ಉದ್ಯಮಿಗಳ ಲಾಭಕ್ಕೆ ಮಣೆ

ಅಡಿಕೆ ಬೆಳೆಯುವ ರೈತರ ಮೇಲೆ ಕೇಂದ್ರ ಸರ್ಕಾರ ಗದಪ್ರಹಾರ

ರೈತರ ಬದುಕಿನ ನಾಶಕ್ಕೆ ಹೊರಟ ಸರ್ಕಾರದ ವಿರುದ್ಧ ಮುಡುಬ ರಾಘವೇಂದ್ರ ಆಕ್ರೋಶ

ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯನ್ನು ಜೀವನಾಧಾರವಾಗಿ ನಂಬಿಕೊಂಡು ಬಂದಿರುವ ಮಲೆನಾಡಿಗರ ಪಾಲಿಗೆ ಕೇಂದ್ರ, ರಾಜ್ಯ ಸರ್ಕಾರ ನೀತಿ ಕಂಟಕವಾಗಿದೆ. ಅಡಿಕೆ ಹಳದಿ ರೋಗ, ಎಲೆಚುಕ್ಕಿ ರೋಗ, ಕೊಳೆರೋಗದಂತಹ ಬೀಕರ ಪರಿಣಾಮದಿಂದ ರೈತರು ತತ್ತರಿಸಿದ್ದಾರೆ. ಧಾರಣೆಯ ಕಾರಣದಿಂದ ತೋಟ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಅಡಿಕೆ ದರ ಪಾತಾಳಕ್ಕೆ ಉರುಳುವಂತಹ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿರುವುದು ದುರಂತ. ಉದ್ಯಮಿಗಳ ಪರವಾಗಿರುವ ನಿಮ್ಮ ಧೋರಣೆ ಹೀಗೆ ಮುಂದುವರೆದರೆ ಮಲೆನಾಡಿಗರ ರೈತರ ಪಾಲಿಗೆ ಮರಣ ಶಾಸನವಾಗಲಿದೆ. ಅದರ ಬದಲಿಗೆ ರೈತರಿಗೆ ದಯಾಮರಣ ಕೊಡಿ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ಕೇಂದ್ರ ಸರ್ಕಾರದ ಅದೇಶ ಪತ್ರ

ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿಯಂತಹ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರೈತರು ಜೀವನೋಪಾಯ ಬೆಳೆಯಾಗಿ ಅಡಿಕೆ ನೆಚ್ಚಿಕೊಂಡಿದ್ದಾರೆ. ಕಳೆದ 4 ದಶಕಗಳಿಂದ ಅಡಿಕೆ ಬೆಳೆ ಈ ಪ್ರದೇಶಗಳ ರೈತರ ಆರ್ಥಿಕ ಸ್ಥಿರತೆಗೆ ಹಾಗೂ ಈ ಎಲ್ಲಾ ಭಾಗಗಳ ಆರ್ಥಿಕ ಚಟುವಟಿಕೆಗಳ ಮೂಲಾಧಾರವಾಗಿದೆ. ಮುಖ್ಯವಾಗಿ ತೀರ್ಥಹಳ್ಳಿ ಭಾಗದಲ್ಲಿ ಅಡಿಕೆಯಿಲ್ಲದೆ ಬದುಕುವುದು ಕಷ್ಟಕರವಾಗಿದೆ. ಮಲೆನಾಡು ಭಾಗದಲ್ಲಿ ಬೆಳೆಯುವಷ್ಟು ಬೃಹತ್ ಪ್ರಮಾಣದಲ್ಲಿ ಭೂತಾನ್ ನಿಂದ ಆಮದು ಮಾಡಿಕೊಂಡರೆ ನಾವು ನಂಬಿಕೊಂಡಿರುವ ಮಾರುಕಟ್ಟೆ ಡೋಲಾಯಮಾನವಾಗಲಿದೆ.

ಭೂತಾನ್ ದೇಶದಿಂದ 17 ಸಾವಿರ ಟನ್ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿರುವುದು ಅಡಿಕೆ ಬೆಳೆಗಾರರಿಗೆ ಮಾಡಿದ ಮಹಾಮೋಸ. ಬೆಳೆಯ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಈ ಉದ್ಯಮಿಗಳ ಪರವಾದ ನೀತಿ ದೃಢಪಡಿಸಿದೆ. ಧಾರಣೆ, ಸ್ಥಿರತೆ ಕಾಪಾಡುವ ಸಚಿವರುಗಳ ರಾಜಕೀಯ ನಾಟಕ ಬಯಲಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮುಡುಬ ರಾಘವೇಂದ್ರ ಹರಿಹಾಯ್ದಿದ್ದಾರೆ.

