ನಾಗರೀಕರೇ ಬನ್ನಿ ಪ್ರಮಾಣವಚನ ಸ್ವೀಕರಿಸಿ…!

ತೀರ್ಥಹಳ್ಳಿಯಲ್ಲಿ ಮಾದರಿ ವಿಧಾನಸಭಾ ಚುನಾವಣೆ ನಡೆಯುವುದೇ?
ಚುನಾವಣೆ ಹಿಂದಿನ ದಿನ ಹಣ, ಹೆಂಡ ಹಂಚುವುದಿಲ್ಲ...!
ಮತದಾರರ ಮನೆ ಬಾಗಿಲು ತಟ್ಟುವುದಿಲ್ಲ...!
ಶ್ರೀ ರಾಮೇಶ್ವರ ದೇವರ ಸನ್ನಿದಿಯಲ್ಲಿ ಕ್ಷೇತ್ರದ ಐವರು ಅಭ್ಯರ್ಥಿಗಳು ಪ್ರಮಾಣವಚನ ಸ್ವೀಕರಿಸುವರೇ?

ನಾಡಿನಲ್ಲಿ ಸುಶೀಕ್ಷಿತರು, ವಿದ್ಯಾವಂತರು, ಸಭ್ಯತೆಯ ಜನರೇ ಹೆಚ್ಚಿರುವ ತೀರ್ಥಹಳ್ಳಿ ವಿಧಾನಸಭೆ ಒಂದಲ್ಲ ಒಂದು ಕಾರಣಕ್ಕೆ ರಾಜ್ಯದ ಗಮನ ಸೆಳೆದಿದೆ. ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರು ಪ್ರತಿನಿಧಿಸಿದ ಕ್ಷೇತ್ರ ಕಿಂಚಿತ್ತೂ ಸಭ್ಯತೆ ಮೀರಿ ವರ್ತಿಸಿದ ಉದಾಹರಣೆಗಳು ಅತ್ಯಂತ ಕಡಿಮೆ. ಪ್ರಸ್ತುತ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಗೋಪಾಲಗೌಡರ ಹೆಸರು ಹೇಳಿ ಮತದಾರರನ್ನು ಆಕರ್ಶಿಸುವ ಪ್ರಯತ್ನ ನಡೆಸಿದ್ದಾರೆ. ಬಹುತೇಕ ಇದರಲ್ಲಿ ಯಾವ ಪಕ್ಷಗಳು ಹಿಂದೆ ಬಿದ್ದ ಉದಾಹರಣೆಗಳಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಸಮಾಜವಾದಿ ನಾಯಕನ ಹೆಸರು ಬಳಕೆ ಮಾಡಿಕೊಂಡಿದೆ. ಕುವೆಂಪು, ಯು.ಆರ್. ಅನಂತಮೂರ್ತಿ, ಪುರಂದರದಾಸರು, ಕಡಿದಾಳು ಮಂಜಪ್ಪರಂತಹ ಧೀಮಂತರು ತಾಲ್ಲೂಕಿನ ಕೀರ್ತಿಯನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಇಂತಹ ಸಭ್ಯತೆ, ಸೌಜನ್ಯ, ಸಾಹಿತ್ಯ ಮಾದರಿಯ ಸಂಸ್ಕೃತಿ ಬೆಳೆದ ಕ್ಷೇತ್ರ ಯಾಕೆ ಮತ್ತೊಮ್ಮೆ ಪ್ರಾಮಾಣಿಕತೆ, ಸತ್ಯದ ಮಾದರಿಯಲ್ಲಿ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಬಾರದು ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಚರ್ಚೆಗೀಡಾಗುತ್ತಿದೆ.

