ಬಿಜೆಪಿ ಟಿಕೆಟ್‌ ರೇಸ್‌

ಬೇಗುವಳ್ಳಿ ಸತೀಶ್‌, ಅಶೋಕ್‌ ಮೂರ್ತಿ, ಹೆದ್ದೂರು ನವೀನ್‌, ಆರ್‌ ಮದನ್‌
ಕೈತಪ್ಪುವುದೇ ಆರಗ ಜ್ಞಾನೇಂದ್ರರಿಗೆ ಟಿಕೆಟ್…?

ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವುದು ಕಷ್ಟ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿರುವಂತೆಯೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಖುಷಿಯಿಂದ ಉಬ್ಬಿ ಹೋಗಿದ್ದರೆ ಆಡಳಿತರೂಢ ಬಿಜೆಪಿ ಈ ಸಮೀಕ್ಷೆಯನ್ನೇ ಸವಾಲಾಗಿ ತೆಗೆದುಕೊಂಡು ಹಿಂದೆಂದಿಗಿಂತಲೂ ಹೆಚ್ಚಿನ ಹೋಂ ವರ್ಕ್‌ ಅನ್ನು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮಾಡತೊಡಗಿದೆ.

ಹಾಗಾಗಿಯೇ ಬಿಜೆಪಿಯ ಅಭ್ಯರ್ಥಿಗಳ ಮೊದಲಪಟ್ಟಿ ಘೋಷಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಬಿಜೆಪಿ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಕಾಡಿಲ್ಲ. ಬದಲಾಗಿ ಬೇಡಿಕೆ ಹೆಚ್ಚುತ್ತಲೇ ಇದೆ. ಒಂದುವೇಳೆ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಮುನ್ಸೂಚನೆ ನೀಡಿದ್ದರೆ ಇಲ್ಲೂ ಕೂಡ ಗುಜರಾತ್‌ ಮಾದರಿಯ ಪ್ರಯೋಗಕ್ಕೆ ಮುಂದಡಿ ಇಡಲಾಗುತ್ತಿತ್ತು ಎಂಬ ಅಭಿಪ್ರಾಯಗಳಿವೆ.

ಗುಜರಾತ್‌ನಲ್ಲಿ 40ಕ್ಕೂ ಅಧಿಕ ಹಾಲಿ ವಿಧಾನಸಭಾ ಸದಸ್ಯರು, ಮಂತ್ರಿಗಳಿಗೆ ನಿಷ್ಕ್ರೀಯತೆ, ವಯಸ್ಸು, ಪಕ್ಷದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವಲ್ಲಿ ಹಿಂದೇಟು ಮುಂತಾದ ಕಾರಣಗಳನ್ನು ನೀಡಿ ಕೈಬಿಟ್ಟು ಹೊಸಮುಖಗಳಿಗೆ ಆದ್ಯತೆ ನೀಡಲಾಗಿತ್ತು. ಪರಿಣಾಮ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಮೋಡಿಯಲ್ಲಿ ಬಿಜೆಪಿ ಹಿಂದೆಂದೂ ಕಾಣದ ಭರ್ಜರಿ ಬಹುಮತವನ್ನು ಪಡೆದುಕೊಂಡಿತ್ತು.

ಆದರೆ ಸದ್ಯಕ್ಕೆ ಕರ್ನಾಟಕದಲ್ಲಿ ಆ ಮಾದರಿಯ ಪ್ರಯೋಗ ನಡೆಯದಿರುವುದು ಖಚಿತವಾಗಿದೆ. ಆದರೂ ಕನಿಷ್ಟ 6 ರಿಂದ 8 ಮಂದಿ ಹಾಲಿ ಎಂಎಲ್‌ಎಗಳಿಗೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದೆ.

