ತೀರ್ಥಹಳ್ಳಿಯಲ್ಲಿ ಪಕ್ಷಾಂತರ ಶಖೆ ಆರಂಭ

ಕಾಂಗ್ರೆಸ್‌ ಪ್ರಭಾವಿ ಲೀಡರ್‌ ಬಿಜೆಪಿ ತೆಕ್ಕೆಗೆ
ಜೆಡಿಎಸ್‌ ಮುಖಂಡರಿಗೂ ಆಮಿಷ
ಬಿಜೆಪಿ ಗಾಳಕ್ಕೆ ಬಿದ್ದ ಹೊಸಹಳ್ಳಿ ಸುಧಾಕರ್
ಸತ್ಯವಾಯ್ತಾ..! ಕಿಮ್ಮನೆ 10 ಕೋಟಿ ಆರೋಪ…

ಆರಗ ಜ್ಞಾನೇಂದ್ರರಿಗೆ ಕಪ್ಪು ಚುಕ್ಕೆ

ಗೃಹಸಚಿವರಾದ ನಂತರ ಗೃಹಸಚಿವರು ಅಕ್ರಮ, ಭ್ರಷ್ಟಾಚಾರ, ವರ್ಗಾವಣೆ, ಪಿಎಸ್‌ಐ ನೇಮಕಾತಿ ದಂಧೆಯಿಂದ ಕೋಟಿಗಟ್ಟಲೇ ಹಣ ಮಾಡಿದ್ದಾರೆ. ಕ್ಷೇತ್ರದಲ್ಲಿ ಹಣದ ರಾಜಕೀಯ ಮಾಡುತ್ತಿದ್ದು ಅವರನ್ನು ಎದುರಿಸುವುದೇ ಸವಾಲು ಎನ್ನುತ್ತಿರುವ ಕಿಮ್ಮನೆ ರತ್ನಾಕರ್‌ ಆರೋಪ ಕುತೂಹಲ ಮೂಡಿಸಿದೆ. ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ಕಿಂಚಿತ್ತೂ ಲೋಪವಾಗದಂತೆ ಕೈ, ಬಾಯಿ ಸ್ವಚ್ಚವಾಗಿರಿಸಿಕೊಂಡಿದ್ದ ಗೃಹಸಚಿವರು ಇತ್ತೀಚೆಗೆ ರಾಜಕೀಯವಾಗಿ ಬೇಕಾದಷ್ಟು ಹಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಸಾಕ್ಷಿಯಾಗಿ ಕುದುರೆ ವ್ಯಾಪಾರ, ಖರೀದಿ ರಾಜಕಾರಣ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಲಕ್ಷಾಂತರ ರೂಪಾಯಿಯ ಸದ್ಯಸ್ಯರ ಖರೀದಿಯ ಮೇಲೆ ಸಾರ್ವಜನಿಕರ ಕಣ್ಣು ಬಿದ್ದಿದ್ದು ಗೃಹಸಚಿವ ವ್ಯಕ್ತಿತ್ವ, ಸಚ್ಚಾರಿತ್ರ್ಯಕ್ಕೆ ಕಪ್ಪುಚುಕ್ಕೆಯಾಗುವ ಸಾಧ್ಯತೆ ಹೆಚ್ಚಾದಂತಿದೆ.

