ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ

ಮನನೊಂದು ಮಹಿಳೆಯಿಂದ ಸರ್ಕಾರಿ ಹುದ್ದೆಗೆ ರಾಜೀನಾಮೆ
 ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಮಹಿಳೆಯರಿಗಿಲ್ಲವೇ ಭದ್ರತೆ 
ಗೃಹಸಚಿವರೇ ನಿಮ್ಮ ಕ್ಷೇತ್ರದಲ್ಲಿ ಏನೇಲ್ಲ ನಡೆಯುತ್ತೇ ನಿಮಗೆ ಗೊತ್ತಾ...
 ತಹಶೀಲ್ದಾರ್ ಆಟಕುಂಟು ಲೆಕ್ಕಕಿಲ್ಲ...! ತಹಶೀಲ್ದಾರ್ರು ಬರೀ ಜಾಪು 


ಗೃಹಸಚಿವರೇ ನಿಮ್ಮ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಏನೇನೆಲ್ಲ ನಡೆದಿದೆ. ನಡೆಯುತ್ತಿದೆ ಎಂಬುದರ ಬಗ್ಗೆ ಕಿಂಚಿತ್ತು ಮಾಹಿತಿ ಇದ್ದಂತಿಲ್ಲ. ಶಾಸಕರಾಗಿದ್ದಾಗ ಪ್ರತಿಯೊಂದು ವಿಷಯದ ಮಾಹಿತಿ ಪಡೆಯುತ್ತಿದ್ದ ನಿಮ್ಮ ಕರ್ತವ್ಯ ಪ್ರಜ್ಞೆ ಈಗ ಕಾಣಿಸುತ್ತಿಲ್ಲ‌. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ವಿಲೇವಾರಿ ಆಗದ ಕಡತಗಳು ಮೂಲೆ ಸರಿಯುತ್ತಿವೆ. ಕಡತ ವಿಲೇವಾರಿ ಜವಾಬ್ದಾರಿ ಹೊತ್ತ ಸಿಬ್ಬಂದಿಗಳು ಮನೆ ಸೇರುತ್ತಿದ್ದಾರೆ. ಹೊಸದಾಗಿ ಆಗಮಿಸಿದ ಯುವ ಉತ್ಸಾಹಿ ತಹಶೀಲ್ದಾರ್ ಆಡಳಿತದ ಕಲ್ಪನೆಯಿಲ್ಲದೆ ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಯಾವೊಬ್ಬ ಜನಸಾಮಾನ್ಯರ ಕೆಲಸಗಳು ನಡೆಯದೆ ತಿಂಗಳುಗಳೇ ಸರಿಯುತ್ತಿವೆ.

 ತಹಶೀಲ್ದಾರ್ರು ಬರೀ ಜಾಪು...

