ತಹಶೀಲ್ದಾರ್‌ ಅಮೃತ್‌ ಅತ್ರೇಶ್‌ ವರ್ಗಾವಣೆ

ನಿರೀಕ್ಷೆಯಂತೆ ಕೆಲಸ ಮಾಡದೆ ಜಾರಿದ ತಹಶೀಲ್ದಾರ್‌
ಆಜಾದ್‌ ರಸ್ತೆಗೆ ಬೇಲಿ ಹಾಕಿ ಅಪಹಾಸ್ಯಕ್ಕೀಡಾಗಿದ್ದೇ ಸಾಧನೆ
ಅವಕಾಶ ಇದ್ದರೂ ಮಾಡಿದ ಕೆಲಸ ಶೂನ್ಯ – ಸಾರ್ವಜನಿಕರ ಅಸಮಾಧಾನ

ತೀರ್ಥಹಳ್ಳಿಯ ತಹಶೀಲ್ದಾರ್ ಹಾಗೂ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮೃತ್ ಅತ್ರೇಶ್‌ ಬೆಂಗಳೂರಿನ ತಹಶೀಲ್ದಾರ್‌ ಗ್ರೇಡ್‌-1 ಬಿಎಂಆರ್‌ಡಿಎಗೆ ವರ್ಗಾವಣೆಯಾಗಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಆಡಳಿತ ಸುಧಾರಣೆಯಾಗಬೇಕು. ತಾಲ್ಲೂಕಿನಲ್ಲಿರುವ ಬಗರ್‌ಹುಕುಂ, ಅರಣ್ಯ ಸಾಗುವಳಿ, 94ಸಿ, 94ಸಿಸಿ, ಮಾಶಾಸನ ಮುಂತಾದ ಸಮಸ್ಯೆಗಳಿಗೆ ಸ್ಪಂದಿಸುವ ಕಳಕಳಿ, ಕಾಳಜಿ ಹೊಂದಿದ ಅಧಿಕಾರಿ ಬೇಕು ಎಂಬ ಹಲವು ವರ್ಷದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅಂದಿನ ಗೃಹಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ವಿಶೇಷ ಪ್ರಯತ್ನ ನಡೆಸಿದ್ದರು.

ಅದರಂತೆ ಕೆಎಎಸ್‌ (ಕರ್ನಾಟಕ ಲೋಕಸೇವಾ ಆಯೋಗ) ಪದನಿಮಿತ್ತ ಅಧಿಕಾರಿಯನ್ನು ತಹಶೀಲ್ದಾರ್‌ ಆಗಿ ತರುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಪ್ರಯತ್ನ ಮಾಡಿದ್ದರು. ಅದರಂತೆ ಒಂದು ವರ್ಷದ ಹಿಂದೆ ತಾಲ್ಲೂಕು ದಂಡಾಧಿಕಾರಿಯಾಗಿ ಯುವಕ ಅಮೃತ್‌ ಅತ್ರೇಶ್‌ ಹೆಚ್.ಆರ್‌. ಅಧಿಕಾರ ಸ್ವೀಕರಿಸಿದ್ದರು. ಯುವ ಅಧಿಕಾರಿ, ಕಾನೂನುಗಳ ಓದು, ಜ್ಞಾನ ಮತ್ತು ಕೆಲಸ ಮಾಡುವ ಹುರುಪು ಸಾರ್ವಜನಿಕರ ಬಹುಪಾಲು ಕೆಲಸಗಳು ವೇಗವಾಗಿ ಮುಕ್ತಾಯವಾಗಲಿದೆ ಎಂಬ ಬಗ್ಗೆಯೂ ಸಾಕಷ್ಟು ಸಂತೋಷ, ಖುಷಿ ಹೊಂದಿದ್ದ ಚರ್ಚೆಗಳು ಕೂಡ ನಡೆದಿತ್ತು.

