ನವವಿವಾಹಿತೆ ಶಮಿತಾ ಬಿ.ಯು. ಸಾವಿನ ಸುತ್ತ ಅನುಮಾನದ ಹುತ್ತ

ಅಮಾನವೀಯ ಘಟನೆಯಿಂದ ರೋಸಿ ಹೋಗಿದ್ದಳಾ ಶಮಿತಾ
ಸ್ನೇಹಿತರು, ಪೋಷಕರು ಬಿಚ್ಚಿಟ್ಟ ಸತ್ಯ ಭಯಾನಕ
ಪ್ರೀತಿಸಿದವನಿಂದ ಪ್ರೀತಿಗೆ ಮೋಸವಾಯ್ತೆ…?‌ ಮುಟ್ಟಿನ ಕಟ್ಟುಪಾಡು ಜೀವ ತೆಗೆಯಿತೇ…?

ದಾಂಪತ್ಯದಲ್ಲಿ ಏನೇ ಬಿರುಕು ಬಂದರು ನಾವು ಸಮಾನರು. ಜೀವನ ಪರ್ಯಂತ ನಿನಗೆ ನಾನು, ನನಗೆ ನೀನಾಗುವ ಎಂದು ಸಪ್ತಪದಿ ತುಳಿದಿದ್ದ 25ರ ಯುವತಿ ಶಮಿತಾ ಮದುವೆಯಾಗಿ ಕೇವಲ 10 ತಿಂಗಳಲ್ಲಿಯೇ ನೇಣಿಗೆ ಕೊರಳೊಡ್ಡಿದ ವಿಚಿತ್ರ ಘಟನೆ ತಾಲ್ಲೂಕು ಅಲ್ಲದೇ ಅನೇಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಯಾಕೆಂದರೆ ಆಕೆಯ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್‌ ಶವದ ಪಕ್ಕದಲ್ಲಿಯೇ ಲಭಿಸಿದೆ. ಸಾವಿಗೆ ನಿಖರ ಕಾರಣ ಕೇಳಿದವರು ಯಾರೂ ಕೂಡ ಇಂತಹ ಚಿಕ್ಕಪುಟ್ಟ ವಿಚಾರಗಳಿಗೆ ಸಾಯುತ್ತಾರಾ ಎಂದು ನೊಂದುಕೊಳ್ಳದೇ ಇರಲಾರರು. ಕೋಣೆಯಲ್ಲಿ ಸಿಕ್ಕ ಮಾತ್ರೆಗಳನ್ನು ಆಯ್ದು ಪಂಚನಾಮೆ ಮಾಡಿದ ಪೊಲೀಸರಿಗೆ ಪೋಷಕರು ನೀಡಿದ ಮಾಹಿತಿ ಮಾತ್ರ ಆಕೆಗೆ ಥೈರಾಡ್‌ ಸಮಸ್ಯೆ ಇತ್ತು ಅಂತ. ಹಾಗಾದ್ರೆ ಅನಾರೋಗ್ಯವೇ ಜೀವವನ್ನು ಬಲಿತೆಗೆದುಕೊಳ್ಳುತ್ತದಾ…! ಇಂತಹ ಅನೇಕ ಅನುಮಾನಗಳಿಗೆ ಕಾರಣವಾಗಿರುವುದು ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನಡೆದ ನವವಿವಾಹಿತೆ ಶಮಿತಾ ಬಿ.ಯು. ಸಾವಿನ ಪ್ರಕರಣ.

