ಅಡಿಕೆ ಎಲೆಚುಕ್ಕಿ ರೋಗ

ಬೀದಿಗಿಳಿವ ರೈತರು
ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ

ತಾಲ್ಲೂಕಿನಾದ್ಯಂತ ಅಡಿಕೆಗೆ ವ್ಯಾಪಿಸುತ್ತಿರುವ ಮಾರಣಾಂತಿಕ ಎಲೆಚಿಕ್ಕಿ ರೋಗ ರೈತರ ನಿದ್ದೆಗೆಡಿಸಿದೆ. ಮಲೆನಾಡಿನ ರೈತರು ಅನೇಕ ಸಮಸ್ಯೆಗಳಿಂದ ನಲುಗಿದ್ದು ಸರ್ಕಾರವನ್ನು ಎಚ್ಚರಿಸಲು ಅಕ್ಟೋಬರ್ 3ರಂದು ರೈತರ ಸಮಾವೇಶಕ್ಕೆ ಕೃಷಿಕ ಸಮಾಜ ಸಜ್ಜುಗೊಂಡಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಅತೀ ಹೆಚ್ಚು ಮಳೆ ಬೀಳುವ ಗುಡ್ಡಗಾಡಿನ ಪ್ರದೇಶದಲ್ಲಿ ಈಗ ಅಡಿಕೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಬೆಳೆ ಕಳೆದುಕೊಳ್ಳುವ ಜೊತೆಗೆ ಅಡಿಕೆ ತೋಟಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ರೈತರಿದ್ದಾರೆ. ರೋಗ ಈಗ ಇಡೀ ತಾಲ್ಲೂಕನ್ನೇ ವ್ಯಾಪಿಸುತ್ತಿದ್ದು ರೋಗ ನಿಯಂತ್ರಣ ಸಾಧ್ಯವಾಗದ ಪರಿಸ್ಥಿತಿ ತಲುಪಿದೆ. ಅಡಿಕೆ ಬೆಳೆಯನ್ನು ನಂಬಿದ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಎಚ್ಚೆತ್ತು ರೈತರ ಸಮಸ್ಯೆಗೆ ಸೂಕ್ತ ಪರಿಹಾವನ್ನು ನೀಡುವಂತೆ ಒತ್ತಾಯಿಸಲು ಅಕ್ಟೋಬರ್  03 ರಂದು ತೀರ್ಥಹಳ್ಳಿ ಪಟ್ಟಣದ ಕೆಟಿಕೆ ಸಭಾಂಗಣದಲ್ಲಿ ರೈತರನ್ನು ಒಗ್ಗೂಡಿಸಿ ಚರ್ಚಿಸಿ  ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು  ಎಂದು ಬಾಳೇಹಳ್ಳಿ ಪ್ರಭಾಕರ್ ಹೇಳಿದರು.

ಕೃಷಿ ಹಾಗೂ ತೋಟಗಾರಿಕೆ ಜಮೀನಿನಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗಿ ಜೀವಹಾನಿಯಾಗುತ್ತಿದೆ. ಕೆಲವು ರೈತರು ಕಾಡುಪ್ರಾಣಿಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಅವರಿಗೆ ವೈದ್ಯಕೀಯ ವೆಚ್ಚ ಹಾಗೂ ಪರಿಹಾರವನ್ನು ನೀಡುವಂತೆ  ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಸರ್ಕಾರ ಈ ಹಿಂದೆ ರೈತರಿಗೆ ನೀಡುತ್ತಿದ್ದ ಕೃಷಿ ಯಂತ್ರೋಪಕರಣಗಳ ಮೇಲಿನ ಸಹಾಯಧನವನ್ನು ಸ್ಥಗಿತಗೊಳಿಸಿದೆ. ರಸಗೊಬ್ಬರ, ಕ್ರಮಿನಾಶಕಗಳ ಬೆಲೆ ಹೆಚ್ಚಿದ್ದು ಜಿಲ್ಲಾವಾರು ಬೆಲೆಯಲ್ಲಿ ಬಾರೀ ವ್ಯತ್ಯಾಸ ಕಂಡುಬಂದಿದೆ. ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ವಾರಸುದಾರರಿಗೆ ಪರಿಹಾರ ಧನ ವಿಳಂಬವಾಗುತ್ತಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ಶಿಕ್ಷಣ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ನೀಡಬೇಕಿದ್ದ ಮಾಸಾಶನ ಈಗ ವಿತರಣೆಯಾಗುತ್ತಿಲ್ಲ ಎಂದು ಬಾಳೇಹಳ್ಳಿ ಪ್ರಭಾಕರ್ ಮಾಹಿತಿ ನೀಡಿದರು.

