ಮುಂಡುವಳ್ಳಿ ಮರಳು ಕ್ವಾರಿಯಲ್ಲಿ ಅಕ್ರಮ

ಅಕ್ರಮ ಮರಳು ಲೂಟಿಗೆ ಲೆಕ್ಕ ಇಲ್ಲ
ಮೇಲುಗೈ ಸಾಧಿಸಿದ ಕದೀಮರ ಕಳ್ಳಾಟ
ತುಂಗಾನದಿಯ ಒಡಲು ಬಗೆದ ದುರಾಳರು
ಸರ್ಕಾರ ಬೊಕ್ಕಸಕ್ಕೆ ಕೋಟ್ಯಾಂತರ ರೂ ನಷ್ಟ - ಗಣಿ ಇಲಾಖೆ ಗಪ್‌ ಚುಪ್‌

ಗಣಿ ಇಲಾಖೆ ಯಾಕೆ ಹೀಗೆ…?

ಸರ್ಕಾರ ಬೊಕ್ಕಸಕ್ಕೆ ನಿಶಾಚರಿ ಕಳ್ಳರ ಗುಂಪು ದಿನನಿತ್ಯ ಗುನ್ನಾ ಹಾಕುತ್ತಿದ್ದರು ಒಂದುಚೂರು ಕಾಳಜಿ ಇಲ್ಲದಂತೆ ವರ್ತಿಸುತ್ತಿದೆ. ಅಕ್ರಮ ಅವ್ಯವಹಾರಗಳಿಗೆ ಇಲಾಖೆ ಪೂರ್ಣ ಬೆಂಬಲಕ್ಕೆ ನಿಂತಿದೆ. ಗ್ರಾಮಸ್ಥರು ದೂರುಗಳನ್ನು ಸಲ್ಲಿಸುತ್ತಿದ್ದರು ಅದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿಗಳು ಸುಮ್ಮನಾಗಿದ್ದು ನದಿಯ ಜೀವಂತಿಕೆ ಉಳಿಸುವ ಸವಾಲು ಎದುರಾಗಿದೆ. ಗಣಿ ಇಲಾಖೆ ಯಾಕೆ ಹೀಗೆ ವರ್ತಿಸುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ತುಂಗಾ ನದಿ ಪಾತ್ರ ಪ್ರದೇಶಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ದಿನನಿತ್ಯ ಜೋರಾಗಿದೆ. ಕಳ್ಳ ಕದೀಮರಿಗೆ ಮುಂಡುವಳ್ಳಿ ಕ್ವಾರಿ ಅಕ್ಷಯ ಪಾತ್ರೆಯಾಗಿದ್ದು ಯಾರ ಭಯ ಇಲ್ಲದೆ, ದಾಖಲೆಗಳಿಲ್ಲದೆ ಮರಳು ಲೂಟಿಗೆ ಇಳಿದಿದ್ದಾರೆ.

ಕ್ವಾರಿಯ ಗಡಿದಾಟಿ ಅನಧಿಕೃತವಾಗಿ ಬೇಕಾಬಿಟ್ಟಿ ಮರಳು ಲಪಟಾಯಿಸುತ್ತಿದ್ದರು ಗಣಿ ಇಲಾಖೆ ತುಟಿ ಬಿಚ್ಚುತ್ತಿಲ್ಲ. ರಾಯಲ್ಟಿ ಇಲ್ಲದೆ ಸಾವಿರಾರು ಲೋಡ್‌ ಮರಳು ಹೊರಜಿಲ್ಲೆಗೆ ಸಾಗಾಣೆಯಾಗುತ್ತಿದ್ದರು ಇಲ್ಲಿಯವರೆಗೆ ಕ್ರಮಕ್ಕೆ ಮುಂದಾಗಿಲ್ಲ. ಮರಳಿನ ಕಳ್ಳಾಟಕ್ಕೆ ಚೆಕ್‌ ಪೋಸ್ಟ್‌ಗಳು ಮೊದಲೇ ಬುಕ್ಕಿಂಗ್‌ ಆಗುತ್ತಿದ್ದು ಅಧಿಕಾರಿಗಳ ಭಯವಿಲ್ಲದೇ ಮರಳು ಸಾಗಾಣೆಯಾಗುತ್ತಿದೆ ಎಂಬ ದೂರ ಸಾರ್ವಜನಿಕವಾಗಿ ಚರ್ಚೆಗೀಡಾಗಿದೆ.

