ಅದ್ದೂರಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ

ಗ್ರಾ.ಪಂ. ಸದಸ್ಯರಿಗೂ ಮಾಹಿತಿ ಇಲ್ಲ
ಸಾರ್ವಜನಿಕರಿಂದ ದೇಣಿಗೆ ಎತ್ತಿ ಜಿಲ್ಲಾಧಿಕಾರಿಗೆ ಉಪಚಾರ

ಕಾರ್ಯಕ್ರಮದ ವಾಸ್ತವಾಂಶ ಮರೆಮಾಚುವ ಪ್ರಯತ್ನಕ್ಕೆ ಗ್ರಾಮಸ್ತರ ಆಕ್ರೋಶ
ಉದ್ಯೋಗ ಇಲ್ಲ ಸಾರ್... ಉದ್ಯೋಗ ಕೊಡಿಸಿ...!

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆಯ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ" ಕಾರ್ಯಕ್ರಮ ವೈಭವದ ರೂಪ ತಳೆದಂತಿದೆ. ಗ್ರಾಮ ವಾಸ್ತವ್ಯದಲ್ಲಿ ಏನಿತ್ತು, ಏನಾಯ್ತು ಎಂದು ಗ್ರಾಮಸ್ತರಲ್ಲಿ ಕೇಳಿದರೆ ಮಧ್ಯಾಹ್ನದ ಊಟ ಬಹಳ ಅದ್ಬುತವಾಗಿತ್ತು. ಹೋಳಿಗೆ, ಪಾಯಸ ಊಟ ಹಾಕಿಸಿದ್ರು ಎನ್ನುವಷ್ಟರ ಮಟ್ಟಿಗೆ ಮಂಕುಬೂದಿ ಎರಚಿದ್ದಂತಾಗಿತ್ತು. ಎಂದಿಗಿಂತಲೂ ಹೆಚ್ಚಿನದಾಗ ಕುಡುಮಲ್ಲಿಗೆ ಗ್ರಾಮದ ಬೆಕ್ಷೆ-ಕೆಂಜಿಗುಡ್ಡೆ ಲಕಲಕ ಹೊಳೆಯುತ್ತಿತ್ತು. ಕುರಣಿಮಕ್ಕಿ ಶಾಲೆಯ ಸುತ್ತ ಇದ್ದ ಕಸಕ್ಕೆ ಬೆಂಕಿ ಹಾಕಿ ಸರ್ವ ನಾಶ ಮಾಡಲಾಗಿತ್ತು. ಇದೆಲ್ಲ ನಡೆದಿದ್ದು ಡಿಸಿಗಾಗಿ ಎಂಬುದು ಮೇಲ್ನೋಟಕ್ಕೆ ಅರ್ಥವಾಗುವಂತೆ ಕಣ್ಣಿಗೆ ರಾಚುತ್ತಿತ್ತು.

ವಿಶೇಷವಾಗಿ ಯಾವ ಕಾರ್ಯಕ್ರಮ ಜನರಿಗೆ ಉಪಯೋಗವಾಗಬೇಕಿತ್ತು ಆ ಕಾರ್ಯಕ್ರಮ ಆ ಹಂತದಲ್ಲಿ ನಡೆಯಲೇ ಇಲ್ಲ. ಜನಸಂಖ್ಯೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ವಿವಿಧ ಫಲಾನುಭವಿಗಳನ್ನು ಇಲ್ಲಿ ಆಹ್ವಾನಿಸಿ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸುವ ಕೆಲಸ ನಡೆಯಿತು. ಗ್ರಾಮ ವಾಸ್ತವ್ಯ ಅಲ್ಲಿನ ಸಮಸ್ಯೆಯನ್ನು ಬಗೆಹರಿಸುವಂತೆ ಮತ್ತು ವಾಸ್ತವಾಂಶ ಅರಿತುಕೊಳ್ಳಲು ಮಾಡಲಾಗಿದೆ. ಹಾಗಾಗಿ ಸರ್ಕಾರದಿಂದ ಕೇವಲ 2000 ಮಾತ್ರ ಕಾರ್ಯಕ್ರಮಕ್ಕೆ ಬಿಡುಗಡೆಯಾಗುತ್ತಿದೆ. ಜಿಲ್ಲಾಧಿಕಾರಿಗಳನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಸಾರ್ವಜನಿಕವಾಗಿ ಚರ್ಚೆಗೀಡಾಗಿತ್ತು. ಸಮಯಕ್ಕೆ ಸರಿಯಾಗಿ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳದೆ ಗ್ರಾಮಸ್ತರು ಮನೆಗೆ ತೆರಳಿದ ಘಟನೆ ನಡೆಯಿತು.