ರೈತ ಪ್ರತಿನಿಧಿಗಳನ್ನು ಒಳಗೊಂಡಂತೆ ಅಡಿಕೆ ಮಂಡಳಿಯನ್ನು ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸಲಾಗುವುದು ಅಡಿಕೆ ಮರದ ಬೇಸಾಯಕ್ಕೆ ಬಳಸುವ ಲಘು ಪೋಷಕಂಶಗಳ ದರ ಇಳಿಕೆ. ಸರ್ಕಾರದ ಸಹಾಯಧನ, ಪ್ರೋತ್ಸಾಹಧನವನ್ನು ಬ್ಯಾಂಕುಗಳಲ್ಲಿ ರೈತರ ಸಾಲಕ್ಕೆ ವಜಾ ಮಾಡದಂತೆ ಆಗ್ರಹಿಸಲಾಗುವುದು, ಸಾಗುವಳಿ ಜಮೀನು ಆಧರಿಸಿ ರೈತರಿಗೆ ಗೃಹ ನಿರ್ಮಾಣ ಸಾಲ ವಿತರಣೆಗೆ ಸರಳ ದಾಖಲೆಗಳನ್ನು ನೀಡುವಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.

ಅತ್ಯಧಿಕ ಮಳೆ ಸುರಿಯುವ ತೀರ್ಥಹಳ್ಳಿ, ಹೊಸನಗರ ತಾಲ್ಲೂಕು ವ್ಯಾಪ್ತಿಯನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ಸಹಾಯಧನವನ್ನು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಭತ್ತ ಬೆಳೆವ ರೈತರಿಗೆ ಕನಿಷ್ಟ ಕ್ವಿಂಟಾಲಿಗೆ ರೂ 2,500 ನಿಗಧಿಗೊಳಿಸಬೇಕು, ಸಾಗುವಳಿ ಜಮೀನು ದಾಖಲಾತಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಬೇಕು. ದಾಖಲೆಗಳಲ್ಲಿ ದೋಷವಿದ್ದರೆ ಸರ್ಕಾರವೇ ಸರಿಪಡಿಸಬೇಕು. ಸೊಪ್ಪಿನಬೆಟ್ಟ, ಕಾನು ಜಮೀನುಗಳಲ್ಲಿ ಬಗರ್ ಹುಕುಂ ಮಾಡಿದ ರೈತರಿಗೆ ಜಮೀನು ಮಂಜೂರು ಮಾಡುವುದು ಹಾಗೂ 94ಸಿ ಅಡಿಯಲ್ಲಿ ಮನೆ ಮಂಜೂರಾತಿ ಮಾಡುವುದು. ಸಾರ್ವಜನಿಕರಿಗೆ ಪಡಿತರ ಚೀಟಿ ಹಾಗೂ ಬಿಪಿಎಲ್ ಕಾರ್ಡ್ ನೀಡುವ ಕುರಿತು, ರೈತರ ಜಮೀನನ್ನು ಪೋಡಿ ದುರಸ್ಥಿಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಕ್ರಮವಹಿಸುವುದು. ರೈತರ ಜಮೀನುಗಳಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶದಂತೆ ಖಾತೆ ಮಾಡಲು ವಿಳಂಬ ತಪ್ಪಿಸಲು ವಿಶೇಷ ಆದ್ಯತೆ  ಕುರಿತು, ಸರ್ವೆ ಕಾರ್ಯದಲ್ಲಿ ವಿಳಂಬವಾಗುತ್ತಿದ್ದು ಸಕಾಲದಲ್ಲಿ ಸರ್ವೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಬಾಳೇಹಳ್ಳಿ ಪ್ರಭಾಕರ್ ಹೇಳಿದರು.

ಮಲೆನಾಡಿಗರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಒತ್ತಾಯಿಸಲು ಆಗ್ರಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕರಾದ ಸಿ.ಬಿ. ಈಶ್ವರ್ ಮಾತನಾಡಿ, ರೈತರು ಇಂದು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸದೇ ಇದ್ದರೆ ರೈತರ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ರೋಗ ರುಜಿನಗಳನ್ನು ನಿಯಂತ್ರಿಸದೇ ಹೋದರೆ ಅಡಿಕೆ ಬೆಳೆಯ ಭವಿಷ್ಯ ಮಂಕಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕ ಕೃಷಿಕ ಸಮಾಜದ ನಿರ್ದೇಶಕ ಶಶಿಧರ್ ಭಟ್ ಹಾಜರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post