ಅಡಿಕೆ ಕಳ್ಳತನಕ್ಕೆ ಹೊಂಚು...? ತಡೆಯುವರ್ಯಾರು…?

ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮದಲ್ಲಿ ಸರಣಿ ಕಳ್ಳತನ
ಗೃಹಸಚಿವರ ಸ್ವಕ್ಷೇತ್ರದಲ್ಲಿ ಕದೀಮರದ್ದೇ ಕಾರುಬಾರು
ಪೊಲೀಸರ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಧಾನ

ಮಲೆನಾಡಿನಲ್ಲಿ ಇದೀಗ ಅಡಿಕೆ ಕೊಯ್ಲು ಆರಂಭವಾಗಿದೆ. ಇದರ ಬೆನ್ನಿಗೆ ಮಜರೆ ಗ್ರಾಮದ ಒಂಟಿ ಮನೆಗಳನ್ನು ಟಾರ್ಗೆಟ್‌ ಮಾಡುತ್ತಿರುವ ಕದೀಮರು ಹಣ, ಬಂಗಾರ, ಅಡಿಕೆ ಕಳ್ಳತನದಲ್ಲಿ ನಿರತರಾಗಿದ್ದಾರೆ. ಮುಖ್ಯವಾಗಿ ಒಂಟಿ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸುತ್ತಿರುವುದು ಆತಂಕ ಹೆಚ್ಚಿಸಿದೆ.
ತೀರ್ಥಹಳ್ಳಿ ತಾಲ್ಲೂಕಿನ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಕಳ್ಳರ ಹಾವಳಿ ಮಿತಿ ಮೀರಿದೆ. ಅಡಿಕೆ ಕೊಯ್ಲು ಸಂಬಂಧ ಮಹಿಳೆಯರು, ಪುರುಷರು, ಮಕ್ಕಳು ಅಡಿಕೆಯ ವಿವಿಧ ಪ್ರಕಾರದ ಕೆಲಸಗಳಿಗಾಗಿ ರಾತ್ರಿ ಕೆಲಸಕ್ಕೆ ತೆರಳುತ್ತಾರೆ. ಕೆಲಸದಿಂದ ವಾಪಾಸ್ಸಾಗುವ ಸಂದರ್ಭದಲ್ಲಿ ಸದ್ದು ಗದ್ದಲದ ಮಾತುಕತೆ ಜೋರಾಗಿ ಇರುವುದರಿಂದ ಕಳ್ಳರು ಮಾತನಾಡಿಕೊಳ್ಳುತ್ತಿದ್ದರು ಕೇಳಿಸಿಕೊಳ್ಳದ ಸ್ಥಿತಿಯೂ ಇದೆ. ಅಲ್ಲದೇ ಒಂಟಿಯಾಗಿ ಅಥವಾ ಗುಂಪಾಗಿ ಮಹಿಳೆಯರು ಅಡಿಕೆ ಸುಲಿತ, ಮುಕ್ಕು ಬಿಡಿಸುವುದು, ಅಡಿಕೆ ಆರಿಸುವ ಮೂಲಕ ಚಿಲ್ಲರೆ ಕೆಲಸಗಳನ್ನು ಮಾಡುವುದು ಬಹಳ ವರ್ಷಗಳಿಂದ ರೂಢಿಯಲ್ಲಿದೆ. ಒಂಟಿಯಾಗಿ ಮಹಿಳೆಯರು ಆಭರಣ ಧರಿಸಿ ರಸ್ತೆಯಲ್ಲಿ ನಡೆಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಇಂತಹ ಕೆಲಸಕ್ಕೆ ಜನರನ್ನು ಸೇರಿಸುವುದು ಕಷ್ಟವಾಗಿ ಪರಿಣಮಿಸಿದೆ.
ಅಡಿಕೆ ಚೇಣಿ, ಬೇಯಿಸುವುದು, ಹರವು ಹಾಕುವ ಕೆಸಲಕ್ಕೆಂದು ಹೊರ ಜಿಲ್ಲೆಗಳಿಂದ ಸಾವಿರಾರು ಕುಟುಂಬಗಳು ತೀರ್ಥಹಳ್ಳಿಗೆ ಬಂದಿವೆ. ಆ ಗುಂಪಿನ ನೆಪದಲ್ಲೂ ಕಳ್ಳರು ಅವಿತುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅಡಿಕೆಕೊಯ್ಲು ಮಾಡಿಸುವವರು ಮತ್ತು ಗ್ರಾಮಸ್ಥರು ಅಂತವರ ಮೇಲೆ ನಿಗಾ ವಹಿಸುವ ಹೊಣೆಗಾರಿಕೆ ಹೊರಬೇಕಾಗಿದೆ. ಅನುಮಾನ ಬಂದ ವ್ಯಕ್ತಿಗಳ ಬಗ್ಗೆ ಜಾಗ್ರತೆ ವಹಿಸಿದರೆ ಗ್ರಾಮದಲ್ಲಿ ಕಳ್ಳತನ ತಡೆಯಲು ಅವಕಾಶಗಳಿವೆ.
ದೇಮ್ಲಾಪುರ ಗ್ರಾಮದಲ್ಲಿ ನಿರಂತರವಾಗಿ ಸರಣಿ ಕಳ್ಳತನ ನಡೆದರು ಪೊಲೀಸ್‌ ಇಲಾಖೆ ಇಲ್ಲಿಯವರೆಗೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮದಲ್ಲಿ ಕದೀಮರು ಇಷ್ಟೆಲ್ಲ ಕೈಚಳಕ ತೋರಿಸುತ್ತಿದ್ದು, ಗೃಹಸಚಿವರ ಸ್ವಕ್ಷೇತ್ರದಲ್ಲಿ ಪೊಲೀಸ್‌ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಹೊರ ಜಿಲ್ಲೆಯಿಂದ ಆಗಮಿಸಿದ ಕಳ್ಳರ ಬಗ್ಗೆ ಪೊಲೀಸ್‌ ಇಲಾಖೆಗೆ ಪೂರ್ಣ ಮಾಹಿತಿಗಳಿರುತ್ತವೆ. ಹಿಂದೆ ಕಳ್ಳತನದಲ್ಲಿ ಭಾಗಿಯಾದ ವ್ಯಕ್ತಿಯನ್ನು ಗುರುತಿಸುವ ಮೂಲಕ ಕಳ್ಳರ ಹುಡುಕಾಟದ ಅರ್ಧ ಕೆಲಸ ಮಾಡುವ ಅವಕಾಶ ಹೆಚ್ಚಿದೆ. ಪೊಲೀಸ್‌ ಇಲಾಖೆ ಕೂಡ ಇಂತವರ ಬಗ್ಗೆ ಜಾಗ್ರತೆ ವಹಿಸಬೇಕು. ಹೊರ ಜಿಲ್ಲೆ ಅಥವಾ ತಾಲ್ಲೂಕು, ಜಿಲ್ಲೆಯ ಕದೀಮರನ್ನು ಮಟ್ಟ ಹಾಕುವ ಕೆಲಸ ಮಾಡಬೇಕಾಗಿದೆ. ಸರಣಿ ಕಳ್ಳತನದಿಂದ ಗ್ರಾಮಗಳನ್ನು ಆತಂಕಕ್ಕೆ ದೂಡಿದ್ದು ಗ್ರಾಮಸ್ತರು ಕೂಡ ಕಳ್ಳರನ್ನು ಹಿಡಿಯಲು ಸಹಕರಿಸಿದರೆ ಬಹುಪಾಲು ಕಳ್ಳತನ ತಡೆಯಬಹುದು.

ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಒಳಗೆ ನಡೆದ ಕಳ್ಳತನದ ಮಾಹಿತಿ ಕೆಳಗಿನಂತಿದೆ.

  • 1.      ಆನಂದ ಜೋಯ್ಸ್‌, ತೊರೇಬೈಲು – ಅಡಿಕೆ ಕಳ್ಳತನ
  • 2.      ದೇಮ್ಲಾಪುರ ಅಂಗಡಿ ಗುರುಮೂರ್ತಿ ಮನೆ – ಹಣ ಮತ್ತು ಅಡಿಕೆ ಕಳ್ಳತನ
  • 3.      ಸುಬ್ರಹ್ಮಣ್ಯ ಭಟ್‌ ದೇಮ್ಲಾಪುರ – ಅಡಿಕೆ ಕಳ್ಳತನ
  • 4.      ತಿಮ್ಮಪ್ಪ ಬಿಳಗನಮನೆ – ಅಡಿಕೆ ಕಳ್ಳತನ
  • 5.      ಶಮಂತ ರಮೇಶ್‌ ತೊರೇಬೈಲು – ಬಂಗಾರ, ಹಣ ಕಳ್ಳತನ
  • 6.      ಯಶೋಧ ಗುಡ್ಡಪ್ಪಗೌಡ ಮಳಲೀಮಕ್ಕಿ – ಹಣ, ಬಂಗಾರ
  • 7.      ಸುನಿತಾಬಾಯಿ ಆನಂದ ನಾಯ್ಕ, ಯೋಗಿಮಳಲಿ – ಹಣ, ಬಂಗಾರ
  • 8.      ಯೋಗಿಮಳಲಿ ಈಶ್ವರ ದೇವಸ್ಥಾನ ಕಳ್ಳತನ
  • 9.      ಸೀನ ಪೂಜಾರಿ ಹನ್ನಂದುಖಂಡ್ಗ – ಹಣ, ಬಂಗಾರ


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post