ಮೇಲಿನ ಕುರುವಳ್ಳಿ ಪಂಚಾಯಿತಿ ಎದುರು ನಾಳೆ ಅಹೋರಾತ್ರಿ ಪ್ರತಿಭಟನೆ

ಕಳೆದ 9 ತಿಂಗಳಿನಿಂದ ಅಧ್ಯಕ್ಷರು ಸಾಮಾನ್ಯ ಸಭೆ, ಗ್ರಾಮ ಸಭೆ ನಡೆಸುತ್ತಿಲ್ಲ
ಜನರ ಸಮಸ್ಯೆ ಕೇಳುವವರೇ ಇಲ್ಲದ ಅರಾಜಕತೆ
ಗುತ್ತಿಗೆ ಆಧರಿತ ಸಿಬ್ಬಂದಿಗೆ ಸಂಬಳ ನೀಡಿಲ್ಲ - ಗ್ರಾಮ ಹಿತರಕ್ಷಣಾ ವೇದಿಕೆ ಆರೋಪ

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಳೆದ ಮೇ ತಿಂಗಳಿನಿಂದ ಅಧ್ಯಕ್ಷತೆ ವಹಿಸಿಕೊಂಡ ನಂತರ ಯಾವುದೇ ರೀತಿಯ ಗ್ರಾಮ ಸಭೆ, ಸಾಮಾನ್ಯ ಸಭೆ, ಸೂಕ್ತ ಕಾಲದಲ್ಲಿ ನಡೆಸದೇ ಕರ್ತವ್ಯ ಲೋಪ ಎಸಗಿದ್ದಾರೆ. ಇವರ ಈ ಜನವಿರೋಧಿ ಧೋರಣೆಯಿಂದಲೇ 15ನೇ ಹಣಕಾಸು, ವರ್ಗ 1, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಮುಂತಾದ ಯಾವುದೇ ಕೆಲಸಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ನಿಯಮದನುಸಾರ ಸಾಮಾನ್ಯ ಸಭೆಯಲ್ಲಿ ಗ್ರಾಮದ ಅಭಿವೃದ್ದಿ ವಿಚಾರಗಳ ಕ್ರಿಯಾ ಯೋಜನೆಗಳು ಸಿದ್ದವಾಗುತ್ತಿಲ್ಲ. ಸಾರ್ವಜನಿಕ ಅರ್ಜಿಗಳು, ನ್ಯಾಯಸಮಿತಿ ವಿಚಾರಗಳು ಸಾರ್ವಜನಿಕರ ದಿನನಿತ್ಯದ ಸಮಸ್ಯೆಗಳಾದ ಬೀದಿ ದೀಪ ನಿರ್ವಹಣೆ, ಕಸ ವಿಲೇವಾರಿ, ಕುಡಿಯುವ ನೀರು ಸರಬರಾಜು ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಗ್ರಾಮಸಭೆ ನಡೆದಿರದ ಕಾರಣ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳಾದ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಫಲಾನುಭವಿಗಳ ಆಯ್ಕೆ ಕೂಡ ನಡೆದಿಲ್ಲ.

ಅಲ್ಲದೇ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಬಳವನ್ನು ಕೂಡ ಅಧ್ಯಕ್ಷರು ಚೆಕ್‌ಗೆ ಸಹಿ ಹಾಕದ ಕಾರಣ ನೀಡಲಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಅಧ್ಯಕ್ಷರ ನಿರ್ಲಕ್ಷ್ಯ ಮತ್ತು ಕೆಲವು ಹಿರಿಯ ಸದಸ್ಯರ ನಿಯಮಬಾಹಿರ ನಡವಳಿಕೆ ಕಾರಣವಾಗಿದೆ.

ಇದರ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದು ದಿನಾಂಕ: 14-02-2023ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಗ್ರಾಮ ಪಂಚಾಯಿತಿ ಎದುರು ಅಹೋರಾತ್ರಿ ಧರಣಿ ಮತ್ತು ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post