ತೀರ್ಥಹಳ್ಳಿ ಕ್ಷೇತ್ರದಲ್ಲಿ ರಂಗೇರಿದ ರಾಜಕೀಯ

"ಮಾಸ್ಟ್ರು ನೇಮಕಾತಿ ಹಗರಣ ಸಿಓಡಿಗೆ"
"2014-15ರಲ್ಲಿ ಯಾರಗಿದ್ರು ಶಿಕ್ಷಣ ಮಂತ್ರಿ"
"ನಾನ್ ಕಿಮ್ಮನೆ ರಾಜೀನಾಮೆ ಕೇಳಲ್ಲ… ಯಾಕಂದ್ರೆ ಅವರು ಅಧಿಕಾರದಲ್ಲಿ ಇಲ್ಲ.."
"ಈಗೇನು ಮಾಡ್ತಾರೆ… ಆತ್ಮಹತ್ಯೆ ಮಾಡ್ಕೋಳ್ತಾರಾ…"
ಸರ್ಕಾರದ ದುಡ್ಡಲ್ಲಿ ಬಿಜೆಪಿ ಪ್ರಚಾರ ಭಾಷಣ

'ಆಗಸ್ಟ್ ತಿಂಗಳಲ್ಲಿ ಗೃಹಸಚಿವನಾಗಿ ಅಧಿಕಾರ ಸ್ವೀಕರಿಸಿದೆ. ಇಲಾಖೆ ಏನು ಅಂತ ಅರ್ಥ ಮಾಡಿಕೊಳ್ಳುವುದರೊಳಗೆ ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಪಿಎಸ್ಐ ಎಕ್ಸಾಮ್ ನಡೆದಿದೆ. ಪರೀಕ್ಷೆ ಸರಿಯಾಗಿಲ್ಲ ಎಂಬ ಅನುಮಾನ ನಿಜವಾಗಿದೆ. ತಕ್ಷಣ ಸಿಓಡಿ ತನಿಖೆಗೆ ವಹಿಸಿದೆ. ಘಟನೆ ಮುಚ್ಚಿಡದೆ ಬಡವರ ಮಕ್ಕಳ ಪರವಾಗಿ ತನಿಖೆ ನಡೆಸಿದೆ. ತೀರ್ಥಹಳ್ಳಿಯ ನನ್ನ ಮಿತ್ರರೊಬ್ಬರು ರಾಜೀನಾಮೆ ನೀಡಬೇಕು ಅಂತ ಹೇಳಿದ್ರು. ಆದ್ರೆ ಇವತ್ತು 2014-15ರ ಹೈಸ್ಕೂಲ್ ಮೇಸ್ಟ್ರು ಕೆಲಸಕ್ಕೆ ಪರೀಕ್ಷೆ ನಡೆದಿತ್ತು. ಸಿಓಡಿ ತನಿಖೆಗೆ ವಹಿಸಿದ ಮೇಲೆ ಅರ್ಜಿಯೇ ಹಾಕದವರು 4 ಜನ ಸೆಲಕ್ಷನ್ ಆಗಿದ್ದಾರೆ. ಇನ್ನು ಎಷ್ಟು ಜನ ಇದ್ದಾರೋ ಗೊತ್ತಿಲ್ಲ. ಶಿಕ್ಷಣ ಇಲಾಖೆಯದ್ದು 2014-15ರಲ್ಲಿ ಯಾರಿದ್ರು….? ನಮ್ಮ ಕ್ಷೇತ್ರದವರೇ ಅಲ್ವಾ… ಇವಾಗ ಅವಮಾನ ಆಗಿಲ್ವಾ. ನಾನ್ ಅವರ ರಾಜೀನಾಮೆ ಕೇಳಲ್ಲ. ಯಾಕಂದ್ರೆ ಅವರು ಅಧಿಕಾರದಲ್ಲಿ ಇಲ್ಲ. ನನ್ನ ರಾಜೀನಾಮೆ ಕೇಳ್ದೋರು. ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿ ಹೇಳ್ತಾರೆ ಇದು ನನಗೆ ಸಂಬಂಧ ಇಲ್ಲ ಕೆಳಗೆ ಅಧಿಕಾರಿಗಳ ಹಂತದಲ್ಲಿ ನಡೆದಿದೆ ಅಂತ. ಅಧಿಕಾರಿಯನ್ನು ಯಾರು ಕಂಟ್ರೋಲ್ ಮಾಡೋದು ಸ್ವಾಮಿ.. ಮಂತ್ರಿಯಲ್ವಾ.. ನಾನು ಸಬ್ ಇನ್ಸ್ಪೆಕ್ಟರ್ ಕೆಲಸದ್ದು ಹಾಗೆ ಹೇಳಿ ಕೈ ತೊಳಕಬಹುದಿತಲ್ವಾ. ಹಾಗೆ ಮಾಡಿದ್ನಾ ನಾನು. ಇದು ನನ್ನ ಖಾತೆ ನಾನು ನಿಭಾಯಿಸಬೇಕಲ್ವಾ. 2014-15ರಲ್ಲಿ ಆಗಿರುವ ಕೃತ್ಯವನ್ನು ಇವರು ಮುಚ್ಚಿಟ್ಟು ಬಂದರಲ್ಲ. ನಾನು ಇವತ್ತು ತನಿಖೆ ಮಾಡಿ ಜೈಲಿಗೆ ಹಾಕ್ತ ಇದ್ದೇನೆ. ಇವರೇನು ಆತ್ಮಹತ್ಯೆ ಮಾಡ್ಕೋತಾರಾ. ಎರಡೂವರೆ ವರ್ಷ ಮಂತ್ರಿ ಆದವರಿಗೆ ಆ ಇಲಾಖೆ ಏನು ಅಂತನೇ ಗೊತ್ತಾಗಿಲ್ಲ' ಎಂದು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ನೇಮಕಾತಿ ಹಗರಣದ ವಿರುದ್ದ ಕಿಮ್ಮನೆ ರತ್ನಾಕರ್ ಮೇಲೆ ಗೃಹಸಚಿವ ಆರಗ ಜ್ಞಾನೇಂದ್ರ ಹರಿಹಾಯ್ದರು.

