ಆರಗ ಜ್ಞಾನೇಂದ್ರ ಜನೋಪಯೋಗಿ ಮಂತ್ರಿ

ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ ?
ಸಿಎಂ ಬಂದಾಗಲು ಸುಳಿಯದ ಆರ್. ಮದನ್‌, ಅಶೋಕ್‌ ಮೂರ್ತಿ
ಅಡಿಕೆ ಜ್ಞಾನೇಂದ್ರ ಎಂದ ಸಿಎಂ ಬೊಮ್ಮಾಯಿ
ತಾಕತ್ತು ಇದ್ರೆ ಕಿಮ್ಮನೆ ದಾಖಲೆ ನೀಡಿ ನನ್ನನ್ನು ಜೈಲಿಗೆ ಕಳುಹಿಸಲಿ - ಆರಗ ಗುಡುಗು

ಆರಗ ಜ್ಞಾನೇಂದ್ರರಂತಹ ಜನಪರ ನಾಯಕ ದೊರಕುವುದು ಅಪರೂಪ. ಅಡಿಕೆ, ಶರಾವತಿ ಸಂತ್ರಸ್ತರು, ಡೀಮ್ಡ್‌ ಫಾರೆಸ್ಟ್‌, ಪಶ್ಚಿಮಘಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ಅವರು ಪದೇ ಪದೇ ಅತೀವ ಕಾಳಜಿಯಿಂದ ನನ್ನ ಬಳಿ ಬಂದು ಪರಿಹರಿಸಲು ಪೀಡಿಸಿದ್ದಾರೆ. ಅವರ ಇಲಾಖೆಗೆ ಸಂಬಂಧಪಡದ ವಿಚಾರಗಳಾಗಿದ್ದರೂ ಇವುಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ನನಗೆ ಗೃಹಮಂತ್ರಿ ಹುದ್ದೆ ಬೇಡ. ಬದಲಿಗೆ ತೋಟಗಾರಿಕಾ ಮಂತ್ರಿ ಮಾಡಿ ಎಂದಿದ್ದರು. ಗೃಹಮಂತ್ರಿಯಾಗಿ ಅವರಷ್ಟು ಸವಾಲುಗಳನ್ನು ಯಾರು ಎದುರಿಸಲಿಲ್ಲ. ಹಿಜಾಬ್‌, ಹಲಾಲ್‌, ಪಿಎಸ್‌ಐ ಹಗರಣ, ಎಲ್ಲವನ್ನು ಕೂಡ ಅವರು ಬೆನ್ನುಹಾಕಿ ಓಡಿ ಹೋಗದೆ ಸಮರ್ಥವಾಗಿ ಎದುರಿಸಿದ್ದಾರೆ. ಪಿಎಸ್‌ಐ ಹಗರಣದಲ್ಲಂತೂ ಅತ್ಯಂತ ಪಾರದರ್ಶಕ ತನಿಖೆಗೆ ಅದೇಶ ನೀಡಿ ಉನ್ನತ ಅಧಿಕಾರಿಯನ್ನೇ ಜೈಲಿಗೆ ಹಾಕಿದ್ದಾರೆ. ಮಾತ್ರವಲ್ಲದೇ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟ ತನಿಖೆಯನ್ನು ಶೀಘ್ರವಾಗಿ ಮುಗಿಸಿ ತಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಶ್ಲಾಘಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ತೂದೂರಿನಲ್ಲಿ ಗುರುವಾರ ಆಯೋಜಿಸಿದ್ದ ಮಂಡಗದ್ದೆ ಶಕ್ತಿ ಕೇಂದ್ರದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದಿಂದಾಗಿ 2047ರ ಹೊತ್ತಿಗೆ  ಭಾರತ ಪ್ರಪಂಚದಲ್ಲಿಯೇ ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿದೆ. ಅಂತಹ ದೂರದೃಷ್ಟಿ ಅವರಿಗಿದೆ ಎಂದರು.

ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರ ಸ್ಥಾನಮಾನದ ಯೋಗ್ಯತೆ ತಕ್ಕದಾಗಿ ಮಾತನಾಡಬೇಕು. ಪಿಎಸ್‌ಐ ಹಗರಣದ ಸಾಕ್ಷಿ ಇದೆ ಎಂದು ನನ್ನನ್ನು ತೋಜೋವಧೆ ಮಾಡಲು ಮುಂದಾಗಿದ್ದಾರೆ. ತಾಕತ್ತು ಇದ್ದರೆ ದಾಖಲೆಗಳನ್ನು ಸಿಓಡಿಗೆ ನೀಡಿ ನನ್ನನು ಜೈಲಿಗೆ ಕಳುಹಿಸಲಿ. ಮತದಾರರ ಮುಂದೆ ಸೋಗಲಾಡಿತನ ಪ್ರದರ್ಶಿಸುವುದು ಬೇಡ. ಈ ರೀತಿಯ ಗಿಮಿಕ್‌ ರಾಜಕಾರಣ ಮಾಡಿದ್ದಕ್ಕೆ ಅವರನ್ನು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅರ್ಧದಲ್ಲಿಯೇ ಮಂತ್ರಿ ಸ್ಥಾನದಿಂದ ಕಿತ್ತುಕೊಂಡು ಮನೆಗೆ ಕಳುಹಿಸಿದ್ದರು. ಈ ಬಾರಿ ನಾನು ಹೆಮ್ಮೆಯಿಂದ ಅಭಿವೃದ್ಧಿ ಮುಂದಿಟ್ಟು ಮತಯಾಚಿಸುತ್ತೇನೆ. ಕಾರ್ಯಕರ್ತರ ಸಹಕಾರದಿಂದ ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿಗೆ ಮತ ನೀಡುವುದಾದರೆ ನನ್ನ ಎದುರಾಳಿಯ ಡಿಪಾಸಿಟ್‌ ಉಳಿಯುವುದಿಲ್ಲ ಎಂದು ಕಿಮ್ಮನೆ ರತ್ನಾಕರ ವಿರುದ್ಧ ಆರಗ ಜ್ಞಾನೇಂದ್ರ ಹರಿಹಾಯ್ದರು.

ಆದರೆ ಅನಿರೀಕ್ಷಿತವಾಗಿ ಸಿಎಂ ಬೊಮ್ಮಾಯಿ ಅವರು ಆಗಮಿಸಿದ್ದಾಗಲೂ ಕಾರ್ಯಕರ್ತರಲ್ಲಿ ಅಂತಹ ಹುಮ್ಮಸ್ಸೇನು ಕಂಡು ಬರಲಿಲ್ಲ. ಅದೇ ಭಾಗದ ಹಿರಿಯ ನಾಯಕ ಅಶೋಕ್‌ ಮೂರ್ತಿ, ಇನ್ನೋರ್ವ ಪ್ರಭಾವಿ ಯುವ ನಾಯಕ ಆರ್.‌ ಮದನ್‌ ಗೈರು ಹಾಜರಿ ಎದ್ದು ಕಂಡಿತಲ್ಲದೇ ಭಿನ್ನಮತದ ಅನುಮಾನವನ್ನು ಮೂಡಿಸಿತ್ತು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯ ಕಾಂಪೋಸ್ಟ್ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ತೂದೂರು ಗ್ರಾ.ಪಂ ಅಧ್ಯಕ್ಷ ಮಧುರಾಜ್ ಹೆಗ್ಡೆ ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post