ಮೂಗಿನ ನೇರಕ್ಕೆ ಕಾನೂನುಗಳನ್ನು ಪಠಿಸುವ ತೀರ್ಥಹಳ್ಳಿ ತಹಶೀಲ್ದಾರ್ ಆಡಳಿತ ವಿಫಲವಾಗುತ್ತಿದೆ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ. ಕಾನೂನು ಹೆಸರಿನಲ್ಲಿ ಜನಸಾಮಾನ್ಯರ‌ ಕಿಂಚಿತ್ತು ಕೆಲಸಗಳನ್ನು ಮಾಡುತ್ತಿಲ್ಲ. ಕಟ್ಟೆ ಪಂಚಾಯ್ತಿ, ಧಾರ್ಮಿಕ ಕಾರ್ಯಕ್ರಮಗಳಲ್ಲೇ ಅತೀ ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ಜನಸಾಮಾನ್ಯರ ಮುಂಭಾಗ ಜಾಪು ಮಾಡುತ್ತಿದ್ದು ಇವರ ಸೇವೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಲಭ್ಯವಾಗಿಲ್ಲ. ದಿನನಿತ್ಯ 150ಕ್ಕೂ ಹೆಚ್ಚು ಕಡತಗಳು ಬಾಕಿ ಉಳಿಯುತ್ತಿವೆ. ಹಳೆಯ ಕಡತಗಳಿಗೆ ಒರಲೆ ಹಿಡಿಯುತ್ತಿದೆ. ಇಷ್ಟೆಲ್ಲದರ ನಡುವೆ ತನ್ನ ಕಾರ್ಯಕ್ಷೇತ್ರ ತಾಲ್ಲೂಕು ಆಡಳಿತ ನಿಯಂತ್ರಿಸಲು ಆಗದ ಸ್ಥಿತಿ ತಲುಪಿದಂತಿದೆ. ನೌಕರರಲ್ಲೇ ಅನೇಕರಿಗೆ ಈ ಬಗ್ಗೆ ಅಸಮಾಧಾನ ಹೆಚ್ಚಾಗಿದೆ. ಇದೀಗ ಮಹಿಳಾ ಸಿಬ್ಬಂದಿ ರಾಜೀನಾಮೆಯಿಂದ ಅನೇಕರು ಅದೇ ಮಾರ್ಗ ಹಿಡಿಯುವ ಆಲೋಚನೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳ ಈ ಧೋರಣೆಯಿಂದ ಬೇಸತ್ತ ಫಲಾನುಭವಿಗಳು ಗೃಹಸಚಿವರ ಆಡಳಿತ ವೈಫಲ್ಯವನ್ನು ಟೀಕಿಸಲು ಆರಂಭಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕು ಸುಸಂಸ್ಕೃತರ ನಾಡು ಎಂದು ರಾಜ್ಯವಲ್ಲದೇ, ರಾಷ್ಟ್ರದ ಹೆಗ್ಗಳಿಕೆಗೂ ಪಾತ್ರವಾಗಿದೆ. ಇತ್ತೀಚೆಗೆ ಸರ್ಕಾರಿ ಹುದ್ದೆ ಎಂಬುದು ಆದಾಯಗಳಿಕೆಗೆ ಮಾತ್ರ ಸೀಮಿತವಾಗುತ್ತಿದೆ. ಎಲ್ಲಿ ನೋಡಿದರೂ ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದಿಷ್ಟು ನಿಜವಾದ ಕಾಳಜಿ ಇರುವ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹ ಕೆಲವೇ ಮಂದಿಯ ಅತ್ಯುತ್ತಮ ಕೆಲಸಗಳು ಸರ್ಕಾರದ ಘನತೆಯನ್ನು ಎತ್ತಿಹಿಡಿಯುತ್ತಿರುವುದು ದುರಂತವೇ ಸರಿ.

ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವ ಕಸರತ್ತು ತಾವು ಮಾಡುವ ಕೆಲಸದ ಮೇಲೆ ತೋರಿಸಿದರೆ ಬಹುತೇಕ ದೈನಂದಿನ ಕೆಲಸ ಮುಕ್ತಾಯವಾಗುತ್ತದೆ. ಈಗ್ಗೆ ತಿಂಗಳ ಹಿಂದೆ ತಾಲ್ಲೂಕು ಕಚೇರಿಯ ಆವರಣದಲ್ಲಿ ಸಿಬ್ಬಂದಿಗಳ ನಡುವೆ ಸದ್ದು ಮಾಡಿದ್ದ ಗಲಾಟೆ ಇಂದಿಗೂ ತಾರ್ಕಿಕ ಅಂತ್ಯ ಕಂಡಿಲ್ಲ. ಒಬ್ಬರ ಮೇಲೆ ಒಬ್ಬರು ದೂರು ನೀಡುವ ಭರದಲ್ಲಿ ವೈಯಕ್ತಿಕ ವಿಚಾರಗಳನ್ನು ಬೀದಿಗೆಳೆಯಲಾಗಿತ್ತು. ಅಂತಹ ಓರ್ವ ನೌಕರೊಬ್ಬರ ದುರಹಂಕಾರ ಇನ್ನೊಬ್ಬರ ಜೀವನದ ಮೇಲೆ ವ್ಯತಿರಿಕ್ತ ಬದಲಾವಣೆ ತಂದೊಡ್ಡಿದೆ.

