ಭೂ ಕಬಳಿಕೆ ನಿಷೇಧ ಕಾಯಿದೆ 192(ಎ) ರದ್ದು

ಲಕ್ಷಾಂತರ ಕುಟುಂಬಕ್ಕೆ ಅನುಕೂಲ
ಬಡವರ ಪರ ನಿಂತು ಹೋರಾಡಿ ಹಠ ಸಾಧಿಸಿದ ಆರಗ ಜ್ಞಾನೇಂದ್ರ
ರೈತರಿಗೆ ವರವಾದ ಸರ್ಕಾರದ ತೀರ್ಮಾನ

ಕ್ಷೇತ್ರದ ಜನರ ಋಣ ನನ್ನ ಮೇಲಿದ್ದು ವಾರದಲ್ಲಿ 2 ದಿನ ಇದ್ದು ಕೆಲಸ ಮಾಡುತ್ತಿದ್ದೇನೆ. ಸ್ವಂತ ಗ್ರಾಮ ಗುಡ್ಡೇಕೊಪ್ಪಕ್ಕೆ ಗೃಹ ಸಚಿವ ಎಂದು ರಾಜಕೀಯ ಸ್ನೇಹಿತರು ಟೀಕಿಸುತ್ತಾರೆ. ಕ್ಷೇತ್ರದ ಜನರ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಇಂತಹ ಟೀಕೆಗೆ ತಕ್ಕ ಸಮಯದಲ್ಲಿ ಜನರು ಉತ್ತರ ಕೊಡುತ್ತಾರೆ. ರಾಜ್ಯ ಸರ್ಕಾರ ಯಾವುದೇ ಕಮಿಷನ್‌ ವ್ಯವಹಾರ ನಡೆಸುತ್ತಿಲ್ಲ. ಪ್ರತಿಪಕ್ಷ ಕಾಂಗ್ರೆಸ್‌ನ ಹುನ್ನಾರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡುತ್ತಿದ್ದಾರೆ. ಸಾಕ್ಷಿ ಇದ್ದರೆ ಮೊದಲು ಸರ್ಕಾರಕ್ಕೆ ಸಲ್ಲಿಸಲಿ. ಖಂಡಿತವಾಗಿ ಆರೋಪದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಲಾಗುತ್ತದೆ. ಸಂತೋಷ್‌ ಆತ್ಮಹತ್ಯೆ ಪ್ರಕರಣ ಯಾವುದೇ ಹುರುಳಿಲ್ಲದೇ ಮುಕ್ತಾಯಗೊಂಡಿದೆ. ಕೆ.ಎಸ್.‌ ಈಶ್ವರಪ್ಪ ಆರೋಪ ಮುಕ್ತಾರಾಗಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಭೂ ಕಬಳಿಕೆ ನಿಷೇಧ ಕಾಯಿದೆಯ 192 (ಎ) ನಿಯಮ ರದ್ದು ಮಾಡುವ ಐತಿಹಾಸಿಕ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇದರಿಂದ ಲಕ್ಷಾಂತರ ಕುಟುಂಬಕ್ಕೆ ಅನುಕೂಲವಾಗಲಿದೆ. ಒತ್ತುವರಿ ಸಂಬಂಧ ಈ ಹಿಂದೆ ದಾಖಲಾದ ಪ್ರಕರಣಗಳನ್ನು ವಾಪಾಸ್ಸು ಪಡೆಯಲಾಗುತ್ತದೆ. ಬದುಕಿಗಾಗಿ ಸರ್ಕಾರಿ ಭೂ ಒತ್ತುವರಿ ಮಾಡಿಕೊಂಡ ಕುಟುಂಬಗಳಿಗೆ 192 (ಎ) ನಿಯಮ ಕಂಟಕವಾಗಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುತ್ತಿದ್ದ ಬಡವರು ಕಣ್ಣೀರು ಸುರಿಸುವಂತಾಗಿತ್ತು. ಬಡವರ ಧ್ವನಿಯಾಗಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ.

