ಉಪವಾಸ ಸತ್ಯಾಗ್ರಹ ಆರಂಭಿಸಿದ ಕಿಮ್ಮನೆ

ಬಿಜೆಪಿ ಮುಖಂಡರಿಗೆ ಕಾನೂನು ಬಾಹಿರ ಗುತ್ತಿಗೆ ಆರೋಪ
ಕಾನೂನು ಪ್ರಕಾರ ಲೀಸ್‌ ಮಾಡಿಕೊಡಲು ಆಗ್ರಹ
ಕಿಮ್ಮನೆ ಪಟ್ಟು, ಆಡಳಿತಕ್ಕೆ ಇಕ್ಕಟ್ಟು….!

ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಸರ್ವೆ ನಂಬರ್‌ 72 ರಲ್ಲಿ ಅಕ್ಟೋಬರ್‌ 12ರ ರಾತ್ರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಟ್ರಂಚ್‌ ಹೊಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಹಗಲಿನಲ್ಲಿ ಸರ್ಕಾರಿ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ರಾತ್ರಿಯ ವೇಳೆ ಬಿಜೆಪಿ ಮುಖಂಡರು, ಆರಗ ಜ್ಞಾನೇಂದ್ರರ ಪರವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕಾರ್ಮಿಕರನ್ನು ಶೋಷಣೆಗೆ ಗುರಿಪಡಿಸಿದ್ದಾರೆ ಎಂದು ಉಪವಾಸ ನಿರತರು ಆರೋಪಿಸಿದರು.

ಮೇಲಿನಕುರುವಳ್ಳಿ, ಕುರುವಳ್ಳಿಯ 8 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆದುಕೊಂಡು ಬಂದಿದೆ. ಲೀಸ್‌ ಅವಧಿ ಮುಕ್ತಾಯವಾಗಿ ಟೆಂಡರ್‌ ಪ್ರಕ್ರಿಯೆ ನಡೆದಿದ್ದರು ತಮ್ಮ ಕಾರ್ಯಕರ್ತರಿಗೆ ಸಿಗಲಿಲ್ಲ ಎಂಬ ಕಾರಣದಿಂದ ಆ ಪ್ರಕ್ರಿಯೆಯನ್ನು ಹಿಂಪಡೆದು ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೊಂದು ಕಾನೂನು ಉಳಿದವರಿಗೆ ಒಂದು ಕಾನೂನು ಅಂತ ಸಂವಿಧಾನ ಹೇಳಿಲ್ಲ. ಎಲ್ಲರಿಗೂ ಸಮಾನ ನ್ಯಾಯ ನೀಡಿದೆ. ಅಧಿಕಾರಿಗಳು ಕಾರ್ಯಾಂಗದ ಭಾಗವಾಗಿದ್ದೇವೆ ಎಂದು ಮರೆತಂತಿದೆ. ಶಾಸಕಾಂಗದ ಮಾತು ಪಾಲನೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಗೃಹಸಚಿವರ ಪಕ್ಷಪಾತದಿಂದ ಕೈಗಳಿಂದ ದುಡಿದು ಜೀವನ ನಡೆಸುವ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಬಂಡೆ ಕಾರ್ಮಿಕರ ಪರವಾಗಿರುವ ಕಿಮ್ಮನೆ ಪಟ್ಟು ಆಡಳಿತಕ್ಕೆ ತೀವ್ರ ಮುಜುಗರ ಸೃಷ್ಟಿಯಾಗುತ್ತಿದೆ. ಶಿವಮೊಗ್ಗದ ಹಿರಿಯ ಭೂ ವಿಜ್ಞಾನಿ ಕಿಮ್ಮನೆ ವಿರುದ್ಧ ತೋರಿಸಿರುವ ಅಸಭ್ಯ ವರ್ತನೆಗೆ ಶಿವಮೊಗ್ಗದಲ್ಲಿಯೂ ವ್ಯಾಪಕವಾಗಿ ಆಕ್ರೋಶ ಹೊರಬಂದಿದೆ. ಜಿಲ್ಲಾಧಿಕಾರಿಗಳಿಗೂ ಈ ಘಟನೆ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post