ಅವಿಶ್ವಾಸ ನಿರ್ಣಯ : ಡಿಸಿಸಿ ಅಧ್ಯಕ್ಷ ಚನ್ನವೀರಪ್ಪ ಪದಚ್ಯುತಿ

ಬಿಎಸ್‌ವೈ & ಬಿವೈಆರ್‌ ಶಿಷ್ಯ ಚನ್ನವೀರಪ್ಪ ಪಲ್ಟಿ
ಬಿಜೆಪಿಗೆ ಜಿಲ್ಲೆಯಲ್ಲಿ ಮೊದಲ ಮುಖಭಂಗ
ಭದ್ರಕೋಟೆಯಲ್ಲಿ ಮಕಾಡೆ ಮಲಗಿದ ಬಿಜೆಪಿ

ಶಿವಮೊಗ್ಗ ಜಿಲ್ಲೆಯ ಸಹಕಾರಿ ಕ್ಷೇತ್ರ ರೋಚಕ ತಿರುವು ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಪರಮಾಪ್ತ, ಶಿಷ್ಯ ಚನ್ನವೀರಪ್ಪ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿ ಮಾಡಲಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಇದೊಂದು ಅತಿದೊಡ್ಡ ಬೆಳವಣಿಗೆಯಾಗಿದ್ದು ಗ್ರಾಮೀಣ ಭಾಗದ ಹಲವು ಸಹಕಾರ ಸಂಘಗಳ ಮೇಲೆ ಇದರ ಪ್ರತಿಕೂಲ ಪರಿಣಾಮ ಬೀರುವುದು ಖಚಿತವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಏರುತ್ತಿದ್ದಂತೆ ಹಲವು ಬದಲಾವಣೆಗಳು ಸಹಜವಾಗಿ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದ್ದು ಎಲ್ಲಾ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಬಿಜೆಪಿಯ ಪಾಳಯ ತಳವೂರಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಪ್ರಮುಖ ಜವಾಬ್ದಾರಿಯನ್ನು ತಮ್ಮ ಪಕ್ಷದ ಮುಖಂಡರು, ನಾಯಕರು ವಹಿಸಿಕೊಂಡಿದ್ದರು. ಇದೀಗ ರಾಜ್ಯ ರಾಜಕಾರಣದ ಚಿತ್ರಣ ಬದಲಾವಣೆ ಹಂತದಲ್ಲಿದ್ದು ಕಾಂಗ್ರೆಸ್‌ ಬೆಂಬಲಿಗರು ಅಂತಹ ಸ್ಥಾನಗಳ ಮೇಲೆ ಪ್ರಮುಖವಾಗಿ ಕಣ್ಣಿಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಪ್ರಭಾವ ಇದ್ದಾಗ್ಯೂ ಜಿಲ್ಲೆಯಲ್ಲಿ ಬಿಜೆಪಿಯ ಅಧಿಕಾರದ ಮೊದಲ ಕೊಂಡಿ ಕಳಚಿಕೊಂಡಿದೆ. ಭದ್ರಕೋಟೆಯಲ್ಲಿ ಬಾರಿ ಮುಖಭಂಗ ಎದುರಿಸುತ್ತಿರುವ ಬಿಜೆಪಿ ಇನ್ನಷ್ಟು ಆತಂಕ ಎದುರಿಸುವ ಸಾಧ್ಯತೆ ದಟ್ಟವಾಗುತ್ತಿದೆ. ಸ್ವತಃ ಶಿಕಾರಿಪುರ ಪುರಸಭೆ, ವಿಧಾನಸಭೆ ಚುನಾವಣೆಯಲ್ಲಿಯೂ ಇದರ ನೇರ ಪರಿಣಾಮ ಗೋಚರಿಸಿಕೊಂಡಿದೆ. ಹೀಗಾಗಿ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಮತ್ತೆ ಹಳೆಯ ಖದರ್‌ ಕಾಪಾಡಿಕೊಳ್ಳುವ ಸಾಧ್ಯತೆಯತ್ತ ಮುನ್ನುಗ್ಗಿದೆ.

ಕಾಂಗ್ರೆಸ್‌ ಮುಖಂಡ ಆರ್.ಎಂ. ಮಂಜುನಾಥ ಗೌಡ ಶಿವಮೊಗ್ಗ ಟಿಎಪಿಸಿಎಂಎಸ್‌ ನಿರ್ದೇಶಕರಾದ ನಂತರ ಡಿಸಿಸಿ ಬ್ಯಾಂಕ್‌ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಅದಾದ ನಂತರ ಪುನಃ ಆರ್‌.ಎಂ. ಮಂಜುನಾಥ ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂಬ ವಾದ ಸಹಕಾರಿ ವಲಯದಲ್ಲಿ ಹರಿದಾಡುತ್ತಿತ್ತು. ಇದರ ಬೆನ್ನಿಗೆ ಅವಿಶ್ವಾಸ ನಿರ್ಣಯದಿಂದ ಹಾಲಿ ಅಧ್ಯಕ್ಷ ಚನ್ನವೀರಪ್ಪ ಪದಚ್ಯುತಿಯಾಗಿದ್ದು ಮಂಜುನಾಥ ಗೌಡರು ಅಧ್ಯಕ್ಷರಾಗುವ ಸಾಧ್ಯತೆ ಇನ್ನಷ್ಟು ಹೆಚ್ಚಾಗಿದೆ.

