ತೀರ್ಥಹಳ್ಳಿಗೆ ಆನೆ ಬಂದಿದ್ದು ಹೇಗೆ…? ಎಲ್ಲೋಯ್ತು..!

ಆನೆ ಬಂತೊಂದಾನೆ... ಯಾವೂರಾನೆ… ಅರಣ್ಯ ಇಲಾಖೆ ಆನೆ...?
 ಕಿಮ್ಮನೆ ಕಾಲದಲ್ಲಿ ಆಗುಂಬೆಯಲ್ಲಿ ಆನೆ... 
ಆರಗ ಕಾಲದಲ್ಲಿ ತೀರ್ಥಹಳ್ಳಿ ಪೇಟೆಯಲ್ಲೇ ಆನೆ...

ಆಗುಂಬೆಯ ಒಂಟಿ ಸಲಗ ಹಿಡಿಯಲು ಕಿಮ್ಮನೆ ರತ್ನಾಕರ್ ವಿಫಲರಾಗಿದ್ದಾರೆ ಎಂದು 2018ರಲ್ಲಿ ಆಗುಂಬೆಯಿಂದ ತೀರ್ಥಹಳ್ಳಿಯವರಗೆ ಅಂದಿನ ಮಾಜಿ ಶಾಸಕ, ಹಾಲಿ ಗೃಹಸಚಿವ ಆರಗ ಜ್ಞಾನೇಂದ್ರ ಪಾದಾಯಾತ್ರೆ ಮಾಡಿದ್ರು. ಆರಗ ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೇನು...? 2022ರಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗುಂಬೆಯಿಂದ ಮೇಗರವಳ್ಳಿಯವರೆಗೆ ಅದೇ ಆನೆ ಹಿಡಿಯಬೇಕೆಂದು ಪಾದಯಾತ್ರೆ ಮಾಡಿದ್ರು. ಅಧಿಕಾರದಲ್ಲಿ ಇದ್ದಾಗ ಮಾಡದ ಕೆಲಸ ಈಗ ನೆ‌ನಪಾಗಿದ್ದು ಯಾಕೆ...? ಅಧಿಕಾರದಲ್ಲಿ ಜನಸಾಮಾನ್ಯರು ಕಾಣಿಸಲ್ವೇ... ಅಧಿಕಾರದಲ್ಲಿ ಇಲ್ಲದಿದ್ದಾಗ ಮಾಡಿದ ಹೋರಾಟ ಬಂದಮೇಲೆ ಯಾಕಿಲ್ಲ. ಎರಡು ಜೋಡೆತ್ತುಗಳು ಒಂದೇ ಗಾಡಿ ಚಲಾಯಿಸುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಲಾಂ ಹಾಕುತ್ತಿರುವುದು ಈಗ ತೀರ್ಥಹಳ್ಳಿ ಕ್ಷೇತ್ರಕ್ಕೆ ಗೊತ್ತಾಗುತ್ತಿದೆ. ಇದೀಗ ಆನೆ ತೀರ್ಥಹಳ್ಳಿ ಪಟ್ಟಣಕ್ಕೆ ಬಂದಿದ್ದರು ಜೋಡೆತ್ತುಗಳು ಮೌನ ವಹಿಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಮೂಲಕ ದಾಖಲೆಗಳು ಲಭ್ಯವಾಗಿದ್ದರಿಂದಲೇ ತುಟಿ ಬಿಚ್ಚದಂತಾಗಿದೆ.
ಸಾಂದಾರ್ಭಿಕ ಚಿತ್ರ

ತೀರ್ಥಹಳ್ಳಿ ಪಟ್ಟಣದ ಹೃದಯ ಭಾಗಕ್ಕೆ ಒಂದು ವಾರದ ಹಿಂದೆ 10 ವರ್ಷ ಪ್ರಾಯದ ಆನೆಯೊಂದು ಧಾವಿಸಿ ರಾಮಕೊಂಡದಲ್ಲಿ ತೀರ್ಥಸ್ನಾನ ಮಾಡಿಕೊಂಡು ತನ್ನ ಪಾಡಿಗೆ ತಾನು ಹಿಂದಿರುಗಿದೆ. ಸದ್ಯ ದೇವಂಗಿಯ ಕಿರು ಅರಣ್ಯ ಪ್ರದೇಶದಲ್ಲಿ ಇದ್ದರು ಕೂಡ ಯಾರಿಗೂ ಅದು ಕಾಣಿಸುತ್ತಿಲ್ಲ ಎಂಬ ಗುಮ್ಮ ಹರಿದಾಡುತ್ತಿದೆ.

