ಕಿಮ್ಮನೆಗೆ ಕಾಂಗ್ರೆಸ್‌ ಟಿಕೆಟ್‌ ಫಿಕ್ಸ್‌

ಕಾಂಗ್ರೆಸ್‌ ಎರಡನೇ ಹಂತದ ಟಿಕೆಟ್‌ ಪಟ್ಟಿ ಬಿಡುಗಡೆ
ಕ್ಷೇತ್ರ ಕಾಂಗ್ರೆಸ್‌ನಲ್ಲಿ ಚುನಾವಣೆ ರಣಕಹಳೆಗೆ ಸಿದ್ಧತೆ
ಬಗೆಹರಿಯದ ಕ್ಷೇತ್ರ ಬಿಜೆಪಿ ಟಿಕೆಟ್‌ ಗೊಂದಲ – ಏಜ್‌ ಪ್ಯಾಕ್ಟರ್‌ ಆರಗಕ್ಕೆ ಮುಳುವಾಗಲಿದೆಯೇ …?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಗುರುವಾರ ಬಿಡುಗಡೆಯಾಗಿದೆ. ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು ತೀರ್ಥಹಳ್ಳಿ ಕ್ಷೇತ್ರದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೆಸರು ಅಂತಿಮಗೊಳಿಸಲಾಗಿದೆ.

ಇದುವರೆಗೂ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಇನ್ನೂ 58 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದ ವೈ ಎಸ್ ವಿ ದತ್ತಾ ಅವರು ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಅವರಿಗೆ ಟಿಕೆಟ್ ನೀಡಿಲ್ಲ. ಬದಲಾಗಿ ಆನಂದ್ ಕೆಎಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಆಪ್ತ ವೈಎಸ್ ವಿ ದತ್ತಾ ಅವರಿಗೆ ಟಿಕೆಟ್ ಕೈತಪ್ಪಿದಂತಾಗಿದೆ.

ಸಾಕಷ್ಟು ಕುತೂಹಲ ಕೆರಳಿಸಿದ್ದ ಧಾರವಾಡ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದೆ. ವಿನಯ್ ಕುಲಕರ್ಣಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅವರಿಗೆ ಇದೀಗ ಧಾರವಾಡದಲ್ಲಿ ಟಿಕೆಟ್ ನೀಡಲಾಗಿದ್ದು, ಗೊಂದಲಗಳಿಗೆ ತೆರೆ ಎಳೆಯಲಾಗಿದೆ.

ತೀರ್ಥಹಳ್ಳಿ ಕ್ಷೇತ್ರದಿಂದ ಕಿಮ್ಮನೆ ರತ್ನಾಕರ್‌, ಆರ್.ಎಂ. ಮಂಜುನಾಥ ಗೌಡ, ಕಡ್ತೂರು ದಿನೇಶ್‌ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿಸಿ ಸಲ್ಲಿಸಿದ್ದರು. ಕಿಮ್ಮನೆ - ಆರ್‌ಎಂಎಂ ನಡುವೆ ತೀವ್ರ ಪೈಪೋಟಿ ಕೂಡ ನಡೆದಿತ್ತು. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೂ ಇಬ್ಬರು ನಾಯಕರ ನಡುವಿನ ಟಿಕೆಟ್‌ ವಿಚಾರಕ್ಕೆ ತೆರೆ ಎಳೆದಿದ್ದರು. ಅಂದೇ ಟಿಕೆಟ್‌ ಪೈನಲ್‌ ಮಾಡಿಯೂ ಒಬ್ಬರಿಗೆ ಎಂಎಲ್‌ಸಿ ಮಾಡುವುದಾಗಿ ಭರವಸೆ ನೀಡಿದ್ದರು. ಇದಾದ ಬಳಿಕ ಟಿಕೆಟ್‌ ಗೊಂದಲ ಕೈಬಿಟ್ಟಿದ್ದ ಇಬ್ಬರು ನಾಯಕರು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರುವುದಕ್ಕಾಗಿ ಶ್ರಮಿಸುತ್ತಿದ್ದಾರೆ. ಗಾಯತ್ರಿ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲೂ ಆರ್‌ಎಂಎಂ ಸೂಕ್ಷ್ಮವಾಗಿ ಟಿಕೆಟ್‌ ವಿಚಾರ ಬಿಟ್ಟಿದ್ದು ಬಿಜೆಪಿಯನ್ನು ಆಡಳಿತದಿಂದ ದೂರ ಇಡುವುದಕ್ಕಾಗಿ ಯಾರಿಗೇ ಸಿಕ್ಕರು ಕೆಲಸ ಮಾಡುವುದಾಗಿ ಘೋಷಿಸಿದ್ದರು.

ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಇಬ್ಬರ ನಡುವಿನ ಪೈಪೋಟಿಗೆ ಇತಿಶ್ರೀ ಬಿದ್ದಿದ್ದು ಕಾಂಗ್ರೆಸ್‌ ಗೆಲುವಿಗಾಗಿ ಕೆಲಸ ಮಾಡುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್‌ ಸ್ಪರ್ಧಿಸಿದರೆ ನೈರುತ್ಯ ಪದವೀದರರ ಕ್ಷೇತ್ರದ ಎಂಎಲ್‌ಸಿ ಸ್ಥಾನ ಖಾಲಿಯಾಗಲಿದೆ. ಅಂತಹ ಸಂದರ್ಭದಲ್ಲಿ ಆರ್‌ಎಂ ಮಂಜುನಾಥ ಗೌಡರು ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗುತ್ತಿದೆ.

ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಪಟ್ಟಿಗಾಗಿ ಕಾದು ಕುಳಿತಿದ್ದ ಬಿಜೆಪಿ, ಜೆಡಿಎಸ್‌, ಆಮ್‌ ಆದ್ಮಿ ಪಕ್ಷದ ನಡೆಗಳು ಏನಾಗಲಿದೆ ಎಂದು ಕಾದು ನೋಡಬೇಕಿದೆ. ಬಿ.ಎಸ್‌ ಯಡಿಯೂರಪ್ಪ ಹಾಗೂ ಕೆ.ಎಸ್ ಈಶ್ವರಪ್ಪ ನಡುವೆ ತೀವ್ರ ಪೈಪೋಟಿ ಬಿದ್ದಿದ್ದು ಮಕ್ಕಳಿಗೆ ಟಿಕೆಟ್‌ ಕೊಡಿಸುವ ತಂತ್ರ ಇಬ್ಬರು ಮುಂದುವರೆಸಿದ್ದಾರೆ. ಈ ಜಗಳದಲ್ಲಿ ವಯಸ್ಸಿನ ಕಾರಣಕ್ಕೆ ಆರಗ ಜ್ಞಾನೇಂದ್ರರಿಗೂ ಟಿಕೆಟ್‌ ನೀಡಬಾರದು ಎಂಬ ಒತ್ತಡವೂ ಹೆಚ್ಚಿದೆ. ಅಲ್ಲದೇ ರಾಜ್ಯ ಬಿಜೆಪಿ ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗುವ ಉದ್ದೇಶದಿಂದ ಸುಮಾರು 100 ಕ್ಷೇತ್ರಗಳಲ್ಲಿ ಹೊಸ ಆಕಾಂಕ್ಷಿಗಳಿಗೆ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅಂತಹ ಸನ್ನಿವೇಶ ಎದುರಾದರೆ ಆರಗ ಜ್ಞಾನೇಂದ್ರರಿಗೂ ಟಿಕೆಟ್‌ ತಪ್ಪುವ ಆತಂಕ ಇದೆ. ಹಾಗಾಗಿ ಕಳೆದ 6 ತಿಂಗಳಿನಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯೊಬ್ಬರು ಕ್ಷೇತ್ರದ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಬಿಜೆಪಿ ಟಿಕೆಟ್‌ ವಿಚಾರದಲ್ಲೂ ಹಲವು ಗೊಂದಲಗಳಿವೆ. ಅಂತಿಮವಾಗಿ ಟಿಕೆಟ್‌ ಪೈನಲ್‌ ಆಗುವವರೆಗೂ ಕಾದು ನೋಡಬೇಕಿದೆ. ಆರಗ ಜ್ಞಾನೇಂದ್ರರಿಗೆ ಟಿಕೆಟ್‌ ಪೈನಲ್‌ ಆದರೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ - ಬಿಜೆಪಿ ಮುಖಾಮುಖಿಯಾಗಲಿದ್ದು ಮತದಾರರು ಯಾರ ಕಡೆಗೆ ಒಲವು ಹೊಂದಲಿದ್ದಾರೆ ಎಂದು ಕಾದು ನೋಡಬೇಕಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post