ಬಾಲಕೃಷ್ಣಮೂರ್ತಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ ಅತಿಥಿಗಳು

ಬಾಲಕೃಷ್ಣಮೂರ್ತಿ ಅಪಾರ ಸಾರ್ವಜನಿಕ ಕಾಳಜಿಯ ಸರ್ಕಾರಿ ನೌಕರರಾಗಿದ್ದರು

ಸರ್ಕಾರಿ ಅಧಿಕಾರಿಯಾಗಿ ಹಾಗೂ ಸಹಕಾರ ಸಂಘದ ಕಾರ್ಯದರ್ಶಿಗಳಾಗಿ ಸಾಕಷ್ಟು ಮಂದಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಅಂಚೆ ಇಲಾಖೆಯಲ್ಲಿ ಸುಧೀರ್ಘ ಅವಧಿಗೆ ಕಾರ್ಯನಿರ್ವಹಿಸಿ ಸಂಕದೊಳೆಯಂತಹ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸರ್ಕಾರ ವಿವಿಧ ಯೋಜನೆಯಡಿ 5 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸಲು ಮುಖ್ಯ ಕಾರಣರಾಗಿರುವುದು ಬಾಲಕೃಷ್ಣ ಶೆಟ್ಟಿ ಅವರ ಜನಪ್ರಿಯತೆ ಮತ್ತು ಕಾರ್ಯ ತತ್ಪರತೆಗೆ ಸಾಕ್ಷಿ ಎಂದು ಸಂಕದೊಳೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕೆ.ಪ್ರಭಾಕರ್‌ ಹೇಳಿದರು.

ಸಂಕದೊಳೆ ಸೌಹಾರ್ದ ಸಹಕಾರಿ ಆವರಣದಲ್ಲಿ ಅಂಚೆ ಇಲಾಖೆ ಸೇವೆಯಿಂದ ಇತ್ತೀಚೆಗಷ್ಟೇ ನಿವೃತ್ತರಾದ ಬಾಲಕೃಷ್ಣ ಮೂರ್ತಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಅಂಚೆ ಇಲಾಖೆ ಮಾತ್ರವಲ್ಲದೆ ಸಂಕದೊಳೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾಗಿ ಆರಂಭದಲ್ಲಿ 10 ಲೀಟರ್‌ ಹಾಲಿನಿಂದ ಸೇವೆಯಿಂದ ನಿವೃತ್ತರಾಗುವ ಹೊತ್ತಿಗೆ ಎರಡೂವರೆ ಸಾವಿರ ಲೀಟರ್‌ ಸಂಗ್ರಹಿಸುವ ಮಟ್ಟಕ್ಕೆ ಸಂಘವನ್ನು ಬೆಳೆಸಿರುವುದು ಅವರ ಸಾರ್ವಜನಿಕ ಕಾಳಜಿಯನ್ನು ಬಿಂಬಿಸುತ್ತದೆ ಎಂದವರು ಶ್ಲಾಘಿಸಿದರು.

ನೆರಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ. ವಾದಿರಾಜ್‌ ಮಾತನಾಡಿ ಬಾಲಕೃಷ್ಣ ಇಡೀ ಗ್ರಾಮದಲ್ಲಿ ತಮ್ಮ ದಕ್ಷತೆಯಿಂದಲೇ ಜನಪ್ರಿಯತೆಯನ್ನು ಗಳಿಸಿದ್ದಾರೆ. ಮಾತ್ರವಲ್ಲದೇ ಇಡೀ ಗ್ರಾಮದಲ್ಲಿ ಯಾವುದೇ ಸಮಾಜಮುಖಿ ಕ್ರೀಯಾಶೀಲ ಕೆಲಸಗಳು ನಡೆಯಬೇಕು ಎಂದರೆ ಪ್ರತಿಯೊಬ್ಬರು ಅವರ ಸಲಹೆ ಸೂಚನೆಯನ್ನು ಪಾಲಿಸುತ್ತಿದ್ದರು. ಸಾಂಸ್ಕೃತಿಕವಾಗಿ ಕೂಡ ಅವರು ಗ್ರಾಮವನ್ನು ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದರು.