ವಿಶೇಷವೆಂದರೆ ತೀರ್ಥಹಳ್ಳಿಯಲ್ಲಿ ಹಾಲಿ ಗೃಹಸಚಿವ ಹಾಗೂ ರಾಜ್ಯದ ಹಿರಿಯ ಬಿಜೆಪಿ ನಾಯಕರಲ್ಲಿ ಒಬ್ಬರು ನಿರಂತರ 9ನೇ ಬಾರಿಗೆ ಖಚಿತವಾಗಿ ಬಿಜೆಪಿ ಟಿಕೆಟ್‌ ಪಡೆದುಕೊಳ್ಳುತ್ತಾರೆ ಎಂದು ಅವರ ಅಭಿಮಾನಿಗಳು ನಂಬಿರುವ ಆರಗ ಜ್ಞಾನೇಂದ್ರರಿಗೂ ಟಿಕೆಟ್‌ ಸಿಗುವುದು ಅಷ್ಟು ಸಲೀಸಲ್ಲ ಎಂಬ ವರ್ತಮಾನಗಳು ಇವೆ.

ತೀರ್ಥಹಳ್ಳಿಯಿಂದ ಸತೀಶ್‌ ಬೇಗುವಳ್ಳಿ ಮತ್ತು ಅಶೋಕ್‌ ಮೂರ್ತಿ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಗಳಾಗಿದ್ದರೆ ಸಂಘ ಪರಿವಾರದ ನೀಲಿ ಕಣ್ಣಿನ ಹುಡುಗನಾಗಿ ಹೆದ್ದೂರು ನವೀನ್‌ ಹೆಸರು ಆರಗ ಜ್ಞಾನೇಂದ್ರರ ಉತ್ತರಾಧಿಕಾರಿಯಾಗಿ ಕಳೆದ 5 ವರ್ಷಗಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ.

ಅತ್ಯಂತ ಅನಿರೀಕ್ಷಿತವಾಗಿ ಗೃಹಸಚಿವರಾಗುವ ಅವಕಾಶ ಪಡೆದುಕೊಂಡ ಆರಗ ಜ್ಞಾನೇಂದ್ರ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಇಲಾಖೆಯ ವ್ಯಾಪ್ತಿ ಮತ್ತು ತೂಕವನ್ನು ಅರಿಯದೆ ಸಡಿಲ ಪದ ಪ್ರಯೋಗಗಳ ಮೂಲಕ ಪೇಚಿಕೆ ಸಿಕ್ಕಿದ್ದು ಬಿಟ್ಟರೆ ಕಾಲ ಕಳೆದಂತೆ ತಮಗೆ ಬಲವಾಗಿ ಮುತ್ತಿಕೊಂಡಿದ್ದ ಪಿಎಸ್‌ಐ ಹಗರಣ ಹಾಗೂ ಸ್ಯಾಂಟ್ರೋ ರವಿ ಹಗರಣ ಸಮರ್ಥವಾಗಿಯೇ ಎದುರಿಸಿ ಇದರ ಆರೋಪಿಗಳನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವಲ್ಲಿ ಯಶಸ್ವಿಯಾಗಿದ್ದರು.

ಉಳಿದಂತೆ ಅವರು ಹೆಸರು ಕೆಡಿಸಿಕೊಂಡಿಲ್ಲ. ಅಲ್ಲದೇ ಕೊಟ್ಟ ಅವಕಾಶದಲ್ಲಿ ತೃಪ್ತಿಕೊಡುವ ಮನಸ್ಥಿತಿಯ ಕಾರಣಕ್ಕಾಗಿಯೇ ಸಂಘ ಪರಿವಾರದಲ್ಲೂ ಕೂಡ ನಂಬಿಕೆ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಗೃಹಸಚಿವರಾಗಿ ಅವರು ಕೆ.ಎಸ್.‌ ಈಶ್ವರಪ್ಪ, ಸಿ.ಟಿ. ರವಿ ಮುಂತಾದವರಂತೆ ಸದಾಕಾಲ ಉಗ್ರ ಭಾಷಣದ ಮೂಲಕ ತಮ್ಮ ನಿರೀಕ್ಷೆಯನ್ನು ಮುಟ್ಟಿಲ್ಲ ಹಾಗಾಗಿ ಇವರಿಂದ ಹಿಂದುತ್ವದ ಪರ ಒಲವಿರುವ ಯುವಕರನ್ನು ಸೆಳೆಯುವುದು ಕಷ್ಟ ಎಂದು ಮತ್ತೊಂದು ಗುಂಪು ಪ್ರಬಲವಾಗಿ ವಾದಿಸಿದೆ ಎಂಬ ಮಾಹಿತಿಗಳಿವೆ.

