ಬಸವಾನಿಯಲ್ಲಿ ಯಶಸ್ವಿಯಾಗಿ ಜರುಗಿದ ಕಲಿಕಾ ಹಬ್ಬ

ಪೋಷಕರು, ಶಿಕ್ಷಕರ ಸಹಕಾರ – ಮಕ್ಕಳಿಗೆ ಸಡಗರ
ವಿವಿಧ ಕಲಾಪ್ರಕಾರ ಪ್ರದರ್ಶನ

ನಲಿ ಕಲಿ ಇದು ಇಂದಿನ ಶಿಕ್ಷಣದ ನೂತನ ನಿಯಮ. ಮಕ್ಕಳು ಕಷ್ಟಪಟ್ಟು ಕಲಿಯದೇ ಇಷ್ಟಪಟ್ಟು ಕಲಿಯಬೇಕು ಎನ್ನುವುದು ಇದರ ಗೂಡಾರ್ಥ. ಮಕ್ಕಳು ಆಟವಾಡುತ್ತ ಕಲಿತಾಗ ಅವರ ಜ್ಞಾನ ವೃದ್ಧಿಯಾಗುತ್ತದೆ. ಕಲಿಕೆ ಎಂಬುದು ಹಬ್ಬವಾಗಬೇಕೆಂಬ ದೃಷ್ಟಿಯಿಂದ ಸಮಗ್ರ ಶಿಕ್ಷಣ ಇಲಾಖೆ ಅಡಿಯಲ್ಲಿ ಅತ್ಯಂತ ದೊಡ್ಡ ಕಲಿಕಾ ಹಬ್ಬವನ್ನು ಇದೇ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ರಾಜ್ಯದ 4,138 ಸ್ಥಳಗಳಲ್ಲಿ ಕಲಿಕಾ ಹಬ್ಬಗಳು ನಡೆಯುತ್ತಿದೆ. ಕೋವಿಡ್ ನಂತರ ಶಾಲೆಗಳು ಆರಂಭವಾದಾಗ "ಕಲಿಕಾ ಚೇತರಿಕೆ" ಎಂಬ ಹೆಸರಿನಲ್ಲಿ ಶಾಲೆಗಳನ್ನು ಪ್ರಾರಂಭಿಸಲಾಗಿತ್ತು. ಕಲಿಕೆ ಅನುಭವ ಕೇಂದ್ರಿತ ಹಬ್ಬವಾಗಿ ಸಮುದಾಯದ ಮುಂದೆ  ತೆರೆದಿಡಬೇಕೆಂಬ ಪ್ರಯತ್ನವೇ ಕಲಿಕಾ ಹಬ್ಬ. ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನು ತಂದು ಕೊಡುತ್ತದೆ. ತನ್ನದೇ ಲೋಕವನ್ನು ಸೃಷ್ಟಿಸಿಕೊಳ್ಳುತ್ತಾ, ವಿಸ್ತರಿಸಿಕೊಳ್ಳುತ್ತಾ ಮಗು ಎಲ್ಲಾ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಇಂತಹ ಹಬ್ಬ ಮಹತ್ವದಾಗಿರುತ್ತದೆ. ಮುರಿದು ಕಟ್ಟುವ ಕಲೆಗಾರಿಕೆ, ಪ್ರಶ್ನೆ, ವೀಕ್ಷಣೆ,  ಹಾಡು, ಸುತ್ತಾಟ, ಬೇರೆ ಶಾಲೆಗಳ ಮಕ್ಕಳೊಂದಿಗೆ ಒಡನಾಟ, ಪ್ರಯೋಗಗಳು ಚೈತನ್ಯವನ್ನು ತರುತ್ತದೆ. ನಾವು ಏಕಾಂಗಿಯಾಗಿ ಕಲಿಯಲಾರೆವು ಬದುಕಲಾರೆವು ಅನುಭವಾತ್ಮಕ ಕಲಿಕೆಗಳು ಒಡನಾಟದ ಕಲಿಕೆಗಳು ಕೂಡ ಹೌದು. ಕಲಿಕೆಯ ಪರಿಸರ ಮತ್ತು ವಿಧಾನಗಳು ನಮ್ಮ ಸಂವಿಧಾನದ ಆಶಯಗಳಾದ ಸಹಬಾಳ್ವೆ, ಸಹೋದರತೆ ಮುಂತಾದ ಮೌಲ್ಯಗಳನ್ನು ರೂಪಿಸಬೇಕು. ಇದು ಶಿಕ್ಷಣದ ಗುರಿಯು ಹೌದು. ನಾಟಕ, ಚರ್ಚೆ, ಸಂವಾದ, ಯೋಜನೆ, ಪ್ರಯೋಗ ಮುಂತಾದ ಒಡನಾಟದ ಚಟುವಟಿಕೆಗಳು ಕಲಿಕೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಮಗು ತನ್ನ ಇಂದ್ರಿಯಗಳ ಮೂಲಕ ಪಡೆದ  ಅನುಭವದ ಜ್ಞಾನವನ್ನು ವಿಶ್ಲೇಷಣೆಯ ವಿಮರ್ಶೆಗೆ ಒಡ್ಡಲು ಇಂಥ ಚಟುವಟಿಕೆ ಸಹಕಾರಿಯಾಗುತ್ತದೆ.