ಟಿಎಪಿಸಿಎಂಎಸ್‌ ಅಧ್ಯಕ್ಷ ಹಿರಿಯ ಸಹಕಾರಿ ನಾಗರಾಜ ಶೆಟ್ಟಿ ಮಾತನಾಡಿ, ಬಾಲಕೃಷ್ಣಮೂರ್ತಿ ಏಕಕಾಲದಲ್ಲಿ ಅಂಚೆ ಇಲಾಖೆ ಮತ್ತು ಹಾಲು ಉತ್ಪಾದಕ ಸಂಘದ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ಜನಪರವಾಗಿ ದುಡಿದಿದ್ದಾರೆ. ಎಷ್ಟೇ ಚಿಕ್ಕ ಕೆಲಸವಾದರೂ ತಪ್ಪಿರದಂತೆ ಸಹನೆಯಿಂದ ಕಾರ್ಯ ನಿರ್ವಹಿಸಿದ್ದರು. ಅವರ ಸಾರ್ವಜನಿಕ ಕಾಳಜಿ ಅಂಚೆ ಇಲಾಖೆ ಮೂಲಕ ಸಾಮಾನ್ಯ ಜನರಲ್ಲಿ ಉಳಿತಾಯ, ವಿಮೆ ಪ್ರಜ್ಞೆಯನ್ನು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಹೈನುಗಾರಿಕೆಯನ್ನು ಈ ಭಾಗದಲ್ಲಿ ಜನಪ್ರಿಯಗೊಳಿಸಲು ಮಹತ್ವದ ಕೊಡುಗೆ ನೀಡಿದೆ ಎಂದರು.

ಸಂಕದೊಳೆ ಸೌಹಾರ್ದ ಸಹಕಾರಿ ಅಧ್ಯಕ್ಷ ನಾಗೇಶ್‌ ಮಾತನಾಡಿ, ಬಾಲಕೃಷ್ಣಮೂರ್ತಿ ಇಡೀ ಗ್ರಾಮವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಯಲು ಪ್ರಮುಖರು. ಸಂಕದೊಳೆಯಲ್ಲಿ ತಾಲ್ಲೂಕು ಮಟ್ಟದ ಸೌಹಾರ್ದ ಸಹಕಾರಿಯನ್ನು ಸ್ಥಾಪಿಸಲು ಅವರ ಸಲಹೆ ಸೂಚನೆ ಪ್ರಮುಖವಾಗಿತ್ತು. ಇದಲ್ಲದೇ ಗ್ರಾಮಸ್ಥರಲ್ಲಿ ಯಾರೇ ಆಪತ್ಕಾಲದಲ್ಲಿ ಸಣ್ಣಪುಟ್ಟ ಧನ ಸಹಾಯ ಕೇಳಿದಾಗ ಯಾರಿಗೂ ಅವರು ಇಲ್ಲ ಎಂದವರಲ್ಲ. ಇದಲ್ಲದೇ ಅನಕ್ಷರಸ್ತರು ಹಿರಿಯ ನಾಗರೀಕರು ಅಂಚೆ ಕಚೇರಿಗೆ ಬಂದಾಗ ತಾವೇ ಖುದ್ದಾಗಿ ಅರ್ಜಿ ತುಂಬುವುದರಿಂದ ಹಿಡಿದು ಮನೆಗೆ ಕಳುಹಿಸಿಕೊಡುವ ವರೆಗೆ ಕಾಳಜಿ ವಹಿಸುತ್ತಿದ್ದರು. ಅವರ ವ್ಯಕ್ತಿತ್ವ ಯುವ ಪೀಳಿಗೆ ಮಾದರಿ ಎಂದರು.

ಸಮಾರಂಭದಲ್ಲಿ ನೆರಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸವಿತಾ ಉಮೇಶ್‌, ಶ್ರೀನಿವಾಸ್‌, ಡಾ. ನಾರಾಯಣ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಕವಿತಾ ನೆರವೇರಿಸಿದರು. ಸ್ವಾಗತವನ್ನು ಕೆ.ಎಸ್.‌ ದೇವಪ್ಪ, ಹಾಗೂ ಪ್ರಸ್ತಾಪವನ್ನು ನಾಗರಾಜ್‌ ಕಾಮತ್‌ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿಧಾನಸಭೆಯ ಮಾಜಿ ಉಪಕಾರ್ಯದರ್ಶಿ ಸಂಕದೊಳೆ ಪ್ರಸಾದ್‌ ನೆರವೇರಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post