ಕಾಸು ಕೊಟ್ಟರಷ್ಟೇ ಕಾರ್ಮಿಕ ಸೌಲಭ್ಯ

ಗೃಹಸಚಿವರ ಕ್ಷೇತ್ರದಲ್ಲಿ ಅಧಿಕಾರಿಗಳು ಲಂಚ ಪಡೆಯುವ ಭಕ್ಷಕರು..!
ಸೌಲಭ್ಯ ವಂಚಿತ ಕಾರ್ಮಿಕರ ಆರೋಪ
ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಳಕೆರೆ ಪೂರ್ಣೇಶ್ ಹೋರಾಟ

ಬಡ ಹಿಂದುಳಿದ ಕಾರ್ಮಿಕರ ಪಾಲಿಗೆ ತಾಲ್ಲೂಕು ಕಾರ್ಮಿಕ ಅಧಿಕಾರಿಗಳು ಅಕ್ಷರಶಃ ಭಕ್ಷಕರಂತೆ ಕಾಣಿಸುತ್ತಿದ್ದಾರೆ. “ದೇವರು ಕೊಟ್ಟರು ಪೂಜಾರಿ ಕೊಡುವುದಿಲ್ಲ” ಎಂದು ಆರೋಪಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಳಕೆರೆ ಪೂರ್ಣೇಶ್ ಆರೋಪಿಸಿ ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕಾರ್ಮಿಕ ಇಲಾಖೆ ಮುಂಭಾಗ  ಪ್ರತಿಭಟನೆ ನಡೆಸಿದರು.

ಯಾರದ್ದೋ ಮನೆ, ಜಮೀನು, ಸಾರ್ವಜನಿಕ ಕ್ಷೇತ್ರದಲ್ಲಿ ಹಗಲಿರುಳು ದುಡಿಯುತ್ತಿರುವ ಕೆಲಸಗಾರರಿಗೆ ಕಾರ್ಮಿಕ ಕಾರ್ಡ್‌ ಲಭ್ಯವಾಗುತ್ತಿಲ್ಲ. ಸ್ಥಳೀಯ ಪ್ರಭಾವ ಮತ್ತು ಕಂಪ್ಯೂಟರ್‌ ಸೆಂಟರ್‌ ಲಾಬಿಯಿಂದ ಕಾರ್ಮಿಕೇತರರ ನೊಂದಣಿಯಾಗುತ್ತಿದೆ. ಈ ಕಾರಣದಿಂದ ನಿಜವಾದ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿಲ್ಲ. ಕೊರೊನಾ ನಂತರ ಕಾರ್ಮಿಕ ಇಲಾಖೆಯಿಂದ ಸುಮಾರು 12 ಸಾವಿರ ಟೂಲ್‌ ಕಿಟ್ ಹಂಚಲಾಗಿದೆ. ಆದರೆ ಬಹುತೇಕ ಕಾರ್ಮಿಕ ವರ್ಗದವರಿಗೆ ಮಾಹಿತಿ ಇಲ್ಲದೆ ಪ್ರಭಾವಿಗಳ ಮನೆ ಸೇರುವಂತಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಕಾರ್ಡ್‌ ಹೊಂದಿರುವ ಕೆಲಸಗಾರರು ಅಥವಾ ಕಾರ್ಮಿಕೇತರರು ತಾಲ್ಲೂಕು ಪ್ರಭಾರ ಕಾರ್ಮಿಕ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಲಂಚ ನೀಡಿದರೆ ಮಾತ್ರ ಸೌಲಭ್ಯ ದೊರೆಯುತ್ತಿದೆ. ನೇರವಾಗಿ ಫಲಾನುಭವಿಗಳಿಂದ ಲಂಚ ಕೇಳಿ ಪಡೆಯುವ ಚಾಳಿಯನ್ನು ಅಧಿಕಾರಿಗಳು ಬೆಳೆಸಿಕೊಂಡಿದ್ದಾರೆ. ಶೇಕಡ 10 ರಷ್ಟು ಕನಿಷ್ಟ ಹಣ ಕಿಕ್‌ ಬ್ಯಾಕ್ ಹಿಂಪಡೆಯುತ್ತಿದ್ದು, ಸೌಲಭ್ಯ ಪೂರ್ವ ನೀಡದವರಿಗೆ ಮನೆಯ ದಾರಿ ತೋರಿಸಲಾಗುತ್ತಿದೆ ಎಂದು ಹೋರಾಟ ನಿರತ ಫಲಾನುಭವಿಗಳು ದೂರಿದ್ದಾರೆ.
18 ರಿಂದ 60 ವರ್ಷದೊಳಗಿನವರು ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದ ರಿಪೇರಿ, ರಸ್ತೆ, ರೈಲ್ವೆ, ಪ್ರವಾಹ ನಿಯಂತ್ರಣ ಕಾಮಗಾರಿ, ವಿದ್ಯುತ್ ಉತ್ಪಾದನೆ, ಪ್ರಸರಣ-ವಿತರಣೆ, ಅಣೆಕಟ್ಟು, ಸೇತುವೆ, ಕಲ್ಲು ಗಣಿಗಾರಿಕೆ, ಚಪ್ಪಡಿ, ಟೈಲ್ಸ್‌, ಪ್ಲಂಬಿಂಗ್, ವೈರಿಂಗ್, ಕಬ್ಬಿಣ-ಲೋಹದ ಗ್ರಿಲ್‌, ಕಾಂಕ್ರೀಟ್ ಬ್ರಿಕ್ಸ್, ಬ್ಲಾಕ್ಸ್, ಹಾಲೋಬ್ಲಾಕ್ಸ್, ನೆಲಸಮಗೊಳಿಸುವಿಕೆ, ಭೂಮಿಯ ಕತ್ತರಿಸುವಿಕೆ, ತಾತ್ಕಾಲಿಕ ಆಶ್ರಯ ನಿರ್ಮಾಣ ಮುಂತಾದವರು ಇಲಾಖೆಯ ನೊಂದಣಿ ಮಾಡಿಕೊಳ್ಳುವ ಮೂಲಕ ಸೌಲಭ್ಯ ಪಡೆಯಬಹುದಾಗಿದ್ದು ಕೆಲವರಿಗೆ ಮಾತ್ರ ಯೋಜನೆ ಲಭ್ಯವಾಗುತ್ತಿದೆ ಎಂಬ ಆರೋಪವಿದೆ.