ಅಷ್ಟಕ್ಕೂ ಈ ನವವಿವಾಹಿತ ದಂಪತಿಯ ಪ್ರೀತಿ ಪ್ರಕರಣವೇ ವಿಚಿತ್ರವಾಗಿದೆ. ಆಕೆ ಉಡುಪಿ ಎಂಜಿಎಂ ಕಾಲೇಜಿನ ಬಿಕಾಂ ಪದವೀಧರೆ. ಕುಟುಂಬದಲ್ಲಿ ಅತ್ಯಂತ ಬುದ್ದಿವಂತೆ. ಮಾನಸಿಕ ಸ್ಥಿಮಿತ ಕಳೆದುಕೊಳ್ಳದ ದಿಟ್ಟ ಹೆಣ್ಣುಮಗಳು. ತಂದೆ, ತಾಯಿ ತಪ್ಪು ಮಾಡಿದಾಗಲು ಪ್ರೀತಿಯಿಂದ ತಿದ್ದುವ ಮನೋಭಾವ ಬೆಳೆಸಿಕೊಂಡಿದ್ದ ಆಕೆಯ ಬಗ್ಗೆ ಪೋಷಕರಿಗೂ ಎಲ್ಲಿಲ್ಲದ ಪ್ರೀತಿ. ತುಂಬು ಕುಟುಂಬದಲ್ಲಿ ಬೆಳೆದಿದ್ದ ಆಕೆಗೆ ಮನೆಯ ಪರಿಸರದಲ್ಲೇ ಪ್ರೀತಿಗೇನು ಕಡಿಮೆ ಇರಲಿಲ್ಲ.

ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕೋವಿಡ್‌-19ರ ಸಂದರ್ಭದಲ್ಲಿ ಒಂದು ದಿನ ಇದ್ದಕ್ಕಿಂದಂತೆ ಕುಟುಂಬಕ್ಕೆ ಸಹಾಯಕನಾಗಿ ನಿಂತ ಯುವಕ ತನ್ನ ಪ್ರೇಮದರಮನೆಯ ಒಡೆಯ ಆಗುತ್ತಾನೆ. ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು ಕಾಲೇಜಿನಲ್ಲಿ ಎಲ್ಲರಿಗಿಂತ ಮನದಲ್ಲೇ ಅಸಡ್ಡೆ ಕಟ್ಟಿಕೊಂಡಿದ್ದ ಆಕೆಗೆ ಸಪ್ತಪದಿ ತುಳಿಯುವ ಅರಸ ಅದೇ ಯುವಕ ಎಂಬ ಕಿಂಚಿತ್ತೂ ಕಲ್ಪನೆನೂ ಇರಲಿಲ್ಲ. ಆದರೆ ವಿಧಿಯಾಟ ಹಾಗೆ ಬರೆದಿದ್ದರೆ ಆಕೆಯೇನು ಮಾಡಲು ಸಾಧ್ಯ…?

ಕುಟುಂಬಕ್ಕೆ ನೆರವಾದ ಯುವಕ “ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಮದುವೆ ಮಾಡಿಕೊಡಿ” ಎಂದು ಯುವತಿಯ ಪೋಷಕರನ್ನು ನೇರವಾಗಿ ಪೀಡಿಸಿದ್ದ. ಅಷ್ಟಕ್ಕೂ ಆತ ಸ್ನೇಹಿತೆಯ ಮಗ ಆಗಿದ್ದರಿಂದ ಇಂತಹ ಒಳ್ಳೆಯ ಗಂಡು ಸಿಗುವುದೇ ಪುಣ್ಯ ಎಂದು ಶಮಿತಾಳ ತಾಯಿಯ ಮನಸ್ಸು ಲೀಲಾಜಾಲವಾಗಿ ಕರಗಿ ನೀರಾಗಿತ್ತು. ಸಹಾಯಕ್ಕೆ ನಿಂತವ ಅಳಿಯ ಆಗಬಹುದು ಎಂಬ ಒಮ್ಮತದ ತೀರ್ಮಾನವೂ ಅರಳಿತ್ತು. ಅಲ್ಲೇ ನೋಡ್ರಿ ನಿಜವಾಗ್ಲೂ ತಪ್ಪಾಗಿದ್ದು.