ಹಿಂದೊಮ್ಮೆ ರಾಜ್ಯ ಸರ್ಕಾರ ಅವಿರೋಧವಾಗಿ ಗ್ರಾಮ ಪಂಚಾಯಿತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಗ್ರಾಮಕ್ಕೆ 25 ಲಕ್ಷ ರೂಪಾಯಿ ಪ್ರಶಸ್ತಿ ಘೋಷಿಸಿ ಸುದ್ದಿಯಾಗಿತ್ತು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರ್ಭೀತ ಮತದಾನಕ್ಕೂ ಅವಕಾಶ ಕಲ್ಪಿಸಿತ್ತು. ಅಲ್ಲದೇ ಈಚೆಗಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ಗ್ರಾಮದ ದೇವರ ಮುಂದೆ ನಾನು ಮತ್ತು ನನ್ನ ಬೆಂಬಲಿಗರು ಹಣ, ಹೆಂಡ ಹಂಚುವುದಿಲ್ಲ. ಪಂಚಾಯಿತಿ ಚುನಾವಣೆ ಗ್ರಾಮಕ್ಕೆ ಮಾದರಿಯಾಗಿರಬೇಕು. ಹಿರಿಯರ ಮಾರ್ಗದರ್ಶನ, ಕಿರಿಯರ ಸಲಹೆ ಮೇರೆಗೆ ಉತ್ತಮ ಮತದಾನಕ್ಕೂ ಅವಕಾಶ ಕಲ್ಪಿಸಿ ಗ್ರಾಮಗಳು ಸಭ್ಯತೆ ಮೆರೆದಿದ್ದವು. ಇಂತಹ ಮಾದರಿಯ 2023ರ ವಿಧಾನಸಭಾ ಚುನಾವಣೆ ತೀರ್ಥಹಳ್ಳಿಯಲ್ಲಿ ಯಾಕೆ ನಡೆಯುವುದಿಲ್ಲ. ನಮ್ಮ ನಾಯಕರುಗಳು ಮನಸ್ಸು ಮಾಡಿದರೆ ಇವೆಲ್ಲವೂ ಸಾಧ್ಯ ಎಂಬ ಕೌತುಕದ ಮಾತುಗಳು ಗ್ರಾಮೀಣ ಭಾಗದಿಂದ ಕೇಳಿ ಬರುತ್ತಿದೆ.

ಕ್ಷೇತ್ರದಲ್ಲಿ ಈಗಾಗಲೇ ಸುದ್ದಿಯಲ್ಲಿ ಇರುವಂತೆ ಓರ್ವ ಮತದಾರನಿಗೆ ₹ 5000, ₹ 8000, ₹ 12000 ಆಮೀಷ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿರುವ ಈ ಸಂದರ್ಭದಲ್ಲಿ ಯಾಕೆ ಹಣ ಹಂಚದೆಯೇ ಚುನಾವಣೆ ನಡೆಸಬಾರದು. ಸೋತರು, ಗೆದ್ದರು ಅಂತಹ ನಷ್ಟವೇನು ಆಗುವುದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಬಹುದಲ್ವಾ. ಹಠ ಕಟ್ಟಿ ಹಣ ಹಂಚುವ ಅಕ್ರಮಗಳು ಯಾಕೆ ನಡೆಯಬೇಕು ಎಂಬ ಪ್ರಶ್ನೆಗಳನ್ನು ಜನರು ಕೇಳ ತೊಡಗಿದ್ದಾರೆ.