ಇಲಾಖೆಯಿಂದ ದೊರೆಯುವ ಧನ ಸಹಾಯ

ಮೂರು ವರ್ಷ ಸದಸ್ಯತ್ವದೊಂದಿಗೆ ಕಾರ್ಮಿಕ ಕಾರ್ಡ್‌ ಇರುವ 60 ವರ್ಷ ಪೂರೈಸಿದವರಿಗೆ ಮಾಸಿಕ ₹1000 ರೂ ಪಿಂಚಣಿ ಸೌಲಭ್ಯ, ₹2 ಲಕ್ಷದ ವರೆಗೆ ದುರ್ಭಲತೆ ಪಿಂಚಣಿ, ₹ 20 ಸಾವಿರ ಮೌಲ್ಯದ ಶ್ರಮ ಸಾಮರ್ಥ್ಯ ಟ್ರೈನಿಂಗ್-ಕಮ್-ಟೂಲ್‌ಕಿಟ್, ₹2 ಲಕ್ಷದ ವರೆಗೆ ಕಾರ್ಮಿಕ ಗೃಹ ಭಾಗ್ಯ, ಹೆಣ್ಣು ಮಗುವಿಗೆ ₹30 ಸಾವಿರ, ಗಂಡು ಮಗುವಿಗೆ ₹20 ಸಾವಿರ ತಾಯಿ ಲಕ್ಷ್ಮೀ ಬಾಂಡ್‌, ಅಂತ್ಯಕ್ರಿಯೆಗೆ  ₹4 ರಿಂದ ₹5೦ ಸಾವಿರ ಸಹಾಯಧನ, ಇಬ್ಬರು ಮಕ್ಕಳಿಗೆ ವಿದ್ಯಾರ್ಥಿ ವೇತನ, ₹300 ರಿಂದ ₹10 ಸಾವಿರದ ವರೆಗೆ ವೈದ್ಯಕೀಯ ಸಹಾಯಧನ, ₹5 ಲಕ್ಷ ವರೆಗೆ ಅಪಘಾತ ಪರಿಹಾರ, ಶಸ್ತ್ರಚಿಕಿತ್ಸೆಗೆ ₹2 ಲಕ್ಷದ ವರೆಗೆ ಸಹಾಯ ಧನ, ಗೃಹ ಲಕ್ಷ್ಮೀ ಬಾಂಡ್ ಯೋಜನೆಯಡಿ ₹5೦ ಸಾವಿರ ಮದುವೆ ಸಹಾಯಧನ, ವಾರ್ಷಿಕ ₹6 ಸಾವಿರದ ವರಗೆ ತಾಯಿ ಮಗು ಸಹಾಯ ಹಸ್ತ ಮುಂತಾದ ಯೋಜನೆಗಳು ಕಾರ್ಮಿಕ ಇಲಾಖೆಯಲ್ಲಿ ಪ್ರಸ್ತುತ ಜಾರಿಯಲ್ಲಿದೆ.

ಯಾವ ಸೌಲಭ್ಯಕ್ಕೆ ಎಷ್ಟು ಲಂಚ ಆರೋಪ?

1. ಮದುವೆ ಸಹಾಯಧನ ₹4000 ದಿಂದ ₹7000
2. ಕಾರ್ಮಿಕ ಗೃಹ ಭಾಗ್ಯ ₹ 10,000 ದಿಂದ ₹20,000
3. ಪಿಂಚಣಿ ಸೌಲಭ್ಯ ಮಂಜೂರಾತಿಗೆ ₹ 500 ರಿಂದ ₹1000
4. ವಿದ್ಯಾರ್ಥಿ ವೇತನ ಮಂಜೂರಾತಿಗೆ ₹1000 ದಿಂದ ₹2000
5. ಶ್ರಮ ಸಾಮರ್ಥ್ಯ ಟೂಲ್‌ಕಿಟ್ ₹500 ದಿಂದ ₹1000
6. ದುರ್ಭಲತೆ ಪಿಂಚಣಿ ₹1000 ದಿಂದ ₹5000
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post