2017ರಲ್ಲಿ ಅಡಿಕೆಯ ಆಮದು ಬೆಲೆ ಕನಿಷ್ಠ ಕೆಜಿಗೆ 251 ರೂಪಾಯಿ ಇರಲೇಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು. ಆದರೆ ಈ ಷರತ್ತನ್ನೇ ಈಗ ತೆಗೆದು ಹಾಕಿ ಬಂಡವಾಳಶಾಯಿಗಳ ಪರವಾಗಿ ಸ್ಪಷ್ಟ ಧೋರಣೆ ತಳೆದಿರುವುದು ದುರಂತವೇ ಸರಿ. ತೀರ್ಥಹಳ್ಳಿ ಕ್ಷೇತ್ರದ ಶಾಸಕರು, ಗೃಹಸಚಿವರು ಇದಕ್ಕಿಂತ ಹೆಚ್ಚಿನದಾಗಿ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿರುವ ಆರಗ ಜ್ಞಾನೇಂದ್ರ ಕ್ಷೇತ್ರದ ಜನರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ತಮ್ಮದೇ ಕೇಂದ್ರ ಸರ್ಕಾರದ ಕಣ್ಣು ತೆರಸದೆ ರಾಜಕೀಯ ನಾಟಕದ ಪಾತ್ರಧಾರಿ ಆಗಿದ್ದಾರೆ ಎಂದು ಟೀಕಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ಕಳ್ಳ ಮಾರ್ಗದಲ್ಲಿ ಮಲೇಷಿಯಾ, ಇಂಡೋನೇಷಿಯಾ, ಮಯನ್ಮಾರ್, ಭೂತಾನ್ ಹಾಗೂ ಶ್ರೀಲಂಕಾ ಕಡೆಗಳಿಂದ ಆಮದಾಗುತ್ತಿದ್ದ ಅಡಿಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಣಕ್ಕೆ ತಂದ ಕಾರಣ ಅಡಿಕೆಯ ಬೆಲೆ ಲಕ್ಷ ರೂಪಾಯಿ ದಾಟಿತ್ತು. ಆದರೆ ರೈತರ ಹೆಸರನ್ನು ಪದೇ ಪದೇ ಹೇಳಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಡಿಕೆ ಬೆಲೆ ಯಾವಾಗಲೂ ಕೂಡ ದೊಡ್ಡ ಮಟ್ಟದಲ್ಲಿ ಏರಲಿಲ್ಲ. ಇದಲ್ಲದೇ ಅಡಿಕೆ ಬೆಳೆ ಮಾರುಕಟ್ಟೆಗೆ ಬರುವ ಅಕ್ಟೋಬರ್ ತಿಂಗಳಿಗೆ ಸರಿಯಾಗಿ ಅಡಿಕೆ, ಗುಟ್ಕಾ ನಿಷೇಧದಂತಹ ವದಂತಿಯನ್ನು ಹರಡಿಸುವ ಮೂಲಕ ಬೆಲೆಯ ಮೇಲೆ ನಿಯಂತ್ರಣ ಸಾಧಿಸುತ್ತಿರುವುದನ್ನು ಈ ವರ್ಷವೂ ಮುಂದುವರೆಸಿದೆ. ಇಂತಹ ರೈತ ವಿರೋಧಿ ಧೋರಣೆಯನ್ನು ನಿಯಂತ್ರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ತಕ್ಷಣ ರೈತ ವಿರೋಧಿ ಧೋರಣೆಯನ್ನು ವಾಪಾಸ್ಸು ಪಡೆಯಬೇಕು. ಮಲೆನಾಡಿನ ಕೃಷಿಕರ ಜೀವನದ ಭಾಗವಾಗಿರುವ ಅಡಿಕೆಗೆ ಧಾರಣೆ ಒದಗಿಸಬೇಕು. ಅಡಿಕೆಗೆ ತಗಲಿರುವ ರೋಗಗಳಿಗೆ ವೈಜ್ಞಾನಿಕ ಸಂಶೋಧನೆ ನಡೆಸಬೇಕು. ವಿಶೇಷ ಕೃಷಿ ವಲಯ ಎಂದು ಘೋಷಿಸಿ ಸಬ್ಸಿಡಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post