ಕಿಮ್ಮನೆ ಹೋರಾಟ ರಾಜಕೀಯ ಪ್ರೇರಿತ

ಕಾರ್ಮಿಕ ಮುಖಂಡ ಮಂಜುನಾಥ ಎಸ್ ಆರೋಪ
ಗೃಹಸಚಿವರಿಂದ ಕಾರ್ಮಿಕರಿಗೆ 50 ಲಕ್ಷ ಪ್ರಯೋಜನ
ಕಿಮ್ಮನೆ ಅವಧಿಯಲ್ಲೇ ಕ್ವಾರಿಗೆ ಒಂದು ತಿಂಗಳು ಬೀಗ
ಕಾರ್ಮಿಕರನ್ನು ಒಡೆದಾಳುವ ನೀತಿ ಬೇಡ

2017ರಲ್ಲಿ ಒಂದು ತಿಂಗಳ ಕಾಲ ಲೀಸ್‌ ಇರುವ ಬಂಡೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬೀಗ ಹಾಕಿದ್ದರು. ಕಾರ್ಮಿಕರು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯ ರಣಬಿಸಿಲಿನಲ್ಲಿ ಬಿಸಿಲಿನ ಬೇಗೆಗೆ ಬೆಂದು ಕೆಲಸ ಮಾಡುವ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಸಿಲಿಲ್ಲದ ವೇಳೆ ಕಾರ್ಮಿಕರು ಕೆಲಸ ಮಾಡದಂತೆ ಇಲಾಖೆಯಿಂದ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿದ್ದರು. ಆ ಅವಧಿಯಲ್ಲಿ ಅಧಿಕಾರದಲ್ಲಿ ಯಾರಿದ್ದರು…? ಆಗ ಕಿಮ್ಮನೆ ರತ್ನಾಕರ್‌ ಸುಮ್ಮನಿದ್ದಿದ್ದೇಕೆ. ವಿನಾಕಾರಣ ಆರಗ ಜ್ಞಾನೇಂದ್ರರ ಹೆಸರನ್ನು ಇಲ್ಲಿ ತರಲಾಗುತ್ತಿದೆ ಎಂದು ಪೃಥ್ವಿಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಕಾರ್ಯದರ್ಶಿ ಮಂಜುನಾಥ್ ಆರೋಪಿಸಿದರು.

ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರ ವಿಚಾರದಲ್ಲಿ ಕಿಮ್ಮನೆ ರತ್ನಾಕರ್ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ವಾಸ್ತವವಾಗಿ..ಇಲ್ಲಿ ಕೆಲಸ ನಿಲುಗಡೆ ಆಗಲು ಅನುದೀಪ್ ಎಂಬ ವ್ಯಕ್ತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿರುವುದು ಮುಖ್ಯ ಕಾರಣವಾಗಿದೆ. ಅನುದೀಪ್‌ ಎಂಬ ವ್ಯಕ್ತಿಯ ಹಿಂದೆ ಯಾರಿದ್ದಾರೆ. ಅವರಿಗೆ ಏನು ಲಾಭ ಎಂಬ ಬಗ್ಗೆ ವಿಚಾರಿಸಿದರೆ ವಿಚಾರ ಬಯಲಿಗೆ ಬರುತ್ತದೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪೃಥ್ವಿಶ್ರಮ ಸಂಘದ ಮೂಲಕ ಕಾರ್ಮಿಕರಿಗೆ 6 ಎಕರೆ ಪ್ರದೇಶದ ಮಾಲೀಕತ್ವ ಕೊಡಿಸುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಸತತವಾಗಿ ಆರಗ ಜ್ಞಾನೇಂದ್ರ ಬೆಂಬಲ ನೀಡಿದ್ದಾರೆ. ಇತ್ತೀಚೆಗಷ್ಟೇ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ಗೆ ಅವರು ಕಾರ್ಮಿಕರಿಗೆ ಮಾಲೀಕತ್ವ ನೀಡಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ತಾಕೀತು ಮಾಡಿದರಲ್ಲದೇ ಕಾರ್ಮಿಕರ ನಾಯಕರ ಜೊತೆ ಭೇಟಿಯನ್ನು ಏರ್ಪಡಿಸಿದ್ದಾರೆ. ಕಾರ್ಮಿಕರ ಸಂಘಕ್ಕೆ ಗುತ್ತಿಗೆ ನೀಡಬೇಕೆಂದು ಮನವಿ ಕೂಡ ಸಲ್ಲಿಸಿದ್ದರು ಎಂದರು.

ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೇರವಾಗಿ 800 ಕಾರ್ಮಿಕ ಕುಟುಂಬಗಳು ಹಾಗೂ ಪರೋಕ್ಷವಾಗಿ ಬೆಂಬಲಿತ ಉದ್ಯಮಗಳು ನಡೆಯುತ್ತಿದೆ. ಅಂತಹ ಸುಮಾರು 1000ಕ್ಕೂ ಹೆಚ್ಚು ಕುಟುಂಬಗಳಿವೆ. ಇಂತಹ ರಾಜಕೀಯ ವೇದಿಕೆಯಿಂದ ಕಾರ್ಮಿಕ ಕುಟುಂಬಗಳನ್ನು ಬೀದಿಗೆ ತಳ್ಳಿದಂತಾಗುತ್ತಿದೆ. ಕಾರ್ಮಿಕರ ಹೆಸರಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಮಂಜುನಾಥ್‌ ತಾಕೀತು ಮಾಡಿದರು.

ಕಾರ್ಮಿಕ ಇಲಾಖೆ 2007ರಿಂದ ಅಸ್ತಿತ್ವದಲ್ಲಿದೆ. ಎರಡು ಅವಧಿಗೆ ಶಾಸಕರಾಗಿದ್ದ ಕಿಮ್ಮನೆ ಬಂಡೆ ಕಾರ್ಮಿಕರ ಕುರಿತು ಯಾವ ಕಲ್ಯಾಣ ಕೆಲಸವನ್ನು ಮಾಡಲಿಲ್ಲ. ಆರಗ ಜ್ಞಾನೇಂದ್ರ ಅಧಿಕಾರಕ್ಕೆ ಬರುತ್ತಿದ್ದಂತೆ ಇಲ್ಲಿನ ಕಾರ್ಮಿಕರಗೆ ವಿಶೇಷ ಸೌಲಭ್ಯ ನೀಡಿದ್ದಾರೆ. ಪ್ರಥ್ವಿಶ್ರಮ ಸಂಘದ ಮೂಲಕ 21ಲಕ್ಷ 87 ಸಾವಿರಗಳನ್ನು ವಿದ್ಯಾರ್ಥಿಗಳಿಗೆ ವೇತನ ನೀಡಿದ್ದೇವೆ. ಇಲ್ಲಿಯ ವರೆಗೆ ಕಾರ್ಮಿಕರಿಗಾಗಿ ಅಂದಾಜು 50 ಲಕ್ಷಕ್ಕೂ ಹೆಚ್ಚಿನ ಪ್ರಯೋಜನ ಕಾರ್ಮಿಕ ಕುಟುಂಬಗಳಿಗೆ ಲಭಿಸಿದೆ. ಲಾಕ್ ಡೌನ್ ಸಂಧರ್ಭದಲ್ಲಿ 884 ಕಾರ್ಮಿಕ ಕುಟುಂಬಕ್ಕೆ ತಿಂಗಳಿಗೆ ಆಗುವಷ್ಟು ಪಡಿತರ ನೀಡಿದ್ದಾರೆ. ಹೀಗಿದ್ದರು ಅವರನ್ನು ಕಾರ್ಮಿಕ ವಿರೋಧಿ ಎಂಬಂತೆ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ದಲಿತರು ಮತ್ತು ಬಡ ಬಂಡೆ ಕಾರ್ಮಿಕ ಸಂಘದ ಅಧ್ಯಕ್ಷ ರೇಣುಕರಾಜ್, ವಾಸಪ್ಪ, ರಾಜ, ಕೃಷ್ಣಕುಮಾರ, ಸುಬ್ರಮಣ್ಯ, ಮಂಜುನಾಥ್ ಉಪಸ್ಥಿತರಿದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post