ಗೃಹಸಚಿವರ ಕ್ಷೇತ್ರದಲ್ಲಿ ಠಾಣಾಧಿಕಾರಿ ದರ್ಬಾರ್

ತೀರ್ಥಹಳ್ಳಿ ಠಾಣೆಯಲ್ಲಿ ಧಿಮಾಕು

ಸಾರ್ವಜನಿಕ ಕಾಳಜಿಗೆ ಬೆಲೆ ಇಲ್ಲವೇ...?
ಇಂತಹ ಅಧಿಕಾರಿಯಿಂದ ಗೃಹಸಚಿವರಿಗೆ ಶೋಭೆಯೇ...

ತೀರ್ಥಹಳ್ಳಿ ಸಭ್ಯ ಸಂಸ್ಕೃತಿಗೆ ಹೆಸರಾಗಿದೆ. ಬಹುತೇಕ ಪೊಲೀಸ್ ಪೇದೆಗಳನ್ನೂ ಕೂಡ ಇಲ್ಲಿನ ನಾಗರೀಕರು ಸಾರ್ ಎಂದು ಸಂಭೋಧಿಸುತ್ತಾರೆ. ಪರಸ್ಪರ ಗೌರವ ನೀಡುವುದು ಇಲ್ಲಿನ ಸಂಪ್ರದಾಯ. ಹಾಗಾಗಿಯೇ ಇಲ್ಲಿಗೆ ಸರ್ಕಾರಿ ನೌಕರರಾಗಿ ಬಂದ ಬಹುತೇಕರು ನಿವೃತ್ತಿಯ ನಂತರ ಇಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲು ಬಯಸುತ್ತಾರೆ.
ಆದರೆ ಇತ್ತೀಚೆಗಷ್ಟೇ ಠಾಣಾಧಿಕಾರಿಯಾಗಿ ಇಲ್ಲಿಗೆ ಆಗಮಿಸಿರುವ ಅಶ್ವಥ್ ಗೌಡ ಇದರಿಂದ ಹೊರತಾಗಿರುವಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಏಳುವಂತೆ ಮಾಡಿದೆ. ಪೊಲೀಸ್ ಅಂತಹ ತ್ಯಾಗ ಹಾಗೂ ನಿಷ್ಠೆಯ ಸೇವೆ ಇರುವುದು ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸಲು ಎಂಬುದು ಈ ವ್ಯಕ್ತಿ ತಿಳಿದುಕೊಂಡಂತಿದೆ.
ಠಾಣೆಗೆ ಸಾರ್ವಜನಿಕ ಸಮಸ್ಯೆಯನ್ನು ಹೇಳಿಕೊಂಡು ಬರುವವರನ್ನು ಈ ವ್ಯಕ್ತಿ ಅಸಡ್ಡೆಯಿಂದ ಕಾಣುವುದು ಧಿಮಾಕಿನ ವರ್ತನೆ ತೋರುವುದು ಈಗಾಗಲೇ ಹಲವು ಬಾರಿ ಬಹಿರಂಗಗೊಂಡಿದೆ. ವಿಪರ್ಯಾಸವೆಂದರೆ ರಾಜ್ಯದ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿರುವ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 10 ವರ್ಷಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿರುವ ಹಾಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನಿಮ್ಮ ಅಂತರಂಗ ಪತ್ರಿಕೆಯ ಸಂಪಾದಕರಾದ ಟಿ.ಕೆ. ರಮೇಶ್ ಶೆಟ್ಟರಿಗೂ ಈ ಕೆಟ್ಟ ಅನುಭವ ಆಗಿದೆ.
ಬಾಳೇಬೈಲಿನಲ್ಲಿ ನೂತನ ಸೇತುವೆ ಕಾಮಗಾರಿಗೆ ಬೃಹತ್ ಗಾತ್ರದ ಪಿಲ್ಲರ್ ನಿರ್ಮಿಸುವ ಕೆಲಸ ನಡೆಯುತ್ತಿದೆ. ಇದರಿಂದ ಇಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು ಆಗುಂಬೆ ಕಡೆಯಿಂದ ಆಗಮಿಸುತ್ತಿರುವ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು ಈಗಾಗಲೇ ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ ರಸ್ತೆ ದಾಟಲು ಮುಖ್ಯವಾಗಿ ಶಾಲಾ ಮಕ್ಕಳು ವಯಸ್ಸಾದವರು ಭಯ ಪಡುವಂತಹ ಪರಿಸ್ಥಿತಿ ಇದೆ. ಈ ವಿಚಾರವನ್ನು ಪೊಲೀಸ್ ಠಾಣೆಗೆ ಬಂದು ಠಾಣಾಧಿಕಾರಿಗೆ ತಿಳಿಸಿ ಅಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡುವ ಮೂಲಕ ಸಂಭವನೀಯ ದುರಂತ ತಪ್ಪಿಸುವುದು ಉತ್ತಮ ಎಂಬ ಸಲಹೆಯನ್ನು ರಮೇಶ್ ಶೆಟ್ಟರು ಠಾಣಾಧಿಕಾರಿಗೆ ಅಶ್ವಥ್ ಗೌಡಗೆ ನೀಡಿದ್ದಾರೆ.
