ಉಪವಾಸ ಕೈ ಬಿಟ್ಟ ಮಾಜಿ ಸಚಿವರು

ಕೊನೆಗೂ ಆರಗ ನಂಬಿದ ಕಿಮ್ಮನೆ..!
ಗೃಹಸಚಿವರಿಂದ ಹೊಸ ಭರವಸೆ
ಕಾರ್ಮಿಕರೇ ಕಿಮ್ಮನೆಯನ್ನು ಕೈಬಿಟ್ಟರೇ…?

ಹತ್ತಾರು ಕೋಟಿ ಅವ್ಯವಹಾರ, ಅಕ್ರಮದ ಕೂಪದಂತಿರುವ ಮೇಲಿನ ಕುರುವಳ್ಳಿ ಕಲ್ಲುಗಣಿಗಾರಿಕೆಗೆ ಸಂಬಂಧಿಸಿದಂತೆ ಅನುದೀಪ್‌ ಎಂಬಾತ ಲಿಖಿತ ದೂರು ಸಲ್ಲಿಸಿದ ಕಾರಣಕ್ಕೆ ಇತ್ತೀಚೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಂದ್ಯಾ, ಅವಿನಾಶ್‌ ಕುದ್ದು ಭೇಟಿ ನೀಡಿ ಟ್ರಂಚ್‌ ಹೊಡೆದು ಅಕ್ರಮ ಸಾಗಾಟ, ಕೆಲಸ ನಿಲ್ಲಿಸಿದ್ದರು.

ಇದರ ವಿರುದ್ದ ಸಿಡಿದೆದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಕಾರ್ಮಿಕರಿಗೆ ಕೆಲಸ ಇಲ್ಲ. ದೈನಂದಿನ ಹೊಟ್ಟೆಪಾಡು ಸಾಗಿಸಲು ಕಷ್ಟವಾಗುತ್ತಿದೆ. ಮತ್ತೆ ಕೆಲಸಕ್ಕೆ ಅವಕಾಶ ಮಾಡಬೇಕು ಎಂದು ನೂರಾರು ಜನ ಕಾರ್ಮಿಕರೊಂದಿಗೆ ಮೇಲಿನ ಕುರುವಳ್ಳಿಯಿಂದ ತಾಲ್ಲೂಕು ಕಚೇರಿಗೆ ಪಾದಯಾತ್ರೆಯಲ್ಲಿ ಧಾವಿಸ ಒಂದಿಡೀದಿನ ಕಾರ್ಮಿಕರು ಹಾಗೂ ಬೆಂಬಲಿಗರೊಂದಿಗೆ ಉಪವಾಸ ಕುಳಿತಿದ್ದರು.

ಅಲ್ಲದೇ ಬಂಡೆ ಕೆಲಸ ಸ್ಥಗಿತಗೊಳ್ಳಲು ಆರಗ ಜ್ಞಾನೇಂದ್ರರೇ ಕಾರಣ, ಬಾಳೇಬೈಲು ಸಂತೋಷ್‌ ಪೂಜಾರಿ ಸೇರಿದಂತೆ ಬಿಜೆಪಿ ಬೆಂಬಲಿತ ಬಂಡೆ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಗೃಹಸಚಿವರ ಹಿಂಬಾಲಕರಿಗೆ ಬಂಡೆಯನ್ನು ಲೀಸ್‌ ಮಾಡಿಕೊಡಬೇಕೆಂಬ ಕಾರಣಕ್ಕಾಗಿಯೇ ಸಲ್ಲದ ಕಿರುಕುಳ ನಡೆಯುತ್ತಿದೆ.