ಯಾರಿದ್ರು ಅವಾಗ ಶಿಕ್ಷಣ ಮಂತ್ರಿ

ಚುನಾವಣೆ ಸಮೀಪಿಸುತ್ತಿದ್ದು ತೀರ್ಥಹಳ್ಳಿ ರಾಜಕೀಯ ಕಾವು ಮೇಲೇರುತ್ತಿದೆ. ಈ‌ ನಡುವೆ ಗೃಹಸಚಿವ ಆರಗ ಜ್ಞಾನೇಂದ್ರ ಓಟು ಭದ್ರಪಡಿಸಲು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಮಂಗಳವಾರ ಪಟ್ಟಣ ಸಮೀಪದ ಇಂದಾವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಹೊಂದಿರುವ ಪ್ಲೆಕ್ಸ್, ಮತ್ತು ಸ್ವತಃ ಬಿಜೆಪಿ ಅಧ್ಯಕ್ಷರೇ ವೇದಿಕೆ ಏರಿದ್ದರು. ಅಲ್ಲದೇ ತಾಲ್ಲೂಕಿನ ಮುಖಂಡರು ವೇದಿಕೆಯಲ್ಲಿದ್ದರು. ಒಂದು ರೀತಿಯಲ್ಲಿ ಸರ್ಕಾರಿ ದುಡ್ಡಲ್ಲಿ ಪಕ್ಷದ ಕಾರ್ಯಕ್ರಮ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂತು.


ನಾನು ಸಾರ್ವಜನಿಕ ಬದುಕಿಗೆ ಬಂದಿದ್ದೇ ತೀರ್ಥಹಳ್ಳಿ ತಾಲ್ಲೂಕು ಬದಲಾವಣೆ ಮಾಡಲಿಕ್ಕೆ. ಗಮ್ಮತ್ತಿಗಲ್ಲ. ಹೋಂ ಮಿನಿಸ್ಟರ್ ಆಗಿದ್ದೇನೆ. ನನ್ನ ಸರಳತೆ ನೋಡಿ ಬಹಳ ಜನ ಖುಷಿ ಪಡ್ತಾರೆ. ಅಧಿಕಾರ ಇರುವುದೇ ಜನರ ಸೇವೆಗಾಗಿ. ಗತ್ತು ಮಾಡಲಿಕ್ಕಲ್ಲ. ನಮ್ಮ ತಾರಗೊಳ್ಳಿ ನಾಗರಾಜ ರಾಯರು ಓದಿಸದೇ ಇದ್ದಿದ್ದರೆ ನಾನು ವೇದಿಕೆ ಮೇಲೆ ನಿಂತು ಮಾತನಾಡುತ್ತಿರಲಿಲ್ಲ. ಪುರುಷೋತ್ತಮ ರಾಯರು, ನರಸಿಂಹ ನಾಯಕರಂತವರು ಮಾತನಾಡಲು ಹೇಳಿಕೊಟ್ಟರು. ಇವರ ಸಹವಾಸದಿಂದ ಎಲ್ಲರೂ ತಿದ್ದಿ ತೀಡಿ ವ್ಯಕ್ತಿಯಾಗಿ ರೂಪಿಸಿದರು. ಬಡತನದ ಜೀವನದಲ್ಲಿ ಬಂದ ನನ್ನಂತವನು ಬಡವರು ಕೆಲಸ ಮಾಡಬೇಕು. ಬೇರೆಯವರನ್ನು ಅಯೋಗ್ಯ ಎಂದು ನಾನು ಒಳ್ಳೆಯವನು ಎಂಬುದನ್ನು ಬಿಡಬೇಕು. ನಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡಬೇಕು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಪಟ್ಟಣ ಸಮೀಪದ ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಬದನೇಹಿತ್ಲು – ಇಂದಾವರಕ್ಕೆ ಒಂದು ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.

