ಜನಸಾಮಾನ್ಯರಿಗೆ ಸಿಗದ ತಹಶೀಲ್ದಾರ್‌

ಸರ್ಕಾರಿ ಕೆಲಸದ ಅವಧಿಯಲ್ಲಿ ಸಭೆ
ಜಾಪು, ಹಮ್ಮುಗಳ ಮಧ್ಯೆ ಜನಸಾಮಾನ್ಯರು ಕಂಗಾಲು
ಗೃಹಸಚಿವರೇ ನಿಮ್ಮ ಕ್ಷೇತ್ರದ ತಹಶೀಲ್ದಾರ್‌ ಆಡಳಿತದ ಕಥೆ ಏನ್‌ ಗೊತ್ತಾ…!
ಜ್ಞಾನೇಂದ್ರವರೇ ನಿಮ್ಮ ಕಥೆ ಸಾಕು... ಜನಸಾಮಾನ್ಯರ ವ್ಯಥೆ ಕೇಳಿ...

ರಾಜ್ಯದ ಘನವೆತ್ತ ಗೃಹಸಚಿವರು, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರ ಸ್ವಕ್ಷೇತ್ರದಲ್ಲೇ ಯಾವ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಜವಾಬ್ದಾರಿ ಇದ್ದರೆ ಮೊದಲು ತಾಲ್ಲೂಕು ಆಡಳಿತ ಸರಿ ಮಾಡಬೇಕು. ಗೃಹಸಚಿವರು ಕೇವಲ ಕಥೆ ಹೇಳಿಕೊಂಡು ಸಭೆ ನಡೆಸುತ್ತಿದ್ದರೆ ಪ್ರಯೋಜನ ಇಲ್ಲ. ನಿಮ್ಮ ಪ್ರಾಮಾಣಿಕತೆ, ನೈತಿಕತೆ ಆಡಳಿತದ ಮೂಲಕ ತೋರಿಸಬೇಕಿದೆ. ನಾನು ಬಡವ, ಅಬಿವೃದ್ಧಿಗೆ ಕೋಟಿ ತಂದಿದ್ದೇನೆ ಎಂದು ಹೇಳಿಕೊಂಡರೆ ಸಾಕಾಗುವುದಿಲ್ಲ. ಮೊದಲು ತಾಲ್ಲೂಕು ಆಡಳಿತ ಸುಧಾರಣೆಗೆ ತನ್ನಿ. ಜಾಪು ಮಾಡುವವರನ್ನು ನಂಬಿ ಭಾಷಣ ಬಿಗಿಯುತ್ತಿದ್ದರೆ ಜನಸಾಮಾನ್ಯರ ಕಷ್ಟ ಪರಿಹಾರ ಆಗುವುದಿಲ್ಲ.

ಕಾನೂನಿನ ಕುಣಿಕೆಯಲ್ಲಿ ತೀರ್ಥಹಳ್ಳಿಯ ಜನತೆ ಸಿಲುಕಿಕೊಂಡಿದ್ದು ಅದಕ್ಕೆ ಪರಿಹಾರ ನೀಡುವ ಜನಪರ ಆಡಳಿತದಾರರ ಸಂಖ್ಯೆ ಕ್ಷೀಣಿಸುತ್ತಿದೆ. ಬಡವರ ಪ್ರತಿಯೊಂದು ಕೆಲಸಗಳು ಕಾನೂನಿನ ಅಡಿಯಲ್ಲಿ ನಡೆಯುತ್ತಿದ್ದರೆ ಕಾನೂನು ಹಂಗಿಲ್ಲದವರ ಕೆಲಸಗಳು ಹಿಂಭಾಗಿಲಿನಲ್ಲಿ ಸುಗಮವಾಗುತ್ತಿರುವುದು ಗುಟ್ಟಾದ ವಿಷಯವೇನಲ್ಲ. ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿನಿತ್ಯ ಅಲೆದರು ಬಡವರು, ಆರ್ಥಿಕವಾಗಿ ಹಿಂದುಳಿದವರ ಕಡತ ಮೂಲೆ ಸೇರುತ್ತಿದೆ.

ಇಂತಹ ಪ್ರಕರಣಕ್ಕೆ ಸಾಕ್ಷಿಯಾಗಿ ತೀರ್ಥಹಳ್ಳಿ ತಾಲ್ಲೂಕು ಆಡಳಿತ ನಿಂತಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ತಹಶೀಲ್ದಾರ್ ಗಣರಾಜ್ಯೋತ್ಸವ ಕುರಿತು ಸಭೆ ನಡೆಸಿದ್ದಾರೆ. ಜನಸಾಮಾನ್ಯರ ಕೆಲಸಗಳು ಆಗಲೇ ಬಾರದು ಎಂದು ಪಣ ತೊಟ್ಟಿರುವ ಈಚೆಗಿನ ಅಧಿಕಾರಿಗಳ ಬೇಜಾಬ್ದಾರಿಯ ವರ್ತನೆ ಪ್ರಜಾಪ್ರಭುತ್ವದ ಹಾದಿ ತಪ್ಪಿದಂತಿದೆ. ಈ ಸಭೆ ಅವಧಿಯಲ್ಲಿ ನೂರಾರು ಮಂದಿ ತಮ್ಮ ಕೆಲಸಕ್ಕಾಗಿ ತಾಲ್ಲೂಕು ಕಚೇರಿಯಲ್ಲಿ ಕಾದು ಕುಳಿತರು ಪ್ರಯೋಜನವಾಗಿಲ್ಲ. ತಹಶೀಲ್ದಾರ್‌ ವಿವೇಚನಾ ರಹಿತ ಸಭೆಯಿಂದಾಗಿ ನಾಗರೀಕರ ಸಮಸ್ಯೆಗಳನ್ನು ಆಲಿಸದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮಧ್ಯಾಹ್ನದ ಮೇಲೆ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆತರು ಸಾಕಷ್ಟು ಮಂದಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆ ಸೇರಿದರು.

ತಹಶೀಲ್ದಾರರ ಹಸಿಬಿಸಿ, ಎಳಸು, ಎಳಸಾದ ಆಡಳಿತ ನಿರ್ವಹಣೆಯಿಂದ ದಿನನಿತ್ಯ ನೂರಾರು ಜನರು ಸರ್ಕಾರಿ ಸೌಲಭ್ಯ ಸಿಗದೆ ಪರದಾಡುತ್ತಿದ್ದಾರೆ. ಗೃಹಸಚಿವ ಆರಗ ಜ್ಞಾನೇಂದ್ರರ ಆಡಳಿತ ಅವಧಿಯಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವವರ ಸಂಖ್ಯೆ ಹೆಚ್ಚಿದಂತಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರಿಲ್ಲದೆ ಹಾದಿ ತಪ್ಪಿರುವ ಆಡಳಿತ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರ ಮಾತುಗಳಿಗೂ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಮಿತಿ ಮೀರಿದ ಆಧಿಕಾರದ ದರ್ಪದಿಂದ ಆಡಳಿತ ವ್ಯವಸ್ಥೆ ದಿನನಿತ್ಯ ಹದಗೆಡುವಂತಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post