ಚುನಾವಣೆ ಸನ್ನಿತವಾಗುತ್ತಿದ್ದಂತೆ ರಾತ್ರಿಯ ಓಡಾಟ, ಗುಟ್ಟು ಗುಟ್ಟಾದ ನಡೆಗಳಿಂದ ಚುನಾವಣಾ ಆಯೋಗಕ್ಕೆ ಮಣ್ಣು ಮುಕ್ಕಿಸಿ ರಾತ್ರಿ ಮತದಾರರ ಮನೆ ಬಾಗಿಲ ಕದ ತಟ್ಟಲು ಸಕಲ ಸಿದ್ಧತೆ ನಡೆದಿದೆ. ಅಲ್ಲಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ನಮ್ಮ ಭಾಗದಲ್ಲಿ ಹಣ ಹಂಚಲು ಇಷ್ಟು ಬೇಕು ಎಂಬ ಸಂದೇಶ ಕೂಡ ಪಕ್ಷದ ಮುಖಂಡರಿಗೆ ತಲುಪಿಸಿದ್ದಾರೆ. ಅದರಂತೆ ಹಣದ ಕಟ್ಟು ತಯಾರಾಗಿ ನಿಂತಂತೆ ಕಾಣಿಸುತ್ತಿದೆ. ಬಹಿರಂಗ ಸಭೆ ಮುಗಿಯುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಗುಸು ಗುಸು ಸಪ್ಫಳದ ಹಣದ ಹಂಚಿಕೆ ಪೂರ್ಣಗೊಳ್ಳಲು ಕಾತುರದಿಂದ ಒಂದಿಷ್ಟು ಕಾರ್ಯಕರ್ತರ ಪಡೆ ಸಜ್ಜಾಗಿ ನಿಂತಿದೆ. ತಮ್ಮ ಜೋಬಿಗೆ ಒಂದಷ್ಟು ಇಳಿಸಿಕೊಂಡು ತಿಂದುಂಡು ಉಳಿದಿದ್ದನ್ನು ಮತದಾರರ ಬಾಯಿಗೆ ತುರುಕುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತದೆ. ಒಟ್ಟಿನಲ್ಲಿ ಕೊನೆಯದಾಗಿ ಎಲ್ಲವನ್ನು ಮತದಾರರ ತಲೆಗೆ ಕಟ್ಟಿ ತಾವು ಪ್ರಾಮಾಣಿಕರು ಎಂದು ಬೀಗವ ಕಾರ್ಯಕರ್ತರ ಪಡೆಯ ಸಂತೋಷಕ್ಕೆ ಪಾರವೇ ಇಲ್ಲವಾದಂತೆ ಕಾಣಿಸುತ್ತಿದೆ.

ಪ್ರಜಾಪ್ರಭುತ್ವ ಹಾಳಾಗಿದೆ, ಸಮಾಜ ಏನೇನು ಸರಿಯಿಲ್ಲ, ಹಣದ ರಾಜಕೀಯ ಮಾಡ್ತಾರೆ, ಅಭಿವೃದ್ಧಿ ಮಾಡಲ್ಲ ಎಂದು ಗೊಣಗುವ ಮತದಾರ ಬಂಧುಗಳೇ ನಿಮ್ಮನ್ನು ನೀವು ಯಾವಾಗ ಪ್ರಶ್ನೆ ಮಾಡಿಕೊಳ್ಳುತ್ತೀರಿ. ಮಕ್ಕಳ ಭವಿಷ್ಯಕ್ಕಾಗಿ ಆಸ್ತಿ, ಸಂಪತ್ತು ಮಾಡುವ ನಮ್ಮ ನಡುವಿನ ದೊಡ್ಡ ಸವಾಲು ಪ್ರಜಾಪ್ರಭುತ್ವ, ಸಂವಿಧಾನ ಉಳಿಸಿಕೊಳ್ಳುವುದು. ಹಣ, ಹೆಂಡ, ಆಮಿಷಕ್ಕೆ ಮತವನ್ನು ಮಾರಿಕೊಳ್ಳುವ ಬದಲು ಒಂದೊಮ್ಮೆ ನಮ್ಮನ್ನ ನಾವು ಪ್ರಶ್ನೆ ಮಾಡಿಕೊಳ್ಳಬೇಕಲ್ವಾ…? ಶಿಕ್ಷಣ, ಉದ್ಯೋಗ, ಆರೋಗ್ಯ ಭದ್ರತೆ ಪಡೆಯಬೇಕಾದರೆ ಮತದಾನದ ಮೌಲ್ಯ ಕಾಪಾಡಬೇಕಲ್ಲವೇ?

ರಾಜಕೀಯದಿಂದ ನಮಗೇನು ಸಿಗುವುದಿಲ್ಲ ಯಾರು ಬಂದರೂ ಅಷ್ಟೇ ಎನ್ನುವ ಮೊದಲು ಯೋಚಿಸುವ ವಿಚಾರಗಳ ಬಗ್ಗೆ ಚಿಂತಿಸಲೇಬೇಕು. ನಾವು ದಿನನಿತ್ಯದ ಅನೇಕ ವಸ್ತುಗಳಿಗೆ ತೆರಿಗೆ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುನ್ನಡೆಸಲು ಪ್ರತಿಯೊಬ್ಬ ನಾಗರೀಕನು ತನ್ನ ಕೊಡುಗೆ ನೀಡಿರುತ್ತಾನೆ. ಅದರಲ್ಲಿ ಸಣ್ಣದು ದೊಡ್ಡದು ಎಂಬ ಭಿನ್ನರಾಗ ಹಾಕುವುದರಲ್ಲಿ ಅರ್ಥವೇ ಇಲ್ಲ. ನೇರ ಮತ್ತು ಪರೋಕ್ಷ ತೆರಿಗೆಗಳೆರಡರಲ್ಲೂ ಪ್ರತಿಯೊಬ್ಬ ನಾಗರೀಕನ ಪಾಲಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪೂರ್ಣ ಸ್ವಾತಂತ್ರ್ಯದಿಂದ ಮತವನ್ನು ಚಲಾವಣೆ ಮಾಡಬೇಕಿದೆ.