ಈ ಕಲಿಕಾ ಹಬ್ಬದಲ್ಲಿ ಚಟುವಟಿಗಳನ್ನ ಆಡು- ಹಾಡು, ಕಾಗದ- ಕತ್ತರಿ, ಮಾಡು -ಹಾಡು, ಊರು ತಿಳಿಯೋಣ ಎಂದು ವಿಂಗಡಿಸಿ ಸಮಗ್ರ ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಆದರೆ ಬಸವಾನಿಯ ಕಲಿಕಾ ಹಬ್ಬದಲ್ಲಿ  ಇದರ ಜೊತೆಗೆ ಜಂಗಲ್ ವಾಕ್ ಎನ್ನುವ ಹೊಸ ಅಧ್ಯಾಯವನ್ನು ಸೇರಿಸಿ ಶಾಲೆಯ ಸಮೀಪದ ಕಾಡಿನಲ್ಲಿ ಪ್ರಾಣಿಗಳ ಹಾವುಗಳ ಗೊಂಬೆಗಳನ್ನು ಇಟ್ಟು ದ್ವಾರದಲ್ಲಿ ವನ ದೇವಿಯ ಚಿತ್ರವನ್ನು ಬಿಡಿಸಿ ಮಕ್ಕಳು ಅರಣ್ಯವನ್ನ ಪ್ರವೇಶಿಸುವ ಮೊದಲು ವನ್ಯಜೀವಿಗಳಿಗೆ ಮತ್ತು ಕಾಡಿಗೆ ಯಾವುದೇ ಗದ್ದಲ ಮತ್ತು ತೊಂದರೆಯನ್ನು ನೀಡುವುದಿಲ್ಲ ಎಂಬ ಪ್ರಮಾಣವನ್ನು ಪಡೆದು ಪ್ರವೇಶಿಸಲಾಯಿತು. ಮಕ್ಕಳು ಸಂಭ್ರಮದಿಂದ ಜಂಗಲ್ ವಾಕ್‌ನಲ್ಲಿ ನಡೆದಾಡಿ ಹಗ್ಗದಿಂದ ಗುಡ್ಡ ಹತ್ತುವ ಗಿಡಗಳ ಮಧ್ಯೆ ನಡೆದಾಡುವ ಅನುಭವವನ್ನು ಪಡೆದುಕೊಂಡರು.