ಅಷ್ಟಕ್ಕು ಆನೆ ಭದ್ರಾ ಅಭಯಾರಣ್ಯ ಪ್ರದೇಶದ ಆನೆಯ ಹಿಂಡುಗಳ ಮಧ್ಯೆಯಿಂದ ತಪ್ಪಿಸಿಕೊಂಡು ಬಂದಿದೆ ಎಂಬುದು ಅರಣ್ಯ ಇಲಾಖೆಯ ಅಂಬೋಣ. ಆದರೆ ಅದು ಕಾಣಿಸಿಕೊಂಡಿದ್ದು ಮಾತ್ರ ತೀರ್ಥಹಳ್ಳಿ ತಾಲ್ಲೂಕಿನ ಕೆಳಕೆರೆಯ ಸಮೀಪ. ಅಂದರೆ ಭದ್ರಾ ಅಭಯಾರಣ್ಯ ಇರುವ ಸ್ಥಳದಿಂದ (ಮುತ್ತಿನಕೊಪ್ಪ) ಸುಮಾರು 50 ಕಿಲೋ ಮೀಟರ್‌ ದೂರ ಇರುವ ಪ್ರದೇಶ. ಅದಕ್ಕು ಮೊದಲು ಆನೆಯನ್ನು ಕಂಡವರ ಉದಾಹರಣೆಗಳಿಲ್ಲ. ಹೊದ್ದೂರು ಭಾಗದಲ್ಲಿ ಕಾಣಿಸಿಕೊಂಡಿದೆ ಎಂಬ ವಾದ ಹುಟ್ಟಿದ್ದು ಕುರುವಳ್ಳಿಯಲ್ಲಿ ಕಾಣಿಸಿಕೊಂಡ ವರದಿಗಳು ಪ್ರಕಟವಾದ ನಂತರ. 50 ಕಿಲೋ ಮೀಟರ್‌ನಷ್ಟು ಪ್ರದೇಶದ ಕಾಡುಗಳಲ್ಲಿ ಆನೆ ಕಣ್ಣಾಮುಚ್ಚಾಲೆ ಆಟ ಆಡಿಕೊಂಡು ಬಂದಿದೆ ಎಂದರೆ ನಂಬುವ ಮಾತನಲ್ಲ ಆದರೆ…! ನಂಬಲೇ ಬೇಕು.

ಕುರುವಳ್ಳಿಯ ನಾಗರಕಟ್ಟೆಯ ಸಮೀಪ ಕಾಣಿಸಿಕೊಂಡ ಬಳಿಕ ಒಂದಿಷ್ಟು ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ತಕ್ಷಣ ಗೃಹಸಚಿವ ಆರಗ ಜ್ಞಾನೇಂದ್ರ ಆನೆ ಹಿಡಿಸುವುದಾಗಿ ಘೋಷಣೆ ಮಾಡಿದರು ಆದರೆ ಪರಿಸ್ಥಿತಿ ಭಿನ್ನವಾಗಿತ್ತು. ಆನೆ ಹಿಡಿಯುವುದಾದರು ಹೇಗೆ..? ನೇರವಾಗಿ ಅರಣ್ಯ ಸಿಬ್ಬಂದಿಗಳು ಹಿಡಿಯಲು ಸಾಧ್ಯವೇ..? ಹಾಗೆ ಮಾಡಿದರೆ ಅರಣ್ಯ ಇಲಾಖೆಯ ಮೇಲೆಯೇ ಸಾವಿರಾರು ದೂರುಗಳು, ಪ್ರಾಣಿದಯಾ ಸಂಘ ಮುಂತಾದವು ಚಿಗುರೊಡೆಯುತ್ತಿತ್ತು. ಹಾಗಾಗಿ ಆರಂಭದಲ್ಲಿ ಗಲಿಬಿಲಿಗೊಂಡ ನಾಗರೀಕರಿಗೆ ಆನೆ ಹಿಡಿದು ದಂಡು ಕಡಿಯುತ್ತೇವೆ ಎಂದು ಹೇಳಿ ಜಾರಿಕೊಂಡಿದ್ದರು. ಸಂಜೆಯಾದರು ಸಕ್ರೇಬೈಲಿನಿಂದ ಆನೆ ಹಿಡಿಯುವ ಪಡೆ ಬರಲೇ ಇಲ್ಲ. ಮಾವುತರನ್ನು ಒಂದೇ ದಿನದ ಮಟ್ಟಿಗೆ ಆಹ್ವಾನಿಸಿ ನಂತರ ಕೈಬಿಟ್ಟರು.

