ಕರ್ತವ್ಯ ನಿಷ್ಠೆಗೆ ಸಿಗದ ಬೆಲೆ

ಪಿಡಿಓ ಕರ್ತವ್ಯಕ್ಕೆ ಅಡ್ಡಿ
ಕಿಮ್ಮನೆಗೂ ಮಂಕುಬೂದಿ ಎರಚಿದರೇ…?
ಮೇಲಿನ ಕುರುವಳ್ಳಿ ಗ್ರಾ.ಪಂ.ನಲ್ಲಿ ನಕಲಿ ಹಕ್ಕುಪತ್ರದ ಕಳ್ಳಾಟ
ಹಗರಣ ಬಯಲಿಗೆಳೆದಿದ್ದೇ ಪಿಡಿಓ ಜಾಗಕ್ಕೆ ಮುಳುವಾಯಿತೇ...?

ಗ್ರಾಮ ಪಂ. ಉಪಾಧ್ಯಕ್ಷ ಹೊರಬೈಲು ಪ್ರಭಾಕರ್‌, ಸದಸ್ಯ ಬಂಡೆ ವೆಂಕಟೇಶ್‌ ವಿರುದ್ಧ ಕಿಡಿಕಾರಿದ 

ಗ್ರಾ.ಪಂ. ಸದಸ್ಯರು-ಸಾರ್ವಜನಿಕರು

ಹುಣಸವಳ್ಳಿ ಗ್ರಾಮದ ಬಿಳಿಗೆರೆ ಸಮೀಪ ಅಕ್ರಮ ಮಾರಾಟವಾಗಿದೆ ಎನ್ನಲಾಗುತ್ತಿರುವ ಜಾಗ.