ಸರ್ ಆರೋಗ್ಯ ಸರಿ ಇಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ತುಂಬ ಬಲವಂತವಾಗಿ ದೈಹಿಕ ಕೆಲಸ ಮಾಡಲು ಆಗಲ್ಲ. ಹಾಗೆಂದರೆ ಜೀವನ ನಡೆಸುವುದು ಕಷ್ಟ. ಹೆಂಡತಿ, ಮಕ್ಕಳು ಇದ್ದಾರೆ. ಉದ್ಯೋಗ ಇಲ್ಲ ಸಾರ್... 10 ವರ್ಷದಿಂದ ಉದ್ಯೋಗ ಕೊಡಿ ಎಂದು ಕೇಳುತ್ತಿದ್ದರು ಕೊಡುತ್ತಿಲ್ಲ. ನೀವಾದರು ಒಂದು ಉದ್ಯೋಗ ಕೊಡಿ ಎಂದು ಓರ್ವ ವ್ಯಕ್ತಿ ಜಿಲ್ಲಾಧಿಕಾರಿಗಳ ಮುಂದೆ ಅಂಗಲಾಚಿದ ಪ್ರಸಂಗ ಗ್ರಾಮ ವಾಸ್ತವ್ಯದಲ್ಲಿ ನಡೆಯಿತು.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಜನರ ಸಮಸ್ಯೆ ಎಷ್ಟರ ಮಟ್ಟಿಗೆ ಬಗೆಹರಿಯಲಿದೆ ಎಂಬುದು ಕಾದು ನೋಡಬೇಕಾಗಿದೆ. ತಕ್ಷಣದ ಪರಿಹಾರ ಯಾವುದಕ್ಕೂ ಸಿಗದೆ ಇರುವುದರಿಂದ ಜನರಲ್ಲೂ ಕೂಡ ಆಶಾ ಭಾವನೆ ಕಳೆದು ಹೋಗುವಂತಿತ್ತು. ಭರವಸೆಗಳು ಹೆಚ್ಚಾಗಿದ್ದರಿಂದ ಜನಸಾಮಾನ್ಯರು ಅಧಿಕಾರಿಗಳು ಮಾಡಿಕೊಡುವುದಿಲ್ಲ ಎಂಬ ಭಾವನೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ಒಂದಿಷ್ಟು ಸಮಯದ ಬಳಿಕ ಭೇಟಿ ಮಾಡಲು ಅವಕಾಶ ನೀಡಿದ್ದಾರೆ. ಅಷ್ಟರಲ್ಲಿ ಆಡಳಿತಾತ್ಮಕ ಬದಲಾವಣೆ ನಡೆದರೆ ಪುನಃ ಇದನ್ನು ಆರಂಭದಿಂದ ಶುರುಮಾಡಬೇಕಾಗುತ್ತದೆ ಎಂಬ ಅಳಲು ಕೇಳಿ ಬಂತು.
1973ರ ಹಿಂದೆ ನೀಡಿರುವ ಹಕ್ಕುಪತ್ರದ ದಾಖಲೆ ತಾಲ್ಲೂಕು ಕಚೇರಿಯಲ್ಲಿ ಇಲ್ಲ. ಹಕ್ಕುಪತ್ರದ ನಕಲಿ ಪ್ರತಿ ಇದ್ದು ಮೂಲ ದಾಖಲೆಗಳು ಸಿಗದ 30 ಕುಟುಂಬಗಳು ಅಡಮಾನ ಸಾಲ, ಸೌಲಭ್ಯ ಸಿಗದೆ ಪರದಾಡುತ್ತಿದ್ದಾರೆ. ಅಲ್ಲದೆ 94ಸಿ ಹಕ್ಕುಪತ್ರದಲ್ಲಿ ಪರಬಾಧೆ ನಿಷೇಧ ಹೇರಿದ್ದು ಬ್ಯಾಂಕ್‌ ಸಾಲ ದೊರೆಯುತ್ತಿಲ್ಲ ಎಂದು ಗ್ರಾಮಸ್ತರು ಅಳಲು ತೋಡಿಕೊಂಡರು.
