ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್ ಸ್ಪೋಟ

ತೀರ್ಥಹಳ್ಳಿ ಶಾರೀಕ್‌ ಭಾಗಿಯಾಗಿರುವುದು ದೃಢವಾಯಿತೇ..?
ಪೊಲೀಸರ ವೈಫಲ್ಯ ಕುರಿತು ಸಾರ್ವಜನಿಕ ಚರ್ಚೆ…!
ಗೃಹಸಚಿವರು ಓಡಾಡುವ ಜಾಗದಲ್ಲಿ ಇದೆಂತ ಅಭದ್ರತೆ…?

ತೀರ್ಥಹಳ್ಳಿ ಇಲ್ಲಿಯವರೆಗೆ ಸಾಹಿತ್ಯ, ಜನಪರ ಚಳುವಳಿಗಳು, ಸಹಜ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿತ್ತು. ಸಿನಿಮಾ ಮಂದಿಗೆ ತೀರ್ಥಹಳ್ಳಿ ಅಚ್ಚುಮೆಚ್ಚಿನ ಶೂಟಿಂಗ್‌ ತಾಣ. ಇಲ್ಲಿನ ಜನ ಸುಸಂಸ್ಕೃತರು ಮತ್ತು ವಿದ್ಯಾವಂತರು ಹಾಗಾಗಿಯೇ ಇಲ್ಲಿ ಕೆಲಸ ಮಾಡಿದ ಅನೇಕ ಸರ್ಕಾರಿ ಅಧಿಕಾರಿಗಳು ನಿವೃತ್ತಿಯ ನಂತರವೂ ಮನೆ ನಿರ್ಮಿಸಿ ಇಲ್ಲಿಯೇ ಉಳಿದ್ದಾರೆ.

ಆದರೆ, ಇದೀಗ ಇಡೀ ತಾಲ್ಲೂಕೇ ಆಘಾತಗೊಳ್ಳುವಂತೆ ಭಯೋತ್ಪಾದಕ ಕೃತ್ಯದಿಂದ ತೀರ್ಥಹಳ್ಳಿ ಇಡೀ ಪ್ರಪಂಚದಾದ್ಯಂತ ಗುರುತಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಶಂಕಿತ ಆರೋಪಿ ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಶಾರೀಕ್‌ ಎಂಬುದನ್ನು ಕೆಲವು ಗಂಟೆಗಳ ಹಿಂದಷ್ಟೇ ಅವರ ಕುಟುಂಬದವರು ಗುರುತಿಸಿದ ಬಳಿಕ ತೀರ್ಥಹಳ್ಳಿ ಭಯೋತ್ಪಾದಕ ಚಟುವಟಿಕೆಯ ಅಡಗು ತಾಣವಾಗಿ ಜಾಗತಿಕ ಉಗ್ರರ ಪಟ್ಟಿಯಲ್ಲಿರುವ ಐಸಿಸ್‌ ವರೆಗೂ ಇದರ ಬೇರುಗಳು ಹರಡಿಕೊಂಡಿರುವ ಸಂಶಯವನ್ನು ಪೊಲೀಸ್‌ ಇಲಾಖೆ ವ್ಯಕ್ತಪಡಿಸುತ್ತಿದೆ.

