ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜು

ರೇಸ್‌ನಲ್ಲಿ ಕಿಮ್ಮನೆ ರತ್ನಾಕರ್‌ ಹೆಸರು ಮುಂಚೂಣಿಗೆ
ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಗುವರೇ ಕಿಮ್ಮನೆ…?
ಗೀತಾ ಶಿವರಾಜಕುಮಾರ್‌ - ಕಿಮ್ಮನೆ ನಡುವೆ ಯಾರಿಗೆ ಟಿಕೆಟ್‌
ಅಭಿವೃದ್ಧಿಯ ವಿಚಾರದಲ್ಲಿ ಸೊರಗಿ ತೆವಳುತ್ತಿದ್ದ ತೀರ್ಥಹಳ್ಳಿಗೆ ಶರವೇಗ ನೀಡಿದವರೇ ಕಿಮ್ಮನೆ ರತ್ನಾಕರ್. 2008 ರಿಂದ 2018ರ ವರೆಗೆ ತನ್ನ ಮೇಲೆ ಎಂತಹದ್ದೇ ಆರೋಪಗಳು ಕೇಳಿ ಬಂದರು ಜಗ್ಗದ ಕಿಮ್ಮನೆ ಅಭಿವೃದ್ಧಿಗೆ ಭದ್ರ ತಳಪಾಯ ಹಾಕಿದ್ದರು. 2008ಕ್ಕಿಂತ ಮುಂಚೆ ತೀರ್ಥಹಳ್ಳಿಗೆ ಆಗಮಿಸುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹೊಂಡ ಗುಂಡಿಗಳಿಂದ ಕೂಡಿತ್ತು. ಹಳ್ಳಿ ಹಳ್ಳಿಗೂ ರಸ್ತೆಗಳನ್ನು ನೀಡಿದ್ದಲ್ಲದೇ ತೀರ್ಥಹಳ್ಳಿ ಪಟ್ಟಣಕ್ಕೆ ದ್ವಿಪಥ ರಸ್ತೆ ಮಾಡಿ ರಾಜ್ಯವೇ ತಿರುಗುವಂತೆ ಮಾಡಿದ ಮೊದಲಿಗೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಯನ್ನೇ ಎಬ್ಬಿಸಿದರು. ಹಲವು ವರ್ಷಗಳ ಸಮಸ್ಯೆಯಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಒಂದೇ ವರ್ಷದಲ್ಲಿ ಬಗೆಹರಿಸಿದ ಆಡಳಿತಗಾರ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಲ್ಲಾ ತಾಲ್ಲೂಕುಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಸೈ ಎನಿಸಿಕೊಂಡಿದ್ದರು. ತಪ್ಪುಗಳನ್ನು ಕಟುವಾಗಿ ಟೀಕಿಸುವ ಅವರು ಆ ಕ್ಷಣಕ್ಕೆ ಮುಂಗೋಪಿಯಂತೆ ಕಂಡರು ಸಮಾಜವನ್ನು ರಾಜಕಾರಣಿಯಾಗಿ ತಿದ್ದುವ ಕೋಪದ ಹಿಂದೆ ಸತ್ಯ ಅಡಗಿರುತ್ತದೆ. ಹಾಗಾಗಿ ಸಾರ್ವಜನಿಕವಾಗಿಯೂ ಕಿಮ್ಮನೆ ರತ್ನಾಕರ್ ಪರವಾಗಿ ದೊಡ್ಡ ವಿಶ್ವಾಸ ಮತ್ತು ನಂಬಿಕೆ ಹೆಚ್ಚಿದೆ.

