ಶಾರೀಖ್ ಅಜ್ಜಿ ಮನೆ ಮೇಲೆ ಇಡಿ ದಾಳಿ

ಕಟ್ಟಡ ಮಾರಾಟದ ದಾಖಲೆ ಪರಿಶೀಲನೆ
ಶಾರೀಖ್ ನ 1ಕೋಟಿಗೂ ಹೆಚ್ಚಿನ ವ್ಯವಹಾರ ಶೋಧ
ಬಿಜೆಪಿ ಸುಳ್ಳಿಗೆ ಮಾಧ್ಯಮ ಬಳಕೆ - ಕಿಮ್ಮನೆ ಗರಂ

'ನನ್ನ ಮನೆಯ ಮೇಲೆ ಇಡಿ ದಾಳಿಯಾಗಿದೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿದೆ. ಮನೆ ಪರಿಶೀಲನೆ ನಡೆಸಿದರೆ ₹10 ಸಾವಿರ ರೂಪಾಯಿ ಸಿಗುವುದಿಲ್ಲ. ಬಿಜೆಪಿಯ ಸುಳ್ಳುಗಳಿಗೆ ದೃಶ್ಯಮಾಧ್ಯಮ ಪೂರಕವಾಗಿ ಸುದ್ದಿ ಭಿತ್ತರಿಸಿದೆ. ದೇಶ ಮತ್ತು ನಾಡು ಶಾಂತಿಯಿಂದ ಇರಲಿ. ಕಾಂಗ್ರೆಸ್ ಪಕ್ಷಕ್ಕೂ ಶಾರಿಖ್ ಕುಟುಂಬಕ್ಕೂ ಸಂಬಂಧ ಇಲ್ಲ. ಇಡಿ ಅಧಿಕಾರಿಗಳು ಕಚೇರಿ ಬಾಡಿಗೆಯ ಕುರಿತು ಮಾಹಿತಿ ಕೇಳಿದ್ದು ಪೂರೈಸಿದ್ದೇನೆ. ಆರಗ ಜ್ಞಾನೇಂದ್ರ ನಾನು ನೀಡಿದ ಮುಂಗಡ ಹಣ 10 ಲಕ್ಷ ನೀಡಿದರೆ ತಕ್ಷಣ ಕಟ್ಟಡ ತೆರವುಗೊಳಿಸುತ್ತೇನೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಖ್ ಅಜ್ಜಿ ಮನೆಯಲ್ಲಿ ಬುಧವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.

ಶಾರೀಖ್ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ, ಆರ್ಥಿಕ ವಹಿವಾಟು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈಚೆಗೆ ಶಾರಿಕ್ ತಂದೆಗೆ ಸೇರಿದ ಆಸ್ತಿ ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿ ಇರುವ ಎರಡು ಅಂತಸ್ತಿನ ಕಟ್ಟಡ 1ಕೋಟಿಗೂ ಅಧಿಕ ಮೊತ್ತಕ್ಕೆ ದುಬೈನಲ್ಲಿರುವ ವ್ಯಕ್ತಿಗೆ ಮಾರಾಟವಾಗಿದ್ದು ಹಣದ ವಹಿವಾಟು ಮೂಲ ಕಂಡು ಹಿಡಿಯಲು ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಟ್ಟಡದ ಬಾಡಿಗೆದಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹೋದರನ ಮಗ ಕೆ.ಜಿ. ನವೀನ ಬಿನ್ ಕೆ.ಎಂ. ಗೋಪಾಲಕೃಷ್ಣ ಅವರು 2015ರ ಜೂನ್ ತಿಂಗಳಲ್ಲಿ ಸ್ವತ್ತಿನ ಮಾಲೀಕ ಅಸಿಮ್ ಅಬ್ದುಲ್ ಮಜೀದ್ ಬಿನ್ ದಿ ಅಬ್ದುಲ್ ಮಜೀದ್ ಅವರಿಂದ 8 ವರ್ಷದ ಅವಧಿಗೆ 10 ಲಕ್ಷ ರೂಪಾಯಿ ಮುಂಗಡ ಹಾಗೂ ತಿಂಗಳಿಗೆ 1,000 ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಾಡಿಗೆ ಅವಧಿ 2023ರ ಜೂನ್ ನಲ್ಲಿ ಕೊನೆಗೊಳ್ಳಲಿದೆ.

ಕರಾರು ಪತ್ರವನ್ನು ಕಿಮ್ಮನೆ ರತ್ನಾಕರ್ ಇಡಿ ಅಧಿಕಾರಿಗೆ ನೀಡುವ ಮೂಲಕ ತನಿಖೆಗೆ ಸಹಕರಿಸಿದ್ದಾರೆ. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post