ಪೊಲೀಸರೆ ದಂಧೆಯಲ್ಲಿ ಶಾಮೀಲು
ಈ ಕುರಿತು ಚರ್ಚೆ ನಡೆಸುವುದಿರಲಿ ಸರಿಯಾಗಿ ಕೇಳಿಸಿಕೊಳ್ಳಲು ತಯಾರಿರದ ಅಶ್ವಥ್ ಗೌಡ ಹಾಗೆಲ್ಲ ಕಂಡ ಕಂಡಲ್ಲಿ ಬ್ಯಾರಿಕೇಡ್ ಹಾಕಲು ಬರುವುದಿಲ್ಲ. ಅಲ್ಲಿ ಎಷ್ಟು ಅಪಘಾತ ಸಂಭವಿಸಿದೆ... ಎಂದು ಧಿಮಾಕಿನಿಂದ ಪ್ರಶ್ನಿಸಿದ್ದಾರೆ. ಬಳಿಕ ಅದೇ ಶೈಲಿಯಲ್ಲಿ ಮಾತನಾಡಿ ಸೌಜನ್ಯಕ್ಕೂ ರಮೇಶ್ ಶೆಟ್ಟರ ಸಲಹೆಗೆ ಕಿಮ್ಮತ್ತೇ ನೀಡದವನಂತೆ ಜೀಪು ಹತ್ತಿ ತೆರಳಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ವಿಚಾರದಲ್ಲಿ ಯಾರೇ ಸಾರ್ವಜನಿಕರು ಸಲಹೆ ನೀಡುವುದು, ಸಮಸ್ಯೆಗಳನ್ನು ಗಮನಕ್ಕೆ ತರುವುದು ತಪ್ಪೇ ಎನ್ನುವುದಕ್ಕೆ ಇಲ್ಲಿನ ಡಿವೈಎಸ್ಪಿ ಈ ಶಾಂತವೀರ ಉತ್ತರಿಸಬೇಕಿದೆ. ಸದರಿ ಅಶ್ವತ್ ಗೌಡ ಠಾಣಾಧಿಕಾರಿ ಆದ ಮೇಲೆ ಶಾಂತಿ ಸುವ್ಯವಸ್ಥೆಗೆ ಹೆಸರಾದ ತೀರ್ಥಹಳ್ಳಿಯಲ್ಲಿ ಎರಡು ಅನುಮಾನಾಸ್ಪದ ಸಾವು ಸಂಭವಿಸಿದೆ. ಅಲ್ಲದೇ ತಾಲ್ಲೂಕಿನಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆಯುತ್ತಿವೆ. ಮಟ್ಕ, ಗಾಂಜಾ, ಮರಳು, ಓಸಿ ಇಸ್ಪೀಟು ಅಲ್ಲದೇ ಸ್ವತಃ ಬೇರೆ ತಾಲ್ಲೂಕಿನ ಪೊಲೀಸರೇ ಇಲ್ಲಿನ ಕೆಲವು ಆಯ್ದ ಸ್ಥಳಗಳಲ್ಲಿ ಇಸ್ಪೀಟ್ ದಂಧೆಯಲ್ಲಿ ಶಾಮೀಲಾಗಿರುವುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಇಂತಹ ಯಾವುದೇ ಪ್ರಕರಣವನ್ನೂ ಇಲ್ಲಿಯವರೆಗೆ ಭೇದಿಸದ ಅಶ್ವಥ್ ಗೌಡರ ದರ್ಪ ದೌಲತ್ತು ಓರ್ವ ಹಿರಿಯ ಪತ್ರಕರ್ತ ಬಂದಾಗ ಪ್ರಕಟಗೊಳ್ಳುತ್ತದೆ ಎಂದರೆ ಇನ್ನೂ ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಸ್ವತಃ ಗೃಹಸಚಿವ ಆರಗ ಜ್ಞಾನೇಂದ್ರರ ತವರಿನಲ್ಲಿಯೇ ಗೌರವಾನ್ವಿತ ನಾಗರೀಕರಿಗೆ ಪೊಲೀಸರಿಂದ ಮುಜುಗರ ಆಗುವಂತಹ ವಾತಾವರಣ ಸೃಷ್ಟಿಯಾಗಿರುವುದು ಅವರಿಗೂ ಕೂಡ ಒಳ್ಳೆಯ ಹೆಸರು ತರುವ ಸಂಗತಿ ಅಲ್ಲ ಎನ್ನುವುದು ಕೂಡ ಗಮನಾರ್ಹ ಸಂಗತಿಯಾಗಿದೆ.
ಶಿವಮೊಗ್ಗಕ್ಕೆ ಆಗಮಿಸಿರುವ ನೂತನ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಎಂದು ಕಾರ್ಯಗಾರ ಒಳಿತು ಎನ್ನುವುದು ಕೂಡ ಸಾರ್ವಜನಿಕರಿಂದ ಕೇಳಿ ಬಂದಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post