ಗುಮ್ಮಿ ನೀರು ಕುಡಿದ ʼಬಡವʼ ಕಾರ್ಮಿಕರನ್ನು ಉಪವಾಸ ಕೆಡವಿ ಹೊಟ್ಟೆಮೇಲೆ ಹೊಡೆಯುತ್ತಿದ್ದರೆ. ಶ್ರೀಮಂತ ಚಿನ್ನದ ಚಮಚ ಬಾಯಲಿಟ್ಟು ಹುಟ್ಟಿದವನು ಎಂಬೆಲ್ಲ ಗೇಲಿ ಮಾಡಿಸಿಕೊಂಡ ನಾನು ಉಪವಾಸ ಮಾಡುತ್ತಿದ್ದೇನೆ ಎಂದು ಘೋಷಿಸಿದ್ದರು. ಬಳಿಕ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅಮೃತ್‌ ಅತ್ರೇಶ್‌ ಮೂಲಕ ಮನವಿ ಮಾಡಿಕೊಂಡ ಕಾರಣ ಕಿಮ್ಮನೆ ಅವರ ಉಪವಾಸ ಮುಂದೂಡಲ್ಪಟ್ಟಿತ್ತು. ಅಕ್ಟೋಬರ್‌ 19ರ ಹೊತ್ತಿಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ ಅಕ್ಟೋಬರ್‌ ಕೊನೆಯ ವಾರ ಬಂದರೂ ಸಮಸ್ಯೆ ಹಾಗೆ ಉಳಿದ ಕಾರಣ ಕಿಮ್ಮನೆ ಮತ್ತೆ ನವೆಂಬರ್‌ 3 ರಂದು ಉಪವಾಸ ಕೂರುವ ಘೋಷಣೆ ಮೊಳಗಿಸಿದ್ದರು.

ಇದರ ಬೆನ್ನಲ್ಲೇ ಗೃಹಸಚಿವ ಆರಗ ಜ್ಞಾನೇಂದ್ರ ಮೇಲಿನ ಕುರುವಳ್ಳಿಯ ಹರಿಜನ ಗಿರಿಜನ ಕಲ್ಲುಕುಟಿಕರ ಸಹಕಾರ ಸಂಘದ ಸಭಾಂಗಣದಲ್ಲಿ ಸಭೆ ನಡೆಸಿ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಕಿಮ್ಮನೆಗೆ ಬೆಂಬಲ ನೀಡಿದ ಮಾಲೀಕರು, ಕಾರ್ಮಿಕರು ಆರಗ ಭರವಸೆಯನ್ನು ಕಾದು ನೋಡುವ ತಂತ್ರಗಾರಿಕೆಗೆ ಅಳವಡಿಸಿಕೊಂಡಿದ್ದರಿಂದ ಕಿಮ್ಮನೆ ಕೂಡ ಒಂಟಿಯಾದಂತಿದೆ. ಇದರಿಂದಾಗಿ ಕೊನೆಗೂ ಆರಗ ಜ್ಞಾನೇಂದ್ರರನ್ನು ನಂಬಿ ಕಿಮ್ಮನೆ ಉಪವಾಸ ಕೈಬಿಡುವುದಾಗಿ ಘೋಷಿಸಿದ್ದಾರೆ. ಈ ಘೋಷಣೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಸದಾಕಾಲ ಆರಗ ವಿರುದ್ದ ಗುಡುಗುತ್ತಿದ್ದ ಕಿಮ್ಮನೆ ಏಕಾಏಕಿ ಆರಗ ಜ್ಞಾನೇಂದ್ರ ಹೇಳಿದ ಕಾರಣಕ್ಕೆ ಉಪವಾಸ ಬಿಡುತ್ತಿದ್ದೇನೆ ಎಂಬ ಹೇಳಿಕೆಯನ್ನು ತುಸು ಕಂಗಾಲಾಗಿ ಸ್ವೀಕರಿಸಿರುವ ಬಿಜೆಪಿ ಪಡೆ ಇದರಲ್ಲೇನೋ ಮಸಲತ್ತು ಇದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಇತ್ತ ಇವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ನೂರಾರು ಮಂದಿ ಗೃಹಸಚಿವರು ಹೇಳಿದ ಕಾರಣಕ್ಕೆ ಅದನ್ನು ನಂಬಿ ಕಿಮ್ಮನೆ ರತ್ನಾಕರ್‌ ಉಪವಾಸ ಕೈಬಿಡುವಂತಿದ್ದರೆ ನಾವೇಕೆ ಇವರ ಜೊತೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗೃಹಸಚಿವರ ಹಾಗೂ ಹಿಂಬಾಲಕರ ಕಣ್ಣು ಕೆಂಪಗೆ ಮಾಡಬೇಕಿತ್ತು…? ಅದರ ಬದಲು ಇವೆಲ್ಲ ಪ್ರಹಸನಗಳು ಆಗುವ ಮೊದಲೇ ನೇರವಾಗಿ ಗೃಹಸಚಿವರಿಗೆ ಸಾಷ್ಟಾಂಗ ಹೊಡೆಯುತ್ತಿದ್ದೆವು ಎಂದು ಪೇಚಾಡುತ್ತಿರುವ ಸುದ್ದಿ ಕೇಳಿ ಬರುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post