ರಾಜ್ಯದಲ್ಲಿ ಭಾರಿ ಬಹುಮತದಿಂದ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರ್ಕಾರಕ್ಕೆ 2024ರ ಲೋಕಸಭಾ ಚುನಾವಣೆ ದೊಡ್ಡ ಸವಾಲು ತಂದೊಡ್ಡಿದೆ. ರಾಜ್ಯದಲ್ಲಿ ಸಂಸದ ಡಿ.ಕೆ. ಸುರೇಶ್‌ ಹೊರತು ಯಾರು ಕೂಡ ಕಾಂಗ್ರೆಸ್ ಸಂಸದರಿಲ್ಲ. ಹಾಗಾಗಿ ರಾಜ್ಯದ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ಬಾರಿ ಹಿನ್ನಡೆಯಾಗಿದೆ. ಅಲ್ಲದೇ ದೇಶದಲ್ಲಿ ಕಾಂಗ್ರೆಸ್‌ ಭದ್ರ ನೆಲೆ ಹೊಂದುವುದು ಕೂಡ ಅತಿ ದೊಡ್ಡ ಸವಾಲಾಗಿದ್ದು ಈಗಾಗಲೇ ಚುನಾವಣೆಯ ಸಿದ್ಧತೆ ಭರದಿಂದ ಸಾಗಿದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೂಡ ಚುನಾವಣೆ ಘೋಷಣೆಯ ಪೂರ್ವದಲ್ಲಿ ನಿರ್ಧರಿಸುವ ಆಲೋಚನೆಯಲ್ಲಿರುವ ರಾಷ್ಟ್ರೀಯ ಕಾಂಗ್ರೆಸ್‌ ತಮ್ಮ ನಿಲುವುಗಳನ್ನು ಸಮರ್ಥವಾಗಿ ಜನರ ಮುಂದಿಡುವ ಅಭ್ಯರ್ಥಿಗಳ ತಲಾಶ್‌ ಆರಂಭಿಸಿದೆ. ಆರು ತಿಂಗಳ ಮೊದಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಅಸಮರ್ಥ ಆಡಳಿತ, ನಿರುದ್ಯೋಗ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ರೂಪಿಸಲು ಹಳ್ಳ ಹಿಡಿದಿರುವ ಪಕ್ಷದ ಯಂತ್ರ ಸಜ್ಜುಗೊಳಿಸಲು ಮುಂದಾಗಿದೆ.
ಸಮಾಜವಾದಿ ನೆಲದ ಹಿನ್ನಲೆ ಹೊಂದಿರುವ ಶಿವಮೊಗ್ಗ ಜಿಲ್ಲೆ ಈಚೆಗೆ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ವೈ. ರಾಘವೇಂದ್ರ ಎದುರಾಳಿ ಜೆಡಿಎಸ್‌ ಅಭ್ಯರ್ಥಿ ಮಧುಬಂಗಾರಪ್ಪ ವಿರುದ್ಧ ಎರಡು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಬಾರಿ ಜಯಗಳಿಸಿದ್ದರು. ಆದರೆ ಪರಾಜಿತ ಅಭ್ಯರ್ಥಿ ಮಧು ಬಂಗಾರಪ್ಪ ಹಾಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಕೊರತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಉದ್ಭವಿಸಿದೆ.
ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ, ಬೈಂದೂರು ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ 4 ಬಿಜೆಪಿ, 3 ಕಾಂಗ್ರೆಸ್‌, 1 ಜೆಡಿಎಸ್‌ ಶಾಸಕರಿದ್ದಾರೆ. ಜಿಲ್ಲೆಯನ್ನು ಪ್ರತಿನಿಧಿಸಿ ವಿಧಾನಸಭೆಯಲ್ಲಿ ಅತೀ ಹೆಚ್ಚು ಬಿಜೆಪಿ ಶಾಸಕರು ಇದ್ದಾಗ್ಯೂ ಕೂಡ ಶೇಕಡಾ 53 ರಷ್ಟು ಮತಗಳನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷ ಗೆಲ್ಲುವ ನಿರೀಕ್ಷೆಯನ್ನು ಹೊಂದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪರಪ್ಪ, ಸಚಿವರಾದ ಈಶ್ವರಪ್ಪ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಕುಮಾರ್‌ ಬಂಗಾರಪ್ಪನಂತಹ ಪ್ರಭಾವಿ ನಾಯಕರ ನಡುವೆ ಕಾಂಗ್ರೆಸ್‌ ಪಕ್ಷ ನಾಯಕತ್ವ ಉಳಿಸಿಕೊಳ್ಳಲು ಸಮಬಲದ ಹೋರಾಟ ನಡೆಸಿದಂತಿದೆ.