ಹಾಗೆ ನೋಡಿದರೆ ಶಾರೂಕ್‌ ಮತ್ತು ಈಗಾಗಲೇ ಇನ್ನೊಂದು ಪ್ರಕರಣದಲ್ಲಿ ಬಂಧಿತನಾಗಿರುವ ಮಾಜ್‌ ಉತ್ತಮ ಕುಟುಂಬದ ಹಿನ್ನಲೆ ಹೊಂದಿರುವವರು. ಚಿಕ್ಕಮ್ಮನ ಆಶ್ರಯದಲ್ಲಿದ್ದ ಶಾರೀಕ್ ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಮಂಗಳೂರು ನಗರದ ಬಿಜೈ ಮತ್ತು ಜಿಲ್ಲಾ ಕೋರ್ಟ್‌ ಹತ್ತಿರ ಕಂಡು ಬಂದ ಅಕ್ರಮ ಗೋಡೆ ಬರಹದಿಂದ ಈತ ಬೆಳಕಿಗೆ ಬಂದಿದ್ದ. ಅದರ ಹಿಂದಿದ್ದವರು ತೀರ್ಥಹಳ್ಳಿಯ ಶಾರೀಕ್‌ ಮತ್ತು ಮಾಜ್‌ ಎಂಬುದು ತನಿಖೆ ಬಳಿಕ ಗೊತ್ತಾಗಿತ್ತು. ಶಾರೀಕ್‌, ಮಾಜ್‌ ಮತ್ತು ಯಾಸೀನ್‌ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಮಂಗಳೂರು ಪ್ರಕರಣದಲ್ಲಿ ಕೋರ್ಟ್‌ ಜಾಮೀನು ದೊರಕಿತ್ತು. ಶಿವಮೊಗ್ಗದ ಪ್ರೇಮ್‌ ಸಿಂಗ್‌ಗೆ ಚೂರಿ ಇರಿತ ಪ್ರಕರಣದಲ್ಲಿ ಉಗ್ರ ಸಂಪರ್ಕದ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಮಾಜ್‌ ಮತ್ತು ಶಾರೀಕ್‌ಗೆ ಪೊಲೀಸರ ಹುಡುಕಾಡಿದ್ದರು. ಈ ಸಂದರ್ಭ ಶಾರೀಕ್‌ ತಲೆಮರೆಸಿಕೊಂಡಿದ್ದ.

ಬಳಿಕ ಆತ ಪತ್ತೆಯಾಗಿದ್ದು ಕುಕ್ಕರ್‌ ಬಾಂಬ್‌ ಪ್ರಕರಣದ ಬಳಿಕವೇ ಎನ್ನುವುದು ಸ್ವಾರಸ್ಯಕರವಾಗಿದೆ. ಶಾರೀಕ್‌ ಸಾಮಾನ್ಯ ಆರೋಪಿಯಾಗಿರಲಿಲ್ಲ. ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸಲ್ಪಟ್ಟ ಆರೋಪಿಯಾಗಿದ್ದ. ಕಳೆದ ಆಗಸ್ಟ್‌ನಿಂದ ನಾಪತ್ತೆಯಾಗಿದ್ದ ಈತ ಸಿಕ್ಕಿಬಿದ್ದ ಬಳಿಕ ಗೊತ್ತಾಗಿರುವುದು ನಕಲಿ ಆಧಾರ್‌ ಕಾರ್ಡ್ ಬಳಸಿ ಮೈಸೂರಲ್ಲಿ ವಾಸವಾಗಿದ್ದ ಎನ್ನುವುದು. ಅಂದರೆ ಹೊರ ದೇಶಕ್ಕೋ ಅಥವಾ ಹೊರ ರಾಜ್ಯಕ್ಕೋ ಪಾರಾಗಿರಲಿಲ್ಲ. ಹಾಗಿದ್ದು ಕೂಡ ಈತ ಮೈಸೂರಿನಲ್ಲಿ ನಿರಾಯಾಸವಾಗಿ ತಿಂಗಳುಗಳ ಕಾಲ ವಾಸವಾಗಲು ತನ್ನ ಕೃತ್ಯಗಳಿಗೆ ಬೇಕಾದ ಸಲಕರಣೆಗಳನ್ನು ಜೋಡಿಸಿಕೊಳ್ಳಲು ಹೇಗೆ ಸಾಧ್ಯವಾಯಿತು. ಈತನ ಹಿಂದೆ ಯಾರಿದ್ದಾರೆ. ಮುಖ್ಯವಾಗಿ ಎಲ್ಲಿಂದ ಈತನಿಗೆ ಹಣದ ನೆರವು ದೊರಕುತ್ತಿತ್ತು ಎಂಬುದು ಕಂಡು ಹಿಡಿಯಲಾಗಲಿಲ್ಲ ಎಂದರೆ ಇದು ಪೊಲೀಸ್ ಗುಪ್ತಚರ ಇಲಾಖೆಯ ಆಘಾತಕಾರಿ ವೈಫಲ್ಯ ಎಂಬುದು ಈಗ ಚರ್ಚೆಗೀಡಾಗುತ್ತಿದೆ.

