10 ಕೋಟಿಗೂ ಹೆಚ್ಚು ಲಾಭ ಗಳಿಕೆ, 1219 ಕೋಟಿ ವ್ಯವಹಾರ

ಸಹಕಾರಿ ರತ್ನ ಬಸವಾನಿ ವಿಜಯದೇವ್‌ ಸಾರಥ್ಯ
20ನೇ ವರ್ಷದ ಸಂಭ್ರಮದಲ್ಲಿ ಸಹ್ಯಾದ್ರಿ ಸಂಸ್ಥೆ

ಮಲೆನಾಡಿನಲ್ಲಿ ಸಹಕಾರ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ಹುಟ್ಟುಹಾಕಿ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ತೀರ್ಥಹಳ್ಳಿಯ ಸಹ್ಯಾದ್ರಿ ಸಂಸ್ಥೆಗೆ ಈಗ 20 ರ ಸಂಭ್ರಮ. ಕೆಲವೇ ಷೇರುದಾರ ಸದಸ್ಯರಿಂದ ಆರಂಭವಾದ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯದ ಸಹಕಾರಿ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ತೀರ್ಥಹಳ್ಳಿಯ ಸಹ್ಯಾದ್ರಿ ಸಂಸ್ಥೆ ಕಡೆಗೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿರವ ಸಹಕಾರಿ ರತ್ನ ಬಸವಾನಿ ವಿಜಯದೇವ್‌ ಮತ್ತು ಆಡಳಿತ ಮಂಡಳಿಯ ದೂರದೃಷ್ಠಿ, ಮುಂದಾಲೋಚನೆ, ಪಾರದರ್ಶಕ ಆಡಳಿತ ಸಂಸ್ಥೆಯನ್ನು ಎತ್ತರಕ್ಕೆ ತಂದು ನಿಲಿಸುವಲ್ಲಿ ಸಹಕಾರಿಯಾಗಿದೆ.

ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಒಂದು ಸಂಸ್ಥೆ ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎಂದು ಸಹ್ಯಾದ್ರಿ ಸಂಸ್ಥೆ ತೋರಿಸಿಕೊಟ್ಟಿದೆ. ಕಡಿಮೆ ಬಂಡವಾಳದಲ್ಲಿ ಆರಂಭವಾದ ಸಂಸ್ಥೆ ಈಗ ವಾರ್ಷಿಕ 1,219 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಅಂದಾಜು 10 ಕೋಟಿ ರೂಪಾಯಿ ಲಾಭ ಪಡೆದಿದೆ ಎಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಬಸವಾನಿ ವಿಜಯದೇವ್‌ ಹೆಮ್ಮೆ, ಅಭಿಮಾನದಿಂದ ಸ್ಮರಿಸುತ್ತಾರೆ.

ಅಡಿಕೆ ಕೇಂದ್ರೀಕರಿಸಿ ಆರಂಭಿಸಿದ ಸಂಸ್ಥೆ ವಿಶಾಲವಾದ ದೃಷ್ಟಿಕೋನದಿಂದ ಬೆಳೆಯುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ ವಸೂಲಾತಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿರುವುದು ಸಂಸ್ಥೆಯ ಏಳಿಗೆಗೆ ನೆರವಾಗಿದೆ. ಜೊತೆಗೆ ಪೆಟ್ರೋಲ್‌ ಬಂಕ್‌, ನಂದಿನಿ ಮಿಲ್ಕ್‌ ಪಾರ್ಲರ್‌, ಎಮಿಷನ್‌ ಟೆಸ್ಟ್‌, ಸಹ್ಯಾದ್ರಿ ಚೀಟಿ ನಿಧಿ, ಸಿಯಾ ಕುಡಿಯುವ ನೀರಿನ ಘಟಕ ಲಾಭದಾಯವಾಗಿ ನಡೆಯುತ್ತಿದೆ.

