ಕಾರ್ಮಿಕರು ಶೂ, ಬಿಳಿ ಬಟ್ಟೆ ಹಾಕಂಗಿಲ್ವಾ..? -ಕಿಮ್ಮನೆ

ವಿಂದ್ಯಾ ಮೇಡಂ ರಂಗಾಯಣದ ಪಾತ್ರಧಾರಿ

ಕಾರ್ಮಿಕರು ಕೊಡಲಿ ಹಿಡಿಯುವುದು ಅನಿವಾರ್ಯ..?

ಅಡಳಿತದಲ್ಲಿ ಅಧಿಕಾರಿಗಳದ್ದು ಆರ್‌ಎಸ್‌ಎಸ್‌ ಕುಟುಂಬದ ದರ್ಪ

ಆರಗ ಜ್ಞಾನೇಂದ್ರರ ತೋರ್ಪಡಿಕೆಯ ಬಡತನ ಬಂಡೆ ಕಾರ್ಮಿಕರಿಗೆ ಸಂಕಷ್ಟ ತಂದಿದೆ. ತಮ್ಮ ಭಾಷಣದಲ್ಲಿ ಹಲಸಿನ ಹಣ್ಣು, ಬಿತ್ತ, ಹುಲಿಭತ್ತ, ಉದಿ ಹೊತ್ತಿದ್ದೇನೆ ಎಂಬ ಬಡತನ ತೋರ್ಪಡಿಕೆ ಹುಸಿಯಾಗಿದೆ. ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಕಾರ್ಮಿಕರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದು ಅದಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಕೃಪಾಕಟಾಕ್ಷ ಇದೆ. ಆಯಕಟ್ಟಿನ ಜಾಗದಲ್ಲಿ ಆರ್‌ಎಸ್‌ಎಸ್‌ ಕುಟುಂಬದಿಂದ ಬೆಳೆದಿರುವ ಅಧಿಕಾರಿಗಳನ್ನು ಕೂರಿಸುವ ಮೂಲಕ ಬಿಜೆಪಿ ಪರವಾದ ಕೆಲಸ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ವಿಂದ್ಯಾ ಮೇಡಂ ರಂಗಾಯಣದ ಪಾತ್ರಧಾರಿಯಾಗಿದ್ದಾರೆ ಎಂದು ಕಿಮ್ಮನೆ ರತ್ನಾಕರ್‌ ಕುಟುಕಿದರು.

ಶುಕ್ರವಾರ ಕಿಮ್ಮನೆ ಉಪವಾಸ
ಅಧಿಕಾರಿಗಳು ಟ್ರಂಚ್‌ ಮುಚ್ಚದಿದ್ದರೆ ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಒಂದುದಿನದ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಅದಕ್ಕೂ ಬಗ್ಗದಿದ್ದರೆ ಮೇಲಿನ ಕುರುವಳ್ಳಿಯಿಂದ ಗೃಹಸಚಿವ ಆರಗ ಜ್ಞಾನೇಂದ್ರರ ತವರೂರು ಗುಡ್ಡೇಕೊಪ್ಪದ ಗ್ರಾಮ ಪಂಚಾಯಿತಿಯ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದರು.

ಗೃಹಸಚಿವ ಆರಗ ಜ್ಞಾನೇಂದ್ರ ಅಧಿಕಾರಾವಧಿಯಲ್ಲಿ ನಿರಂತರ ಬಂಡೆ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಕಾರ್ಮಿಕರು ರಜಾ ದಿನಗಳಲ್ಲಿಯೂ ಬಿಳಿ ಬಟ್ಟೆ, ಶೂ ಹಾಕಬಾರದು. ಮೋಟರ್‌ ಸೈಕಲ್‌ನಲ್ಲಿ ಓಡಾಡಬಾರದಂತೆ. ಭೂ ವಿಜ್ಞಾನಿ ಅವಿನಾಶ್‌ ಕಾರ್ಮಿಕರನ್ನು ಗಡಿಪಾರು ಮಾಡುತ್ತೇನೆ ಎಂದು ಹೊದರಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಗುರುವಾರ ಬಂಡೆ ಕಾರ್ಮಿಕರ ಪರವಾಗಿ ಮೇಲಿನ ಕುರುವಳ್ಳಿಯಿಂದ ತೀರ್ಥಹಳ್ಳಿಯ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ, ರಸ್ತೆತಡೆ, ಧರಣಿ ನಡೆಸಿ ಕಿಮ್ಮನೆ ರತ್ನಾಕರ್‌ ಆರೋಪಿಸಿದರು.

ಕಾರ್ಮಿಕರ ಹಸಿವಿಗೆ ಕಾನೂನಿಲ್ಲ. ಅನಿವಾರ್ಯವಾದರೆ ಕೊಡಲಿ ಹಿಡಿಯುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಸೊನಲೆಯಲ್ಲಿ ನಿರಂತರ ಅಕ್ರಮ ಮರಳು ಸಾಗಾಣೆಯಾಗುತ್ತಿದ್ದರು ಟ್ರಂಚ್‌ ಹೊಡೆಯುತ್ತಿಲ್ಲ. ಗೃಹಸಚಿವರ ಅಣತಿಯಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಬಿಜೆಪಿ ಮುಖಂಡರ ಅಕ್ರಮ ಮರಳು ಸಾಗಾಟ ಹೆಚ್ಚಿದೆ. ಅದನ್ನು ತಡೆಯಲು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಗಳು ವಿಫಲರಾಗಿದ್ದಾರೆ. ಕಾರ್ಮಿಕರಿಗೆ ಕೆಲಸ ಕೊಡಿ ಇಲ್ಲ ಅನ್ನ, ಬದುಕು ನೀಡಬೇಕೆಂದು ಆಗ್ರಹಿಸಿದರು.