ಜಿಲ್ಲೆಯಿಂದ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನಂತರ ಬಿ.ಎಸ್‌. ಯಡಿಯೂರಪ್ಪ ರಾಜ್ಯದ ಪ್ರಭಾವಿ ನಾಯಕರೆನಿಸಿಕೊಂಡಿದ್ದಾರೆ. ಅವರ ಓರ್ವ ಪುತ್ರ ಬಿ.ವೈ. ವಿಜಯೇಂದ್ರ ಶಿಕಾರಿಪುರದಲ್ಲಿ ಶಾಸಕರಾದರೆ ಮತ್ತೋರ್ವ ಜಿಲ್ಲೆಯ ಸಂಸದರಾಗಿ ಗುರುತಿಸಿಕೊಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಭಾವ, ಕಾರ್ಯಕರ್ತರ ಜಾಲ ಹೊಂದಿರುವ ಬಿಜೆಪಿ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಲಿದೆ. ಅದಕ್ಕಾಗಿಯೇ ಕಾಂಗ್ರೆಸ್‌ ತನ್ನ ಪಟ್ಟು ಬಿಗಿಗೊಳಿಸುವ ನಿರ್ಧಾರದಲ್ಲಿದ್ದು ಒಳ್ಳೆಯ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲು ಸನ್ನದ್ಧವಾಗಿದೆ. ಹಾಗೆ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಈ ಬಾರಿ ಮತದಾರರ ಒಲವು ಕಾಂಗ್ರೆಸ್‌ ಕಡೆಗೆ ಹರಿಯುವಂತೆ ಮಾಡಿದೆ.
2024ರ ಲೋಕಾಸಭಾ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಬಹಳ ಮುಖ್ಯವಾಗಿ 2014ರಲ್ಲಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಸ್‌ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ರಾಜ್ಯದಲ್ಲಿ ಶಿಕ್ಷಣ ಸಚಿವರಾಗಿ ಕ್ರಾಂತಿಕಾರಕ ನಿಲುವುಗಳಿಂದ ಸಜ್ಜನ, ಸರಳ, ಪ್ರಾಮಾಣಿಕ, ಉತ್ತಮ ಆಡಳಿತ ನೀಡಿದ ಸಚಿವ ಎಂದು ಗುರುತಿಸಿಕೊಂಡ ಕಿಮ್ಮನೆ ರತ್ನಾಕರ್ ಹೆಸರು ಮುಂಚೂಣಿಯಲ್ಲಿದೆ.
ಗೀತಾ ಶಿವರಾಜ್‌ ಕುಮಾರ್‌ ಬದಲಿಗೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಟ ಶಿವರಾಜ್‌ ಕುಮಾರ್‌ ಅವರ ಸೇವೆ ಪರಿಗಣಿಸಿ ಒಳ್ಳೆಯ ಸ್ಥಾನಮಾನ ನೀಡುವ ಬಗ್ಗೆಯೂ ಚರ್ಚೆಯಲ್ಲಿದೆ. ಅಲ್ಲದೇ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಸಿನಿಮಾ ಮಂಡಳಿಗಳಲ್ಲಿ ಸ್ಥಾನಮಾನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಕೂಡ ಚರ್ಚೆಗಳು ಇವೆ. ಈ ನಡುವೆ ಶಿವಮೊಗ್ಗದಲ್ಲಿ ಬಂಗಾರಪ್ಪ ಕುಟುಂಬ ಬಿಟ್ಟರೆ ಯಾರಿಗೆ ಟಿಕೆಟ್‌ ಕೊಡಬಹುದು ಎಂಬ ಬಗ್ಗೆಯೂ ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅವರ ಸೋಲು ತೀರ್ಥಹಳ್ಳಿ ತಾಲ್ಲೂಕು ಅಲ್ಲದೇ ರಾಜ್ಯದಲ್ಲಿಯೂ ಕೂಡ ತೀವ್ರ ಚರ್ಚೆಗೆ ಗುರಿಯಾಗಿದೆ. ಸಜ್ಜನ, ಸರಳ, ಪ್ರಾಮಾಣಿಕ ಅಭ್ಯರ್ಥಿಯೆನಿಸಿಕೊಂಡ ಕಿಮ್ಮನೆ ಸೋಲಬಾರದಿತ್ತು ಎಂಬ ಬಗ್ಗೆಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾರಿ ಬೇಸರದ ಮಾತುಗಳನ್ನು ಆಡಿದ್ದಾರಂತೆ. ಮತ್ತು ಕಿಮ್ಮನೆ ಗೆದ್ದಿದ್ದರೆ ಮೊದಲ ಹಂತದಲ್ಲೇ ಸಚಿವ ಸ್ಥಾನ ನೀಡುತ್ತಿದ್ದೆ. ಅಂತವರು ನನ್ನ ಸಂಪುಟದಲ್ಲಿ ಇಲ್ಲ ಎಂಬ ಬಗ್ಗೆಯೂ ಕೊರಗು ಇದೆ ಎಂದು ಆಪ್ತರೊಂದಿಗೆ ಹೇಳಿಕೊಂಡಿದ್ದಾರಂತೆ.