ಕಾಲೇಜಿನಲ್ಲಿ ಯುವತಿಯ ಅಸಡ್ಡೆಗೆ ಒಳಗಾದ ಯುವಕ ಪ್ರೀತಿಸುತ್ತಾನೆ ಎಂದಾಗ, ಕುಟುಂಬಕ್ಕೂ ಒಳ್ಳೆಯವನಂತೆ ಕಂಡಾಗ ಅಪಾರ ಜೀವನದ ಕನಸು ಹೊತ್ತುಕೊಂಡಿದ್ದ ರೂಪವತಿ ಶಮಿತಾಳ ಮನೊದೊಳಗೆ ಮೆಲ್ಲಗೆ ಪ್ರೀತಿ ಅರಳಲು ಆರಂಭವಾಗಿತ್ತು. ಬದುಕಿನ ನೋವು ನಲಿವು ಹಂಚಿಕೊಳ್ಳುವ ತೀರ್ಮಾನಕ್ಕೆ ಬದ್ಧರಾದ ಇಬ್ಬರಿಗೂ ಒಂದು ದಿನ ಎಂಗೇಜ್‌ಮೆಂಟ್ ಕೂಡ ನಡೆದೇ ಹೋಯ್ತು. ಪೋಷಕರು, ಹಿರಿಯರ ಸಮ್ಮುಖದಲ್ಲಿ ಎಲ್ಲರೂ ಆಶೀರ್ವಾದ ಮಾಡಿ, ಒಳ್ಳೆಯ ಜೋಡಿ ಎಂದು ಹರಸಿ ಶೀಘ್ರ ಮದುವೆಯ ಊಟ ಹಾಕಿಸಿ ಎಂದು ಹಾರೈಸಿದ್ದರು. ಆದರೆ…!

ಹುಡುಗನ ಸ್ವಭಾವದಲ್ಲಿ ಭಿನ್ನಾಭಿಪ್ರಾಯ ಕಂಡಿದ್ದ ಶಮಿತಾ ಎಂಗೇಜ್‌ಮೆಂಟ್‌ ನಂತರ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಮನೆಯ ಕೆಲಸ ಮಾಡಬೇಕು. ನೀನು ಹಾಗಿರಬೇಕು, ಹೀಗಿರಬೇಕು ಎಂಬ ಬುದ್ದಿವಾದ ಹೇಳಲು ಯುವಕನಿಂದ ಆರಂಭದಲ್ಲೇ ಪುರುಷ ಪ್ರಧಾನ ವ್ಯವಸ್ಥೆಯ ಯಜಮಾನಿಕೆ ಪೀಠಿಕೆ ಶುರುವಾಗಿತ್ತು. ಮಗಳ ಆಕಾಂಕ್ಷೆಯ ವಿರುದ್ಧವಾಗಿ ಎಂದು ನಡೆದುಕೊಳ್ಳದ ತಂದೆ ಹುಡುಗನ ತಂದೆಗೆ ಫೋನ್‌ ಮಾಡಿ “ನಿಮ್ಮ ಮನೆಗೆ ನನ್ನ ಮಗಳನ್ನು ಕೊಡುವುದಿಲ್ಲ” ಎಂದು ರೇಗಾಡಿದ್ದರು. ಆದರೆ ಯುವಕ ಮತ್ತೆ ಹಳೆಯ ವರಸೆ ತೆಗೆದು ಯುವತಿಯ ಮನೆಗೆ ಬಂದು ಪ್ರೀತಿಯ ಮೋಹದ ಬಲೆ ಬೀಸಲಾರಂಭಿಸಿದ್ದ. ನಾಲ್ಕೈದು ದಿನಗಳ ಕಾಲ ತನ್ನ ಮನೆಯಲ್ಲಿ ಊಟ ತ್ಯಾಗ ಮಾಡಿ ನೇರವಾಗಿ ಹುಡುಗಿಯ ಮನೆಗೆ ಬಂದು ಹೈಲಿ ಡ್ರಾಮ ಕೂಡ ಮಾಡಿದ್ದ. ಅಲ್ಲದೇ ಮನೆಯಲ್ಲಿ ಏನ್ ಕೊಟ್ಟರು ತೆಗೆದುಕೊಳ್ಳದೆ ಚೇರ್‌ ಮೇಲೂ ಕುಳಿತುಕೊಳ್ಳದೇ ನೆಲದ ಮೇಲೆ ಕುಳಿತ ಅಂಗಲಾಚಿಕೊಂಡಿದ್ದ. ಅಂದು ಆತನ ವರಸೆ ಕಂಡಿದ್ದ ಶಮಿತಾ ನನ್ನಿಂದ ಹುಡುಗನ ಜೀವ ಹಾಳಾಗುತ್ತದೆ ಎಂಬ ಕಾರಣಕ್ಕೆ ಕರಗಿ ನೀರಾಗಿದ್ದಳು.‌ “ಅವನನ್ನು ನಾನು ಬದಲು ಮಾಡುತ್ತೇನೆ. ನೀವ್ಯಾರು ಬೇಜಾರು ಮಾಡಿಕೊಳ್ಳುವುದು ಬೇಡ” ಎಂದು ಕಾನ್ಫಿಡೆಂಟ್‌ ಆಗಿ ಖುಷಿಯಲ್ಲಿ ಹೇಳಿಯೂ ಆಯ್ತು. ಮದುವೆಗೂ ಒಪ್ಪಿ ಡುಂ… ಡುಂ… ಬಾರಿಸಿ ಮದುವೆಯ ದಿಬ್ಬಣ ಪ್ರೀತಿಯ ಅರಸನ ಉಪ್ಪರಿಗೆ ಸೇರಿಯೂ ಆಯ್ತು.