ವಿಪರ್ಯಾಸದ ಸಂಗತಿ ಎಂದರೆ ಸಜ್ಜನ, ಗಾಂಧಿವಾದಿ, ಪ್ರಾಮಾಣಿಕ ರಾಜಕಾರಣಿಯಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅವರಿಗೂ ಕೂಡ ತಪ್ಪು ಮಾಹಿತಿ ನೀಡಿ ಅವರನ್ನೇ ಇಓ ಬಳಿ ಕರೆದುಕೊಂಡು ಹೋಗಿ ಒತ್ತಡ ಹಾಕಿಸಿದ್ದಾರೆ ಎಂಬ ಅಂಶ ಬಹಿರಂಗವಾಗಿ ಚರ್ಚೆಯಾಗುತ್ತಿದೆ ಎಂದು ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಅಕ್ರಮ ಬಯಲಿಗೆಳೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ಅವರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ವೈಯಕ್ತಿಕ ಹಿತಾಸಕ್ತಿ ಮುಂದಿಟ್ಟುಕೊಂಡು ಕಾನೂನು ಪಾಲನೆ ಮಾಡಲು ಬಿಡುತ್ತಿಲ್ಲ. ಈ ಹಿಂದಿನ ಪಿಡಿಓ ಮಹಮ್ಮದ್, ಕಾರ್ಯದರ್ಶಿ ಮಂಜುನಾಥ್ ಅವರನ್ನು ಬ್ಲಾಕ್ ಮೇಲ್ ಮಾಡಿ ತಮ್ಮ ಮನೆಗೆ ಕರೆಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದವರು ಇದೀಗ ಸರಿತಾ ಅವರ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಣ್ಣಪ್ಪ, ರೇವತಿ, ಸುಧಾ ಹಾಗೂ ಅನೇಕ ಗ್ರಾಮಸ್ಥರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಯಾರೇ, ಪಂಚಾಯಿತಿ ಅಧಿಕಾರಿ, ಸದಸ್ಯರಾಗಿದ್ದರೂ ಆಡಳಿತ ನಿರ್ವಹಿಸಲು ಗ್ರಾ.ಪಂ. ಸದಸ್ಯ ಬಂಡೆ ವೆಂಕಟೇಶ್ ಅಪ್ಪಣೆ ಪಡೆಯಬೇಕಿತ್ತು ಅಂತ ಸನ್ನಿವೇಶವನ್ನು ಸೃಷ್ಟಿಸಿದ್ದರು. ನಿವೃತ್ತ ಪಿಡಿಓ ಮಹಮ್ಮದ್‌ ಮತ್ತು ಕಾರ್ಯದರ್ಶಿ ಮಂಜುನಾಥ್ ಸರ್ಕಾರಿ ಅಧಿಕಾರಿಗಳು ಎಂಬುದನ್ನು ಮರೆತು ವೆಂಕಟೇಶ್‌ ಬಳಿ ಚಪರಾಸಿಗಳ ತರ ನಡೆದುಕೊಳ್ಳುತ್ತಿದ್ದರು. ವೆಂಕಟೇಶ್ ಕಾರು ಪಂಚಾಯಿತಿ ಆಫೀಸ್‌ ಎದುರು ನಿಂತರೆ ಗುಲಾಮರುಗಳ ತರ ಓಡೋಡಿ ಬಂದು ಸಲಾಂ ಹೊಡೆಯುತ್ತಿದ್ದರು. ಹೊಸದಾಗಿ ಪಿಡಿಓ ಅಧಿಕಾರ ಸ್ವೀಕರಿಸಿದ ಸರಿತಾ ಅವರು ಇವರುಗಳ ಆಟೋಟಕ್ಕೆ ಬಗ್ಗದ ಕಾರಣ ಸರಿತಾ ಅವರ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಡಿಓ ಸರಿತಾ ಅವರು ಪಂಚಾಯಿತಿ ಆಡಳಿತದಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕಿದ್ದು ಬಂಡೆ ವೆಂಕಟೇಶ್‌,  ಪ್ರಭಾಕರ್ ಜೋಡಿಯ ಆಟ‌ ಕೊನೆಯಾಗುವಂತಾಗಿದೆ. ಇದರಿಂದ ಕಂಗೆಟ್ಟ ಈ ಇಬ್ಬರು ಉಳಿದ ಸದಸ್ಯರನ್ನು ಎತ್ತಿಕಟ್ಟಿ ಪದೇ ಪದೇ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾ ಪಿಡಿಓ ವರ್ಗಾವಣೆಗೆ ಹುನ್ನಾರ ನಡೆಸಿದ್ದಾರಲ್ಲದೇ ಕಳೆದ ಮೂರ್ನಾಲ್ಕು ತಿಂಗಳಿಂದ ಯಾವುದೇ ಜನಪರ ಕೆಲಸಗಳು ಆಗದಂತೆ ತಡೆದು ಜನವಿರೋಧಿ ಧೋರಣೆ ತೋರುತ್ತಿದ್ದಾರೆ ಇವರುಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ವೆಂಕಟೇಶ್ ಸಿಬ್ಬಂದಿಗಳಿಗೆಲ್ಲ ಬೆದರಿಸಿ ಗ್ರಾಮ ಪಂಚಾಯಿತಿಯನ್ನು ರಿಯಲ್ ಎಸ್ಟೇಟ್, ಅಕ್ರಮ ಮರಳು‌ ದಂಧೆ, ಅಕ್ರಮ ಹಕ್ಕುಪತ್ರ ಸೃಷ್ಟಿ, ಭೂ ಪರಿವರ್ತನೆ ತಾಣವಾಗಿ ಪರಿವರ್ತಿಸಿದ್ದಾರೆ. ಸದಸ್ಯರ ಗಮನಕ್ಕೆ ತಾರದೇ ಗುಪ್ತವಾಗಿ ಜಾಗದ ಖಾತೆ ದಾಖಲಿಸುವ ಆಡಳಿತ ವಿರೋಧಿತನದಲ್ಲೂ ಇವರು ಭಾಗಿಯಾಗಿದ್ದಾರೆ. ಅಲ್ಲದೇ ಸಿಬ್ಬಂದಿಗಳನ್ನು ಕೇವಲವಾಗಿ ಕಾಣುತ್ತ ಅವರಿಂದ ತನ್ನ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅಭಿವೃದ್ದಿ ಕಾಮಗಾರಿ ಕ್ರಿಯಾ ಯೋಜನೆಗಳನ್ನು ದಬ್ಬಾಳಿಕೆ ಮಾಡಿ ಯಾವ ಸದಸ್ಯರ ಗಮನಕ್ಕೂ ತಾರದೇ ಹಿಂದಿನ ಪಿಡಿಓ ಮಹಮ್ಮದ್ ಅವರನ್ನು ಬಳಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