ಈ ನಿಟ್ಟಿನಲ್ಲಿ ತೀರ್ಥಹಳ್ಳಿ ಕ್ಷೇತ್ರದ ಆದಿ ದೇವ, ಪುರಾಣಾದೀಶ, ಜಗದೀಶ, ಪರಶುರಾಮರು ಸ್ಥಾಪಿಸಿದ ಶ್ರೀ ರಾಮೇಶ್ವರ ದೇವರ ಮುಂದೆ ತೀರ್ಥಹಳ್ಳಿಯ ವಿಧಾನಸಭೆಗೆ ಸ್ಪರ್ಧೆ ಮಾಡಿರುವ ಐವರು ಅಭ್ಯರ್ಥಿಗಳು ಚುನಾವಣೆಯ ಅಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ, ಹಣ, ಹೆಂಡ, ಇನ್ಯಾವುದೇ ಆಮಿಷಗಳನ್ನು ನಾನು ಮತ್ತು ನನ್ನ ಬೆಂಬಲಿಗರು ಮಾಡುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಬೇಕಿದೆ. ಸತ್ಯಕ್ಕೆ, ಪ್ರಾಮಾಣಿಕತೆಗೆ ನಿಜವಾದ ಅರ್ಥ ಬರಬೇಕಾದರೆ ಆಮಿಷಗಳಿಲ್ಲದ ಚುನಾವಣೆ ಮಾಡಲೇಬೇಕಿದೆ. ಅಭ್ಯರ್ಥಿಗಳ ಕೆಲಸದ ಆಧಾರದ ಮೇಲೆ ಅವರ ಮುಂದಿನ ಭವಿಷ್ಯ ನಿರ್ಧಾರಗೊಳ್ಳಲಿ. ಅಕ್ರಮಗಳಿಲ್ಲದೆ ಹೇಗೆ ಚುನಾವಣೆ ಮಾಡಬಹುದು ಎಂದು ತೀರ್ಥಹಳ್ಳಿ ರಾಜ್ಯಕ್ಕೆ ಮಾದರಿಯಾಗಲಿ.

ಚುನಾವಣೆಯಲ್ಲಿ ಹಂಚಿಕೆಯಾಗುವ ಹಣದ ಹಿಂದೆ ಯಾರದ್ದೋ ಪಾಪಿ ಪರದೇಸಿಯ ಕಣ್ಣೀರು ಅದರಲ್ಲಿ ಅಡಗಿರುತ್ತದೆ. ಮತದಾರರೇ ಭ್ರಷ್ಟರಾದರೆ ಸಂವಿಧಾನ ಉಳಿಸಲು ಸಾಧ್ಯವಿದೆಯೇ ? ನಾವು ನೀವು ಎಲ್ಲರೂ ಕೂಡ ತೀರ್ಥಹಳ್ಳಿ ಕ್ಷೇತ್ರದ ಗೌರವ, ಘನತೆ ಎತ್ತಿ ಹಿಡಿಯೋಣ. ಹಣ, ಹೆಂಡ, ಆಮೀಷಕ್ಕೆ ಮತದಾನ ಮಾರಿಕೊಳ್ಳುವುದಿಲ್ಲ ಎಂದು ಮುಖಂಡರೊಂದಿಗೆ ಕ್ಷೇತ್ರದ ನಾಗರೀಕರು ಸಹ ತಮ್ಮ ಮನೆ ದೇವರು, ಆತ್ಮಸಾಕ್ಷಿಗಳೊಂದಿಗೆ ಪ್ರಮಾಣವಚನ ಸ್ವೀಕರಿಸಬೇಕಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post