ಕಿಮ್ಮನೆ-ಆರ್ ಎಂಎಂ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ಧತೆ

ಫೆಬ್ರವರಿ 21: ಪ್ರತಿಭಟನೆ, ಪಾದಯಾತ್ರೆ, ಧರಣಿ

"ಮಹಿಳಾ ಅಧ್ಯಕ್ಷರಿಗೆ ಮಾನಸಿಕೆ ಹಿಂಸೆ, ಕಿರುಕುಳ"

ತೀರ್ಥಹಳ್ಳಿ ತಾಲ್ಲೂಕು, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಸರಿತಾ ಇವರ ಜನವಿರೋಧಿ ಧೋರಣೆ ಮತ್ತು ಜನಪ್ರತಿನಿಧಿಗಳ ಮೇಲಿನ ದಭಾವಣೆಗಳಿಂದ ಕಳೆದ ಆರು ತಿಂಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಜನತೆಗೆ ಯಾವುದೇ ಸೌಲಭ್ಯ, ಸವಲತ್ತು ನೀಡಲಾಗದೆ ಆಡಳಿತ ತಂತ್ರವೇ ಕುಸಿದು ಬಿದ್ದಿದೆ. ಇಂತಹ ನಿಯಮಬಾಹಿರ ಪಿಡಿಓಗೆ ಬಿಜೆಪಿ ಪಕ್ಷದ ಮುಖಂಡರು ಬೆನ್ನಿಗೆ ನಿಂತಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ದ್ರೋಹ ಎಸಗುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಭವ್ಯ ಹಾಗೂ ಉಪಾಧ್ಯಕ್ಷ ಹೊರಬೈಲು ಪ್ರಭಾಕರ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಜನರ ನಿತ್ಯದ ಕೆಲಸಗಳು ನೆನೆಗುದಿಗೆ ಬಿದ್ದಿದ್ದು, ಬಹುಮತ ಇರುವ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಡಿಓ ಅವರನ್ನು ಆಡಳಿತಾತ್ಮಕ ವಿಚಾರಕ್ಕೆ ಹೊಣೆ ಮಾಡಿ ಜಿಲ್ಲಾ ಪಂಚಾಯಿತಿಯಿಂದ ವರ್ಗಾವಣೆ ಮಾಡಲಾಗಿದ್ದು, ಸಚಿವ ಆರಗ ಜ್ಞಾನೇಂದ್ರ ಇವರ ಶಿಫಾರಸ್ಸು ಮಾಡಿ ಆಕೆಯ ವರ್ಗಾವಣೆ ರದ್ದುಪಡಿಸಿ, ಆಕೆಯ ಜನವಿರೋಧಿ ಕೃತ್ಯಕ್ಕೆ ಬೆಂಬಲ ನೀಡಿರುವುದು ದುರಾದೃಷ್ಟಕರವಾಗಿದೆ.

ಪಂಚಾಯಿತಿ ಮಹಿಳಾ ಅಧ್ಯಕ್ಷೆ ಭವ್ಯ ಇವರಿಗೆ ನಿತ್ಯ ಮಾನಸಿಕ ಹಿಂದೆ, ಕಿರುಕುಳ ನೀಡಲಾಗುತ್ತಿದ್ದು, ಇವರು ಕಚೇರಿಗೆ ಬರದಂತೆ ತಡೆಯುವಲ್ಲಿ ಪಿಡಿಓ ಯಶಸ್ವಿಯಾಗಿದ್ದಾರೆ. 15 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಕೇವಲ 4 ಸದಸ್ಯರನ್ನು ಹೊಂದಿರುವ ಬಿಜೆಪಿಯೂ ಪಿಡಿಓ ಸರಿತಾ ಇವರ ಮೂಲಕ ಹಿಂಬಾಗಿಲಿನಿಂದ ಆಡಳಿತ ಮಾಡುತ್ತಿದ್ದು, ಬಹುಸಂಖ್ಯೆಯ ಸದಸ್ಯರಿಗೆ ಇಲ್ಲಿ ಯಾವುದೇ ಗೌರವ, ಅಧಿಕಾರ ಇಲ್ಲದಂತೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಹೈಜಾಕ್‌ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಾಗಲಿ, ವಾರ್ಡ್‌ ಸಭೆ, ಗ್ರಾಮ ಸಭೆಗಳನ್ನು ನಡೆಸಲು ಪಿಡಿಓ ಸರಿತ ಆಡ್ಡಿಯಾಗಿದ್ದು, ಅಧ್ಯಕ್ಷರ ಸೂಚನೆ ಆದೇಶಗಳನ್ನು ಧಿಕ್ಕರಿಸಿ ಗ್ರಾಮ ಪಂಚಾಯಿತಿಯಲ್ಲಿ ಗೊಂದಲ ಸೃಷ್ಠಿಸಿದ್ದಾರೆ.

