ಇದ್ರಿಷ್‌ ಬಾಷಾ ಕೊಲೆ ಆರೋಪ

ರಾಜಸ್ಥಾನದಲ್ಲಿ ಪುನಿತ್‌ ಕೆರೆಹಳ್ಳಿ ಸಹಚರರ ಬಂಧನ
ಬಂಧಿತರಲ್ಲಿ ತೀರ್ಥಹಳ್ಳಿ ನೊಣಬೂರಿನ ಪವನ್‌ ಕುಮಾರ್‌

ಕನಕಪುರದ ಸಾತನೂರು ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ವ್ಯಾಪಾರಿ ಇದ್ರೀಸ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣದ ಆರೋಪಿ ಪುನೀತ್‌ ಕೆರೆಹಳ್ಳಿ  ಹಾಗೂ ಆತನ ಸಹಚರರಾದ ನಾಲ್ವರನ್ನು ರಾಜಸ್ಥಾನದಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ವಿಶೇಷವೆಂದರೆ ಬಂಧಿತ ಆರೋಪಿಗಳಲ್ಲಿ ಓರ್ವ ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರಿನ ಪವನ್‌ ಕುಮಾರ್‌ (22) ಎಂಬ ಮಾಹಿತಿಯನ್ನು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕಾರ್ತಿಕ್‌ ರೆಡ್ಡಿ ನೀಡಿದ್ದಾರೆ.

ಬಂಧಿತ ಆರೋಪಿ ಪವನ್‌ ಕುಮಾರ್‌ ಮತ್ತು ಇತರರು

ಏ.1 ರಂದು ರಾಮನಗರ ಜಿಲ್ಲೆಯ ಸಾತನೂರಿ ಬಳಿ ಜಾನುವಾರಗಳ ವ್ಯಾಪಾರಿ ಇದ್ರೀಸ್ ಪಾಷಾ ಅವರ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೇ ಸ್ಥಳದಲ್ಲಿ ಈ ವ್ಯಕ್ತಿ ಸಾಯುವ ಕೆಲವೆ ಗಂಟೆಗಳ ಹಿಂದೆ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ಜಾನುವಾರುಗಳ ರಕ್ಷಣೆ ಮಾಡಿದ್ದರು.

ಜಾನುವಾರುಗಳನ್ನು ರಕ್ಷಣೆ ಮಾಡುವ ನೆಪದಲ್ಲಿ ಇದ್ರೀಸ್ ಪಾಶಾ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ, ಪುನೀತ್‌ ಮತ್ತು ಸಹಚರರ ವಿರುದ್ಧ ಮೃತರ ಕುಟುಂಬಸ್ಥರು ಸಾತನೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು ಮತ್ತು ಠಾಣೆ ಬಳಿ ಪ್ರತಿಭಟನೆ ನಡೆಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಸಾತನೂರು ಪೊಲೀಸರು, ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆ 41, 504, 506, 324, 302, 34 ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದರು.

ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪುನೀತ್, “ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸಿ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಸದ್ಯ ನಾನು ದೇವಸ್ಥಾನ ಸುತ್ತುತ್ತಿದ್ದೇನೆ” ಎಂದು ಹೇಳಿಕೆ ನೀಡಿರುವ ವಿಡಿಯೋ ಹರಿಬಿಟ್ಟಿದ್ದನು.

ಈ ಪ್ರಕರಣ ಹಾಗೂ ಬೆಂಗಳೂರಿನಲ್ಲಿ  ಯುವತಿ ಮೇಲೆ ಕಾರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕುರಿತು ರಾಜ್ಯದಾದ್ಯಂತ ಚರ್ಚೆ, ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತಲ್ಲದೇ ವಿರೋಧ ಪಕ್ಷಗಳು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು. ಅಷ್ಟೇ ಅಲ್ಲದೇ ಗೃಹಸಚಿವರ ರಾಜೀನಾಮೆಗೂ ಒತ್ತಾಯಿಸಿದ್ದರು.

ಸದ್ಯಕ್ಕೆ ಕೃತ್ಯದಲ್ಲಿ ಭಾಗಿಯಾದ ರಾಷ್ಟ್ರೀಯ ರಕ್ಷಣೆ ಪಡೆಯ ಪುನೀತ್ ಕೆರೆಹಳ್ಳಿ ಸೇರಿ, ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ ಅಂಬಿಗಾರ್ ಮತ್ತು ರಾಯಚೂರಿನ ಸುರೇಶ್ ಕುಮಾರ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದೇವೆ. ಅವರು ಪರಾರಿಯಾಗಲು ಸಹಕರಿಸಿದವರು ಕಂಡು ಬಂದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post