ತೀರ್ಥಹಳ್ಳಿ ತಾಲ್ಲೂಕಿನ ಪ್ರಭಾವಿ ಮುಖಂಡರೆನಿಸಿಕೊಂಡಿರುವ ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹೊಸಹಳ್ಳಿ ಸುಧಾಕರ್‌, ಕಾಸರವಳ್ಳಿ ಕೇಶವ್, ಜೆಡಿಎಸ್‌ ಪ್ರಭಾವಿ ಮುಖಂಡ ಮೇದೊಳಿಗೆ ಜಯರಾಮ್‌, ಬಾಂಡ್ಯ-ಕುಕ್ಕೆ, ಕುಡುಮಲ್ಲಿಗೆ ಪಂಚಾಯಿತಿ ಜೆಡಿಎಸ್ ಪ್ರಮುಖರು ಭಾನುವಾರ ಅಧಿಕೃತವಾಗಿ  ಬಿಜೆಪಿ ಸೇರಲಿದ್ದಾರೆ. ಇವರೊಂದಿಗೆ ಗುರುತಿಸಿಕೊಂಡಿರುವ ಅನೇಕ ಪ್ರಮುಖ ಮುಖಂಡರು ಕೂಡ ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ ಎಂಬ ಮಾತುಗಳು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ, ಪ್ರಗತಿಪರ ಕೃಷಿಕ, ಉದ್ಯಮಿಯೂ ಆಗಿರುವ ಹೊಸಹಳ್ಳಿ ಸುಧಾಕರ್‌ ಕಾಂಗ್ರೆಸ್‌ ಪಕ್ಷ ತ್ಯಜಿಸಿ ಬಿಜೆಪಿ ಸೇರುತ್ತಿರುವುದು ಕಾಂಗ್ರೆಸ್‌ ಮತಪೆಟ್ಟಿಗೆ ಮೇಲೆ ತೀವ್ರ ಆಘಾತ ಉಂಟಾಗಲಿದೆ ಎಂದು ಊಹಿಸಲಾಗಿದೆ. ಆಗುಂಬೆ ಭಾಗದಲ್ಲಿ ಬಿಜೆಪಿ ಸಂಘಟನೆ ಅಷ್ಟರಮಟ್ಟಿಗೆ ಬಲಿಷ್ಟವಾಗಿಲ್ಲ. ಅದಕ್ಕಾಗಿ ಪಕ್ಷಾಂತರ ನಿಯಮವನ್ನು ಗೃಹಸಚಿವರು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಅರ್ಹ ಅಭ್ಯರ್ಥಿಗಳನ್ನು 15 ರಿಂದ 20 ಲಕ್ಷಕ್ಕೆ ಖರೀದಿ ಮಾಡಲಾಗುತ್ತಿದೆ. ಬೆಜೆಪಿಯೇತರ ಗ್ರಾಮ ಪಂಚಾಯಿತಿ ಸದಸ್ಯರಿಗೆ 6 ರಿಂದ 10 ಲಕ್ಷದ ಡಿಮ್ಯಾಂಡ್‌ ನೀಡಿದ್ದಾರೆ. ಅಲ್ಲದೇ ಅಭ್ಯರ್ಥಿಯ ಸಾಲ, ಸಂಕಷ್ಟಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಿಗೆ ಭಾನುವಾರ ನಡೆಯುವ ಪಕ್ಷಾಂತರ ಕಾಂಗ್ರೆಸ್‌, ಜೆಡಿಎಸ್‌ ಪಾಲಿಗೆ ಉರುಳಾಗಿ ಪರಿಣಮಿಸಲಿದೆ.

ಆಗುಂಬೆ ಹೋಬಳಿಯ ಬಾಳೇಹಳ್ಳಿ ಗ್ರಾಮದಲ್ಲಿ ಕ್ರಷರ್‌ ಆರಂಭಿಸಿ ಉದ್ಯಮ ಮಾಡುತ್ತಿದ್ದ ಹೊಸಹಳ್ಳಿ ಸುಧಾಕರ್‌ ಕಳೆದ ಕೆಲವು ವರ್ಷಗಳಿಂದ ಕಾನೂನು ತೊಡಕು ಅನುಭವಿಸುತ್ತಿದ್ದರು. ಇದೀಗ ಬಿಜೆಪಿ ಪಕ್ಷಕ್ಕೆ ಸೇರುವುದರಿಂದ ಕಾನೂನು ಸಮಸ್ಯೆ ಬಗೆಹರಿಸಿ ಮರು ಉದ್ಯಮ ಚಾಲನೆಗೆ ಅವಕಾಶ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಜೊತೆಗೆ ತಾಲ್ಲೂಕು ಪಂಚಾಯಿತಿ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡುವ ತಂತ್ರವನ್ನು ಬಿಜೆಪಿ ಅಳವಡಿಸಿದ್ದಾರೆ ಎನ್ನಲಾಗಿದೆ. ಒಂದು ಬಾರಿ ಪಕ್ಷೇತರ, ಮತ್ತೊಂದು ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ತಾಲ್ಲೂಕು ಪಂಚಾಯಿತಿ ಗೆದ್ದಿದ್ದ ಹೊಸಹಳ್ಳಿ ಸುಧಾಕರ್‌ಗೆ ಬಿಜೆಪಿ ಗಾಳ ಹಾಕಿದ್ದು ಭಾನುವಾರ ತೀರ್ಥಹಳ್ಳಿ ಪಟ್ಟಣದ ಬಂಟರ ಭವನ ಅಥವಾ ಗೃಹಸಚಿವರ ಮನೆಯಲ್ಲಿ ಎಲ್ಲಾ ಮುಖಂಡರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post