3 ವರ್ಷಗಳ ಹಿಂದೆ ತಾಲ್ಲೂಕಿನ ಬಹುತೇಕ ಕುಟುಂಬಗಳ ಸಂಕಟ ತೀರಿಸುತ್ತಿದ್ದ ಆಹಾರ ಇಲಾಖೆ ಈಗ್ಯಾಕೋ ಮಂಕು ಬಡಿದ ಸ್ಥಿತಿ ತಲುಪಿದೆ. ಬಡಕುಟುಂಬ ಅಂದಿನ ದಿನಗೂಲಿ ಬಿಟ್ಟು ಸಂಸಾರ ಸಮೇತ ಪಡಿತರ ಕಾರ್ಡ್‌ ಮಾಡಿಸಲು ಆಗಮಿಸಿದ್ದರೆ ಅವರಿಗೆ ಸಿಕ್ಕುವ ಉತ್ತರ ಮಾತ್ರ ವಾರ ಬಿಟ್ಟು ಬನ್ನಿ ಎಂದಾಗಿದೆ. ಒಂದು ವಾರಬಿಟ್ಟು ಮತ್ತೆ ಅವತ್ತಿನ ದಿನಗೂಲಿ ಬಿಟ್ಟು ವಿಭಾಗದ ಬಾಗಿಲು ತಟ್ಟಿದರೆ ಸರ್ವರ್‌ ಇಲ್ಲ ನಾಳೆ ಬನ್ನಿ ಅಂತ. ಹೀಗೆ ಒಂದು ರೇಷನ್‌ ಕಾರ್ಡ್‌ ಮಾಡಿಸುವ ಕುಟುಂಬ ತಿಂಗಳಿಡಿ ಅಲೆದಾಡಿದರು ಯಾವುದೇ ಪ್ರಯೋಜನವಾಗದೆ ಬೆಪ್ಪುಮೊರೆ ಹಾಕಿ ಹಿಂದಿರುಗಬೇಕಾಗಿದೆ.

ಸಾರ್ವಜನಿಕರ ಕೆಲಸದಲ್ಲಿ ಉದಾಸೀನ ತೋರುತ್ತಿರುವ ಇಲ್ಲಿನ ಶಿರಸ್ತೆದಾರರೊಬ್ಬರು ತಾವು ಕೆಲಸ ಮಾಡದೆ, ಕೆಲಸ ಮಾಡುವವರಿಗೂ ತೊಂದರೆ ನೀಡುತ್ತ ಕಾಲಹರಣ ಮಾಡುತ್ತಿರುವುದು ಜಗಜ್ಜಾಹೀರು. ತೀರ್ಥಹಳ್ಳಿ ತಾಲ್ಲೂಕು ಕಚೇರಿಗೆ ಅಲೆಯುವ ಬಹುತೇಕ ಕುಟುಂಬಗಳು ಕಳೆದ 3 ವರ್ಷಗಳಿಂದ ಪಡಿತರ ಚೀಟಿಗಾಗಿ ಅಲೆದಾಡಿ ಕೈಸೋತಿದ್ದಾರೆ. ಆರೋಗ್ಯ ಸಮಸ್ಯೆ ಇರುವ ವಯೋವೃದ್ದರು, ಮಹಿಳೆಯರು, ಗಂಭೀರ ಕಾಯಿಲೆಗೆ ಒಳಗಾದವರ ಸ್ಥಿತಿಯಂತು ಶೋಚನೀಯವಾಗಿದೆ. ಇಂತಹ ಸ್ಥಿತಿಯನ್ನು ನೋಡಿ ಬೇಸತ್ತ ಇನ್ನೋರ್ವ ಸಿಬ್ಬಂದಿ ಅದನ್ನು ಪ್ರಶ್ನಿಸಿದ್ದಾರೆ. ವಾರ ಬಿಟ್ಟು ಬನ್ನಿ ಕಥೆ ಹೇಳುವುದಕ್ಕೆ ಅಲ್ಲಗಳೆದಿದ್ದಾರೆ.