13 ಸಂಖ್ಯಾ ಬಲದ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ 12 ಮತ ಚಲಾವಣೆಯಾಗಿದೆ. ಷಡಾಕ್ಷರಿ, ದುಗ್ಗಪ್ಪಗೌಡ, ವಿಜಯದೇವ್, ಯೋಗೀಶ್, ವೆಂಕಟೇಶ್, ಎಂ.ಎಂ‌. ಪರಮೇಶ್ವರ್, ಸುಧೀರ್, ಎಸ್ಪಿ ದಿನೇಶ್, ಶ್ರೀಪಾದ್ ಸೇರಿ 9 ನಿರ್ದೇಶಕರು ಅವಿಶ್ವಾಸದ ಪರ ಮತ ಹಾಕಿದ್ದಾರೆ. ಭೂಕಾಂತ್, ಚನ್ನವೀರಪ್ಪ, ಅಗಡಿ ಅಶೋಕ್ ಅವಿಶ್ವಾಸದ ವಿರುದ್ಧ ಮತಚಲಾಯಿಸಿದ್ದಾರೆ. ಡಿಸಿಸಿ ಬ್ಯಾಂಕ್‌ನ ಕೋಆಪ್‌ ನಿರ್ದೇಶಕ ಗುರುರಾಜ್‌ ಅರ್ಹತೆ ಪ್ರಕರಣ ನ್ಯಾಯಾಲಯದಲ್ಲಿದ್ದು ಮುಚ್ಚಿತ ಲಕೋಟೆಯಲ್ಲಿ ಮತ ಚಲಾವಣೆಯಾಗಿದೆ. ಚುನಾವಣಾಧಿಕಾರಿಯಾಗಿ ಜೆ.ಸಿ. ವೆಂಕಟಾಚಲಪತಿ ನೇತೃತ್ವದಲ್ಲಿ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

8 ಕ್ಕೂ ಹೆಚ್ಚು ಮತ ಅವಿಶ್ವಾಸದ ಪರವಾಗಿ ಚಲಾವಣೆಯಾದ ಕಾರಣ ಮುಚ್ಚಿದ ಲಕೋಟೆಯ ಮತದಾನ ಲೆಕ್ಕಕ್ಕೆ ಬಾರದಂತಾಗಿದೆ. ಅವಿಶ್ವಾಸ ನಿರ್ಣಯಕ್ಕೆ ಜಯದೊರೆತಿದೆ. ಸಧ್ಯಕ್ಕೆ ಡಿಸಿಸಿ ಬ್ಯಾಂಕ್‌ ಪ್ರಭಾರಿ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿದ್ದ ಷಡಾಕ್ಷರಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಈ ಹಿಂದೆ ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡೋಂಗ್ರೆ ಡಿಸಿಸಿ ಬ್ಯಾಂಕ್ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಠಾಚಾರ ನಡೆಸಿರುವುದು ಗೊತ್ತಾಗಿದೆ. ಸಂಸದರು ಅಕ್ರಮ ಮುಚ್ಚಲು ಏನೆಲ್ಲ ಬೇಕು ಅವೆಲ್ಲಾ ಮಾಡಿ ಮುಗಿಸಿದ್ದಾರೆ. ನೇಮಕಾತಿ ಹಗರಣದ ತನಿಖೆ ನೂತನ ಅಧ್ಯಕ್ಷರ ಆಯ್ಕೆಯಾದ ನಂತರ ನಡೆಯಲಿದೆ ಎಂದರು.

ಸಹಕಾರಿ ಧುರೀಣ ಮಂಜುನಾಥ್ ಗೌಡ ಮಾತನಾಡಿ, 9 ಜನ ಅವಿಶ್ವಾಸದ ಪರ ಮತ ಚಲಾಯಿಸಿದ್ದು ಅಧ್ಯಕ್ಷರ ಪರ ಮೂರು ಮತ ಚಲಾವಣೆ ಆಗಿದೆ. ಡಿಸಿಸಿ ಬ್ಯಾಂಕ್‌ ಅನ್ನು ಬಿಜೆಪಿಮಯ ಮಾಡಲು ಹೊರಟಿದ್ದವರಿಗೆ ಹಿನ್ನಡೆಯಾಗಿದೆ. ನಿರ್ದೇಶಕರ ತೀರ್ಮಾನವೇ ಅಂತಿಮವಾಗಿದೆ. ಈ ಹಿಂದೆ ನಿರ್ದೇಶಕರಿಗೆ ಇಡಿ (ಜಾರಿ ನಿರ್ದೇಶನಾಲಯ) ದಾಳಿಯ ಬೆದರಿಕೆ ಹಾಕಲಾಗಿತ್ತು. ಪ್ರಜಾಪ್ರಭುತ್ವದ ಅಡಿ ಚುನಾವಣೆ ಆಗಿದೆ. ಬಹುಮತವಿಲ್ಲವಾದರು ಚನ್ನವೀರಪ್ಪ ಭಂಡತನದಲ್ಲಿ ಮುಂದುವರೆದಿದ್ದರು ಎಂದು ಕಿಡಿಕಾರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post