ಹಲವು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ʼʼ ವರ್ಗ ಶ್ರೇಣಿ ಹೊಂದಿದೆ. ಸಂಘದ ಸದಸ್ಯರಿಗೆ ಶೇಕಡಾ 10 ರಷ್ಟು ಡಿವಿಡೆಂಟ್‌ ವಿತರಿಸಲು ನಿರ್ಣಯಿಸಿದ್ದೇವೆ. ಸಂಸ್ಥೆಯ ಮಾರುಕಟ್ಟೆ ಸ್ಥಿರಾಸ್ತಿ ಮೌಲ್ಯ 55 ಕೋಟಿ ರೂಪಾಯಿ ಇದೆ. 117 ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ವಿತರಣೆ ಮಾಡಲಾಗಿದೆ. ಸಾಲ ವಸೂಲಾತಿ ವಿಚಾರದಲ್ಲಿ ಯಾವುದೆ ರಾಜಿ ಇಲ್ಲದೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಇನ್ನಷ್ಟು ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಿದೆ. ಸೆಪ್ಟೆಂಬರ್‌ 4 ಅಥವಾ 5 ರಂದು ಸರ್ವ ಸದಸ್ಯರ ಸಭೆಯನ್ನು ನಡೆಸಲಾಗುವುದು ಎಂದು ಬಸವಾನಿ ವಿಜಯದೇವ್‌ ಮಾಹಿತಿ ನೀಡಿದರು.

ಅಡಿಕೆ ಮತ್ತು ಸಾಲದ ವಿಭಾಗದಲ್ಲಿ ರೂ 7 ಕೋಟಿಗೂ ಹೆಚ್ಚು ಲಾಭ ಗಳಿಸಿದೆ. ಪೆಟ್ರೋಲ್‌ ಬಂಕ್‌ 38 ಲಕ್ಷ ರೂಪಾಯಿ ಲಾಭ, ನಂದಿನಿ ಮಿಲ್ಕ್‌ ಪಾರ್ಲರ್‌ ಮತ್ತು ಎಮಿಷನ್‌ ಟೆಸ್ಟ್‌ನಲ್ಲಿ 5 ಲಕ್ಷ ಲಾಭ, ಸಹ್ಯಾದ್ರಿ ಚೀಟಿ ನಿಧಿ ವಿಭಾಗದಲ್ಲಿ 1.86 ಕೋಟಿ ಲಾಭ, ಸಿಯಾ ಕುಡಿಯುವ ನೀರು ಘಟಕದಲ್ಲಿ 1.5 ಲಕ್ಷ ಲಾಭ ಹೊಂದಿದೆ. ಸಹಕಾರಿ ವಾರ ಪತ್ರಿಕೆ 8 ಲಕ್ಷ ರೂಪಾಯಿ ನಷ್ಟದಲ್ಲಿದ್ದರು ಸಂಸ್ಥೆಯ ಮಾಹಿತಿ ಪಸರಿಸುವಲ್ಲಿ ಸಹಕಾರಿಯಾಗಿದೆ. ಕೊರೊನಾ ಕಾಲಘಟ್ಟದಲ್ಲಿ ನಷ್ಟ ಅನುಭವಿಸಿದ್ದ ಸಾರಿಗೆ ವಿಭಾಗ ಚೇತರಿಸಿಕೊಳ್ಳುತ್ತಿದ್ದು ವಿದ್ಯಾರ್ಥಿಗಳು, ಗ್ರಾಹಕರಿಗೆ ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಅಡಿಕೆಯನ್ನು ಪ್ರಧಾನವಾಗಿಟ್ಟುಕೊಂಡು ವ್ಯವಹಾರ ನಡೆಸುತ್ತಿದೆ. ತೀರ್ಥಹಳ್ಳಿ ಭಾಗದ ಅಡಿಕೆ ಬೆಳೆಗಾರರ ಅನುಕೂಲಕ್ಕೆ ತಕ್ಕಂತೆ ವ್ಯವಹಾರ ನಡೆಸುವ ಮೂಲಕ ಶಿವಮೊಗ್ಗಕ್ಕೆ ಹೋಗಿ ಅಡಿಕೆ ಬಿಕರಿ ಮಾಡುವುದನ್ನು ತಪ್ಪಿಸಿ ರೈತರಿಗೆ ಲಭ್ಯವಾಗುವ ಸೌಕರ್ಯವನ್ನು ಸ್ಥಳೀಯವಾಗಿ ಸಿಗವಂತೆ ಸಂಸ್ಥೆ ಮಾಡಿದೆ ಎಂದು ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಸವಾನಿ ವಿಜಯದೇವ್‌ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post