ಸಾಂದಾರ್ಭಿಕ

ಇಂತಹ ಸ್ಥಿತಿ ನಿಭಾಯಿಸಲು ಆಗದೆ ವರ್ಗಾವಣೆ ಕೂಡ ಕೇಳಿದ್ದರು. ಬಹುತೇಕ ವರ್ಗಾವಣೆ ಕೊನೆಯ ಹಂತದಲ್ಲಿತ್ತು ಎಂಬ ಮಾಹಿತಿ ಇದ್ದಂತೆ ನಾಳೆ ಬನ್ನಿ ಶಿರಸ್ತೆದಾರರು ಅದಕ್ಕೂ ಕೊಕ್ಕೆ ಹಾಕಿ ವರ್ಗಾವಣೆ ಆಗದಂತೆ ತಡೆದಿದ್ದರು. ಕೋವಿಡ್ ಅವಧಿಯಲ್ಲೇ ಬೆಂಗಳೂರು ವಿಭಾಗಕ್ಕೆ ನಿಯೋಗಗೊಂಡಿದ್ದ ಮಹಿಳಾ ಸಿಬ್ಬಂದಿಯನ್ನು ಕಾರ್ಯದೊತ್ತಡದ ಹಿನ್ನಲೆ ಹಿಂದಕ್ಕೆ ಪಡೆಯಲಾಗಿತ್ತು. ಇದೀಗ ನೂತನವಾಗಿ ಆಗಮಿಸಿದ ತಹಶೀಲ್ದಾರ್‌ ಸಮ್ಮುಖದಲ್ಲೇ ಗಲಾಟೆ ನಡೆದಿದ್ದರು ನಿಯಂತ್ರಿಸಲು ವಿಫಲವಾಗಿದ್ದು ಗುಟ್ಟಾಗಿ ಉಳಿದಿಲ್ಲ. ಬಹುತೇಕ ನೌಕರರ ಗಮನದಲ್ಲಿ ಈ ಘಟನೆ ಇದ್ದರು ಎಲ್ಲರೂ ಕೂಡ ಮೌನ ವಹಿಸಿರುವುದರಿಂದ ನೊಂದ ಮಹಿಳಾ ಸಿಬ್ಬಂದಿಗೆ ನ್ಯಾಯ ಸಿಗದಂತಾಗಿದೆ.

ಸರ್ಕಾರಿ ಹುದ್ದೆಗೆ ರಾಜೀನಾಮೆ

ಇಂದಿನ ದಿನಗಳಲ್ಲಿ ಸರ್ಕಾರಿ ಹುದ್ದೆಯ ಲಾಭ ಅರಿತಿರುವವರು ಅವಕಾಶಕ್ಕಾಗಿ ಹಪಹಪಿಸುತ್ತಾರೆ. ಅಂತಹ ಸಂದರ್ಭದಲ್ಲೂ ಮಾನಸಿಕ ಕಿರುಕುಳದಿಂದ ಮಹಿಳಾ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ ಎಂದರೆ ಆಕೆಗೆ ಆದ ನೋವುಗಳನ್ನು ಅರ್ಥ ಮಾಡಿಸುವುದು ಕಷ್ಟದ ಕೆಲಸ. ತೀರ್ಥಹಳ್ಳಿಯ ತಾಲ್ಲೂಕು ಕಚೇರಿಯ ಎಡಪಾರ್ಶ್ವದಲ್ಲಿರುವ ಆಹಾರ ಇಲಾಖೆಯ ಶಿರಸ್ತೆದಾರರೊಬ್ಬರು ನೀಡಿದ ಮಾನಸಿಕ ಕಿರುಕುಳ ರಾಜೀನಾಮೆ ನೀಡಿದ ಮಹಿಳಾ ಸಿಬ್ಬಂದಿಗೆ ಮಾತ್ರವಲ್ಲ ಅನೇಕ ಫಲಾನುಭವಿಗಳು ಈ ಸರದಿಯಲ್ಲಿ ನಿಲ್ಲುತ್ತಾರೆ. ತೀರ್ಥಹಳ್ಳಿ ತಾಲ್ಲೂಕಿನ ಬಹುತೇಕ ದುರ್ಬಲ, ಬಡವರ್ಗ, ರೆಷನ್ ಕಾರ್ಡ್ ಅವಶ್ಯಕತೆ ಇರುವವರು ಇಲ್ಲ ಸಲ್ಲದ ಅರ್ಜಿ, ಕಾನೂನುಗಳ ಕುಣಿಕೆಯಲ್ಲಿ ಸಿಲುಕಿದ್ದಾರೆ. ಗೃಹಸಚಿವರ ಕ್ಷೇತ್ರದಲ್ಲಿ ಇಂತಹ ದುರಹಂಕಾರಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ನಿಯಂತ್ರಣ ಮಾತ್ರ ಸಾಧ್ಯವಾಗಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post