ಪ್ರತಿಷ್ಠಿತ ಮಹಿಳೆಯರ ಡ್ರಗ್ಸ್‌ ದರ್ಬಾರ್

ಪಲ್ಟಿ ಹೊಡೆದ ಕಾರಿನೊಳಗಿತ್ತು ಶಿವಮೊಗ್ಗ ನಾರಿಮಣಿಯರ ರಹಸ್ಯ
ಪ್ರಕರಣ ಮುಚ್ಚಲು ನಡೆಯಿತು ಲಕ್ಷ ಲಕ್ಷ ಡೀಲ್..!
ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬಂದ ದುಡ್ಡಿನ ಗಂಟು
ಯಾರ ಕೈ ಜೇಬಿಗೆ ಸೇರಿತ್ತು..!

ತಡರಾತ್ರಿ ಕೇಸ್ ಅಟೆಂಡ್ ಮಾಡಿ ಹರಿಬಿರಿಯಲ್ಲಿ ಪಂಚನಾಮೆ ಮಾಡಿ ಮುಗಿಸಿದ ದೊಣ್ಣೆನಾಯ್ಕರೊಬ್ಬರು ತನ್ನ ಮೇಲಾಧಿಕಾರಿಗೆ ಫೋನ್ ಹಾಯಿಸುತ್ತಾರೆ. ಅಲ್ಲಿಂದ ಮತ್ತೆ ಅವರು ತಮ್ಮ ಮೇಲಾಧಿಕಾರಿಗೆ ಕರೆ ಹಾಯಿಸಿ ಪ್ರಕರಣ ಮತ್ತು ನಶೆಯ ಕುರಿತು ಪೂರ್ಣ ವರದಿ ಸಲ್ಲಿಸಿದ್ದರು. ಈ ಹಂತದಲ್ಲೇ ರಾತ್ರಿಯೇ ಲಕ್ಷ ಲಕ್ಷ ರೂಪಾಯಿ ಗಂಟು ಕೂಡ ಶಿವಮೊಗ್ಗದ ಕಡೆಯಿಂದ ತೀರ್ಥಹಳ್ಳಿಗೆ ಬಂದು ಬೀಳುತ್ತದೆ. ಪ್ರಾಥಮಿಕ ಚಿಕಿತ್ಸೆ ಮುಗಿಯುತ್ತಿದ್ದಂತೆ ಕಾರು ಓಡಿಸುತ್ತಿದ್ದ ವೈದ್ಯರ ಪತ್ನಿ ಸಮೇತವಾಗಿ ನಾಲ್ವರನ್ನು ಶಿವಮೊಗ್ಗದ ತಮಗೆ ನಂಬಿಕಸ್ಥ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರದೃಷ್ಟಕ್ಕೆ ಕಾರಿನ ವಿಮೆ, ಡ್ರಗ್ಸ್‌, ಮಹಿಳೆಯರು ಇರಲಿಲ್ಲ ಎಂದು ಪ್ರಕರಣ ಮುಚ್ಚುವ ಸಲುವಾಗಿ ಕಾರು ಓಡಿಸುತ್ತಿದ್ದ ವೈದ್ಯರ ಪತ್ನಿ ಏಕಾಏಕಿ ಬದಲಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಸರ್ಕಾರಿ ದಾಖಲೆಗಳ ಪ್ರಕಾರ ಪ್ರಾಣಾಪಾಯದಿಂದ ಬಚಾವ್‌ ಆಗಿ ಕೇಸಿನಿಂದಲೂ ಪಾರಾಗಿದ್ದಾರೆ.

ಕೆಲವೊಂದು ದುರ್ಘಟನೆಗಳೇ ಹಾಗೇ… ಘಟನೆಯೊಳಗಿನ ರಹಸ್ಯವನ್ನು ಬಯಲು ಮಾಡಿಬಿಡುತ್ತದೆ. ಇಂತಹದ್ದೊಂದು ಪ್ರಕರಣ ತಾಲ್ಲೂಕಿನ ಬಾಣಂಕಿಯಲ್ಲಿ ನಡೆದ ಕಾರು ಅಪಘಾತದ ಘಟನೆ ರಹಸ್ಯವನ್ನು ಬಯಲುಗೊಳಿಸಿದೆ.

ಶಿವಮೊಗ್ಗದ ಪ್ರತಿಷ್ಠಿತ ಮಹಿಳೆಯರಿದ್ದ ಕಾರು ನೆಲಕ್ಕುರುಳುತ್ತಿದ್ದಂತೆ ಡ್ರಗ್ಸ್‌ ಮಾಫಿಯಾದ ಕರಾಳ ಮುಖವನ್ನು ಅನಾವರಣ ಮಾಡಿದೆ. ಕಾರಿನೊಳಗಿದ್ದ ಮಹಿಳೆಯರು ಬಾಣಂಕಿ ಸಮೀಪದ ಹೋಂಸ್ಟೇ ಒಂದರಲ್ಲಿ ಯಥೇಚ್ಚವಾಗಿ ಕುಡಿದು, ಡ್ರಗ್ಸ್‌ ಸೇವಿಸಿ ವಾಪಾಸ್ಸು ಶಿವಮೊಗ್ಗ ಸೇರುವ ಗಡಿಬಿಡಿಯಲ್ಲಿದ್ದಾಗ ಟಾಟಾ ಹ್ಯಾರಿಯರ್ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು ಹಳೆಯ ಕಥೆ.

