ಇನ್ನೂ ಫೀಲ್ಡಿಗಿಳಿಯದ ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಕ್ಷ

ಆರ್‌ಎಂಎಂ -ಕಿಮ್ಮನೆ ಟಿಕೆಟ್‌ ಕಗ್ಗಂಟು
ಒಬ್ಬರು ಪಕ್ಷಾಂತರ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಜೆಡಿಎಸ್‌ -ಆಮ್‌ ಆದ್ಮಿ ?

ರಾಜ್ಯ ವಿಧಾನಸಭೆಗೆ ಕೇವಲ 35 ದಿನಗಳು ಮಾತ್ರ ಬಾಕಿ ಉಳಿದಿದೆ. ಆದರೆ ತೀರ್ಥಹಳ್ಳಿಯಲ್ಲಿ ಸದ್ಯ ಬಿಜೆಪಿ ಮಾತ್ರ ಅತ್ಯಂತ ವ್ಯವಸ್ಥಿತ ಹಾಗೂ ಅಬ್ಬರದ ಚುನಾವಣಾ ಪ್ರಚಾರ ನಡೆಸ ತೊಡಗಿದೆ. ಕಾಂಗ್ರೆಸ್‌ನಲ್ಲಿ ಇನ್ನೂ ಕೂಡ ಅಭ್ಯರ್ಥಿ ಯಾರೆಂಬ ಗೊಂದಲ ಬಗೆಹರಿಯದ ಕಾರಣ ಕಿಮ್ಮನೆ ರತ್ನಾಕರ್‌ ಹಾಗೂ ಆರ್.‌ಎಂ. ಮಂಜುನಾಥ ಗೌಡ ಬಣಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮುಂದುವರೆಸಿದ್ದಾರೆ. ಬಿಜೆಪಿಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಬಹುತೇಕ ಅಭ್ಯರ್ಥಿಯಾಗುವ ಸಂಭವ ಇರುವುದರಿಂದ ನಿಮಿಷವೂ ವ್ಯರ್ಥ ಮಾಡದೆ ನೇರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಜ್ಞಾನೇಂದ್ರರಿಗೆ ಮೇಲ್ಮೊಟಕ್ಕಾದರೂ ಪ್ರತಿಯಾಗಿ ಮತ್ತೊಂದು ಹೆಸರು ಇಲ್ಲಿಯ ತನಕವೂ ಕೇಳಿ ಬರದಿರುವುದು ಕಾರ್ಯಕರ್ತರು ಕೂಡ ಅವರ ಪರವಾಗಿ ಕೆಲಸ ಮಾಡಲು ಮತ್ತು ಮತಯಾಚಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ.

ಆದರೆ ಮತ್ತೊಂದು ಪಕ್ಷವಾದ ಜನತಾದಳದ ಅಭ್ಯರ್ಥಿ ಯಡೂರು ರಾಜರಾಂ ಇಲ್ಲಿಯ ತನಕವೂ ಪ್ರಚಾರಕ್ಕೆ ಇಳಿಯದಿರುವುದು ಬೇರೆಯವರಿರಲಿ ಸ್ವತಃ ಜೆಡಿಎಸ್‌ ಕಾರ್ಯಕರ್ತರನ್ನೇ ಕಂಗಾಲು ಮಾಡಿದೆ. ಸಾಕ್ಷಾತ್‌ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೇ ತೀರ್ಥಹಳ್ಳಿಗೆ ಆಗಮಿಸಿ ಭರ್ಜರಿ ರ್ಯಾಲಿ ನಡೆಸಿ ಯಡೂರು ರಾಜಾರಾಂ ಅವರೇ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಸಾರಿ ಹೋದಮೇಲು ಯಡೂರು ರಾಜಾರಾಂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಪಕ್ಷದ ಬರವಾಗಿ ಇಲ್ಲಿಯ ತನಕವೂ ಯಾವುದೇ ರೀತಿಯ ಪ್ರಚಾರ ನಡೆಸಿಲ್ಲ. ಅವರ ಈ ನಡೆ ಈಗಲೂ ಜೆಡಿಎಸ್‌ ಕುರಿತು ಅಭಿಮಾನ ಉಳಿಸಿಕೊಂಡಿರುವ ಸಾಕಷ್ಟು ಸಂಖ್ಯೆಯ ಮತದಾರರು ಮತ್ತು ಕಾರ್ಯಕರ್ತರುಗಳಿಗೆ ಬೇಸರ ತಂದಿದೆ ಅಲ್ಲದೆ ಬಹುಶಃ ಕಾಂಗ್ರೆಸ್‌ನಲ್ಲಿ ಹೇಗಿದ್ದರು ಕಿಮ್ಮನೆ ರತ್ನಾಕರ್‌ ಅಥವಾ ಮಂಜುನಾಥ ಗೌಡ ಈ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್‌ ಸಿಗುವುದರಿಂದ ಯಾರಾದರೂ ಭಿನ್ನಮತ ಸ್ಪೋಟಿಸಿ ಜೆಡಿಎಸ್‌ಗೆ ಬರಬಹುದೇ ಎಂಬ ನಿರೀಕ್ಷೆಯಿಂದ ಪಕ್ಷ ಇಟ್ಟುಕೊಂಡು ಕಾಯುತ್ತಿದೆ. ಹಾಗಾಗಿಯೇ ರಾಜಾರಾಂ ಏನು ಮಾಡದೆ ತಟಸ್ಥರಾಗಿದ್ದಾರೆ ಎಂಬ ಚರ್ಚೆ ಹುಟ್ಟು ಹಾಕಿದೆ.

