ಮಲೆನಾಡಿನಲ್ಲೊಂದು ನಿಗೂಢ ಪ್ರಕರಣ

ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ, ಪಕ್ಕದಲ್ಲಿಯೇ ಚಿತೆ!
ಜ್ಯೋತಿಷಿ ತಿಳಿಸಿದಂತೆ ಹೆಣ ಪತ್ತೆ
ತರಾತುರಿಯಲ್ಲಿ ಶವ ಸಂಸ್ಕಾರ…?
ಆಶ್ರಮಕ್ಕೆ ಹೊರಟೆ ಎಂದಾಕೆ ಚಿತೆ ಸಿದ್ಧಪಡಿಸಿದ್ದಳಾ?

ಮಹಿಳೆ ನಾಪತ್ತೆ ಪ್ರಕರಣದ ಯಡಗುಡ್ಡೆ ಗ್ರಾಮದಲ್ಲಿ ಆಗಿದ್ದೇನು?

ಕಾಡಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಶವ (ಎಡ), ಸಾಂದಾರ್ಭಿಕ ಚಿತ್ರ (ಬಲ)

ತಾಲೂಕಿನ ಪ್ರತಿಷ್ಠಿತ ಕುಟುಂಬದ ಮಧ್ಯವಯಸ್ಸಿನ ಸೊಸೆ ನಾಪತ್ತೆ, ಮನೆಯವರ ಹುಡುಕಾಟ, ವಾರದೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆ, ತರಾತುರಿಯಲ್ಲೇ ಸರಕಾರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ, ಇನ್ನೂ ಸರಕಾರಿ ದಾಖಲೆ ಸೇರದೆ ನಿಗೂಢವಾಗಿಯೇ ಉಳಿದಿರುವ ಪ್ರಕರಣ… ಇದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಸೋಮವಾರ ಜನರ ವಿಸ್ಮಯಕ್ಕೆ ಕಾರಣವಾದ ಜತೆಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏನಿದು ಪ್ರಕರಣ?

ತಾಲೂಕಿನ ಹೊದಲ  ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಡಗುಡ್ಡೆ ಸಮೀಪದ ನೆಲ್ಲಿಸರ ಗ್ರಾಮದ ಹೊಸಳ್ಳಿಯಲ್ಲಿ ಇದೊಂದು ಕುಟುಂಬ ಹಲವು ವರ್ಷಗಳಿಂದ ನೆಲೆ ನಿಂತಿದೆ. ತಾಲೂಕಿನ ರಾಜಕೀಯ ವಲಯದಲ್ಲಿ ಪ್ರತಿಷ್ಠಿತ ಎನ್ನಿಸಿಕೊಂಡಿದೆ. ಇಂತಹ ಕುಟುಂಬದ ನಡು ವಯಸ್ಸಿನ ಸೊಸೆ ಇದೇ ಜನವರಿ 23ನೇ ತಾರೀಕಿನಂದು ಮನೆಯಿಂದ ನಾಪತ್ತೆಯಾಗುತ್ತಾರೆ. ಮೂಲಗಳ ಪ್ರಕಾರ, “ಆಕೆ ಬರೆದಿಟ್ಟು ಹೋದ ಪತ್ರವೊಂದು ನಂತರ ಸಿಕ್ಕಿತು. ನಾನು ಬೆಂಗಳೂರಿಗೆ ಆಶ್ರಮ ಸೇರಲು ಹೋಗುತ್ತಿದ್ದೇನೆ. ನನ್ನ ಹುಡುಕಬೇಡಿ ಎಂದು ಬರೆದಿಟ್ಟು ಹೋಗಿದ್ದರು,ʼʼ ಎನ್ನುತ್ತಾರೆ ಪ್ರಕರಣವನ್ನು ಬಲ್ಲ ಸ್ಥಳೀಯರು.

ಜ್ಯೋತಿಷಿ ಮಧ್ಯ ಪ್ರವೇಶ

ಹುಟುಕಾಟ ಆರಂಭಿಸಿದ ಕುಟುಂಬಕ್ಕೆ ಆರಂಭದಲ್ಲಿ ಯಾವುದೇ ಸುಳಿವು ಲಭ್ಯವಾಗಲಿಲ್ಲ. ಈ ಸಂದರ್ಭ ವಿಚಲಿತಗೊಂಡ ಕುಟುಂಬ ಹರಿಹರಪುರ ಸಮೀಪದ ಜ್ಯೋತಿಷಿ ಒಬ್ಬರನ್ನು ಭೇಟಿಯಾಗಿ, ಮಹಿಳೆ ನಾಪತ್ತೆ ಬಗ್ಗೆ ತಿಳಿಸಿದ್ದಾರೆ. ಈ ಹಂತದಲ್ಲಿ ಜ್ಯೋತಿಷಿ, ಕೆಲವೊಂದು ಮಹತ್ವದ ಸುಳಿವು ಬಿಟ್ಟುಕೊಟ್ಟಿರುವುದು ಪ್ರಕರಣವನ್ನು ಇನ್ನಷ್ಟು ನಿಗೂಢಗೊಳಿಸಿದೆ. “ಆಕೆ ಎಲ್ಲೂ ಹೋಗಿಲ್ಲ, ಮನೆಯ ಹತ್ತಿರದ ಕಾಡಿನಲ್ಲಿ ಹುಡುಕಿ, ಶವ ಸಿಗುತ್ತದೆ ಎಂದು ಜ್ಯೋತಿಷಿ ಹೇಳಿದ್ದರು,ʼʼ ಎಂಬುದು ಬಲ್ಲವರ ಮಾತಾಗಿದೆ.   