ಹೀಗೆಂದು, ಶುಕ್ರವಾರ ತೀರ್ಥಹಳ್ಳಿಯ ಮಯೂರ ಹೋಟೆಲ್‌ನ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಸರ್ಕಾರದ ತೀರ್ಮಾನವನ್ನು ಸಂಭ್ರಮದಿಂದ ಹಂಚಿಕೊಂಡು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹಲವು ವರ್ಷಗಳಿಂದ ಭೂ ಕಬಳಿಕೆ ಕಾಯ್ದೆಯ 192(ಎ) ನಿಯಮದ ರದ್ದತಿಗೆ ನಿರಂತರವಾಗಿ ಹೋರಾಟ ಮಾಡುತ್ತಿದ್ದೆ. ವಿಧಾನಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ ನಿಯಮ ರದ್ದು ಮಾಡುವಂತೆ ಒತ್ತಾಯಿಸಿದೆ. ಜೀವನಕ್ಕಾಗಿ ಸರ್ಕಾರಿ ಭೂಮಿ ಆಶ್ರಯಿಸಿದ ಬಡವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ಅಲೆಸಲಾಗುತ್ತಿತ್ತು. ಬಡವರ ಕಷ್ಟ ನೋಡಿ ಬೆಂಗಳೂರಿನಲ್ಲಿ ಗಂಜಿ ಕೇಂದ್ರ ತೆರೆಯುವಂತೆ ಸರ್ಕಾರವನ್ನು ಕೋರಿದ್ದೆ. ಬಡವರ ಮೇಲೆ ಒತ್ತುವರಿ ಕೇಸ್‌ ಹಾಕುವುದು ಎಷ್ಟು ಸರಿ ಎಂಬುದು ನನ್ನ ಮನಸ್ಸಿನಲ್ಲಿ ಗಾಢವಾಗಿ ಕಾಡುತ್ತಿತ್ತು. ಈಗ ಇದಕ್ಕೆ ಸರ್ಕಾರದ ತೀರ್ಮಾನದಿಂದ ಪರಿಹಾರ ದೊರಕಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಕಾರು ಹೊಂದಿರುವ ಕುಟುಂಬಕ್ಕೆ ಬಿಪಿಎಲ್‌ ಕಾರ್ಡ್‌ ನೀಡಬಾರದು ಎಂಬ ನಿಯಮವನ್ನು ಸರ್ಕಾರ ರದ್ದುಪಡಿಸಲಿದೆ. ಬದಲಾದ ಜೀವನ ಕ್ರಮದಲ್ಲಿ ಅತೀ ಕಡಿಮೆ ಬೆಲೆಯ ಕಾರನ್ನು ಬಳಸುವ ಕುಟುಂಬಕ್ಕೆ ಬಿಪಿಎಲ್‌ ಕಾರ್ಡ್‌ ನೀಡಬಾರದು ಎಂಬ ನಿಯಮವನ್ನು ಅವೈಜ್ಞಾನಿಕ ಎಂದು ತೀರ್ಮಾನಿಸಲಾಗಿದೆ. ಕಾರ್ಡ್‌ ವಿತರಣೆ ನಿಯಮಗಳನ್ನು ಸರಳಗೊಳಿಸಲು ಕ್ರಮ  ಕೈಗೊಳ್ಳಲಾಗಿದೆ. ಆಮದು ಅಡಕೆ ಮೇಲಿನ ಸುಂಕ ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿಯೋಗದ ಮೂಲಕ ಸಲ್ಲಿಸಲಾದ ಮನವಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಅಡಕೆಗೆ ಉತ್ತಮ ಧಾರಣೆ ದೊರೆಯುವ ನಿರೀಕ್ಷೆ ಇದೆ. ಅಡಿಕೆಗೆ ಎದುರಾಗಬಹುದಾಗಿದ್ದ ಎಲ್ಲಾ ಸಮಸ್ಯೆ ಬಗೆಹರಿಸಲು ಆದ್ಯತೆ ಮೇರೆಗೆ ಕೆಲಸ ಮಾಡಲಾಗಿದೆ. ಅಡಿಕೆ ಗುಣಮಟ್ಟ ನಿರ್ಧರಿಸಲು ಉಪಯುಕ್ತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಸುಪ್ರೀಂಕೋರ್ಟ್‌ ಸಲ್ಲಿಕೆ ಆದ ಆಡಿಕೆ ಹಾನಿಕಾರಕ ಎಂಬ ಪ್ರಮಾಣ ಪತ್ರ ಈಗ ಸಮಸ್ಯೆ ಬಗೆಹರಿಸಬೇಕಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್‌ ಇದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post