ಅಷ್ಟಕ್ಕೂ ಆನೆ ಲೂಟಿ ಮಾಡಲಿಲ್ಲ ಎಂಬುದೇ ದೊಡ್ಡ ಪ್ರಶ್ನೆ. ಇನ್ನು ಮುಂದಕ್ಕೆ ಹೋದರೆ ಆನೆ ಸಂಘ ಜೀವಿ…! ಒಂದು ಆನೆ ತಪ್ಪಿಸಿಕೊಂಡರೆ ಅದರ ಹಿಂದೆ ಹಿಂಡು ಆಗಮಿಸುತ್ತದೆ. ಒಂದುವೇಳೆ ಆನೆ ಗುಂಪಿನಿಂದ ಜಗಳ ಮಾಡಿದರು ತಾನು ಬಂದ ದಾರಿಯನ್ನು ಎಂದಿಗೂ ಮರೆಯುವುದಿಲ್ಲ ಎಂಬುದು ನೆನಪಿಟ್ಟುಕೊಳ್ಳಬೇಕು. ನಿಮಗೆ ಗೊತ್ತಿರಬಹುದು “ಆನೆ ನಡೆದಿದ್ದೆ ದಾರಿ” ಎಂಬ ಉಕ್ತಿ ಇದೆ. ಸಾವಿರಾರು ಕಿಲೋ ಮೀಟರ್‌ ಚಲಿಸುವ ಆನೆ ಒಂಟಿಯಾಗಿ ಕಾಡು ಬಿಡುವುದಿಲ್ಲ. ಬಿಟ್ಟರೆ ತನ್ನ ಗುಂಪನ್ನು ತಾನೆ ಹುಡಿಕಿಕೊಂಡು ಹೋಗುವ ಜ್ಞಾನಶಕ್ತ ಅವಕ್ಕೆ ಇದೆ. ಒಂದು ಗುಂಪಿನಲ್ಲಿ ಓರ್ವ ಯಜಮಾನನನ್ನು ಹೊಂದಿರುವ ಆನೆ ಆತನ ಆಜ್ಞಾನುಸಾರ ನಡೆದುಕೊಳ್ಳುತ್ತದೆ. ಆನೆಯು ಸಂತಾನೋತ್ಪತ್ತಿ ಸಂದರ್ಭದಲ್ಲಿ ಹಲ್ಲೆ ಹರಿಯುವುದನ್ನು ಕಾಣಬಹುದು. ಹಾರ್ಮೋನ್‌ ಬದಲಾವಣೆಯಾದಾಗ ಮರಗಳನ್ನು ಕೆಡುವುದು, ಲೂಟಿ ಪ್ರವೃತ್ತಿಯಲ್ಲಿ ತೊಡಗಿರುತ್ತದೆ.

ಇಂತಹ ಯಾವ ಲಕ್ಷಣಗಳು ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ನಡೆದಿಲ್ಲ. ಗಂಡಾನೆ ಹೋಗುವ ಮಾರ್ಗಗಳನ್ನು ಮಾತ್ರ ಸರಿಪಡಿಸಿಕೊಂಡು ಹೋಗಿದೆ ಮತ್ತು ಇದು ಆನೆಯ ಪ್ರಮುಖ ಹವ್ಯಾಸ. ಕೆಳಕೆರೆಯಲ್ಲಿ ಮೊದಲು ಕಾಣಿಸಿಕೊಂಡ ಆನೆ ಕುರುವಳ್ಳಿ, ವಿಠಲನಗರ, ಬಳಗಟ್ಟೆ, ದೇವಂಗಿ ಜೋಗುಡ್ಡ ಸೇರಿದೆ ಅಷ್ಟೇ. ಪೂರ್ವವೂ ಇಲ್ಲ ಅಂತ್ಯವೂ ಇಲ್ಲ ಎಂಬ ಆನೆ ಕಥೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ದೂರದ ಊರಿನಿಂದ ಬಂದ ಆನೆಯ ಗುಂಪು ಬರಲಿಲ್ಲ. ಅದನ್ನು ಹುಡುಕುವ ಪ್ರಯತ್ನವನ್ನು ಈ ಒಂಟಿ ಸಲಗವೂ ಮಾಡಿಲ್ಲ ಏಕೆ ಎಂಬ ಪ್ರಶ್ನೆ ಮೂಡುವಂತಾಗಿದೆ.

