ನರೇಂದ್ರ ಮೋದಿ ರಾಜೀನಾಮೆ ನೀಡಲಿ

ಮಣಿಪುರ ಸರ್ಕಾರ ವಜಾಗೊಳಿಸಿ
ರಾಷ್ಟ್ರಪತಿಗೆ ಕಿಮ್ಮನೆ ರತ್ನಾಕರ್‌ ಮನವಿ
ಮಣಿಪುರ ಸಂಘರ್ಷದ ಮನ್‌ ಕೀ ಬಾತ್‌ ಯಾವಾಗ…? - ಕಿಮ್ಮನೆ

ಮಣಿಪುರ ಘಟನೆಯಿಂದ ವಿದೇಶದಲ್ಲಿ ಭಾರತದ ಮರ್ಯಾದೆ ಹರಾಜಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶ ರಕ್ಷಿಸುವಲ್ಲಿ ವಿಫಲರಾಗಿದ್ದು ರಾಜೀನಾಮೆ ನೀಡಬೇಕು ಮತ್ತು ದೇಶದ ಜನರನ್ನು ಕ್ಷಮೆಯಾಚಿಸಿಬೇಕು. ರಾಷ್ಟ್ರಪತಿ ಮಣಿಪುರ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಗ್ರಹಿಸಿದರು.

ಮಣಿಪುರ ಸಂಘರ್ಷ, ದೌರ್ಜನ್ಯ ಖಂಡಿಸಿ ಮುಖ್ಯ ಬಸ್‌ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೆ ಬೃಹತ್‌ ಮೆರವಣಿಗೆ ನಡೆಸಿ ಅವರು ಮಾತನಾಡಿ, ಎರಡೂವರೆ ತಿಂಗಳಿನಿಂದ ಮಣಿಪುರದಲ್ಲಿ ದೌರ್ಜನ್ಯ, ಅತ್ಯಾಚಾರ, ಕೊಲೆ, ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ದೇಶ ರಕ್ಷಿಸುವ ಸೈನಿಕರ ಪತ್ನಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನಾಗರೀಕತೆ ಸೃಷ್ಟಿಯಾಗಿದೆ. ಸಣ್ಣಪುಟ್ಟ ವಿಚಾರಗಳ ಬಗ್ಗೆ ಮನ್‌ಕೀ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಧಾನಿ ಮಣಿಪುರ ವಿಚಾರದಲ್ಲಿ ಮೌನ ವಹಿಸಿ ಸರ್ಕಾರವನ್ನು ರಕ್ಷಿಸುವ ತಂತ್ರ ಅನುಸರಿಸಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ರಚನೆಯಾದ 24 ಗಂಟೆಯೊಳಗೆ ಗ್ಯಾರಂಟಿ ಯೋಜನೆ ಜಾರಿಗೊಳಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದರು. ಜಾರಿಯಾದ ಮೇಲೆ ರಾಜ್ಯ ದಿವಾಳಿಯಾಗುತ್ತದೆ ಎಂದು ಕಿಡಿಕಾರಿದ್ದರು. ಜನರಿಗೆ ಕೊಡುವ ಯೋಜನೆಯ ಬಗ್ಗೆ ಟೀಕಿಸುವ ಬಿಜೆಪಿಗರು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಮಣಿಪುರದ ಸರ್ಕಾರದ ಹಾಗೂ ನರೇಂದ್ರ ಮೋದಿ ವಿಚಾರದಲ್ಲಿ ಯಾಕೆ ಟೀಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ಕಳೆದ ವರ್ಷ ಅತೀವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ನೀಡಿಲ್ಲ. ಬಿಜೆಪಿ ಮುಖಂಡರ ಮನೆಗೆ ಹೋಗುವ ದಾರಿಗೆ ಕಾಂಕ್ರಿಟ್‌ ರಸ್ತೆ ಮಾಡಿಸಿದ್ದಾರೆ. ಮನೆಗಳ ವಿಚಾರದಲ್ಲೂ ತಾರತಮ್ಯ ಧೋರಣೆ ಮುಂದುವರೆಸಿದ್ದರು. ಆರಗ ಜ್ಞಾನೇಂದ್ರ ಎಲೆಚುಕ್ಕಿ ರೋಗ ಪರಿಹಾರ, ಔಷಧಿಗೆ 10 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದು ಬಿಟ್ಟಿ ಪ್ರಚಾರ ಪಡೆದಿದ್ದರು. ಆದರೆ ಕೇವಲ36 ಲಕ್ಷ ಮಾತ್ರ ಪರಿಹಾರ ಬಂದಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆರೇಳು ಲೇಔಟ್‌ಗಳು ಸರ್ಕಾರದ ಅನುಮೋದನೆ ಆಗಿರಲಿಲ್ಲ. ದಾಖಲೆಗಳನ್ನು ಸರಿಪಡಿಸಿ ಸಕ್ರಮಗೊಳಿಸಿದ್ದೇನೆ ಎಂದು ಚುನಾವಣೆಯಲ್ಲಿ ಆರಗ ಸನ್ಮಾನ ಸ್ವೀಕರಿಸಿದ್ದರು. ಆದರೆ ಇಂದಿಗೂ ಕೂಡ ಲೇ ಔಟ್‌ ಸಕ್ರಮಗೊಂಡಿಲ್ಲ. ಇಂತಹ ನೂರಾರು ಸುಳ್ಳುಗಳ ಮೇಲೆ ಚುನಾವಣೆ ನಡೆಸಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಮುಖಂಡರಾದ ಬಾಳೇಹಳ್ಳಿ ಪ್ರಭಾಕರ್, ಕಡ್ತೂರು ದಿನೇಶ್, ಡಿ.ಎಸ್. ವಿಶ್ವನಾಥ ಶೆಟ್ಟಿ, ಬಂಡಿ ರಾಮಚಂದ್ರ, ಹಾರೋಗೊಳಿಗೆ ಪದ್ಮನಾಭ,  ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಉಪಾಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಸ್ಥಾಯಿ‌ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪುಟ್ಟೋಡ್ಲು ರಾಘವೇಂದ್ರ ಇದ್ದರು.

ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಡಲು ಆರಗ ವಿಫಲ – ಡಿ.ಎಸ್.‌ ವಿಶ್ವನಾಥ ಶೆಟ್ಟಿ

ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಏನೇನು ಸರಿಯಿಲ್ಲ. ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬರುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಮೊನ್ನೆ ಅಧಿಕಾರಿಗಳಿಗೆ ಚೀಮಾರಿ ಹಾಕಿದ್ದಾರೆ. ತಾಲ್ಲೂಕು ಕಚೇರಿಯಲ್ಲಿರುವ ಅಧಿಕಾರಿಗಳು ಬದಲಾಗಿಲ್ಲ. ಗೃಹಸಚಿವರಾಗಿದ್ದ ಕಾಲದಲ್ಲಿ ಇದ್ದವರೇ ಈಗಲೂ ಇದ್ದಾರೆ. ಆಗ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದು ನಾವು ನೋಡಿಲ್ಲ. ಇದೀಗ ಶಾಸಕರಾದ ಮೇಲೆ ಅಧಿಕಾರಿಗಳ ಮೇಲೆ ಹೌರಾರಿದರೆ ಪ್ರಯೋಜನವೇನು. ಆಗ ಇವರನ್ನು ಸರಿಮಾಡಲು ಆಗುತ್ತಿರಲಿಲ್ಲವೇ ಎಂದು ಡಿ.ಎಸ್.‌ ವಿಶ್ವನಾಥ ಶೆಟ್ಟಿ ಪ್ರಶ್ನಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post