ಮಹಮ್ಮದ್‌ ವಿರುದ್ದ ಹಿಂದೆ ಲೋಕಾಯುಕ್ತಕ್ಕೆ ಅಕ್ರಮ, ಭ್ರಷ್ಟಾಚಾರದ ದೂರು ಕೂಡ ನೀಡಲಾಗಿತ್ತು. ಈಗಲೂ ಕೂಡ ವೆಂಕಟೇಶ್ ಹುಣಸವಳ್ಳಿ ಗ್ರಾಮದ ಸರ್ವೆ ನಂಬರ್ 13ರಲ್ಲಿ ರಸ್ತೆ ಬದಿಯ ಬೆಲೆಬಾಳುವ ಸರ್ಕಾರಿ ಜಾಗಕ್ಕೆ ಬೇಲಿಸುತ್ತಿ ಎಂಪಿಎಂ ಬೆಳೆಸಿರುವ ಭಾರೀ ಗಾತ್ರದ ಅಕೇಶಿಯಾ ಮರಗಳನ್ನು ಎಗ್ಗಿಲ್ಲದೆ ಕಡಿದು ನಾಶಮಾಡಿ ಸಾಗಿಸಿ ಲಕ್ಷಾಂತರ ರೂಪಾಯಿಗೆ ಜಾಗ ಮಾರಿರುವ ಪ್ರಕರಣಗಳು ಇದೆ. ಈ ಸಂಗತಿ ಅಲ್ಲಿನ ಸ್ಥಳೀಯರೇ ಗ್ರಾಮ ಪಂಚಾಯಿತಿ ಆಡಳಿತಕ್ಕೆ ತಿಳಿಸಿದ್ದಾರೆ. ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಿದರೆ ಇದರ ನಿಜಾಂಶ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ ಹುಣಸವಳ್ಳಿ, ಮೇಲಿನ ಕುರುವಳ್ಳಿಯಲ್ಲಿ ಎಷ್ಟು ಅಕ್ರಮ ಹಕ್ಕುಪತ್ರ ವಿತರಣೆಯಾಗಿದೆ ಎಂಬುದು ತನಿಖೆಯಾಗಬೇಕು. ಇವರ ಜೊತೆ‌ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ್ ಹೆಸರು ಕೂಡ ಇದೆ.  ಇವರುಗಳ ಈ ಜನವಿರೋಧಿ ಕಾರ್ಯದಿಂದಾಗಿ ಪಂಚಾಯಿತಿಯಲ್ಲಿ ಜನಸಾಮಾನ್ಯರ ಕೆಲಸಗಳು ಬಹುತೇಕ ಸ್ಥಗಿತಗೊಂಡಿದೆ. ವರ್ಗ 1, 15ನೇ ಹಣಕಾಸು, ಮರಳು ರಾಜಧನ, ನರೇಗಾ ಯೋಜನೆಯ 50 ಲಕ್ಷಕ್ಕೂ ಹೆಚ್ಚಿನ ಹಣ ನಿರುಪಯುಕ್ತವಾಗಿದೆ. ಪೂರ್ಣಗೊಂಡ ಕಾಮಗಾರಿಯ ಬಿಲ್ ಬಾಕಿ ಇಟ್ಟು ಗುತ್ತಿಗೆದಾರ ಮನಸ್ಥೈರ್ಯ ಕುಗ್ಗಿಸುವುದು. ಜೊತೆಗೆ ಪಂಚಾಯಿತಿಯ ವಿದ್ಯುತ್ ಬಿಲ್ ಬಾಕಿ ಇದ್ದು ಪಾವತಿಗಾಗಿ ಕ್ರಿಯಾ ಯೋಜನೆಯಲ್ಲಿ ನಮೂದಿಸಿಲ್ಲ. ಇದರಿಂದಾಗಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಡೆ ನೀರು ಮತ್ತು ಬೆಳಕಿಲ್ಲದ ಪರಿಸ್ಥಿತಿ ಎದುರಾಗಲಿದೆ. 6 ತಿಂಗಳಿಗೊಮ್ಮೆ ನಡೆಯಬೇಕಾಗಿದ್ದ ವಾರ್ಡ್ ಸಭೆ, ಗ್ರಾಮ ಸಭೆ, ಪ್ರಗತಿ ಪರಿಶೀಲನೆ ಸಭೆ ಇವರ ಜನವಿರೋಧಿ ಧೋರಣೆಯಿಂದಾಗಿ ಇಲ್ಲಿಯ ತನಕ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಿತಾ ಪಿಡಿಓ ಆಗಿ ಅಧಿಕಾರ ಸ್ವೀಕರಿಸಿದ ನಂತರ ಬಹುತೇಕ ಎಲ್ಲಾ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಿದ್ದರಿಂದ ಸಕಾರಣ ಇಲ್ಲದೆ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಅಕ್ರಮ ಕಡತಗಳನ್ನು ಕರ್ತವ್ಯ ಪ್ರಜ್ಞೆಯಿಂದ ಹುಡುಕಿದ್ದ ಕಾರಣಕ್ಕಾಗಿಯೇ 10 ವರ್ಷಕ್ಕೂ ಹೆಚ್ಚುಕಾಲ ಕೆಲಸ ಮಾಡಿದ ಗುತ್ತಿಗೆ ಆಧರಿತ ಸಿಬ್ಬಂದಿ ಒಬ್ಬರನ್ನು ವಜಾ ಮಾಡುವಂತೆ ರಿಯಲ್‌ ಎಸ್ಟೇಟ್‌ ಖದೀಮರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮೇಲೆ ಒತ್ತಡ ಹೇರುತ್ತಿದ್ದಾರೆ.