ಋತುಸ್ರಾವದ ಕಟ್ಟುಪಾಡು ಜೀವ ತೆಗೆಯಿತೇ

ಮದುವೆಯಾಗಿ 10 ತಿಂಗಳು ಕಳೆದರೂ ತವರಿನ ಸಂಬಂಧ ನಿಕಟವಾಗಲು ಪತಿರಾಯ ಬಿಡಲೇ ಇಲ್ಲ. ಪತ್ನಿಯ ಬೇಡಿಕೆಗಳನ್ನು ಸರಿಸಮನವಾಗಿ ಕೇಳುವುದಕ್ಕೂ ಆತನಲ್ಲಿ ಪುರುಸೊತ್ತಿರಲಿಲ್ಲ. ತಿಂಗಳ ಋತುಸ್ರಾವದ ಕಠಿಣ ದಿನಗಳನ್ನು ಎದುರಿಸುವ ಶಕ್ತಿ ನೀಡುತ್ತಾನೆ ಎಂದು ತಿಳಿದಿದ್ದ ಆಕೆಗೆ ನಿಜವಾಗಲೂ ಮನಸ್ಸಿಗೆ ಹರ್ಟ್‌ ಆಗಿದ್ದೇ ಅಲ್ಲಿಯೇ? ಮುಟ್ಟು ಅತ್ಯಂತ ಮೈಲಿಗೆ ಎಂದು ತಿಳಿದಿದ್ದ ಆತನು ಕುಟುಂಬಸ್ತರನ್ನು ಒಲಿಸಿಕೊಳ್ಳಲೋ ಅಥವಾ ಧೈಯ, ದೇವರ ಕಾರಣಕ್ಕೋ ಆಕೆ ಮಾತ್ರ ಮುಟ್ಟಿನ ಸಂದರ್ಭದಲ್ಲಿ ಮನೆಯಲ್ಲಿ ಇರಕೂಡದು ಎಂಬ ಕಠಿಣ ಷರತ್ತು ಕಾಯ್ದಿರಿಸಲಾಗಿತ್ತು. ಅಂತೆಯೇ ಹೆಣ್ಣಿನ ಜನ್ಮದ ಅತ್ಯಂತ ಪಾವನ ಮತ್ತು ಸೃಷ್ಟಿ ನಿಯಮವನ್ನು ಮರುಜಾರಿಗೊಳಿಸಲೆಂದೇ ಲೋಕದ ಎಲ್ಲಾ ಜೀವಿಗಳ ಶುದ್ಧಿ ಕ್ರಿಯೆಯನ್ನು ಕಳೆಯಲು ಪ್ರಕೃತಿ ಕಲ್ಪಿಸಿದ್ದ ಅಮೃತ ಕ್ಷಣ ಕಳೆಯಲು ಮಾತ್ರ ತವರು ಮನೆಗೆ ತೆರಳಬೇಕಿತ್ತು. ಇದಕ್ಕಿಂತ ಅಮಾನವೀಯ ಘಟನೆ ಮತ್ತೊಂದು ಇರಲಿಕ್ಕಿಲ್ಲ. ಇಲ್ಲೇ ಶುರುವಾಯ್ತು ನೋವಿನ ಬಾಧೆ.

ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಸಹಾಯವಾಣಿ, ಪೊಲೀಸರು ಶಮಿತಾ ಸಾವಿನ ಪ್ರಕರಣವನ್ನು ತುರ್ತಾಗಿ ತನಿಖೆ ಆರಂಭಿಸಿದರೆ ಅನೇಕ ಸತ್ಯ ಹೊರಬರಲಿದೆ. ಸಾವಿನ ಹಿಂದೆ ನಿಜಕ್ಕೂ ಏನೇನಾಗಿದೆ ಎಂದು ತಿಳಿಯಬೇಕಿದೆ. ಯಾರದ್ದೋ ಒತ್ತಡ, ಭಯಕ್ಕೆ ಶಮಿತಾ ಸಾವಿನ ಪ್ರಕರಣ ಮುಚ್ಚು ಹಾಕುವ ಪ್ರಯತ್ನ ಆಡಳಿತದಿಂದ ಆಗಬಾರದು. ಆಕೆಯ ಸಾವಿನ ಹಿಂದೆ ಅನೇಕ ಅಮಾನವೀಯ ಆತಂಕದ ಘಟನೆ ಅಡಗಿದೆ ಎಂಬ ಸಂಗತಿಯನ್ನು ತನಿಖೆಯ ಕ್ರಮದಿಂದ ಹುಡುಕಿ ತೆಗೆಯಬೇಕು. ಸಮಾಜದಲ್ಲಿ ನಡೆಯುವ ಇಂತಹ ಅಮಾನವೀಯ ಕೃತ್ಯಗಳನ್ನು ಭೇದಿಸಿದರೆ ಕೆಲವು ರಾಕ್ಷಸ ಮುಖಗಳು ಖಂಡಿತಾ ಹೊರಬರಲಿದೆ.

ಶಮಿತಾ ಮದುವೆಯ ನಂತರ ಮನೆಯ ಕೆಲಸಗಳನ್ನು ಮಾಡುತ್ತಿದ್ದರು ಹುಡುಗನಿಗೆ ಮಾತ್ರ ಸಮಾಧಾನವೇ ಇರಲಿಲ್ಲ. ಹುಡುಗಿಯ ತಾಯಿಗೆ ಕರೆಮಾಡಿ ಮನೆಕೆಲಸ ಮಾಡಲು ಹೇಳಿಕೊಡಿ. ಅಡುಗೆ ಮಾಡುವುದನ್ನು ಕಲಿಸಿ, ಪಾತ್ರೆ ತೊಳೆಯುವುದನ್ನು ಕಲಿಸಿ. ನನಗೆ ಅರ್ಜೆಂಟಾಗಿ ಮಗು ಬೇಕು. ಅವಳಿಗೆ ಬುದ್ದಿವಾದ ಹೇಳಿ ಎನ್ನುತ್ತಿದ್ದ ಎಂದು ಪೋಷಕರು, ಸ್ನೇಹಿತರು ತಿಳಿಸುತ್ತಾರೆ.