ಆದರೆ… ಈ ದುರ್ಘಟನೆ ನೋವುಂಡವರು ಮನಸ್ಸಿಗೆ ಆದ ಗಾಯವನ್ನು ಸರ್ಜರಿ ಮಾಡಲು ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೇನು ಸಾಮಾನ್ಯ ಕುಳಗಳಲ್ಲ. ದಂತ ಮಹಾವಿದ್ಯಾಲಯದ ವೈದ್ಯರ ಪತ್ನಿ, ನೀರಾವರಿ ಇಲಾಖೆಯ ಪ್ರಮುಖ ತಾಂತ್ರಿಕ ಅಧಿಕಾರಿಣಿ ಹಾಗೂ ಇವರ ಸ್ನೇಹಿತೆಯರು ಸೇರಿದಂತೆ ಐವರು ಡ್ರಗ್ಸ್‌ ಸೇವಿಸಿ ಮತ್ತಿನಲ್ಲಿ ಇದ್ದಿದ್ದು ಈಗ ಗುಟ್ಟಾದ ಸಂಗತಿಯಾಗಿಲ್ಲ. ಗುಟ್ಟು ರಟ್ಟು ಮಾಡಬಾರದೆಂದು ಅನೇಕರು ಪಟ್ಟು ಬಿಡದೆ ಲಕ್ಷ ಲಕ್ಷ ಡೀಲ್‌ ಮಾಡಿರುವುದು ಗುಟ್ಟಲ್ಲ. ಈ ಘಟನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾದ ಪೊಲೀಸ್‌ ಇಲಾಖೆಯ ಕೆಲವು ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾದ ಡೀಲ್‌ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಗೃಹಸಚಿವರ ತವರು ಕ್ಷೇತ್ರದಲ್ಲಿ ಈ ಅಧಿಕಾರಿಗಳು ಯಾವುದೇ ಲಜ್ಜೆ ಇಲ್ಲದೆ ಡ್ರಗ್ಸ್‌ ಸೇವಿಸಿ ಮತ್ತಿನಲ್ಲಿ ಇದ್ದ ಮಹಿಳೆಯರ ಪ್ರಕರಣದಲ್ಲಿ ಹಣದ ತೆವಲಿಗೆ ಬಿದ್ದು ವ್ಯವಹಾರ ನಡೆಸಿರುವುದು ನಾಚಿಕೆಗೇಡಿನ ಪರಮಾವಧಿಯಂತಿದೆ.

ಸಹ್ಯಾದ್ರಿ ತಪ್ಪಲಿನ ಪ್ರದೇಶದ ಮಲೆವಾಸಿಗಳು ಸೌಮ್ಯ ಸ್ವಭಾವಕ್ಕೆ ಜನರು ಪ್ರಸಿದ್ದರು. ಇಂತಹ ಮಲೆನಾಡನ್ನು ಗಾಂಜಾ‌ಗಳ ತವರು ಎಂದು ಬಿಂಬಿಸಲು ಹೊರಟಿದ್ದ ಮತ್ತು ಒಂದಿಷ್ಟು ಕಡೆ ಗಾಂಜಾ ಇದೆ ಎಂಬ ಗುಮಾನಿ ಹರಡಿಸಿದ ಶಿವಮೊಗ್ಗ ಜಿಲ್ಲೆಯ ಅಧಿಕಾರಿ ವರ್ಗಗಳು ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗದ ಕಡೆಯಿಂದ ತೀರ್ಥಹಳ್ಳಿಗೆ ಆಗಮಿಸಿದ್ದ ಹೆಚ್ಚು ಕಾನ್ಸಂಟ್ರೇಟ್ ಡ್ರಗ್ಸ್ ವಾಹನ ತಡೆಯಲು ವಿಫಲವಾಗಿದ್ದೇಕೆ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಲಾಗದಂತಹ ಅಸಹಾಯಕ ಸ್ಥಿತಿಯಲ್ಲಿದೆ.

ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಹುನ್ನಾರಗಳನ್ನು ಮಾಡುವ ಉದ್ದೇಶದಿಂದ ಗಾಂಜಾ ಬೆಳೆಯುತ್ತಾರೆ. ಪೆಡ್ಲರ್ ಬೇಕಾದಷ್ಟು ಇದ್ದಾರೆ ಎಂಬ ಸುದ್ದಿಗಾಗಿ ಹಪಹಪಿಸಿ ವಿಫಲವಾಗಿದ್ದರು. ಕಡೆಗೆ ಸಿಗದಿದ್ದ ಕಾರಣಕ್ಕೆ ಕರ್ನಾಟಕದ ಮೂಲದವರು ಅಲ್ಲದ ಸಾಕಷ್ಟು ಜನರನ್ನು ಬಂಧಿಸಿ ಅವರ ಬಳಿ ಇಷ್ಟು ಕೆ.ಜಿ. ಗಾಂಜಾ ಸಿಕ್ಕಿದೆ ಎಂದು ಪ್ರಚಾರ ಪಡಿಸಿದ್ದು ಗುಟ್ಟಾಗಿ ಗುಟ್ಟಾಗಿ ಉಳಿದಿಲ್ಲ. ಇದೇ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲೇ ಗಾಂಜಾಕ್ಕಿಂತಲೂ ಮುಂದುವರೆದ ಭಾಗವಾದ ಡ್ರಗ್ಸ್ ಕರಾಳ ದಂಧೆ ದ್ವತದ್ವ ನಡೆದಾಗ ಜಾಣ ಕುರುಡರಂತೆ ವರ್ತಿಸುತ್ತಿದ್ದರು. ಯಾಕೆಂದರೆ ಇದರಲ್ಲಿ ಬಹುತೇಕ ಪ್ರತಿಷ್ಠಿತ ಕುಟುಂಬದವರು ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಅವರಿಗೆಲ್ಲ ಬಹುತೇಕ ರಿಯಾಯಿತಿ ಸಿಕ್ಕುತ್ತಿತ್ತು.

ಈಗ್ಗೆ ಎರಡು ಮೂರುದಿನಗಳ ಹಿಂದೆ ಮುತ್ತೂರು ಹೋಬಳಿಯ ಪ್ರಸಿದ್ಧಿ ಪಡೆದಿರುವ ಹೋಂಸ್ಟೇ ಒಂದರಲ್ಲಿ ರಂಪಾಟ ಎಬ್ಬಿಸಿದ್ದ ನಾರಿಮಣಿಯರ ಕಾರು ಬಾಣಂಕಿ ಸಮೀಪ ಭೀಕರ ಅಪಘಾತಕ್ಕೀಡಾದ ಘಟನೆಯನ್ನು ಮುಚ್ಚುವ ಪ್ರಯತ್ನ ನಡೆದಿದೆ. ಈ ಬಾಬ್ತು ಪೊಲೀಸ್‌ ಇಲಾಖೆಯ ಓರ್ವ ಅಧಿಕಾರಿಯೊಬ್ಬ 25 ಲಕ್ಷ ರೂಪಾಯಿ ಇಳಿಸಿ ಪ್ರಕರಣ ಮುಚ್ಚುವ ಸಂಚು ನಡೆಸಿದ್ದಾರೆ ಎಂಬ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಗೃಹಸಚಿವರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ ಸಚಿವರಿಗೆ ಕಳಂಕ ತರುವುದು ಗ್ಯಾರಂಟಿ.  

ನೀರು ಹಾಯಿಸುವ ಇಲಾಖೆ ಮುಖ್ಯಸ್ಥೆಯೂ ಭಾಗಿಯಾಗಿದ್ದು ನೀರು ಹಾಯಿಸುವ ಬದಲು ಡ್ರಗ್ಸ್ ಹಾಯಿಸಿದ್ದು ಬಹಿರಂಗಗೊಳ್ಳುತ್ತಿದೆ. ಇನ್ನುಳಿದ ಮೂವರು ಕೂಡ ಇವರಿಗೆ ಬಹಳ ಹತ್ತಿರದ ಪ್ರತಿಷ್ಠಿತ ಕುಟುಂಬದ ಸ್ತ್ರೀಶಕ್ತಿಯರು. ಹಾಗಾಗಿ ಈ ಅಪಘಾತ ಮಾನವೀಯ ನೆಲೆಗಟ್ಟಿನಲ್ಲಿ ಅಯ್ಯೋ ಛೇ ಹೀಗಾಗಬಾರದಿತ್ತು ಎಂಬ ನಿಟ್ಟುಸಿರುವ ಬಿಡುತ್ತಿದ್ದವರಿಗೆ ಇದೆಂತ ಅನ್ನಿಸಬಹುದು. ಡ್ರಗ್ಸ್ ಕಾರು ಅಪಘಾತ ಕೆಲವು ಪೊಲೀಸರಿಗೆ ಹಣದ ಗಂಟು ಹರಿದುಬರಲು ಅವಕಾಶ ಒದಗಿಸಿಕೊಟ್ಟಂತಿದೆ. ಟಾಟಾ ಹ್ಯಾರಿಯರ್ ಕಾರು ಇಲಾಖೆಗೆ ವರದಾನವಾಗಿ ಮಾರ್ಪಟ್ಟಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post