ಬಾಳೇಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಬೋರ್ಡ್

ಹಳೆಯ ವಿದ್ಯಾರ್ಥಿ ಸಂಘದ ಶ್ಲಾಘನೀಯ ಕಾರ್ಯ
85,000 ರೂಪಾಯಿ ವೆಚ್ಚದ ನಾಮಫಲಕ ಅಳವಡಿಕೆ
ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್‌ ತಿರಳೇಬೈಲು ನೇತೃತ್ವದಲ್ಲಿ ಫಲಕ ಹಸ್ತಾಂತರ

ತಾನು ಓದಿದ ಶಾಲೆಗಾಗಿ ಏನಾದರೂ ಒಳಿತು ಮಾಡಬೇಕು ಎಂಬ ಆಶಾ ಭಾವನೆಯಿಂದ ಹುಟ್ಟಿಕೊಂಡಿರುವ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ (ರಿ) ಅನೇಕ ವರ್ಷಗಳಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಯಗಾರ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಉದ್ಯೋಗ ಮುಂತಾದವುಗಳ ಮೂಲಕ ಕಿರಿಯ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದ ಸಂಘ ಇದೀಗ ಬೃಹತ್‌ ಮೊತ್ತದ ದೊಡ್ಡ ಉಡುಗೆಯನ್ನು ಕಾಲೇಜಿಗೆ ಶನಿವಾರ ಹಸ್ತಾಂತರಿಸಿದೆ.

ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸುವ ಪ್ರವಾಸಿಗಳಿಗೆ ಬಾಳೇಬೈಲು ಸಮೀಪ ಒಂದು ಕಾಲೇಜು ಇದೆ ಎಂದು ಗುರುತಿಸುವುದು ಕಷ್ಟವಾಗಿತ್ತು. ಯಾಕೆಂದರೆ ಅಲ್ಲಿ ಯಾವುದೇ ರೀತಿಯ ನಾಮಫಲಕ ಇಷ್ಟು ದಿನ ಕಂಡು ಬರುತ್ತಿರಲಿಲ್ಲ. ಕಾಲೇಜು ಬಿಡುವ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಬಸ್‌ ನಿಲ್ದಾಣದಲ್ಲಿ ಕಾಯುವ ವೇಳೆ ಕಾಲೇಜು ಇದೆ ಎಂದು ಮಾತ್ರ ತಿಳಿಯುತ್ತಿತ್ತು. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ವಂದನೆ ಫಲಕ ಇರುವ ಜಾಗದ ಕೆಳಗೆ ಇದ್ದರು ಕೂಡ ಕಾಲೇಜಿನ ದಾರಿ ತೋರಿಸುವ ಫಲಕಗಳ ಕೊರತೆ ಎದ್ದು ಕಾಣಿಸುತ್ತಿತ್ತು.
ಹಂತ ಹಂತವಾಗಿ ಕಾಲೇಜು ವಿಸ್ತರಣೆಯಾಗುತ್ತಿದೆ. ತೀರ್ಥಹಳ್ಳಿ ಸುತ್ತಮುತ್ತಲ ಭಾಗದಲ್ಲಿ ಬಾಳೇಬೈಲು ಕಾಲೇಜು ಪ್ರಸಿದ್ಧಿ ಪಡೆಯುತ್ತಿದೆ. ಅದಕ್ಕೆ ಬೆನ್ನೆಲುಬಾಗಿ ಹಳೆಯ ವಿದ್ಯಾರ್ಥಿಗಳ ಸಂಘ ನಿಂತಿದೆ. ಇದೀಗ ಬಾಳೇಬೈಲು ಬಸ್‌ ನಿಲ್ದಾಣದ ಸಮೀಪದಲ್ಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಫಲಕ ಕಂಗೊಳಿಸುವಂತೆ ಹಳೆಯ ವಿದ್ಯಾರ್ಥಿಗಳು ಮಾಡಿದ್ದಾರೆ.
ಸುಮಾರು 85,000 ರೂಪಾಯಿಗಳನ್ನು ಹಿರಿಯ ವಿದ್ಯಾರ್ಥಿಗಳೇ ಭರಿಸಿ ರಾಷ್ಟ್ರೀಯ ಹೆದ್ದಾರಿ 169ಎ ಪಕ್ಕದಲ್ಲಿ ಬೃಹತ್‌ ಗಾತ್ರ ಹೋಂ ಲೆಟರ್‌ ತ್ರೀಡಿ ಬೋರ್ಡ್ ಮಾದರಿಯ ನಾಮಫಲಕ ಅಳವಡಿಸಿದ್ದಾರೆ.. ಸಕ್ರಿಯವಾಗಿ ಸಂಘವನ್ನು ಮುನ್ನಡೆಸುತ್ತಿರುವ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್‌ ತಿರಳೇಬೈಲು ಎಲ್ಲರ ವಿಶ್ವಾಸ ಪಡೆದು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಂಘದ ಆಡಳಿತ ಮಂಡಳಿ ಶಾಲಾ ಅಭಿವೃದ್ಧಿಗಾಗಿ ಈ ಹಿಂದೆ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ದೇಣಿಗೆ ಸ್ವೀಕರಿಸಿ ಅದನ್ನು ಸದುಪಯೋಗ ಮಾಡಿಕೊಳ್ಳುವ ಮಹತ್ವದ ಜವಾಬ್ದಾರಿ ನಿರ್ವಹಿಸಿದೆ. ಎಲ್ಲಾ ಸದಸ್ಯರೂ ಕೂಡ ಈ ಕೆಲಸಕ್ಕೆ ಸಾಥ್‌ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಹೆಚ್.ಡಿ. ಧರ್ಮಣ್ಣ, ಉಪನ್ಯಾಸಕರಾದ ಗಣಪತಿ, ಸುಧಾಕರ್, ದಿವಾಕರ್, ರಮೇಶ್ ಸಂಘದಉಪಾಧ್ಯಕ್ಷ ಅಭಿಷೇಕ್, ಕಾರ್ಯದರ್ಶಿಗಳಾದ ಮಾವೀಶ ಅರೆಹಳ್ಳಿ, ಅಮಿತ್ ಹೆಗ್ಗಾರ್, ಕೋಶಾಧ್ಯಕ್ಷೆ ರಂಜಿತಾ, ಸದಸ್ಯರಾದ ಸುನಿಲ್ ಕನ್ನಂಗಿ, ದೀಕ್ಷಿತ್, ಮನೋಜ್ ಮೇಲಿನ ಕುರುವಳ್ಳಿ, ಮಧುಸೂದನ್, ಮಿಥುನ್ ನೊಣಬೂರು, ಶರತ್ ಬಿಳುಮಡಿ, ನವೀನ್ ಇನ್ನಿತರರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post