ಅಧ್ಯಕ್ಷರು ಮತ್ತು ಸಹ ಸದಸ್ಯರಿಗೆ ಬೆದರಿಸಿ ಅಸಹಕಾರ ನೀಡುವಂತೆ, ಸರ್ಕಾರದ ವತಿಯಿಂದ ಆಯೋಜಿಸುವ ಸಭೆ ಸಮಾರಂಭಗಳ ಮಾಹಿತಿ ಇಲ್ಲವೆಂದು ಸುಳ್ಳು ಹೇಳುವುದು. ಹಾಗೂ ಸಂಬಂಧ ಪಟ್ಟ ಸಿಬ್ಬಂದಿ ಕರೆದಾಗಲೂ ಪಿಡಿಓ ಅವರೇ ಕರೆಯಬೇಕೆಂದು ಉದ್ದಟತನದಿಂದ ಮಾತನಾಡುವುದು. ಸಿಬ್ಬಂದಿಗಳ ವೇತನ ನಗದು ಚೆಕ್ಕಿಗೆ ಅಧ್ಯಕ್ಷರು ಸಹಿ ಮಾಡದಂತೆ ಒತ್ತಡ ಹೇರುವುದು. ಪಿಡಿಓ ತಮ್ಮ ಜಾತಿಯನ್ನು ಮುಂದುಮಾಡಿ ಬೆದರಿಸ ತೊಡಗಿದ್ದಾರೆ ಎಂಬ ಸುಳ್ಳು ಆರೋಪ ಮಾಡುವ ಮೂಲಕ ಅವರ ಮನಸ್ಥೈರ್ಯ ಕುಂದಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ. 

ಟಿ.ಎಸ್.‌ ರೇಮಯ್ಯಗೌಡ, ಜಗನ್ನಾಥ ಪೂಜಾರಿ, ಕುರುವಳ್ಳಿ ಅನಿಲ್‌, ಸಿ. ರವಿ ಮೇಲಿನ ಕುರುವಳ್ಳಿ ಗ್ರಾ.ಪಂ. ಅಧ್ಯಕ್ಷರುಗಳಾಗಿದ್ದಾಗ ಅಭಿವೃದ್ಧಿ ಕಾರ್ಯಗಳಿಂದ ಹೆಸರು ಮಾಡಿತ್ತು. ಜಗನ್ನಾಥ ಪೂಜಾರಿ ಅಧ್ಯಕ್ಷರಾಗಿದ್ದಾಗ ರಾಷ್ಟ್ರಪ್ರಶಸ್ತಿ ಹಾಗೂ ಸಿ.ರವಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯ ಪ್ರಶಸ್ತಿ ಪಡೆದಿತ್ತು. ಅನಿಲ್‌ ಕಾಲದಲ್ಲಿ ಕೂಡ ಉತ್ತಮ ಹೆಸರು ಸಂಪಾದಿಸಿತ್ತು ಎಂದು ತಿಳಿಸಿದ್ದಾರೆ.

ಈ ಹೇಳಿಕೆಯಲ್ಲಿ ನಾವು ಮಾಡಿರುವ ಆರೋಪಗಳಿಗೆ ಸರಿಯಾದ ತನಿಖೆ ನಡೆದಲ್ಲಿ ಗ್ರಾಮ ಪಂಚಾಯಿತಿಯಲ್ಲೇ ದಾಖಲೆಗಳು ಸಿಗುತ್ತವೆ. ಗ್ರಾಮ ಪಂಚಾಯಿತಿಯ ಕಡತಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಲ್ಲಿ ಸತ್ಯ ಏನೆಂಬುದು ಬಯಲಿಗೆ ಬರುತ್ತದೆ. ಹಾಗೇ ಅವಶ್ಯಕತೆ ಇದ್ದಲ್ಲಿ ಇದಕ್ಕೆ ಪೂರಕವಾಗಿ ಧ್ವನಿ ಮುದ್ರಿಕೆ ದಾಖಲೆ ನೀಡುಲು ನಾವು ಸಿದ್ದರಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಅಣ್ಣಪ್ಪ, ರೇವತಿ, ಸುಧಾ ಸೇರಿದಂತೆ ಅನೇಕ ಸಾರ್ವಜನಿಕರು ಸಹಿ ಹಾಕಿದ ಪತ್ರದಲ್ಲಿ ಹೇಳಿದ್ದಾರೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post