ಞಾನೆಂದ್ರರಿಗೆ ಆನೆಬಲ ಸಿಕ್ಕಂತಾಗಿದೆ. ಆರ್ಥಿಕ ಸಮಿತಿಗೆ ಸಿರಿಬೈಲು ಧರ್ಮೇಶ್, ಸೊಪ್ಪುಗುಡ್ಡೆ ರಾಘವೇಂದ್ರ ನೇಮಕ ಇನ್ನಷ್ಟು ಚೈತನ್ಯ ಹೆಚ್ಚಲು ಕಾರಣವಾಗಿದೆ. ರಾಜಕೀಯವಾಗಿಯೂ ಆರಗ-ಜವಳಿ ಜೋಡಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದು ತೀರ್ಥಹಳ್ಳಿಯ ದಸರಾ ಉತ್ಸವ ರಾಜ್ಯದಲ್ಲಿಯೇ ಗಮನ ಸೆಳೆಯುವ ನಿರೀಕ್ಷೆ ಹೆಚ್ಚಳವಾಗಿದೆ.
ಕಲೆ, ಸಾಹಿತ್ಯ, ಸಾಂಸ್ಕೃತಿಕ ವೈಭವದ ನಡುವೆ ತೀರ್ಥಹಳ್ಳಿಯ ಹುಲಿವೇಷ, 15ಕ್ಕೂ ಹೆಚ್ಚು ಸ್ತಬ್ಧಚಿತ್ರ, ಚಂಡೆ, ವಾದ್ಯಘೋಷಗಳೊಂದಿಗೆ ಹೊರಡುವ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಈ ಬಾರಿ ವಿಶೇಷ ಆಕರ್ಷಣೆಯ ಜೊತೆಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಗ್ರಾಮೀಣ ಪ್ರದೇಶ ಒಳಗೊಂಡಂತೆ ಅಂದಾಜು 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.