ನೀವು ನನಗೆ ಮತ ಕೊಟ್ಟು ಗೆಲ್ಲಿಸಿದ್ದೀರಿ. ಅದಕ್ಕೆ ಸರಿಯಾಗಿ ಕ್ಷೇತ್ರದ ಜನರ ಕೆಲಸ ಮಾಡುವ ಅವಕಾಶ ಲಭಿಸಿದೆ. ಕ್ಷೇತ್ರ ಅಭಿವೃದ್ದಿಗಾಗಿ 1500ಕ್ಕೂ ಹೆಚ್ಚು ಕೋಟಿ ಅನುದಾಮ ತಂದಿದ್ದೇನೆ. ಮಳೆಗಾಲದಲ್ಲಿ ದೋಣಿ ದಾಟುವ ಅವಶ್ಯಕತೆ ಇನ್ನುಮುಂದೆ ಬರುವುದಿಲ್ಲ. ಒಳ್ಳೆಯ ಸೇತುವೆ, ರಸ್ತೆ ಆಗುತ್ತೆ. ಸ್ವಲ್ಪ ರಸ್ತೆ ಬಾಕಿ ಉಳಿಯಲಿದೆ. ಇನ್ನು ಆರು ತಿಂಗಳು ಚುನಾವಣೆಗೆ ಇದ್ದು ಅಷ್ಟರಲ್ಲಿ‌ ಅದಕ್ಕೂ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಮಾತನಾಡಿ, ಸಚಿವರ ಗೆಲುವಿನ ಹಿಂದೆ ಪಕ್ಷದ ಪ್ರಾಮಾಣಿಕತೆ ಇದೆ. ಕ್ಷೇತ್ರದಲ್ಲಿ ಅರೆಬೆರೆಯಾಗಿ ನಿಂತಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಅಭಿವೃದ್ದಿಯನ್ನು ಮಾಡಲಾಗಿದೆ. ಕಾಲು ಸಂಕ, ಸೇತುವೆ, ರಸ್ತೆ, ಸರ್ಕಾರಿ ಕಚೇರಿ, ಸಮುದಾಯ ಭವನದಂತಹ ಯಾರು ಮಾಡಲಾಗದ ಸಾಧನೆ ಮಾಡಿದ್ದಾರೆ. ಇದೂ ಅಲ್ಲದೆ ಭಾರತದ ದೊಡ್ಡ ಸಮಸ್ಯೆಯಾಗಿರುವ ಮುಸ್ಲೀಂ ಜಿಹಾದಿಗಳನ್ನು ಹೆಡೆಮುರಿ ಕಟ್ಟುವಂತಹ ಕೆಲಸ ಆಗಿದೆ. ತಾಲ್ಲೂಕಿನಲ್ಲೇ ನಡೆಯುತ್ತಿದ್ದ ಚಟುವಟಿಕೆಗೆ ಬ್ರೇಕ್ ಬಿದ್ದಿದೆ. ಸಚಿವರ ಮಹತ್ಕಾರ್ಯಕ್ಕೆ ನಾವೆಲ್ಲರೂ ಇನ್ಮೂ ದೃಢವಾದ ಹೆಜ್ಜೆ ಇಡಬೇಕು ಎಂದು ಹೇಳಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ‌ ಶೆಟ್ಟಿ ಮಾತನಾಡಿ, 4ನೇ ಬಾರಿ ಶಾಸಕರಾದ ಮೇಲೆ ಕ್ಷೇತ್ರದ ಅಭಿವೃದ್ದಿಯ ದಿಕ್ಕು ಬದಲಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣಕ್ಕೆ ಹತ್ತಿರವಿದ್ದರು ಅಭಿವೃದ್ದಿ ಕಂಡಿರಲಿಲ್ಲ. ಬೇರೆ ಪಕ್ಷದಿಂದ ಆಯ್ಕೆಯಾದವರು ಬಿಜೆಪಿ ಮತದಾರರು ಎಂಬ ಕಾರಣಕ್ಕೆ ಅಭಿವೃದ್ದಿ ಮಾಡುತ್ತಿರಲಿಲ್ಲ. ಸಚಿವರ ಕಾರ್ಯವನ್ನು ಶ್ಲಾಘಿಸಬೇಕು ಎಂದರು.


ವೇದಿಕೆಯಲ್ಲಿ ಹೊದಲ ಅರಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬಿಕಾ ಸಂತೋಷ್, ಉಪಾಧ್ಯಕ್ಷೆ ಮಲ್ಲಿಕಾ ರಾಘವೇಂದ್ರ, ಸದಸ್ಯರಾದ ಸತೀಶ್ ವೈ, ಹೊದಲ ವಿನಾಯಕ, ದಿನೇಶ್, ಪತ್ರ ಬರಹಗಾರ ದು. ನಾಗರಾಜ್, ಬಿಜೆಪಿ ಹಿರಿಯ ಮುಖಂಡ ಸಿ.ಬಿ. ಈಶ್ವರ್ ಮುಂತಾದವರು ಇದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post