ಐಸಿಸಿಎ ಅವಾರ್ಡ್: ಅಂತಿಮ ಹಂತಕ್ಕೆ ಕನ್ನಡಿಗ ಅಧಿಕಾರಿ

 ಲೈಂಗಿಕ ದೌರ್ಜನ್ಯದಿಂದ ಆರು ಮಂದಿ ಬಾಲಕರ ರಕ್ಷಣೆ 

 ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ 

 ತೀರ್ಥಹಳ್ಳಿಗೆ ಮತ್ತೊಂದು ಗರಿ 

ಸೈಬರ್ ಕ್ರೈಂ ಪ್ರಕರಣವನ್ನು ಅತ್ಯುತ್ತಮವಾಗಿ ತನಿಖೆ ಮಾಡಿದ ಪೊಲೀಸರಿಗೆ ರಾಷ್ಟ್ರಮಟ್ಟದಲ್ಲಿ ನೀಡುವ ಇಂಡಿಯಾ ಸೈಬರ್ ಕಾಪ್ ಅವಾರ್ಡ್ (India Cyber Cop Award) ಪುರಸ್ಕಾರಕ್ಕೆ ಶಿವಮೊಗ್ಗದ ಸೈಬರ್, ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಠಾಣೆ (CEN) ಹಿಂದಿನ ಅಧಿಕಾರಿ ಕೆ.ಟಿ.ಗುರುರಾಜ್ ಅವರ ಹೆಸರು ನಾಮನಿರ್ದೇಶನಗೊಂಡಿದೆ.

ಗುರುರಾಜ್‌ ತನಿಖೆ ಮಾಡಿದ ಪ್ರಕರಣವು ರಾಷ್ಟ್ರಮಟ್ಟದ ಮೂರು ಅತ್ಯುತ್ತಮ ಪ್ರಕರಣಗಳಲ್ಲೊಂದು ಎಂಬ ಶ್ರೇಯಕ್ಕೂ ಪಾತ್ರವಾಗಿದೆ. ಭೋಪಾಲ್‌ನ ಸೈಬರ್ ಆ್ಯಂಡ್‌ ಹೈಟೆಕ್ ಪೊಲೀಸ್ ಸ್ಟೇಷನ್‌ನ ಇನ್‌ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಜನ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುವರ್ಣ ಶಿಂಧೆ ಅಂತಿಮ ಸುತ್ತಿಗೆ ಆಯ್ಕೆಯಾದ ಇನ್ನಿಬ್ಬರು ಅಧಿಕಾರಿಗಳು.

ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪರಿಸರದಲ್ಲಿ ಆರು ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಮಕ್ಕಳ ಅಶ್ಲೀಲ ಚಿತ್ರದ ಮಾಹಿತಿ ಆಧರಿಸಿ ಗುರುರಾಜ್ ಅವನ ಬೆನ್ನುಬಿದ್ದಿದ್ದರು. ಮೂಲತಃ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್‌ ಆಗಿರುವ ಗುರುರಾಜ್, ತಮಗಿರುವ ತಾಂತ್ರಿಕ ಜ್ಞಾನ ಬಳಸಿ ಪ್ರಕರಣದ ಆಳಕ್ಕಿಳಿದಿದ್ದರು.

ಸಂಗೀತ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಚಟುವಟಿಕೆಯಲ್ಲಿ ಊರಿನಲ್ಲಿ ಮುಂಚೂಣಿಯಲ್ಲಿದ್ದು, ಬಹಳಷ್ಟು ಗೌರವಕ್ಕೆ ಪಾತ್ರನಾಗಿದ್ದ ಆ ವ್ಯಕ್ತಿ ಶಿಕ್ಷಕನ ಹೆಸರಲ್ಲಿ ಗಂಡು ಮಕ್ಕಳನ್ನು ಲೈಂಗಿಕ ಶೋಷಣೆಗೆ ಬಳಸಿಕೊಳ್ಳುತ್ತಿದ್ದ. ಮಕ್ಕಳ ರಕ್ಷಣೆ ಮಾಡಿ ಆತನ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಕಲೆ ಹಾಕಿದ ಗುರುರಾಜ್, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಗುರುಗ್ರಾಮದಲ್ಲಿ ಡಿಸೆಂಬರ್ 22ರಂದು ನಡೆಯುವ NASSCOM-DSCI ಇನ್‌ಫಾರ್ಮೇಶನ್ ಸೆಕ್ಯೂರಿಟಿ ಸಮಿತ್‌ನಲ್ಲಿ ಅಂತಿಮ ವಿಜೇತರ ಹೆಸರು ಘೋಷಿಸಲಾಗುತ್ತಿದೆ. ಗುರುರಾಜ್‌ ಸದ್ಯ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಣ್ಣ ಸುಳಿವು ಆಧರಿಸಿ ತನಿಖೆ

ಜಾಗತಿಕ ಸಮುದಾಯ ಮಕ್ಕಳ ಪೋರ್ನ್‌ಸೈಟ್ ಹಾಗೂ ಪೋಕ್ಸೊ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್‌ಪ್ಲಾಯ್‌ಟೆಡ್ ಚಿಲ್ಡ್ರನ್ಸ್‌ (ಎನ್‌ಸಿಎಫ್‌ಎಂಎ) ಹಾಗೂ ಅಮೆರಿಕ ಮೂಲದ ಸೈಬರ್‌ ಟಿಪ್‌ಲೈನ್‌ (ಸಿಟಿಎಲ್‌)ನಂತಹ ಸಂಸ್ಥೆಗಳು ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ಬಗ್ಗೆ ನಿರಂತರವಾಗಿ ನಿಗಾ ಇಟ್ಟಿರುತ್ತವೆ. ಈ ಹಾದಿಯಲ್ಲಿಯೇ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್‌ಪ್ಲಾಯ್‌ಟೆಡ್ ಸಂಸ್ಥೆ ನೀಡಿದ ಸಣ್ಣ ಸುಳಿವು ಆಧರಿಸಿ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ಕೆ.ಟಿ. ಗುರುರಾಜ್‌ ತನಿಖೆಗೆ ಮುಂದಾಗಿದ್ದರು. ಈ ವೇಳೆ ಈ ಪ್ರಕರಣ ಬಯಲಾಗಿತ್ತು.

ಗುರುರಾಜ್ ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮದ ಕರ್ಕಿಯವರು. ಕರ್ಕಿ ಕೆ.ಎಸ್. ತೋಪಯ್ಯನಾಯ್ಕ ಹಾಗೂ ಜಿ.ಜಿ.ಜಯಮ್ಮ ದಂಪತಿಯ ಪುತ್ರ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post