ಪ್ರಪಂಚದಲ್ಲಿ ಇಲ್ಲದೇ ಇರುವ ಲಾರಿಗಳು ತೀರ್ಥಹಳ್ಳಿಯಲ್ಲಿದೆ. ಗೇರು, ಟೈರು ನೆಟ್ಟಗಿರದ ಲಾರಿಗಳು ಇಲ್ಲಿವೆ. ಅವುಗಳನ್ನು ಸೀಜ್‌ ಮಾಡುವ ಮೂಲಕ ಲಕ್ಷ ಲಕ್ಷ ಹಣ ಕೇಳುತ್ತಿದ್ದಾರೆ. ಅಲ್ಲದೇ ಕಾರ್ಮಿಕರು ಹಣ ಒಟ್ಟುಗೂಡಿಸಿ ಟೆಂಡರ್‌ ಹಾಕಿದರೆ ಆ ಪ್ರಕ್ರಿಯೆಯನ್ನು ನಿಲ್ಲಿಸಿ ಬಿಜೆಪಿಯವರಿಗೆ ನೀಡಲಾಗುತ್ತಿದೆ. ಅಲ್ಲದೆ ಕಂದಾಯ, ಪೊಲೀಸ್‌, ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕಂತೆ. ಇದರಿಂದಾಗಿ ಕಲ್ಲು ಸಾಮಗ್ರಿ ಬೆಲೆ ಗಗನಕ್ಕೇರುತ್ತಿದೆ. ಇದರ ಹೊರೆ ಪರೋಕ್ಷವಾಗಿ ರೈತರ ಮೇಲೆ ಬೀಳುತ್ತಿದೆ. ಅಧಿಕಾರಿಗಳು ನೆನಪಿಟ್ಟುಕೊಳ್ಳಬೇಕು ತೀರ್ಥಹಳ್ಳಿ ಸಮಾಜವಾದ ಬೆಳೆದ ನಾಡು. ಶೋಷಣೆ ಮುಂದುವರೆಸಿದರೆ ಪಾಠ ಕಲಿಸುತ್ತೇವೆ ಎಂದು ಜಾಗ್ರತೆ ನೀಡಿದರು.

ಬಂಡವಾಳ ಶಾಯಿಗಳಿಗೆ ಬಂಡೆ ಮಾರಾಟ ಮಾಡಲಾಗುತ್ತಿದೆ. ಸಾಮ್ರಾಜ್ಯಶಾಯಿ ವ್ಯವಸ್ಥೆಗೆ ದಿಕ್ಕಾರವಿದೆ. ಕಾರ್ಮಿಕರು ಬೀದಿಗೆ ಬಂದರೆ ಅದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಖ್ಯ ಕಾರ್ಯದರ್ಶಿ ನೇರ ಹೊಣೆ. ಕಳೆದ 10 ವರ್ಷದಿಂದ 12 ಬಾರಿ ಜೆಸಿಬಿ ದಾಳಿ, 62 ಬಾರಿ ಕಾರ್ಮಿಕರ ಮೇಲೆ ದಾಳಿ, 8 ಬಾರಿ ಉಳಿ ಸುತ್ತಿಗೆ ಮೇಲೆ ದಾಳಿಯಾಗಿದೆ. ಪಂಚಾಯತ್‌ ರಾಜ್‌ ಕಾಯ್ದೆಗೆ ಅಗೌರವ ತರುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ಣಯ ಪಡೆಯುತ್ತೇವೆ. ಅಧಿಕಾರಿಗಳು ಜನರನ್ನು ಪೀಡಿಸುತ್ತಿದ್ದು ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತದೆ ಎಂದು ನಿಶ್ಚಲ್‌ ಜಾದೂಗಾರ್‌ ಹೇಳಿದರು.

ಪ್ರತಿಭಟನೆಗೆ ತಾಲ್ಲೂಕು ರೈತ ಸಂಘ, ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ, ಅಸಂಘಟಿತ ಕಾರ್ಮಿಕರ ಸಂಘಟನೆ ಬೆಂಬಲ ಸೂಚಿಸಿತ್ತು. ಪ್ರತಿಭಟನೆಯಲ್ಲಿ ಚಿಂತಕ ನೆಂಪೆ ದೇವರಾಜ್‌, ಹೊಸಕೊಪ್ಪ ಸುಂದರೇಶ್‌, ಕೊರೋಡಿ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ನಿಶ್ಚಲ್‌ ಜಾದೂಗಾರ್‌, ಅನಂದ ಸಿ, ಕುರುವಳ್ಳಿ ನಾಗರಾಜ್‌, ಅನಿತಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ ಮಾತನಾಡಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post