ಕಾಂಗ್ರೆಸ್‌ನೊಳಗೆ ಭುಗಿಲೆದ್ದ ಅಸಮಾಧಾನ

ಕಿಮ್ಮನೆ-ಆರ್‌ಎಂಎಂ ನಡುವೆ ಮುಸುಕಿನ ಗುದ್ದಾಟ ಬಹಿರಂಗ
ಕಿಮ್ಮನೆ ಬೆಂಬಲಿಗರ ಧೋರಣೆಗೆ ಆರ್‌ಎಂಎಂ ನಿಗಿ ನಿಗಿ ಕೆಂಡ
ಏನೇನು ಸರಿಯಲ್ಲ… ಎಲ್ಲಾ ತೋರಿಕೆ…
ಶಿವದೂತೆ ಗುಳಿಗೆ ನಾಟಕದ ವೇದಿಕೆ ಬಳಿಯೇ ಮುಸಿ ಮುಸಿ ಸಿಟ್ಟು

ತೀರ್ಥಹಳ್ಳಿ ಕಾಂಗ್ರೆಸ್‌ ಪಕ್ಷದೊಳಗೆ ಸರ್ಜರಿ, ಭರ್ಜರಿ ಆಗಿರುವ ಹಿನ್ನಲೆ ಕಿಮ್ಮನೆ, ಮಂಜುನಾಥ ಗೌಡರು ಒಂದಾಗಿದ್ದಾರೆ. ಒಟ್ಟಾಗಿ ಚುನಾವಣೆ ನಡೆಸಿಯೇ ಬಿಜೆಪಿ ಸೋಲಿಸುತ್ತೇವೆ ಎಂಬ ಭ್ರಮೆಯಲ್ಲಿರುವ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಪಾಳಯದಲ್ಲಿ ಕಳೆದು 15 ದಿನಗಳಿಂದ ನಡೆದಿರಬಹುದಾದ ಎಲ್ಲಾ ಸಂಧಾನಗಳು ವ್ಯರ್ಥವಾದಂತಿದೆ. ಕಾಂಗ್ರೆಸ್‌ನೊಳಗೆ ಭುಗಿಲೆದ್ದ ಅಸಮಾಧಾನ ಮೊನ್ನೆ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಿವದೂತೆ ಗುಳಿಗೆ ನಾಟಕ ವೀಕ್ಷಣೆಗೆ ಆಗಮಿಸಿದ್ದ ಸುಮಾರು 10 ರಿಂದ 12 ಸಾವಿರ ಜನರ ಮುಂದೆ ಬಹಿರಂಗಗೊಂಡಿದೆ.

ಆರ್‌ಎಂಎಂ-ಕಿಮ್ಮನೆ ರಾಜೀಸಂಧಾನಕ್ಕೂ ಮೊದಲೇ ನಡೆದಿರುವ ನಾಟಕ ಪ್ರದರ್ಶನ ತಯಾರಿ ಕಾರ್ಯಕ್ರಮದಲ್ಲಿ ಅಪ್ಪಟ ಕಿಮ್ಮನೆ ರತ್ನಾಕರ್‌ ಬೆಂಬಲಿಗರು ಆರ್.ಎಂ. ಮಂಜುನಾಥ ಗೌಡರಿಗೆ ಪ್ರಚಾರದ ಪ್ರಾಶಸ್ತ್ಯ ನೀಡಿದ್ದರು. ಎಲ್ಲಾ ಕಡೆ ಪೋಸ್ಟರ್‌, ಬ್ಯಾನರ್‌ನಲ್ಲಿ ಮಂಜುನಾಥ ಗೌಡರ ಫೋಟೋ ರಾರಾಜಿಸಿತ್ತು. ನಾಟಕ ಪ್ರದರ್ಶನ ದಿನ ಸಂಜೆ 6 ಗಂಟೆಗೆ ನಡೆಯಬೇಕಿದ್ದ ಧರ್ಮಧ್ವಜಾರೋಹಣ ತುಸು ತಡವಾಗಿ ನಡೆಯಿತು. ಅನಂತರ ವೇದಿಕೆ ಕಾರ್ಯಕ್ರಮ ನಡೆಯಿತಾದರು ಕಾರ್ಯಕ್ರಮಕ್ಕೆ ರೂಪುರೇಷೆ ಇಲ್ಲದೆ ಯಾರನ್ನು ವೇದಿಕೆ ಮೇಲೆ ಕರೆಯಬೇಕು. ಯಾರು ಬೇಡ ಎಂಬ ಬಗ್ಗೆ ಸಾಕಷ್ಟು ಗೊಂದಲ ಇತ್ತು ಎಂಬ ಬಗ್ಗೆ ಪ್ರತ್ಯಕ್ಷದರ್ಶಿಗಳು ಅನೇಕರು ಅಸಾಮಾಧಾನ ವ್ಯಕ್ತಪಡಿಸುತ್ತಿದ್ದರು.