ಈ ಬಾರಿ ಸಾಕಷ್ಟು ಮೊದಲೇ ತನ್ನ ವಿಧಾನಸಭಾ ಸಂಭಾವ್ಯ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಪಕ್ಷ ಆಮ್‌ ಆದ್ಮಿ. ಸುಪ್ರಿಂ ಕೋರ್ಟ್‌ ವಕೀಲರೂ ಆಗಿರುವ ಸಾಲೂರು ಶಿವಕುಮಾರ್‌ ವರ್ಷದ ಮೊದಲೇ ಸತತವಾಗಿ ಪತ್ರಿಕಾಗೋಷ್ಟಿ ಮತ್ತು ಹೇಳಿಕೆಗಳ ಮೂಲಕ ಪ್ರಚಾರದಲ್ಲಿದ್ದರು. ಅಲ್ಲದೇ ಸಾಮಾಜಿಕ ಕೆಲಸ ಕಾರ್ಯಗಳಿಗಾಗಿ ಜೆಲಿಕ್‌ ಎಂಬ ಸಂಸ್ಥೆ ತೆರೆದು ತೀರ್ಥಹಳ್ಳಿಯ ಮತದಾರರ ಸಂಪರ್ಕದಲ್ಲಿ ಇರುಲು ಯಶಸ್ವಿಯಾಗಿದ್ದರು.

ಆದರೆ ಈಗೊಂದು ತಿಂಗಳಿನಿಂದ ಅವರೂ ಕೂಡ ಗಪ್‌ ಚುಪ್‌ ಆಗಿದ್ದಾರೆ. ವಿಶ್ವಾಸನೀಯ ಮೂಲಗಳ ಪ್ರಕಾರ ಆಮ್‌ ಆದ್ಮಿ ಪಕ್ಷ ಕೂಡ ಕಾಂಗ್ರೆಸ್‌ ಭಿನ್ನಮತದ ಲಾಭ ಪಡೆಯುವ ದೃಷ್ಟಿಯಿಂದ ಕೆಲವು ದಿನಗಳ ಹಿಂದೆಯೇ ಕಿಮ್ಮನೆ ರತ್ನಾಕರ್‌ ಹಾಗೂ ಮಂಜುನಾಥ ಗೌಡ ಇಬ್ಬರನ್ನು ಭೇಟಿ ಮಾಡಿದೆ. ಆದರೆ ಇಬ್ಬರಿಂದಲೂ ತೀರಾ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೂ ಕೂಡ ಕೊನೆಯವರೆಗೆ ಕಾದು ನೋಡುವ ತಂತ್ರಕ್ಕಿಳಿದಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಯಾರು ತಮ್ಮ ಅಭ್ಯರ್ಥಿ ಎಂಬ ಸಂಕಟ ಗೊಂದಲದಲ್ಲಿ ಇದ್ದರೆ ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಪಡೆಯದ ಅಭ್ಯರ್ಥಿ ಯಾರೆಂದು ತುದಿಗಾಲಲ್ಲಿ ನಿಂತು ನಿರೀಕ್ಷಿಸುತ್ತಿವೆ ಎಂಬ ಚರ್ಚೆ ಕ್ಷೇತ್ರದಾದ್ಯಂತ ಸದ್ದು ಮಾಡತೊಡಗಿದೆ. ವಿಶೇಷವೆಂದರೆ ಬಿಜೆಪಿ ಪಕ್ಷದ ಅಭ್ಯರ್ಥಿ ಘೋಷಣೆಗೂ ಕಾಂಗ್ರೆಸ್‌ ಅಡ್ಡಿಯಾಗಿದೆ ಎಂಬ ವಾದಗಳು ಕೇಳಿ ಬಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post