ರೈತರ ಸಂಕಷ್ಟ ಆಲಿಸದ
ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ
ಮೇಗರವಳ್ಳಿ ನಾಡಕಚೇರಿ
ಮುತ್ತಿಗೆ ಹಾಕಿದ ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ
ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಗುಟೂರ್
" ರೈತರು ಹೋರಾಟ, ಮನವಿ, ಹಕ್ಕೊತ್ತಾಯ ಮಾಡಿದರೆ ಸಾಲದು. ಸಂಶೋಧನೆಗೆ ಅಗತ್ಯವಾಗಿರುವ ಮಾಹಿತಿಯನ್ನು ಸರ್ಕಾರದ ಹಂತಕ್ಕೆ ತಲುಪಿಸಬೇಕು. ನಮ್ಮಲ್ಲಿರುವ ಸಂಶೋಧನಾ ಕೇಂದ್ರಗಳು ಪ್ರಯೋಜನಕ್ಕೆ ಬರುವುದಿಲ್ಲ. ಕಾಸರಗೋಡು ಸಂಶೋಧನ ಇಲಾಖೆಯ ಮೂಲಕ ಹೈದರಬಾದ್, ನವದೆಹಲಿ ಸಂಶೋಧನಾ ಕೇಂದ್ರಗಳ ಮೂಲಕ ಅಡಿಕೆ ಸಂಶೋಧನೆ ನಡೆಯಬೇಕು" ಎಂದು ವಕೀಲ ಕೆ.ಪಿ.ಶ್ರೀಪಾಲ್ ಹೇಳಿದರು.
"ಜಾಗತಿಕ ಮಟ್ಟದಲ್ಲಿ ಶೇಕಡಾ 33 ರಷ್ಟು ಕಾಡು ಬೇಕು ಎಂಬ ಉದ್ದೇಶದಿಂದ ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ವಿಜ್ಞಾನಿಗಳು ಸಂಶೋಧಿಸುವ ಯಂತ್ರಗಳಿಗಿಂತ ಮುಪ್ಪಾದ ಹಳ್ಳಿಗರೆ ಲೇಸು. ನಾವು ಸಹ್ಯಾದ್ರಿ ಶ್ರೇಣಿ ಬಿಡುತ್ತೇವೆ. ಬೆಂಗಳೂರಿನಲ್ಲಿ ಅಂಗಡಿ, ಡಾಲರ್ಸ್ ಕಾಲೋನಿಯಲ್ಲಿ ನಿವೇಶನ ಕೊಡಿ. ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಕರ್ಕಿ ಆಕ್ರೋಶ ಹೊರಹಾಕಿದರು.
ವಿದ್ಯೆ ಇಲ್ಲದ ರೈತರು ಬೀದಿಗೆ ಇಳಿದರೆ ಪ್ರಯೋಜನವಾಗದು. ಕಾನೂನು ಅರಿತುಕೊಂಡ ರೈತರ ಮಕ್ಕಳು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಜನವಿರೋಧಿ ಆಡಳಿತವನ್ನು ರಾಜಕೀಯ ಎನ್ನಲು ಸಾಧ್ಯವಿಲ್ಲ. ರೈತರ ಸಂಕಷ್ಟ ಆಲಿಸದ ಈಚೆಗಿನ ಸರ್ಕಾರಕ್ಕೆ ಪಂಚೇದ್ರಿಯಗಳು ಇಲ್ಲವಾಗಿದೆ ಎಂದು ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿಯ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗುರುವಾರ ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಎಲೆಚುಕ್ಕಿ ಬಾಧಿತ ರೈತರ ಬೃಹತ್ ಸಮಾವೇಶ, ಮೇಗರವಳ್ಳಿ ನಾಡ ಕಚೇರಿ ಮುತ್ತಿಗೆ ಕಾರ್ಯಕ್ರಮ ಉದ್ದೇಶಿಸಿ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿದರು.