ಹಕ್ಕುಪತ್ರವನ್ನು ಮುಂದಿಟ್ಟುಕೊಂಡು ಹೊಸ ದಾಖಲೆಗೆ ಅರ್ಜಿ ಸಲ್ಲಿಸಿದರೆ ಪ್ರಯೋಜನವಾಗುತ್ತಿಲ್ಲ. ಇದೀಗ ಅರಣ್ಯ, ಗೋಮಾಳ ಕೊರತೆ ಎಂಬ ಕಾರಣಕ್ಕೆ ದಾಖಲೆಗಳು ಮಂಜೂರಿಗೆ ತೊಂದರೆಯಾಗುತ್ತಿದೆ. ಚೆಕ್‌ ಬಂದಿ ತಾಳೆಯಾಗದೆ ಇ-ಸ್ವತ್ತು ಲಭಿಸುತ್ತಿಲ್ಲ. ಸರ್ವೆ ಆಗದೆ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಭೂ ನ್ಯಾಯ ಮಂಡಳಿಯಿಂದ ವರದಿ ಸಲ್ಲಿಕೆಯಾಗಿ 8 ತಿಂಗಳು ಕಳೆದರೂ ದಾಖಲಾತಿ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಗ್ರಾಮಸ್ತರು ಆರೋಪಿಸಿದರು.
ಅಮ್ತಿ ಗ್ರಾಮದ ಕುಡಿಯುವ ನೀರಿಗೆ 20 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು ಗ್ರಾ.ಪಂ., ತಾ.ಪಂ. ತಾಲ್ಲೂಕು ಆಡಳಿತ ಭರವಸೆ ಈಡೇರುತ್ತಿಲ್ಲ. ಇಂದಿಗೂ ಕಪ್ಪೆ ಹೊಂಡ, ಗುಮ್ಮಿ ನೀರು ಕುಡಿಯಬೇಕಾಗಿದೆ. ಜಲ ಜೀವನ್‌ ಮಿಷನ್‌ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಹಳೆ ಪೈಪಿಗೆ ಹೊಸ ನಲ್ಲಿ ಕೊಡುತ್ತಿದ್ದಾರೆ. ಮೂಲಭೂತವಾಗಿ ನೀರಿನ ಅವಶ್ಯಕತೆ ಇರುವವರಿಗೆ ಯೋಜನೆಯ ಪ್ರಯೋಜನ ದೊರೆಯುತ್ತಿಲ್ಲ ಎಂದು ದೂರಿದರು.
ಗ್ರಾಮ ವಾಸ್ತವ್ಯದಲ್ಲಿ ಸಾಮಾಜಿಕ ಭದ್ರತೆ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ 7 ವೃದ್ದಾಪ್ಯ ವೇತನ, 8 ಸಂಧ್ಯಾ ಸುರಕ್ಷಾ, 3 ವಿಧವಾ ವೇತನ, 2 ಜಾತಿ ಪ್ರಮಾಣ ಪತ್ರ ವಿತರಿಸಿದರು.
ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್‌ ಹೊನ್ನವಳ್ಳಿ, ತಹಶೀಲ್ದಾರ್‌ ಅಮೃತ್‌ ಅತ್ರೇಶ್‌, ಇಓ ಶೈಲಾ ಎನ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌, ಪ್ರೊಬೆಷನರಿ ಐಎಎಸ್‌ ಅಧಿಕಾರಿ ದಲ್ಜಿತ್‌ ಕುಮಾರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಮೋಹನ್‌, ಉಪಾಧ್ಯಕ್ಷ ಹರೀಶ್‌ ಹೆಗ್ಗಾರ್‌ ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post