ಚಿತೆ ಪಕ್ಕ ಶವ

ಪ್ರಕರಣದಲ್ಲಿ ಕುತೂಹಲಕಾರಿ ಅಂಶ ಏನೆಂದರೆ, ಜ್ಯೋತಿಷಿ ತಿಳಿಸಿದಂತೆ ಹುಡುಕಾಟ ನಡೆಸಿದಾಗ ಮನೆಯಿಂದ ಎರಡು ಕಿ. ಮೀ ದೂರದಲ್ಲಿದ್ದ ಗೇರುಗುಡ್ಡ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳೀಯರು ಗುರುತಿಸುವ ಹೊತ್ತಿಗೆ ಅರ್ಧಂಬರ್ಧ ಬೆಂಕಿಯಲ್ಲಿ ಬೆಂದುಹೋಗಿತ್ತು. ಪಕ್ಕದಲ್ಲಿಯೇ ಚಿತೆಯೊಂದು ಉರಿದು ಹೋಗಿತ್ತು. “ಅಕೆಯೇ ಚಿತೆಯನ್ನು ರೆಡಿಮಾಡಿಕೊಂಡು, ತನ್ನ ಮೇಲೆಯೂ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರಬಹುದು. ಆದರೆ ಸುಡಲು ಆರಂಭಿಸುತ್ತಿದ್ದಂತೆ ಕೆಳಗೆ ಹಾರಿರಬಹುದು,ʼʼ ಎಂಬುದು ಪ್ರಕರಣದ ಜಾಗವನ್ನು ಕಂಡ ಸ್ಥಳೀಯರ ಅನಿಸಿಕೆಗಳು.

ಸಾವಿನ ಕಾರಣಗಳು ಏನೇ ಇರಬಹುದು, ಅದನ್ನು ನಿರ್ಧರಿಸಬೇಕಾಗಿದ್ದು ನಂತರ ನಡೆಯಬೇಕಿದ್ದ ತನಿಖೆ. ಆದರೆ ಈ ಪ್ರಕರಣದಲ್ಲಿ ಮುಂದಿನ ಪ್ರಕ್ರಿಯೆಗೆ ಅಗತ್ಯವಾಗಿದ್ದ ಮಹಿಳೆಯ ಶವವನ್ನು ಪಡೆದ ಕುಟುಂಬ ತರಾತುರಿಯಲ್ಲೇ ಅಂತ್ಯಕ್ರಿಯೆ ನೆರವೇರಿಸಿದೆ. “ತೀರ್ಥಹಳ್ಳಿಯ ಸರಕಾರಿ ಚಿತಾಗಾರದಲ್ಲಿ ದೇಹವನ್ನು ಸುಡಲಾಯಿತು,ʼʼ ಎಂಬುದು ಪ್ರತ್ಯಕ್ಷದರ್ಶಿಗಳು ಹೇಳಿಕೆ.

ಈ ಹೊತ್ತಿನಲ್ಲಿ ಹಲವು ನಿಗೂಢತೆಗಳನ್ನು ಒಳಗೊಂಡಿರುವ ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಯಬೇಕಿದೆ.ರಾಜಕೀಯವಾಗಿ ಪ್ರತಿಷ್ಟಿತವಾಗಿರುವ ಕುಟುಂಬದಲ್ಲಾಗಿರುವ ಈ ಘಟನೆ ಅನುಮಾನದ ಹುತ್ತವವನ್ನೇ ಬೆಳೆಸಿದೆ.

ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು

ಮೃತ ಜಯಶ್ರೀ (52) ಕಾಣೆಯಾಗಿದ್ದಾರೆ ಎಂಬ ಕುರಿತು ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಜನವರಿ 24ರಂದು ಪತಿ ಚಂದ್ರಮೌಳಿ ಜೋಯ್ಸ್ ದೂರು ದಾಖಲಿಸಿದ್ದಾರೆ.‌ 23ರ ಸಂಜೆ 5 ಗಂಟೆಗೆ ವಾಕಿಂಗ್‌ ಹೋಗಿದ್ದು ಇದುವರೆಗೂ ಹಿಂದಿರುಗಿಲ್ಲ. ನಂತರ ಹುಡುಕಾಡಿದಾಗ ಕೈಬರಹದ ಚೀಟಿ ದೊರೆತಿದೆ. ನಾನು ತುಂಬಾ ನೊಂದಿದ್ದೇನೆ. ಕಾಲುನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನಸ್ಸಿಗೆ ನೆಮ್ಮದಿಗಾಗಿ ಮನೆಯಿಂದ ಹೊರ ಹೋಗುತ್ತಿದ್ದೇನೆ ಎಂದು ಬರೆದಿದ್ದಾರೆ ಎಂಬ ಪ್ರಕರಣ ದಾಖಲಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post