ಸರ್ಕಾರ ಬೊಕ್ಕಸಕ್ಕೆ ಪ್ರತಿನಿತ್ಯ ಸಾವಿರಾರು ರೂಪಾಯಿ ನಷ್ಟವಾಗುತ್ತಿದ್ದರು ಕೇಳುವವರಿಲ್ಲ. ರಾಜಧನವಿಲ್ಲದ ಕಳ್ಳ ಸಾಗಾಣಿಕೆಗೆ ಚುನಾವಣೆಯ ಚೆಕ್‌ಪೋಸ್ಟ್‌ಗಳು ಸಹಕಾರ ನೀಡುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ವಹಿವಾಟು ತಡೆಯುವಲ್ಲಿ ಆಡಳಿತ ಸಂಪೂರ್ಣ ವಿಫಲವಾದಂತಿದೆ.

ಅಕ್ರಮ ಮರಳು ಸಾಗಾಣಿಕೆ ಸಂಬಂಧ ಗ್ರಾಮಸ್ಥರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದರೂ ದಂಧೆ ನಿಂತಿಲ್ಲ ಎಂಬ ಆರೋಪ ಇದೆ. ಕ್ರಮ ತೆಗೆದುಕೊಳ್ಳದಿರುವುದರಿಂದ ರಾತ್ರಿ ಕಳ್ಳರಿಗೆ ಅನುಕೂಲ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾತ್ರಿ-ಹಗಲು ಕಳ್ಳ ಸಾಗಾಣಿಕೆ ನಡೆಯುತ್ತಲೇ ಇದ್ದರು ಯಾಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬಂದಿದೆ. ಕ್ವಾರಿಯಲ್ಲಿ ಸಿಸಿಟಿವಿ ಕ್ಯಾಮರಗಳು ಅಳವಡಿಸಿದ್ದರು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಇದ್ದು ಹಲವು ಅನುಮಾನ ಸೃಷ್ಟಿಸಿದೆ.

ತುಂಗಾ ನದಿಯ ಒಡಲು ಬಗೆಯುತ್ತಿರುವ ಮರಳು ಕಳ್ಳ ದುರಾಳರು ಸಿಕ್ಕ ಸಿಕ್ಕಲ್ಲಿ ಹಿಗ್ಗಾಮುಗ್ಗ ಆಳ ಗಣಿಗಾರಿಕೆಗೆ ಇಳಿದಿದ್ದಾರೆ. ಕ್ವಾರಿಗಳ ಗಡಿರೇಖೆ ಮುಕ್ತಾಯವಾಗಿದ್ದರು ಅದನ್ನು ಮೀರಿ ಹೆಚ್ಚಿನ ಮರಳು ಮೇಲಕ್ಕೆತ್ತುವ ಪರಿಸರ ವಿರೋಧಿ ಚಟುವಟಿಕೆಗೆ ಕಾರಣರಾಗುತ್ತಿದ್ದಾರೆ. ಅಲ್ಲದೇ ಮರಳುಗಳನ್ನು ಬೇಕಾಬಿಟ್ಟಿ ದಬ್ಲಿಂಗ್‌ ದಂಧೆಗಳು ಕೂಡ ನಡೆಯುತ್ತಿದೆ. ಸ್ಟಾಕ್‌ಯಾರ್ಡ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿ ನೇಮಕವಾಗದ ಹಿನ್ನಲೆಯಲ್ಲಿ ಮರಳು ದಂಧೆ ಕೋರರಿಗೆ ಪೂರ್ಣ ಅನುಕೂಲವಾಗಿದೆ. ಆಳ ಗಣಿಗಾರಿಕೆ ನಡೆಯುತ್ತಿದ್ದರು ಅರಣ್ಯ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗಳು ಮೌನ ವಹಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post