ಕಾಂಗ್ರೆಸ್‌ ಸಮನ್ವಯ ಸಮಿತಿಗೆ ಆರ್‌ಎಂಎಂ ಗೈರು

ಕಾಂಗ್ರೆಸ್‌ನಲ್ಲಿ ಸ್ಪೋಟವಾಯಿತೇ ಭಿನ್ನಮತ..?
ಆರ್‌ಎಂಎಂ ನಾಟ್‌ ರೀಚೆಬಲ್…! ಸಮನ್ವಯ ಸಮಿತಿ ಸಭೆಗೆ ಗೈರು
ನಾಳೆ ಕರಕುಚ್ಚಿಯಲ್ಲಿ ಆರ್‌ಎಂಎಂ ಬೆಂಬಲಿಗರ ಸಭೆ
ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಥೆ ಮುಂದೇನು..?

ತೀರ್ಥಹಳ್ಳಿ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ದಿನಗಳಿಂದ ಕಗ್ಗಂಟಾಗಿದ್ದ ಕಾಂಗ್ರೆಸ್‌ ಟಿಕೆಟ್‌ ಗುರುವಾರ ಬೆಳಿಗ್ಗೆ ಘೋಷಣೆಯಾಗಿದೆ. ಟಿಕೆಟ್‌ ನಿರೀಕ್ಷೆಯಲ್ಲಿದ್ದ ಆರ್‌ಎಂಎಂ ಹಾಗೂ ಬೆಂಬಲಿಗರಿಗೆ ಅಚ್ಚರಿ ಮೂಡಿಸಿದೆ. ಬೆಳಿಗ್ಗೆ ಎಂದಿನ ಲವಲವಿಕೆಯಲ್ಲಿದ್ದ ಆರ್.ಎಂ. ಮಂಜುನಾಥ ಗೌಡರು ಟಿಕೆಟ್‌ ಪಟ್ಟಿ ಬಿಡುಗಡೆಗೊಳ್ಳುತ್ತಿದ್ದಂತೆ ಅಸಮಾಧಾನ ಹೊರಹಾಕಿದ್ದಾರೆಂಬ ಅನುಮಾನ ಕಾರ್ಯಕರ್ತರ ನಡುವೆ ದಟ್ಟವಾಗುತ್ತಿದೆ.

ಇದಕ್ಕೆ ಸರಿ ಎಂಬಂತೆ ಬೆಳಗ್ಗಿನಿಂದ ಆರ್‌ಎಂಎಂ ಮೊಬೈಲ್‌ ಸಂಪರ್ಕಕ್ಕೂ ಸಿಗುತ್ತಿಲ್ಲ. ನಾಟ್‌ ರೀಚೆಬಲ್‌ ಹಾಗೂ ಸ್ವಿಚ್‌ ಆಫ್‌ ಮೋಡ್‌ನಲ್ಲಿದೆ. ಇದರಿಂದಾಗಿ ಆರ್‌ಎಂಎಂ ಕಟ್ಟರ್‌ ಬೆಂಬಲಿಗರಿಗೂ ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ. ಬೆಂಬಲಿಗರು ಅಸಮಾಧಾನ ಏನು ಇಲ್ಲ ನಾವು ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಹೇಳುತ್ತಿದ್ದರಾದರೂ ಸ್ವತಃ ಆರ್‌ಎಂಎಂ ಸಂಪರ್ಕಕ್ಕೆ ಸಿಗದಿರುವ ಹಿನ್ನಲೆಯಲ್ಲಿ ಗೊಂದಲ ಮೂಡಿದೆ.

ಸಂಜೆ ಆರ್‌ಎಂಎಂ – ಕಿಮ್ಮನೆ ಬೆಂಬಲಿಗರ ಸಮನ್ವಯ ಸಮಿತಿ ಸಭೆ ಕೂಡ ನಡೆದಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಸಭೆಗೆ ಹಾಜರಾಗಿದ್ದು ಆರ್‌ಎಂಎಂ ಸಭೆಗೆ ಗೈರಾಗಿದ್ದಾರೆ. ಬೆಂಬಲಿಗರನ್ನು ಕೇಳಿದಾಗ ಬೆಂಗಳೂರಿಗೆ ಕೆಲಸದ ನಿಮಿತ್ತ ತೆರಳಿದ್ದಾರೆ ಎಂಬ ಸಿದ್ಧ ಉತ್ತರಗಳು ಲಭಿಸುತ್ತಿದೆ. ಕಾಂಗ್ರೆಸ್‌ ಪಕ್ಷದ ಸಮನ್ವಯ ಸಮಿತಿ ಇಬ್ಬರು ನಾಯಕರನ್ನು ಒಂದಾಗಿಸುವ ಕಸರತ್ತು ನಡೆಸಲು ಸ್ಥಾಪಿಸಲಾಗಿತ್ತು. ಇಬ್ಬರಲ್ಲಿ ಯಾರಿಗೆ ಟಿಕೆಟ್‌ ನೀಡಿದರು ಕೆಲಸ ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಇದೀಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಆರ್‌ಎಂಎಂ ಭಿನ್ನ ನಿಲುವು ಹೊಂದಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ನಾಳೆ ಶುಕ್ರವಾರ ಮಂಜುನಾಥ ಗೌಡರ ಕರಕುಚ್ಚಿ ನಿವಾಸದಲ್ಲಿ ಬೆಂಬಲಿಗರ ಸಭೆಯನ್ನು ಕರೆದಿದ್ದು ಸಂಜೆ ಕೂಡ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ ಆಯೋಜಿಸಲಾಗಿದೆ. ಬೆಂಬಲಿಗರ ಸಭೆಯಲ್ಲಿ ಅಸಮಾಧಾನ ಭುಗಿಲೆದ್ದರೆ ಮಂಜುನಾಥ ಗೌಡರು ಭಿನ್ನ ನಿಲುವು ಹೊಂದುವ ಸಾಧ್ಯತೆ ಹೆಚ್ಚಿದೆ. ಸಂಜೆ ಸಮನ್ವಯ ಸಮಿತಿಗೆ ಹಾಜರಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದಾದರೆ ಮಂಜುನಾಥ ಗೌಡರು ಹಲವು ಬೇಡಿಕೆಗಳನ್ನು ಇಡುವ ಅವಕಾಶ ಹೊಂದಿದ್ದಾರೆ.

ಅಥವಾ ಈಗಿರುವ ಕಾಂಗ್ರೆಸ್‌ ಪಕ್ಷದಲ್ಲಿ ಮೇಜರ್‌ ಸರ್ಜರಿ ಮಾಡುವ ಬೇಡಿಕೆಯೂ ಸಲ್ಲಿಸಬಹುದು. ಒಟ್ಟಿನಲ್ಲಿ ತೀರ್ಥಹಳ್ಳಿ ಕಾಂಗ್ರೆಸ್‌ ಇದೀಗ ಗೊಂದಲಕ್ಕೆ ಸಿಲುಕಿದ್ದು ಕಿಮ್ಮನೆ ಮತ್ತು ಆರ್‌ಎಂಎಂ ನಡುವಿನ ಸಂಘರ್ಷ ತಾರಕಕ್ಕೇರಲಿದೆಯೇ ಎಂದು ಕಾದು ನೋಡಬೇಕಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post