17 ಸಾವಿರ ಟನ್‌ ಹಸಿ ಅಡಿಕೆ ಅಮದು

ರೈತರ ಪಾಲಿನ ಮರಣಶಾಸನ
ಆರ್.ಎಂ. ಮಂಜುನಾಥ ಗೌಡ ತೀವ್ರ ಖಂಡನೆ

ಅಡಿಕೆ ಬೆಳೆ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಕೊಪ್ಪ, ಶೃಂಗೇರಿಯಂತಹ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರೈತರ ಅನಿವಾರ್ಯ ಜೀವನೋಪಾಯದ ಬೆಳೆಯಾಗಿದೆ. ಸಾಗರ ಹೊರತು ಉಳಿದ ಈ ಪ್ರದೇಶದಲ್ಲಿ ಅತೀವ ತೇವಾಂಶದ ಕಾರಣ ಬೇರಾವ ಬೆಳೆಯೂ ಬೆಳೆಯಲಾಗದ ಅನಿವಾರ್ಯ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಕಳೆದ 4 ದಶಕಗಳಿಂದ ಅಡಿಕೆ ಬೆಳೆ ಈ ಪ್ರದೇಶಗಳ ರೈತರ ಆರ್ಥಿಕ ಸ್ಥಿರತೆಗೆ ಹಾಗೂ ಈ ಎಲ್ಲಾ ಭಾಗಗಳ ಆರ್ಥಿಕ ಚಟುವಟಿಕೆಗಳ ಮೂಲಾಧಾರವಾಗಿದೆ.

ಇಡೀ ರಾಜ್ಯದಲ್ಲಿ ಅಡಿಕೆಯನ್ನು ಲಕ್ಷಾಂತರ ರೈತರು ಬೆಳೆಯುತ್ತಿದ್ದಾರೆ. ಆದರೆ ಸದಾಕಾಲ ರೈತ ವಿರೋಧಿ ಧೋರಣೆಯನ್ನೇ ರೂಡಿಸಿಕೊಂಡು ಬಂದಿರುವ ಕೇಂದ್ರ ಸರ್ಕಾರ ಸೆಪ್ಟೆಂಬರ್‌ 28ರಂದು ಏಕಾಏಕಿ ಭೂತಾನ್‌ ದೇಶದಿಂದ 17 ಸಾವಿರ ಟನ್‌ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಅನುಮತಿ ನೀಡಿರುವುದು ಅಡಿಕೆ ಬೆಳೆಗಾರರಿಗೆ ಬರೆದ ಮರಣ ಶಾಸನ ಎಂದು ಕಾಂಗ್ರೆಸ್‌ ಸಹಕಾರ ವಿಭಾಗದ ರಾಜ್ಯ ಸಂಚಾಲಕ, ಮಾಜಿ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ, ಸ್ವತಃ ಅಡಿಕೆ ಬೆಳೆಗಾರರಾದ ಆರ್.ಎಂ. ಮಂಜುನಾಥ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ಅಡಿಕೆಯ ಆಮದು ಬೆಲೆ ಕನಿಷ್ಠ ಕೆಜಿಗೆ 251 ರೂಪಾಯಿ ಇರಲೇಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು. ಆದರೆ ಈ ಷರತ್ತನ್ನೇ ಈಗ ತೆಗೆದು ಹಾಕಿರುವುದು ಸ್ಪಷ್ಟವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಗುಟ್ಕಾ ಫ್ಯಾಕ್ಟರಿಗಳ ಮಾಲೀಕರ ಹಿತ ಕಾಯಲು ಎಂಬುದಕ್ಕೆ ಯಾವುದೇ ಪುರಾವೆ ಬೇಕಾಗಿಲ್ಲ ಎಂದವರು ಹೇಳಿದ್ದಾರೆ.

ನಿಜವಾಗಿಯೂ ಅಡಿಕೆ ಬೆಳೆಗಾರರ ಹಿತ ಕಾದಿದ್ದು ಮನಮೋಹನ್‌ ಸಿಂಗ್‌ ಅವರ ಸರ್ಕಾರ. ಅವರು ಪ್ರಧಾನಿಯಾಗಿದ್ದಾಗ ಕಳ್ಳ ಮಾರ್ಗದಲ್ಲಿ ಮಲೇಷಿಯಾ, ಇಂಡೋನೇಷಿಯಾ, ಮಯನ್ಮಾರ್‌, ಭೂತಾನ್‌ ಹಾಗೂ ಶ್ರೀಲಂಕ ಕಡೆಗಳಿಂದ ಆಮದಾಗುತ್ತಿದ್ದ ಅಡಿಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಣಕ್ಕೆ ತಂದ ಕಾರಣ ಅಡಿಕೆಯ ಬೆಲೆ ಲಕ್ಷ ರೂಪಾಯಿ ದಾಟಿತ್ತು. ಆದರೆ ರೈತರ ಹೆಸರನ್ನು ಪದೇ ಪದೇ ಹೇಳಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಡಿಕೆ ಬೆಲೆ ಯಾವಾಗಲೂ ಕೂಡ ದೊಡ್ಡ ಮಟ್ಟದಲ್ಲಿ ಏರಲಿಲ್ಲ. ಇದಲ್ಲದೇ ಅಡಿಕೆ ಬೆಳೆ ಮಾರುಕಟ್ಟೆಗೆ ಬರುವ ಅಕ್ಟೋಬರ್‌ ತಿಂಗಳಿಗೆ ಸರಿಯಾಗಿ ಅಡಿಕೆ, ಗುಟ್ಕಾ ನಿಷೇಧದಂತಹ ವದಂತಿಯನ್ನು ಹರಡಿಸುವ ಮೂಲಕ ಬೆಲೆಯ ಮೇಲೆ ನಿಯಂತ್ರಣ ಸಾಧಿಸುತ್ತಿರುವುದು ಬಿಜೆಪಿ ಕೃಪಾಪೋಷಿತ ನಾಟಕ ಮಂಡಳಿಯೇ ಆಗಿದೆ ಎಂದು ಆರ್.ಎಂ. ಮಂಜುನಾಥ ಗೌಡ ಹೇಳಿದ್ದಾರೆ.

ಈ ವರ್ಷ ಅತೀವೃಷ್ಟಿಯ ಕಾರಣ ವಿಪರೀತ ಕೊಳೆರೋಗ, ಹಳದಿ ಎಲೆ ರೋಗ, ಎಲೆಚುಕ್ಕಿ ರೋಗದ ಕಾರಣ ಅಡಿಕೆ ಬೆಳೆಗಾರರು ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ಇಲ್ಲಿಯ ತನಕವೂ ಇವುಗಳ ಸಮರ್ಪಕ ಪರಿಹಾರಕ್ಕೆ ಪ್ರಯತ್ನಿಸಿಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರ ಅತ್ಯಂತ ಅಮಾನವೀಯ. ಈ ತಕ್ಷಣವೇ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ತೆಗೆದು ಹಾಕದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post