 “ಮಗಳು ಎಲ್ಲವನ್ನು ಮುಚ್ಚಿಟ್ಟಳು” ತಂದೆ ಉಮೇಶ್‌ ಬಿಜ್ಜಳ

ನನ್ನ ಮಗಳು ಬಾರಿ ಬುದ್ದಿವಂತೆ. ಗಂಡನನ್ನು ಸರಿಮಾಡುತ್ತೇನೆ ಎಂದು ಮನೆಯಿಂದ ಹೊರಗೆ ನಡೆದಿದ್ದಳು. ಮೊದ ಮೊದಲು ತಾಯಿಯೊಂದಿಗೆ ಕಷ್ಟ ಹೇಳಿಕೊಳ್ಳುತ್ತಿದ್ದಳು. ನಂತರ ಅದ್ಯಾಕೋ ತಾಯಿ ಮಡಿಲು ಕೂಡ ಆಕೆಗೆ ಭಾರವಾಯ್ತು. ಸ್ನೇಹಿತರು, ಅಣ್ಣಂದಿರೇ ಆಕೆಗೆ ತಾಯಿ, ತಂದೆ, ಪೋಷಕರಾದರು. ಒಬ್ಬರಲ್ಲಿ ಹೇಳಿಕೊಂಡ ಸಮಸ್ಯೆಯನ್ನು ಮತ್ತೊಬ್ಬರಲ್ಲಿ ಹಂಚಿಕೊಂಡಿಲ್ಲ. ಎಲ್ಲರನ್ನು ಒಟ್ಟು ಸೇರಿಸಿದರೆ ಮಾತ್ರ ಸತ್ಯದ ಸ್ವರೂಪ ವಿಭಿನ್ನವಾಗಿ ತೆರೆಯುತ್ತದೆ. ನನ್ನ ಮಗಳು ಮಾನಸಿಕವಾಗಿ ಸದೃಢವಾಗಿದ್ದಳು. ಆರೋಗ್ಯದ ಕಾರಣಕ್ಕೆ ಆತ್ಮಹತ್ಯೆ ದಾರಿ ಹುಡುಕಿಲ್ಲ ಎಂದು ಶಮಿತಾಳ ತಂದೆ ಉಮೇಶ್‌ ಬಿಜ್ಜಳ ನೆಲದಧ್ವನಿ ಜೊತೆಗೆ ಮಾತನಾಡುತ್ತ ಕಣ್ಣೀರಾದರು.

“ಇನಿಯನಿಂದ ಪ್ರೀತಿ ಸಿಗಲಿಲ್ಲ” ಎಂದ ಸ್ನೇಹಿತೆ ಶ್ರಮಿಕ

ವೈಯಕ್ತಿಕ ಕೌಟುಂಬಿಕ ಜೀವನದಲ್ಲಿ ಆಕೆ ನೊಂದಿದ್ದೇನೆ. ಪೂರ್ಣ ಪ್ರಮಾಣದಲ್ಲಿ ಎಲ್ಲವನ್ನು ಶೇರ್‌ ಮಾಡಿಕೊಳ್ಳಲು ಅಂಜುತ್ತಿದ್ದಳು. ಕೊನೆಯ ದಿನಗಳಲ್ಲಿ ನನ್ನವರು ಯಾರು ಇಲ್ಲ ಅಂತ ಅನ್ನಿಸುತ್ತಿದೆ. ದಂಪತಿಗಳ ನಡುವಿನ ಬಿರುಕು ಸರಿಯಾಗುತ್ತಿಲ್ಲ ಎನ್ನುತ್ತಿದ್ದಳು. ಆತ ನನಗೆ ಟೈಮ್‌ ಕೊಡುವುದಿಲ್ಲ ಎಂದು ನೊಂದಿದ್ದಳು. ಅತ್ತೆಯಿಂದಲೂ ಕಿರಿಕಿರಿ ಎಂದು ಆಗಾಗ ಹೇಳಿಕೊಳ್ಳುತ್ತಿದ್ದಳು. ಅದಕ್ಕೆ ನಾನು ಸಂಸಾರದ ಜಗಳ ಸರಿಯಾಗುತ್ತೆಂದು ಧೈರ್ಯ ತುಂಬುತ್ತಿದ್ದೆ ಎಂದು ಸ್ನೇಹಿತೆ ಶ್ರಮಿಕಳೊಂದಿಗೆ ನವವಿವಾಹಿತೆ ಶಮಿತಾ ಅಳಲು ತೋಡಿಕೊಂಡಿದ್ದಳು.