ತೀರ್ಥಹಳ್ಳಿಯಲ್ಲಿ ಆನೆಪಥ ಕಂಡು ಹಿಡಿಯುವ ಹುನ್ನಾರವೇ…?

ಆನೆ ಆಹಾರಕ್ಕಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವ ಜೀವಿ. ಆದರೆ ಗುಂಪು ಬಿಡುವುದಿಲ್ಲ. ಶತಮಾನಗಳ ಹಿಂದಿನ ಆನೆಯ ಓಡಾಟವನ್ನು ಗುರುತಿಸಿ ಅದನ್ನು ಅರಣ್ಯ ಇಲಾಖೆ ದಾಖಲಿಸುವ ಪ್ರಯತ್ನ ಬಹಳ ವರ್ಷಗಳಿಂದಲೂ ನಡೆಸಿಕೊಂಡು ಬಂದಿದೆ. ಅದರ ಬಗ್ಗೆ ಸವಿಸ್ತಾರವಾಗಿ ಭಾರತದ ಅರಣ್ಯ ಸಚಿವಾಲಯಕ್ಕೆ ವರದಿಗಳನ್ನು ಕಾಲಕಾಲಕ್ಕೆ ಒದಗಿಸಿದೆ. ದಾಖಲೆಗಳ ಪ್ರಕಾರ ಆನೆಯ ಇರುವಿಕೆಯ ಬಗ್ಗೆ ವರದಿಗಳನ್ನು ನೀಡಿದ್ದ ಇಲಾಖೆಗೆ ಅದಕ್ಕಾಗಿ ಸಾಕ್ಷಿಗಳನ್ನು ಸಲ್ಲಿಸುವ ಜವಾಬ್ದಾರಿಯೂ ಇದೆ. ಅಂತಹ ಸನ್ನಿವೇಶಗಳು ಎದುರಾಗದಿರಲಿ ಎಂಬ ಉದ್ದೇಶದಿಂದ ಮಹತ್ವದ ಸಾಕ್ಷಿಗಳ ಕಲೆ ಹಾಕಲಾಗುತ್ತಿದೆ ಎಂಬ ಅನುಮಾನ ದೃಢವಾಗುತ್ತಿದೆ…? ಅಷ್ಟು ದೊಡ್ಡ ಆನೆ ಎಲ್ಲಿಂದ ಬಂತು ಎಲ್ಲಿಗೆ ಹೋಯ್ತು ಎಂಬ ಪ್ರಾಥಮಿಕ ಮಾಹಿತಿ ಇಲ್ಲದಿರುವುದು ಹಾಸ್ಯಾಸ್ಪದವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆನೆ ಕಾರಿಡಾರ್‌ ಯೋಜನೆ ಜಾರಿಯಲ್ಲಿದೆ. ತೀರ್ಥಹಳ್ಳಿಗೂ ವಿಸ್ತರಿಸುವ ಹುನ್ನಾರ ನಡೆಯುತ್ತಿದೆಯೇ ಎಂಬ ಗುಸುಗುಸು ಅಲ್ಲಲ್ಲಿ ಆರಂಭವಾಗಿದೆ.

ಸಾಕಿದ ಆನೆಯೇ…?

ಗುಂಪು ಆಗಮಿಸದ ಹಿನ್ನಲೆಯಲ್ಲಿ ಇದೊಂದು ಸಾಕಿದ ಆನೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಆನೆಯ ಚಲನವಲನ ಕಂಡು ಹಿಡಿಯಲು ಟ್ರಾಕರ್‌ ಬಳಸಿಕೊಂಡಿದೆಯೇ…? ಅಥವಾ ಅದರ ಹಿಂದೆ ಸಾಕಿರುವ, ಅಥವಾ ಪಳಗಿಸಿರುವ ಮಾವುತನ ಮೂಲಕ ಆನೆಯ ಸಂಚಾರದ ನಿಯಂತ್ರಣ ಹೇರಲಾಗುತ್ತಿದೆಯೇ ಎಂಬ ಆರೋಪಗಳು ಕೇಳಿ ಬಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post