ಇದಕ್ಕೆ ಸರಿ ಎಂಬಂತೆ ಅತಿಥಿಗಳನ್ನು ವೇದಿಕೆ ಮೇಲೆ ಕರೆಯುವುದು ಪುನಃ ಕಳುಹಿಸುವುದು, ಮತ್ತೆ ಪುನಃ ವೇದಿಕೆಗೆ ಆಹ್ವಾನಿಸಿ ಕಳುಹಿಸುವ ದೊಡ್ಡ ಹೈಡ್ರಾಮ ನಡೆದಿತ್ತು. ಆಯೋಜಕರು ಯಾವುದೇ ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಇದರಿಂದ ವ್ಯಕ್ತವಾಗುತ್ತಿತ್ತು. ಅಲ್ಲದೇ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಬ್ಬರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂಬ ಸಂದೇಶ ಕೆಪಿಸಿಸಿ ಅಂಗಳದಿಂದ ಬಂದಿದ್ದರು ಅದಕ್ಕೆ ಯಾವುದೇ ಮರ್ಯಾದೆ ನೀಡಲಿಲ್ಲ ಎಂಬ ಬಗ್ಗೆಯೂ ಸಾಕಷ್ಟು ಅಸಮಾಧಾನ ಸೃಷ್ಟಿಯಾಗಿತ್ತು. ಕಾಂಗ್ರೆಸ್‌ ಪಕ್ಷದ ಬ್ಯಾನರ್‌ ಅಡಿಯಲ್ಲಿ ಕಾರ್ಯಕ್ರಮ ನಡೆಯದೇ ಇದ್ದರು ಬಹುತೇಕ ಎಲ್ಲಾ ಮುಖಂಡರು ಆಗಮಿಸಿದ್ದರು ಪರಿಣಾಮವಾಗಿ ಇದೊಂದು ಕಾಂಗ್ರೆಸ್‌ ಪ್ರಾಯೋಜಿತ ಕಾರ್ಯಕ್ರಮವಾಗಿಯೇ ಕಾಣಿಸಿಕೊಂಡಿತ್ತು.

ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಹಾಗೂ ಕರ್ನಾಟಕ ರತ್ನ ಪುನೀತ್‌ ರಾಜ್‌ ಕುಮಾರ್‌ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಗಳು, ದೈವ ಪಾದ್ರಿಗಳು ಹಾಜರಿದ್ದರು. ನಂತರ ಈ ಇಬ್ಬರು ಕಾಂಗ್ರೆಸ್‌ ಮುಖಂಡರು ಒಟ್ಟಿಗೆ ತೆಂಗಿನ ಸುಳಿ ಬಿಡಿಸುವ ಮೂಲಕ ಉದ್ಘಾಟಿಸಿದ್ದರು. ಅದಾದ ಬಳಿಕ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಅಲ್ಲೇ ವೇದಿಕೆಯಲ್ಲಿದ್ದ ಆರ್‌ಎಂಎಂ ಸಾಮಾನ್ಯವಾಗಿ ವೇದಿಕೆಯಿಂದ ಕೆಳಗಿಳಿಯಬೇಕಾದ ವಾತಾವರಣ ಸೃಷ್ಟಿಯಾಯಿತು.