“ನನ್ನ ಬೆಲೆ ಅರ್ಥ ಆಗಬೇಕು” ಅಣ್ಣ ಆಕಾಶ್‌

ಪ್ರೀತಿಸಿ ಮದುವೆಯಾಗಿದ್ದರೂ “ಶಿ ವಾಸ್‌ ನಾಟ್‌ ಹ್ಯಾಪಿ”. ಆಕೆಗೆ ಲೋನ್ಲಿನೆಸ್‌ ತುಂಬಾ ಕಾಡುತ್ತಿತ್ತು. ಏಕಾಂತ ಸಿಗದ ಹಿನ್ನಲೆ ಕೊರಗುತ್ತಿದ್ದಳು. ಪತಿಯ ಡ್ರಾಮಗಳನ್ನು ನೋಡಿ ಆಗಾಗ ಮರುಗುತ್ತಿದ್ದಳು. ಸಂಸಾರದಲ್ಲಿ 1 ದಿನ ಚೆನ್ನಾಗಿದ್ದರೆ 4 ದಿನ ದುಖಃ ಇರುತ್ತಿತ್ತು. ಸಾಯುವ ದಿನ 10 ಗಂಟೆಗೆ 15 ರಿಂದ 20 ನಿಮಿಷ ಮಾತನಾಡಿದ್ದೇನೆ. ಅವನಂದ್ರೆ ನಂಗೆ ತುಂಬಾ ಇಷ್ಟ. ಅವನನ್ನು ನಾನು ಸರಿ ಮಾಡ್ತೀನಿ. ನನ್ನ ಬೆಲೆ ಅರ್ಥ ಆಗಬೇಕು ಅವನಿಗೆ. ಅವನಿಂದ ನನಗೆ ಕಿಂಚಿತ್ತೂ ಪ್ರೀತಿ ಸಿಗುತ್ತಿಲ್ಲ ಎಂದು ಅಣ್ಣ ಆಕಾಶ್‌ ಜೊತೆಗೆ ಶಮಿತಾ ಸಂಕಷ್ಟ ಹಂಚಿಕೊಂಡಿದ್ದಳು.

ಬೇಡಿಕೆ ಇಡೇರಲಿಲ್ಲವಾ…?

ಎಲ್ಲರಂತೆ ನಾನು ಸಮಾಜದಲ್ಲಿ ಬದುಕಬೇಕು, ಸುತ್ತಬೇಕು ಅಂತೆಲ್ಲ ಕನಸ್ಸು ಕಂಡಿದ್ದವಳಿಗೆ ಹಳ್ಳಿ ಹಾಳು ಕೊಂಪೆಯಾಗಿ ಕಾಣಿಸಿದ್ದಾದರೂ ಯಾಕೆ. ಏಕಾಂತ, ಒಬ್ಬಂಟಿತನ ಅನುಭವಿಸುತ್ತಿದ್ದ ತುಂಬು ಕುಟುಂಬದಲ್ಲಿ ಬೆಳೆದ ಮುದ್ದು ಮಗಳು ಸಾವಿನಲ್ಲಿ ಖುಷಿ ಕಂಡಿದ್ಯಾಕೆ ಎಂಬುದು ತನಿಖೆಯಿಂದಷ್ಟೇ ಬಹಿರಂಗಗೊಳ್ಳಬೇಕು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post