ವಿಪಕ್ಷನಾಯಕ ಸಿದ್ದರಾಮಯ್ಯ ನೇರವಾಗಿ ಗುಪ್ತಚರ ಇಲಾಖೆ ವೈಫಲ್ಯ ಎಂದೇ ನೇರವಾಗಿ ಹೇಳಿಕೆ ನೀಡಿದ್ದಾರೆ. ಇನ್ನೂ ಗೃಹಖಾತೆ ಹೊಣೆ ಹೊತ್ತಿರುವ ಆರಗ ಜ್ಞಾನೇಂದ್ರ ಅನಿವಾರ್ಯವಾಗಿ ಸರ್ಕಾರದ ಗೌರವ ಉಳಿಸಲು ಕಾಂಗ್ರೆಸ್‌ ಕಾಲದಲ್ಲಿ ಕೇವಲ ಎಫ್‌ಐಆರ್‌ ದಾಖಲಿಸಿ ಮರೆತುಬಿಡಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಕೇವಲ ಅನುಮಾನದ ಆಧಾರದ ಮೇಲೆಯೇ ಶಾರೀಕ್‌ನನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ವಿಪರ್ಯಾಸ ಎಂದರೆ ಶಾರೀಕ್‌ ಕುಕ್ಕರ್‌ ಬಾಂಬ್‌ ತಯಾರು ಮಾಡಿ ನಿರಾಯಾಸವಾಗಿ ಅದನ್ನು ಮಂಗಳೂರಿಗೆ ತಂದು ಆಟೋ ರಿಕ್ಷಾ ಹತ್ತಿ ಅದು ಆಕಸ್ಮಿಕವಾಗಿ ಸ್ಪೋಟಿಸಿದ ಬಳಿಕವಷ್ಟೇ ಇಡೀ ಪ್ರಕರಣ ಬೆಳಕಿಗೆ ಬಂದಿರುವುದು ಮತ್ತು ಪೊಲೀಸರು ಚುರುಕಾಗಿರುವುದು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕದಲ್ಲಿ ಇರಬಹುದಾದ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ಪೊಲೀಸರೇ ಸಂಶಯ ಪಟ್ಟಿರುವ ಶಾರೀಕ್‌ ಮೈಸೂರಿನಲ್ಲಿ ಇಷ್ಟು ನಿರಾಳವಾಗಿ ಹೇಗೆ ಇಷ್ಟೆಲ್ಲ ತಯಾರಿ ಮಾಡಿಕೊಳ್ಳಲು ಸಾಧ್ಯವಾಯಿತು ಎನ್ನುವುದು ಯಕ್ಷ ಪ್ರಶ್ನೆ. ಹಾಗಾದರೆ ಆತ ತಲೆ ಮರಿಸಿಕೊಂಡ ಬಳಿಕ ಸಂವಹನ ಮತ್ತು ಸಂಪರ್ಕ ತಾಂತ್ರಿಕತೆ ಊಹಿಸಲಾಗದಷ್ಟು ಬೆಳೆದಿರುವ ಈ ಸಂದರ್ಭದಲ್ಲೂ ಕೂಡ ಆತನ ಮೇಲೆ ನಿಗಾ ಇಡಲಾಗಿಲ್ಲ ಎಂದರೆ ಆ ವೈಫಲ್ಯವನ್ನು ಗುಪ್ತಚಾರ ಇಲಾಖೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಈಗ ಸಾರ್ವಜನಿಕವಾಗಿ ಚರ್ಚೆಯ ವಿಷಯವಾಗಿದೆ.