ಜೊತೆಗೆ ಏರುತ್ತಿರುವ ವಯಸ್ಸು ಹಾಗೂ ಮತ್ತೊಮ್ಮೆ ಟಿಕೆಟ್‌ ನೀಡಿದರೂ ಕೂಡ ಇದಕ್ಕಿಂತಲೂ ಉನ್ನತ ಹುದ್ದೆ ಪಡೆಯುವ ಅವಕಾಶಗಳು ಇಲ್ಲದಿರುವುದರಿಂದ ಹೊಸ ಮುಖಕ್ಕೆ ಅವಕಾಶ ನೀಡಿದರೆ ಹೇಗೆಂಬ ಚರ್ಚೆ ಗಂಭೀರವಾಗಿಯೇ ಬಿಜೆಪಿಯ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಹಾಗಾದಲ್ಲಿ ಕಳೆದ ಬಾರಿಯೇ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬೇಗುವಳ್ಳಿ ಸತೀಶ್‌ ಹಾಗೂ ಬಹಿರಂಗವಾಗಿಯೇ ಈಗಲ್ಲದಿದ್ದರೆ ಮತ್ತೆ ಯಾವಾಗ ಟಿಕೆಟ್‌ ಎಂದಿದ್ದಾರೆ ಎಂದು ಹೇಳಲಾಗುತ್ತಿರುವ ಅಶೋಕ್‌ ಮೂರ್ತಿ ಹಾಗೂ ನವೀನ್‌ ಹೆದ್ದೂರು ಈ ಮೂವರಲ್ಲಿ ಒಬ್ಬರ ಹೆಸರು ಚಾಲ್ತಿಗೆ ಬರಬಹುದು. ಈ ನಡುವೆ ಒಂದೊಮ್ಮೆ ಜೆಡಿಎಸ್‌ನಿಂದ ಸ್ಪರ್ಧಿಸಿ 22 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಉಜ್ವಲ ಭವಿಷ್ಯದ ಭರವಸೆ ಮೂಡಿಸಿದ್ದ ಆರ್‌ ಮದನ್‌ ಕೂಡ ಅವರ ಪರ ಒಂದು ಲಾಭಿ ನಡೆಸುವಲ್ಲಿ ಅನುಮಾನಗಳಿಲ್ಲ.

ಹಾಗಾಗಿ ಶೇಕಡಾ 100ಕ್ಕೆ 100 ಈ ಬಾರಿಯೂ ಬಿಜೆಪಿ ಟಿಕೆಟ್‌ ಆರಗ ಜ್ಞಾನೇಂದ್ರರಿಗೆ ಎಂದು ನಿರೀಕ್ಷೆ ಮಾಡುವುದು ಬೇಡ ಎನ್ನುತ್ತವೆ ಬಿಜೆಪಿಯ ಅತ್ಯಂತ ಪ್ರಭಾವಿ ಆಪ್ತ ಮೂಲಗಳು. ಜೊತೆಗೆ 45 ವರ್ಷಗಳು ರಾಜಕೀಯ ಜೀವನದಲ್ಲಿ ಇದ್ದರೂ ಯುವಕರಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂಬ ಅಸಮಾಧಾನ ಕೂಡ ಕೇಳಿ ಬಂದಿದ್ದು ಹಾಲಾಡಿ ಶ್ರೀನಿವಾಸ ಶೆಟ್ಟರಂತೆ ಚುನಾವಣಾ ರಾಜಕಾರಣದಿಂದ ದೂರ ಉಳಿಯಬಹುದಿತ್ತು ಎಂಬ ಅಭಿಪ್ರಾಯವು ಸಂಘ ಪರಿವಾರದ ಆವರಣದಲ್ಲಿ ಚರ್ಚೆಯಾಗಿದೆ ಎನ್ನಲಾಗುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post