ಆದರೆ ತೀರ್ಥಹಳ್ಳಿ ತಾಲ್ಲೂಕು ಆಡಳಿತದ ಜವಾಬ್ದಾರಿ ವಹಿಸಿಕೊಂಡ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಯುವ ತಹಶೀಲ್ದಾರ್ ಕೆಲಸ ಮಾಡಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.‌ ತಾಲ್ಲೂಕು ಕಚೇರಿಯಲ್ಲಿ ಮದ್ಯವರ್ತಿಗಳು, ಪ್ರಭಾವಿಗಳದ್ದೇ ದರ್ಬಾರ್‌ ನಡೆದಿತ್ತು. ಮೊದಲೇ ಹದಗೆಟ್ಟಿದ್ದ ಆಡಳಿತ ಸುಧಾರಣೆಯಾಗದೆ ಇನ್ನಷ್ಟು ಕೆಟ್ಟ ವಾತಾವರಣಗಳಿಂದ ಸಾರ್ವಜನಿಕರು ಶಪಿಸುವಂತಹ ಸ್ಥಿತಿಗೆ ತಲುಪಿತ್ತು. ಪ್ರತಿನಿತ್ಯ ವಯೋವೃದ್ದರು, ಬಡವರು, ರೈತರು, ಮಹಿಳೆಯರು ತಮ್ಮ ಕೆಲಸಗಳಿಗಾಗಿ ಅಲೆದಾಟ ನಿತ್ಯ ಮುಂದುವರೆಸಿದ್ದರು. ಸಾಮಾನ್ಯ ಜನರ ಬಗ್ಗೆ ಕಾಳಜಿಪೂರ್ಣ ಕೆಲಸಗಳು ನಡೆಯುತ್ತಿಲ್ಲ ಎಂಬ ಅಸಮಾಧಾನ ಪ್ರತಿನಿತ್ಯ ಅನೇಕರು ತೋಡಿಕೊಳ್ಳುತ್ತಿದ್ದರು.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಜಾದ್‌ ರಸ್ತೆಗೆ ಬೇಲಿ ಹಾಕುವ ಹೊಸ ಸಂಪ್ರದಾಯ ಹುಟ್ಟುಹಾಕಿದ್ದರು. ಅಲ್ಲದೇ ತಾಲ್ಲೂಕು ಕಚೇರಿ ಸುತ್ತಮುತ್ತಲ 100 ಮೀಟರ್‌ ಅಂತರದಲ್ಲಿದ್ದ ಅಂಗಡಿ ಮಳಿಗೆಗಳನ್ನು ಮುಚ್ಚಿಸಿದ್ದರು. ಇದೇ ಅವರ ಅತೀ ದೊಡ್ಡ ಸಾಧನೆ ಎಂದು ಸಾರ್ವಜನಿಕರ ಲೇವಡಿ ಈಗಲೂ ಜನಜನಿತವಾಗಿದೆ. ಆ ಸಂದರ್ಭದಲ್ಲಿ ತಾಲ್ಲೂಕು ಕಚೇರಿಯ ಯಾವ ಕೆಲಸಗಳು ನಡೆಯದೆ ಸುಮಾರು 15 ರಿಂದ 20 ದಿನಗಳು ಸಾರ್ವಜನಿಕರು ದಿನನಿತ್ಯ ಬೇಲಿ ನೋಡಿಕೊಂಡು ಹೋಗುವ ಸನ್ನಿವೇಶ ನಿರ್ಮಾಣವಾಗಿತ್ತು. ಅಲ್ಲದೇ ಸ್ಥಳೀಯ ವ್ಯಾಪಾರಸ್ಥರು ಈ ನಿಯಮದಿಂದ ಕಂಗಾಲಾಗಿ ಹೋಗಿದ್ದರು. ಅದಾದ ನಂತರವೂ ಚುನಾವಣೆಯ ಸಂದರ್ಭದಲ್ಲಿ ಅಗತ್ಯ ಕೆಲಸಗಳು ನಡೆಯುತ್ತಿರಲಿಲ್ಲ. ಈಚೆಗೆ ಶಾಸಕ ಆರಗ ಜ್ಞಾನೇಂದ್ರ ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿಯೂ ತಾಲ್ಲೂಕು ಆಡಳಿತದ ಬಗ್ಗೆ ವಿಪರೀತ ಬೇಸರ ತೋಡಿಕೊಂಡಿದ್ದರು. ಅಧಿಕಾರಿಗಳು ಸರ್ಕಾರಿ ಕೆಲಸ ಮಾಡುವ ಸಮಯ, ಸಂದರ್ಭಗಳು ಬದಲಾಗಿರುವುದನ್ನು ಶಾಸಕರೇ ಸ್ವತಃ ಹೇಳಿಕೊಂಡಿದ್ದರು.

ತಾಲ್ಲೂಕು ಕಚೇರಿಯ ಯಜಮಾನರಂತಿರುವ ತಹಶೀಲ್ದಾರ್‌ ಹುದ್ದೆ ಇದ್ದಗ್ಯೂ ಕೂಡ ತಮ್ಮ ಕೆಳ ಹಂತದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಅವರು ಕಚೇರಿಗೆ ಬರುವ ಸಮಯ ಅವರು ಸರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆಯೂ ಉಸ್ತುವಾರಿ ನೋಡಿಕೊಳ್ಳದ ಸ್ಥಿತಿ ತಲುಪಿತ್ತು. ಇದೇನ್ರಿ ಈ ಹಂತದಲ್ಲಿ ಆಡಳಿತ ಹಾಳಾಗಿದೆ ಎಂದು ಕೂಡ ಆರಗ ಜ್ಞಾನೇಂದ್ರ ಗುಟುರ್‌ ಹಾಕಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಮೂಲತಃ ಬೆಂಗಳೂರಿನವರೇ ಆದ ತಹಶೀಲ್ದಾರ್‌ ತಮ್ಮ ಹುಟ್ಟೂರಿಗೆ ಅಧಿಕಾರಿಯಾಗಿ ತೆರಳಿದ್ದಾರೆ. ತಮ್ಮ ಊರಿನಲ್ಲಾದರೂ ಉತ್ತಮ ಕೆಲಸಗಳು ಮಾಡಲಿ. ನಾಗರೀಕರಿಗೆ ಯಾವುದೇ ರೀತಿಯ ಕಿರಿಕಿರಿ ನೀಡದೆ ಸುಗಮ ಆಡಳಿತ ನೀಡುವರೇ ಎಂದು ಸಾರ್ವಜನಿಕರು ತಮ್ಮತಮ್ಮಲ್ಲಿ ಚರ್ಚೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post