ಕಳೆದ 3 ತಿಂಗಳಿನಿಂದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರತಿನಿತ್ಯ ಪ್ರತಿಭಟನೆ, ಧರಣಿ, ಹೋರಾಟ ನಡೆಯುತ್ತಿದ್ದು, ತಮ್ಮ ನ್ಯಾಯಯುತ ಬೇಡಿಕೆ ಹಾಗೂ ಸವಲತ್ತುಗಳಿಗಾಗಿ ಜನ ಬೀದಿಗೆ ಬಂದಿದ್ದಾರೆ. ಪಿಡಿಓ ಸರಿತಾ ಇವರ ದುರ್ವತನೆಯಿಂದಾಗಿ ಗ್ರಾಮ ಪಂಚಾಯಿತಿ ಕಚೇರಿ ರಾಜಕೀಯ ಹೋರಾಟದ ವೇದಿಕೆಯಾಗಿದ್ದು, ತಾನೇ ಹಣ ಖರ್ಚು ಮಾಡಿ ದಿನಾಂಕ: 14 ಮತ್ತು 15 ಫೆಬ್ರವರಿ 2023ರಂದು ಪ್ರತಿಭಟನೆ ಮಾಡಿಸಿ ಮಹಿಳಾ ಅಧ್ಯಕ್ಷರನ್ನು ಅವಮಾನಿಸಲಾಗಿದೆ.

ಬಿಜೆಪಿ ಪಕ್ಷದ ಕುಮ್ಮಕ್ಕಿನಿಂದ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿರುವ ಪಿಡಿಓ ಸರಿತಾ ಇವರ ವಿರುದ್ಧ ಇಲಾಖೆ ತನಿಖೆ ನಡೆಸಿ ಅಮಾನತ್ತು ಪಡಿಸುವಂತೆ ಗ್ರಾಮ ಪಂಚಾಯಿತಿ ಆಡಳಿತ ದೂರು ನೀಡಿದ್ದು, ಈ ಬಗ್ಗೆ ಕ್ರಮ ಜರುಗಿಸಲು ಬಿಜೆಪಿ ಮುಖಂಡರು ತಾಲ್ಲೂಕು ಜಿಲ್ಲಾ ಆಡಳಿತಕ್ಕೆ ತಡೆ ಮಾಡಿರುತ್ತಾರೆ. ಈ ಕೃತ್ಯವನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷದ ವತಿಯಿಂದ ದಿನಾಂಕ: 21-02-2023ರ ಮಂಗಳವಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮುಖಂಡರಾದ ಆರ್.ಎಂ. ಮಂಜುನಾಥಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಯುವ ಕಾಂಗ್ರೆಸ್‌ ಅಧ್ಯಕ್ಷರುಗಳು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ.

ದಿನಾಂಕ: 21-02-2023ರಂದು ಬೆಳಿಗ್ಗೆ 10.00 ಘಟೆಗೆ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಪಾದಯಾತ್ರೆ ಮೂಲಕ ತಾಲ್ಲೂಕು ಕಚೇರಿಯಲ್ಲಿ ಧರಣಿ ನಡೆಸಲಿದ್ದು, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು, ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಬಿ.ಜಿ., ಉಪಾಧ್ಯಕ್ಷ ಹೊರಬೈಲು ಪ್ರಭಾಕರ ವಿನಂತಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post