ಸಮಾಜ ವಿಜ್ಞಾನದ ಪ್ರದರ್ಶನದಲ್ಲಿ ಮನುಕುಲದ ಪ್ರಾರಂಭದಿಂದ ಎಲ್ಲ ನಾಗರೀಕತೆಯ ಇತಿಹಾಸವನ್ನು ದಾಖಲೆಗಳ ಮೂಲಕ ವಿವರಿಸಲಾಯಿತು. ಭಾರತದ ಸಂಪೂರ್ಣ ಇತಿಹಾಸವನ್ನು ಒಂದು ಕೊಠಡಿಯಲ್ಲಿ ಅನಾವರಣ ಮಾಡಲಾಗಿತ್ತು. ಪ್ರಸಿದ್ಧ ರಾಜವಂಶಸ್ಥರ ವಂಶವೃಕ್ಷದೊಂದಿಗೆ ಅವರ ಆಳ್ವಿಕೆಯನ್ನು ವಿವರಿಸಲಾಗಿತ್ತು. ಬಹಳಷ್ಟು ವಿಜ್ಞಾನಿಗಳ ಚಿತ್ರದೊಂದಿಗೆ ವಿವರಣೆಯನ್ನು ನೀಡಲಾಗಿತ್ತು. ಸ್ವಾತಂತ್ರ್ಯ ನಂತರದ ರಾಷ್ಟ್ರಪತಿ ಮತ್ತು ಪ್ರಧಾನಿ ಅವರ ಇಲ್ಲಿಯವರೆಗಿನ ಎಲ್ಲಾ ವ್ಯಕ್ತಿಗಳ ಭಾವಚಿತ್ರದೊಂದಿಗೆ ವಿವರಣೆಯನ್ನು ನೀಡಲಾಗಿತ್ತು. ಗುಡ್ಡೇಕೇರಿ ಶಿಕ್ಷಕ ಮಹಮ್ಮದ್ರವರು ಸಂಗ್ರಹಿಸಿರುವ ದೇಶ ಮತ್ತು ವಿದೇಶದ ನಾಣ್ಯ ನೋಟುಗಳು ಹಾಗೂ ವಿವಿಧ ರೀತಿಯ ಮದುವೆಯ ಆಮಂತ್ರಣ ಪತ್ರಗಳು ಪ್ರದರ್ಶನಗೊಂಡವು. ವಿಖ್ಯಾತ ಚನ್ನಪಟ್ಟಣದ ಗೊಂಬೆಯ ಪ್ರದರ್ಶನ ಕೂಡ ಈ ಕಲಿಕಾ ಹಬ್ಬದ ವಿಶೇಷತೆಯಲ್ಲಿ ಒಂದಾಗಿತ್ತು. ಕಾಗದ-ಕತ್ತರಿ ವಿಭಾಗದಲ್ಲಿ ಮಕ್ಕಳು ತಂಡ ತಂಡವಾಗಿ ಭಾಗವಹಿಸಿ ವಿವಿಧ ರೀತಿಯ ಹೂವುಗಳು ಹಬ್ಬ ಹರಿದಿನಗಳಲ್ಲಿ ಬೇಕಾಗುವ ಗೃಹಾಲಂಕಾರ ವಸ್ತುಗಳನ್ನು ತಯಾರಿಕೆಯ ಕಲಿಕೆಯನ್ನು ಕಲಿತುಕೊಂಡು ಸಂಭ್ರಮಿಸಿದರು. ಇದುವರೆಗೂ 26 ಸಾವಿರ ನಾಗರಹಾವುಗಳನ್ನು 1000 ಹೆಬ್ಬಾವುಗಳನ್ನ ಹಿಡಿದು ತಾಲೂಕಿನಾಧ್ಯಂತ ಮನೆ ಮಾತಾಗಿರುವ ಶಿಕ್ಷಕ ಮಾರುತಿಯವರು ಉರಗದ ಬಗೆಗೆ ಮಕ್ಕಳಿಗೆ ಮಾಹಿತಿ ನೀಡಿದರು. ಬಸವಾನಿ ಶಾಲೆಯ ಸಂಗೀತ ಶಿಕ್ಷಕಿ ಉಷಾರವರು ಮಕ್ಕಳಿಗೆ ಹಾಡನ್ನು ಹೇಳಿಕೊಟ್ಟರು.

ಜನವರಿ 23 ರಂದು ಬೆಳಿಗ್ಗೆ 9.30 ಕ್ಕೆ ಸುಮಾರು 60 ವಿವಿಧ ವೇಷಗಳೊಂದಿಗೆ ದೇವಂಗಿ ಸಮೂಹ ಶಿಕ್ಷಣ ಕೇಂದ್ರದ ವ್ಯಾಪ್ತಿಗೆ ಬರುವ 11ಪ್ರಾಥಮಿಕ ಹಾಗೂ ಬಸವಾನಿ ಪ್ರೌಢಶಾಲೆ ಸೇರಿ 250 ಮಕ್ಕಳು, ಮುಖ್ಯೋಪಾಧ್ಯಾಯರುಗಳು, ಶಿಕ್ಷಕರು ಹಾಗೂ ಬಸವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸದಸ್ಯರು, ಕಲಾ ಜಾಥಾದಲ್ಲಿ ಊರಿನ ಪ್ರಮುಖ ಬೀದಿಯಲ್ಲಿ ಹೆಜ್ಜೆ ಹಾಕಿದರು. ಬಸವಾನಿ ಶಾಲೆಯ ಕಿರಿಯ ಮಕ್ಕಳ ಯಕ್ಷಗಾನ ವೇಷಗಳು ಮೆರವಣಿಗೆಯ ಆಕರ್ಷಣೆಯಾಗಿತ್ತು. ತಟ್ಟೀರಾಯ, ಕೀಲುಕುದುರೆ ವೇಷ ಧರಿಸಿದ ಊರಿನ ಶಾಲೆಯ ಪೋಷಕರು, ವಿವಿಧ ವೇಷಧರಿಸಿದ ಶಿಕ್ಷಕರು, ಶಿಕ್ಷಕಿಯರು ಮೆರವಣಿಗೆಗೆ ರಂಗುತಂದರು. ಬಸವಾನಿಯ ಮಾತೆಯರು ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಶಾಲೆಯ ಮಕ್ಕಳನ್ನು ಬರಮಾಡಿಕೊಂಡರು. ಮನೆಯವರು, ಅಂಗಡಿಯವರು ರಸ್ತೆಯಲ್ಲಿ ರಂಗೋಲಿ ಹಾಕಿ ಮಕ್ಕಳಿಗೆ ಸಿಹಿ, ಶರಬತ್ತು ನೀಡಿ ಹಬ್ಬದಲ್ಲಿ ಬಾಗಿಯಾದರು.