ಹೀಗೆ ಮಾತು ಮುಗಿಸಿದ ಕಿಮ್ಮನೆ ರತ್ನಾಕರ್‌ ಅವರಿಗೆ ಮಂಜುನಾಥ ಗೌಡರಿಂದ ಸನ್ಮಾನವನ್ನು ಮಾಡಿಸಿದ್ದರು. ಇದಾಗ ಬಳಿಕ ಕೊಪ್ಪದ ವಕೀಲ ಸುಧೀರ್‌ ಕುಮಾರ್‌ ಮುರೊಳ್ಳಿ ಅವರಿಗೂ ಮಾತಿನ ಅವಕಾಶ ನೀಡಲಾಯಿತು. ಮಾತು ಮುಗಿಸಿ ಇನ್ನೇನು ಕೆಳಗಿಳಿಯುವ ಸಂದರ್ಭದಲ್ಲಿ ಮಂಜುನಾಥ ಗೌಡರಿಗೆ ಸನ್ಮಾನಿಸಬೇಕು ಎಂಬಷ್ಟರಲ್ಲಿ ಗೌಡರ ತಾಳ್ಮೆಯ ಕಟ್ಟೆ ಒಡೆದಿತ್ತು. ತನಗೆ ಮಾತಿನ ಅವಕಾಶ ನೀಡುತ್ತಾರೆ ಎಂದು ಕಾಯುತ್ತಿದ್ದ ಆರ್‌ಎಂಎಂ ಮುನಿಸಿಕೊಂಡು ಸ್ಥಳದಿಂದ ಹೊರಟು ಹೋಗಿದ್ದರು. ಇನ್ನೂ ಮುಖ್ಯವಾಗಿ ಅತಿಥಿಗಳಿಗಾಗಿಯೇ ಆಸನದ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಆರ್‌ಎಂಎಂ ಹಾಗೂ ಬೆಂಬಲಿಗರು ಆಗಮಿಸುವ ಮೊದಲೇ ಆಸನಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. ಸ್ವಲ್ಪ ಎಚ್ಚೆತ್ತ ಕಾಂಗ್ರೆಸ್‌ ಮುಖಂಡರು ಜಗಳವಾಗದಂತೆ ತಡೆಯುವ ಉದ್ದೇಶದಿಂದ ತಾವು ಆಸನಗಳನ್ನು ಬಿಟ್ಟುಕೊಟ್ಟು ಸಮಸ್ಯೆ ಇತ್ಯರ್ಥಕ್ಕೆ ಮುನ್ನುಡಿ ಬರೆದಿದ್ದರು. ಮುರೊಳ್ಳಿ ಸನ್ಮಾನಕ್ಕೆ ಆಹ್ವಾನಿಸಿ ಇಲ್ಲಿ ಎಲ್ಲೋ ಜನರ ಮಧ್ಯ ಮಾತನಾಡುತ್ತಿದ್ದಾರೆ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುವ ಜೊತೆಗೆ ನಾಟಕದ ನಂತರ ಸನ್ಮಾನಿಸುತ್ತೇವೆ ಎಂದು ಹೇಳಿ ಮೊದಲೇ ಆಗಿದ್ದ ಪ್ರಮಾದಗಳನ್ನು ಮುಚ್ಚಿಹಾಕಿದ್ದರು.

ಮಂಜುನಾಥ ಗೌಡರು ಸ್ಥಳದಿಂದ ಹೋದ ನಂತರ ಬೆಂಬಲಿಗರಾದ ರಾಘವೇಂದ್ರ ಶೆಟ್ಟಿ ನೇರವಾಗಿ ಕಿಮ್ಮನೆ ರತ್ನಾಕರ್‌ ಅವರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದರು. ಜಗಳವಾಯಿತು ಎನ್ನುವಷ್ಟರಲ್ಲಿ ನಾಟಕದ ಕರೆಘಂಟೆಗಳು ಕೇಳಿ ಬಂದ ಹಿನ್ನಲೆ ತಣ್ಣಗಾಯಿತಾದರೂ ಒಳಗಿನಿಂದ ಉಕ್ಕುತ್ತಿದ್ದ ಕೋಪಾಗ್ನಿ ತಣ್ಣಗಾಗಲೇ ಇಲ್ಲ. ನಂತರ ಮುಖಂಡರು ಆರ್‌ಎಂಎಂ ಹತ್ತಿರದ ಸಂಬಂಧಿ ನಿಧನರಾಗಿದ್ದಾರೆ. ನೋಡಲು ಹೋಗಿದ್ದಾರೆ ಎಂದು ತಪ್ಪುಗಳನ್ನು ಮುಚ್ಚುವ ಸಾಹಸ ಮಾಡಬೇಕಾಗಿ ಬಂತು.

ಇಬ್ಬರು ಒಂದಾಗಿದ್ದಾರೆ ಕಾಂಗ್ರೆಸ್‌ ಪಕ್ಷದಲ್ಲಿ ಏನೇನು ಸಮಸ್ಯೆ ಇಲ್ಲ ಎಂದು ತೋರಿಕೆಯ ನಾಟಕ ಮಾಡುತ್ತಿದ್ದ ಕಾಂಗ್ರೆಸಿಗರಿಗೆ ಇಂದು ನುಂಗಲಾರದ ತುತ್ತಾಗಿದೆ. ಟಿಕೆಟ್‌ ಪೈನಲ್‌ ಎಂದು ಹಿರಿಹಿರಿ ಹಿಗ್ಗಿದ್ದ ಕಿಮ್ಮನೆ ಆಪ್ತರಿಗೆ ಈಗ ಕಸಿವಿಸಿ ಶುರುವಾದಂತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post