ರಾಜ್ಯದಲ್ಲಿಯೂ ಕಿಮ್ಮನೆ ಸೋಲು ಹಲವು ಜನರನ್ನು ದಿಗ್ಭ್ರಮೆಗೊಳಿಸಿದೆ. ಸಮಾಜವಾದಿ ನೆಲದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲವೇ ಎಂಬ ಬಗ್ಗೆಯೂ ರಾಜಕೀಯ ವಿಶ್ಲೇಷಣೆಗಳು ಹೊರಬರುತ್ತಿದೆ. ಕಿಮ್ಮನೆ ಹೊರತುಪಡಿಸಿ ಜಿಲ್ಲೆಯಲ್ಲಿ ಪ್ರಭಾವಿ ನಾಯಕರು ಯಾರು ಇಲ್ಲದಿರುವುದು ಕೂಡ ಕಿಮ್ಮನೆ ಪರವಾದ ಒಲವು ಹೆಚ್ಚಲು ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ಹೊಂದಿರುವ ಅವರು ಕೇಂದ್ರ ಸರ್ಕಾರದಿಂದ ಆಗಬಹುದಾದ ಕೆಲಸಗಳನ್ನು ಶೀಘ್ರವಾಗಿ ಮಾಡಲು ಅನುಕೂಲವಾಗಲಿದೆ. ರಾಜ್ಯದ ಸಚಿವರಾದ ದಿನದಿಂದ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರು ಎಂದಿಗೂ ಕೂಡ ತಮ್ಮ ಕೆಲಸಗಳನ್ನು ಬಿಟ್ಟು ಓಡಿ ಹೋದವರಲ್ಲ. ಕೇಂದ್ರದಿಂದ ಆಗಬಹುದಾದ ಎಲ್ಲಾ ಕೆಲಸಗಳಿಗೂ ಪರಿಹಾರ ಕಂಡುಕೊಳ್ಳಬಹುದು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದು ಸಂಸದರು ಕಾಂಗ್ರೆಸ್‌ನಿಂದ ಆಯ್ಕೆಯಾದರೆ ಜಿಲ್ಲೆಯ ಅಭಿವೃದ್ಧಿಗೆ ಶರವೇಗ ಲಭಿಸುತ್ತದೆ ಎಂಬ ಬಗ್ಗೆಯೂ ಚಿಂತನೆಗಳು ಹೆಚ್ಚಾಗತೊಡಗಿದೆ.

ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಪರಾಭವಗೊಂಡಿದ್ದರು ಲೋಕಸಭಾ ಚುನಾವಣೆ ವಿಚಾರದಲ್ಲಿ ಭಿನ್ನ ಫಲಿತಾಂಶ ನೀಡಲಿದೆ. ತಾಲ್ಲೂಕಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ವಿನ ಮತ ಕಿಮ್ಮನೆ ಪರವಾಗಿ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಬಾರಿಯ ಸೋಲು ಕಾಂಗ್ರೆಸ್ ಪಕ್ಷ ಸೇರಿದಂತೆ ಬಿಜೆಪಿ, ಜೆಡಿಎಸ್ ವಲಯದಲ್ಲೂ ತೀವ್ರ ಚರ್ಚೆ ಹುಟ್ಟುಹಾಕಿದ್ದು ಅನುಕಂಪದ ಅಲೆ ನಿರ್ಮಾಣವಾಗಿದೆ. ಆದರೆ ಉಳಿದೆಲ್ಲಾ ತಾಲ್ಲೂಕು ಯಾವ ರೀತಿ ಸ್ಪಂದಿಸಲಿದೆ ಎಂಬ ಬಗ್ಗೆಯೂ ಕಾದು ನೋಡಬೇಕಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post