ರಣಹೇಡಿಗಳು, ಕೊಳಕು ರಾಜಕಾರಣಿಗಳನ್ನು ಜನರು ನಂಬಬಾರದು. ರೈತರು ಪಕ್ಷದ ಬಾವುಟ ಹಿಡಿಯುವ ಮಕ್ಕಳನ್ನು ನಿರ್ಮಾಣ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಪಕ್ಷಗಳು ಅಧಿಕಾರಕ್ಕೆ ಬರುತ್ತೆ ಹೋಗುತ್ತೆ ಶಾಶ್ವತ ಜೀವನ ರೂಪಿಸವು. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ನಿಜವಾದ ಅರ್ಥ ಸಾಕಾರಗೊಳ್ಳಬೇಕಾದರೆ ಭಾರತೀಯ ಕೃಷಿ ಪರಂಪರೆ ಜಾಗ್ರತಗೊಳ್ಳಬೇಕು ಎಂದು ತಿಳಿಸಿದರು.
“ಮಲೆನಾಡು ಭಾಗವನ್ನು ವಿಶೇಷ ಕೃಷಿ ವಲಯ ಎಂದು ಘೋಷಣೆ
ಮಾಡಬೇಕು. ಸರ್ಕಾರ ನೀಡಿರುವ ₹4 ಕೋಟಿ ಪರಿಹಾರ ನಿಧಿ ರೈತರ ಔಷದೋಪಚಾರಕ್ಕೆ ಸಾಲದು.
ಸರ್ಕಾರವೇ ಮುಂದೆ ನಿಂತು ಔಷಧಿ ಸಿಂಪಡಣೆ ಮಾಡಲಿ. ಕೃಷಿ, ತೋಟಗಾರಿಕೆ ಇಲಾಖೆ ಕಾರ್ಯಗಾರ, ಕಾರ್ಯಕ್ರಮಗಳು
ಕೀಟನಾಶಕ ಕಂಪನಿಗಳ ಪ್ರಚಾರದ ವೇದಿಕೆಯಾಗಿದೆ” ಎಂದು ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಕಟುವಾಗಿ
ಟೀಕಿಸಿದರು.
ಜಿಲ್ಲೆಯಲ್ಲಿ ಪ್ರತಿವರ್ಷ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವುದನ್ನು ನಿಲ್ಲಿಸಲಾಗುತ್ತಿದೆ. ಸರ್ಕಾರದ ನೆರವು ಏನೇನು ಸಾಲದು. ಕೋರ್ಟ್‌ನಲ್ಲಿ ಅರ್ಜಿ ಹಾಕುವ ಪರಿಸರ ಹೋರಾಟಗಾರರು ನಿರ್ಮಾಣವಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೆಂಡ, ಮಾಂಸ, ಹಣಕ್ಕಾಗಿ ಚೀಲ ದೊಡ್ಡದಾಗುತ್ತಿದೆ. ರೈತರು ಸ್ವಾಭಿಮಾನ ಬಿಡಬಾರದು ಎಂದು ಜಿಲ್ಲಾ ಭೂ ರಹಿತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.
ಪ್ರತಿಭಟನೆಯಲ್ಲಿ ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಹೊಸಕೊಪ್ಪ ಸುಂದರೇಶ್, ಸಂಚಾಲಕ ನೆಂಪೆ ದೇವರಾಜ್, ಪ್ರಧಾನ ಕಾರ್ಯದರ್ಶಿ ಶಿವಾನಂದ ಕರ್ಕಿ, ಮುಖಂಡರಾದ ಕೊರೋಡಿ ಕೃಷ್ಣಪ್ಪ, ಹುಲ್ಲತ್ತಿ ದಿನೇಶ್, ರೈತ ಸಂಘದ ಅಧ್ಯಕ್ಷ ಕೋಡ್ಲು ರಾಮಕೃಷ್ಣ, ಮುಖಂಡ ರಾಜೇಂದ್ರ ಕಂಬಳಿಗೆರೆ, ಕರಾವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಜಿಲ್ಲಾ ಭೂ ರಹಿತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ವಕೀಲ ಕೆ.ಪಿ. ಶ್ರೀಪಾಲ್ ಇದ್ದರು.