ತಳಿರು ತೋರಣ, ಬಾಳೆಕಂಬದಿಂದ ಊರು ಶೃಂಗಾರಗೊಂಡಿತ್ತು. ನವೋದಯ ಶಾಲೆಯ ಹಳೆಯ ವಿದ್ಯಾರ್ಥಿಗಳು ದಿವಂಗತ ಮಲ್ಲಿಕಾರ್ಜುನ ಚಿತ್ತಗಲ್ ಇವರ ನೆನಪಿಗಾಗಿ ದೇಶಕ್ಕಾಗಿ ನಾವು ಸಂಘಟನೆ ತೀರ್ಥಹಳ್ಳಿ ಹಾಗೂ ಬೆಂಗಳೂರಿನ ಕನ್ನಡ ಮನಸುಗಳು ಇವರುಗಳ ಸಹಕಾರದಿಂದ ಶಾಲೆಯ ಕಾಪೌಂಡ್ ಗೆ ಬಣ್ಣ ಬಳಿದು ಶಾಲೆಗೆ ಮೆರುಗು ನೀಡಿದ್ದರು.

 ದೇವಂಗಿ ಕ್ಲೆಸ್ಟರ್ ನ ಸಮೂಹ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ರವರು, ಹೊಸಅಗ್ರಹಾರ ಶಾಲೆಯ ಶಿಕ್ಷಕರಾದ ದಯಾನಂದ್, ಹೊಸತೋಟ ಶಾಲೆಯ ಶಿಕ್ಷಕ ಅಣ್ಣಪ್ಪ, ಜೈಕುಮಾರ್, ಬಸವಾನಿ ಶಾಲೆಯ ಮುಖ್ಯ ಶಿಕ್ಷಕಿ ಸುಮಾ, ಸಹ ಶಿಕ್ಷಕರಾದ ಪ್ರಕಾಶ್, ಮಮತ, ಅನುರಾಧ, ಅಶ್ವಿತ, ನಿಶ್ಮಿತಾ, ಹಾರೋಗೊಳಿಗೆ ಶಿಕ್ಷಕ ರಾಘವೇಂದ್ರ "ಕಲಿಕಾ ಹಬ್ಬದ "ತಯ್ಯಾರಿಯಲ್ಲಿ  ಶಾಲೆಯ ರಂಗು ಹೆಚ್ಚುವಲ್ಲಿ ಶ್ರಮಿಸಿದ್ದರು. ಶಾಲಾಭಿವೃದ್ಧಿ ಸಮಿತಿಯವರು ಯಶಸ್ಸಿಗಾಗಿ ಕಂಕಣಕಟ್ಟಿ ನಿಂತರು.

ಬಸವಾನಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ರತ್ನಾಕರ ಕಲಾಜಾತವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸುಮಿತಿಯ ಅಧ್ಯಕ್ಷ ಬಿ.ಕೆ. ಉದಯ್ ಕುಮಾರ್ ವಹಿಸಿದ್ದರು.

ದೇವಂಗಿ ವಲಯದ 11 ಸರ್ಕಾರಿ ಶಾಲೆಯ ಮಕ್ಕಳು ಎರಡು ದಿನಗಳ ಕಾಲ ಒಂದೆಡೆ ಸೇರಿ ಸಂಗೀತ ಆಟ ಊರು ಸುತ್ತುವುದು ಕಾಗದ ಕತ್ತರಿಯಿಂದ ವಿವಿಧ ಕ್ರಾಫ್ಟ್ ಮಾಡುವುದು ಹಾಗೆಯೇ ಸಂತಸದಿಂದ ನಲಿದಾಡಿ ಹಬ್ಬವನ್ನು ಆಚರಿಸಿಕೊಂಡರು. ಊರಿನ ದಾನಿಗಳ ಸಹಾಯದಿಂದ ಈ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಶಿಕ್ಷಕರುಗಳ ಆಸಕ್ತಿ ಮತ್ತು ತೊಡಗಿಸಿಕೊಳ್ಳುವ ಬದ್ಧತೆ ಪೋಷಕರ ಪ್ರಶಂಸೆಗೆ ಪಾತ್ರವಾಯಿತು.

ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯರಾದ ಕೊಳಾವರ ಕೆ.ಟಿ. ನಾರಾಯಣಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ರತ್ನಾಕರ, ಗ್ರಾಮ ಪಂಚಾಯತ್ ಸದಸ್ಯ ದೀಪ್, ದಾನಿಗಳಾದ ಶಿಲ್ಪ ಜಿ.ಕೆ. ವೆಂಕಟೇಶ್ ಗುರುವಳ್ಳಿ ಇದ್ದರು. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post