ಎಲ್ಲಕ್ಕಿಂತಲೂ ಗಾಬರಿ ಮೂಡಿಸುವ ವಿಷಯವೆಂದರೆ ಗೃಹಮಂತ್ರಿ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಅವರ ಕ್ಷೇತ್ರದಲ್ಲಿಯೇ ಹೀಗೊಬ್ಬ ಶಂಕಿತ ಉಗ್ರ ತಯರಾಗುತ್ತಾನೆ ಆತನ ಚಲನವಲನಗಳು ಇಲ್ಲಿಯ ಪೊಲೀಸರಿಗೆ ತಿಳಿದಿರುವುದಿಲ್ಲ ಎನ್ನುವುದು ಸ್ವತಃ ಗೃಹ ಇಲಾಖೆಗೆ ಶೋಭೆ ತರುವ ವಿಚಾರವಲ್ಲ. ಇದಲ್ಲದೇ ಗೃಹಮಂತ್ರಿ ಆರಗ ಜ್ಞಾನೇಂದ್ರ ಅತ್ಯಂತ ಸರಳ ವ್ಯಕ್ತಿ. ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಜನರ ಬಳಿ ಅವರು ಹೋಗುವುದನ್ನು ಮತ್ತು ಜನತೆ ಅವರ ಬಳಿ ಬರುವುದನ್ನು ಸದಾ ಕಾಲ ಇಷ್ಟಪಟ್ಟವರು. ಎಷ್ಟೋ ಬಾರಿ ಅವರು ಸೆಕ್ಯೂರಿಟಿ ಕಿರಿಕಿರಿ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಆತ್ಮೀಯರ, ಕಾರ್ಯಕರ್ತರ ಮನೆಗಳಿಗೆ ಸಾದಸೀದಾ ವ್ಯಕ್ತಿಯಾಗಿ ಅನೇಕ ಬಾರಿ ಭೇಟಿ ನೀಡುತ್ತಿರುತ್ತಾರೆ. ಅಕಸ್ಮಾತ್‌ ಅವರಿಗೆ ತೊಂದರೆ ಆಗುವಂತ ಸನ್ನಿವೇಶ ಸೃಷ್ಟಿಯಾಗಿದ್ದರೆ ಅದರ ಹೊಣೆ ಯಾರು ಹೊರಬೇಕಿತ್ತು?

ಕರ್ನಾಟಕ ಪೊಲೀಸ್‌ ಇಲಾಖೆಗೆ ಭವ್ಯವಾದ ಇತಿಹಾಸವಿದೆ. ಕೇವಲ 2 ಲೀಟರ್‌ ಹಾಲು ಒಂದು ಮನೆಗೆ ವಾಡಿಕೆಗಿಂತ ಹೆಚ್ಚು ಸರಬರಾಜು ಆಗುತ್ತಿದೆ ಎಂಬ ಒಂದೇ ಒಳೆಯನ್ನು ಹಿಡಿದು ಭಾರತದ ಘೋರ ಹತ್ಯೆಗಳಲ್ಲಿ ಒಂದಾದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರನ್ನು ಬೆಂಗಳೂರಿನ ಕೋಣನಕುಂಟೆಯಲ್ಲಿ ಹಿಡಿದು ಜೈಲಿಗಟ್ಟಿದ್ದು ಕರ್ನಾಟಕ ಪೊಲೀಸ್‌. ಹೀಗಿದ್ದು ಯಾಕೆ ಈ ನಿಧಾನಗತಿಯ ಪ್ರವೃತ್ತಿ…! ಹಾಗೂ ಆರೋಪಿಗಳ ಮೇಲೆ ಕಣ್ಣಿಡುವಲ್ಲಿ ಮೈಮರೆಯುತ್ತಿರುವುದು…? ಅಥವಾ ಪೊಲೀಸರಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಏನಾದರು ಒತ್ತಡಗಳಿವೆಯೇ…? ಯಾಕೆಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post